ನಮ್ಮಲ್ಲಿನ ಅಧೀನ ಮಾನಸಿಕತೆ ಹೋಗಲಿ – ವಿನೋದ್ ಅಡ್ಕಸ್ಥಳ
ನಾನು ಈ ಗಣೇಶೋತ್ಸವದಲ್ಲಿ ಬಹುಮಾನ ಪಡೆದಿದ್ದೆ – ಸುರೇಶ್ ನಾಯ್ಕ್
ಪುತ್ತೂರು: ಸನಾತನ ಹಿಂದು ಧರ್ಮಕ್ಕೆ ತೊಂದರೆಯಾದಾಗ ನಾವು ಒಕ್ಕೊರಲಿನಿಂದ ಹೋರಾಟ ಮಾಡಬೇಕು. ಈ ಹೋರಾಟಕ್ಕೆ ನಮ್ಮಲ್ಲಿನ ಅಧೀನ ಮಾನಸಿಕತೆ ಹೋಗಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ಗ್ರಾಮಾಂತರ ಜಿಲ್ಲೆಯ ಬೌಧಿಕ್ ಪ್ರಮುಖ್ ವಿನೋದ್ ಅಡ್ಕಸ್ಥಳ ಹೇಳಿದರು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ನಡೆಯುತ್ತಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವದ 2ನೇ ದಿನವಾದ ಸೆ.20 ರಂದು ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಭೂಮಿಯಲ್ಲಿ ನನ್ನ ಕರ್ಮ ಸಾತ್ವಿಕ ಕರ್ಮವಾಗಲಿ ಅದರಲ್ಲಿ ಫಲ ನಿರೀಕ್ಷೆ ಮಾಡದೆ ದೇವರಿಗೆ ಸಮರ್ಪಣೆ ಮಾಡಬೇಕು. ಗಣೇಶನ ಪೂಜೆಯ ಜೊತೆಗೆ ಸಮಾಜ ದೇವನ ಪೂಜೆ ಮಾಡಬೇಕು. ಇಂತಹ ಕಾರ್ಯಕ್ರಮ ಸತ್ಯನ್ವೇಷಣೆಗೆ ದಾರಿ ಮಾಡಿಕೊಡುತ್ತದೆ. ಶ್ರೀ ಗಣೇಶನನ್ನು ಸಾರ್ವಜನಿಕವಾಗಿ ಆಚರಣೆ ಮಾಡಿದಾಗ ಸಮಾಜ ದೇವನಿಗೆ ಬಲವನ್ನು ಕೊಡುತ್ತದೆ. ಆದರೆ ಇವತ್ತು ಗುಣಗಳನ್ನು ನಿರ್ಮಾಣ ಮಾಡುವಲ್ಲಿ ನಾವು ಸೋತಿದ್ದೇವೆ.ಶಿಕ್ಷಣ ಕೇಂದ್ರದಲ್ಲಿ ಧರ್ಮದ ಶಿಕ್ಷಣದಲ್ಲಿ ಸೊತ್ತಿದ್ದೆವೆ. ಎಲ್ಲವು ಅಧೀನ ಶಿಕ್ಷಣವಾಗಿದೆ. ಇದರಿಂದ ಹೊರ ಬರಬೇಕಾಗಿದೆ. ಸನಾತನ ಹಿಂದು ಧರ್ಮಕ್ಕೆ ತೊಂದರೆಯಾದಾಗ ನಾವು ಒಕ್ಕೊರಲಿನಿಂದ ಹೋರಾಟ ಮಾಡಬೇಕು. ಅಧೀನ ಮಾನಸಿಕತೆ ಹೋಗಬೇಕು. ಸಿದ್ದಿ ಪ್ರದಾಯಕ ಗಣಪತಿ ಕೊಟ್ಟ ವಿವೇಚನೆಯಿಂದ ಚಿಂತನೆ ಮಾಡಬೇಕು ಎಂದರು.
ನಾನು ಈ ಗಣೇಶೋತ್ಸವದಲ್ಲಿ ಬಹುಮಾನ ಪಡೆದಿದ್ದೆ:
ಅಧ್ಯಕ್ಷತೆ ವಹಿಸಿದ ಯೂನಿಯನ್ ಬ್ಯಾಂಕ್‌ನ ಸೀನಿಯರ್ ಮೆನೇಜರ್ ಸುರೇಶ್ ನಾಯ್ಕ್ ಅವರು ಮಾತನಾಡಿ ಈ ಗಣೇಶೋತ್ಸವದಲ್ಲಿ ಸಣ್ಣ ಪ್ರಾಯದಲ್ಲೇ ಭಾಗವಹಿಸುತ್ತಿದ್ದೆ. ಸಮಿತಿಯಿಂದ ನಡೆಯುತ್ತಿರುವ ವಿವಿಧ ಸ್ಪರ್ಧೆಯಲ್ಕಿ ಭಾಗವಹಿಸಿ ಬಹುಮಾನ ಪಡೆದಿದ್ದೇನೆ. ಇವತ್ತು ವೇದಿಕೆಯನ್ನು ಹಂಚಿಕೊಂಡಿರುವುದು ಸಂತೋಷ ತಂದಿದೆ ಎಂದರು.
ನಿವೃತ್ತ ಸೈನಿಕ ಕೆ.ಯು ಸುರೇಶ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರವೀಂದ್ರನಾಥ ರೈ ಬಳ್ಳಮಜಲು, ಪ್ರಗತಿಪರ ಕೃಷಿಕ ಚಂದಪ್ಪಪೂಜಾರಿ ಕುಂಜೂರು ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು. ಗೌರವಾಧ್ಯಕ್ಷ ಡಾ.ಎಂ.ಕೆ ಪ್ರಸಾದ್, ಅಧ್ಯಕ್ಷ ಸುಜೀಂದ್ರ ಪ್ರಭು, ಕಾರ್ಯಾಧ್ಯಕ್ಷ ರಾಧಾಕೃಷ್ಣ ನಂದಿಲ, ಉಪಾಧ್ಯಕ್ಷ ಸುಧೀರ್ ಶೆಟ್ಟಿ, ರವೀಂದ್ರ ಶೆಟ್ಟಿ ನುಳಿಯಾಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅದ್ವಿತ್ ಪಿ ರಾವ್ ಪ್ರಾರ್ಥಿಸಿದರು. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಉಪಾಧ್ಯಕ್ಷ ರವೀಂದ್ರ ಶೆಟ್ಟಿ ನುಳಿಯಾಲು ಸ್ವಾಗತಿಸಿದರು. ನಗರಸಭೆ ನಿಕಟಪೂರ್ವ ಉಪಾಧ್ಯಕ್ಷೆ ವಿದ್ಯಾ ಗೌರಿ ವಂದಿಸಿದರು. ವಿಶಾಖ್ ಸಸಿಹಿತ್ಲು ಕಾರ್ಯಕ್ರಮ ನಿರೂಪಿಸಿದರು. ಬೆಳಿಗ್ಗೆ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಧೀಶಕ್ತಿ ಮಹಿಳಾ ಯಕ್ಷಗಾನ ಸಂಘದಿಂದ ಯಕ್ಷಗಾನ ತಾಳಮದ್ದಳೆ ನಡೆಯಿತು. ಸಂಜೆ ನರಿಮೊಗರು ಸಾಂದೀಪನಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕçತಿಕ ಕಾರ್ಯಕ್ರಮ ನಡೆಯಿತು. ವಿದ್ಯಾ ಸಂಸ್ಥೆಯ ಸಂಚಾಲಕ ಭಾಸ್ಕರ ಆಚಾರ್ಯ ಇಂದಾರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಅಲೇ ಬುಡಿಯೆರ್‌ಗೆ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತ್ತು.
ಇಂದು ತುಳು ಹಾಸ್ಯಮಯ ನಾಟಕ ಅವುದಾಲಾಪುಜಿ:
ಸೆ.21ಕ್ಕೆ ಬೆಳಿಗ್ಗೆ ಭಜನಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಗಂಟೆ 2 ರಿಂದ ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದಿಂದ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನವಿತರಣೆ ನಡೆಯಲಿದೆ. ಆದರ್ಶ ಆಸ್ಪತ್ರೆಯ ಆಡಳಿತ ಪಾಲುದಾರ ಡಾ. ಎಂ.ಎನ್.ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶ್ವಹಿಂದು ಪರಿಷತ್ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಟಿ.ಎ.ಪಿ.ಶೆಣೈ ಧಾರ್ಮಿಕ ಭಾಷಣ ಮಾಡಲಿದ್ದಾರೆ. ಸರಕಾರಿ ಆಸ್ಪತ್ರೆಯ ವೈದ್ಯೆ ಡಾ. ಅರ್ಚನಾ ಕಾವೇರಿ ಬಹುಮಾನ ವಿತರಣೆ ಮಾಡಲಿದ್ದಾರೆ. ಅಕ್ಷಯದಾಸೋಹದ ಸಹಾಯಕ ನಿರ್ದೇಶಕ ವಿಷ್ಣುಪ್ರಸಾದ್ ಮತ್ತು ಸಾಮಾಜಿಕ ಕಾರ್ಯಕರ್ತ ಯತೀಶ್ ಆರುವಾರ ಗೌರವ ಉಪಸ್ಥಿತಿಯಲ್ಲಿರುತ್ತಾರೆ. ರಾತ್ರಿ ರಂಗಪೂಜೆ ಮಹಾಮಂಗಳಾರತಿ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಅವುದಾಲಾಪುಜಿ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.
ಡಾ.ಎಂ.ಕೆ.ಪ್ರಸಾದ್ ಹಿಂದುತ್ವದ ಪಯರ್ ಬ್ರ್ಯಾಂಡ್
ಎಲ್ಲೋ ಯಾರನ್ನೋ ಹಿಂದುತ್ವದ ಪಯರ್ ಬ್ರ್ಯಾಂಡ್ ಹೇಳುವ ಬದಲು ಹಿಂದುತ್ವಕ್ಕಾಗಿ ಅನೇಕ ವರ್ಷಗಳಿಂದ ಗಣೇಶೋತ್ಸವದ ಮೂಲಕ ಸಂಘಟನೆ ಮಾಡುತ್ತಿರುವ ಡಾ.ಎಂ.ಕೆ.ಪ್ರಸಾದ್ ನಿಜವಾದ ಅರ್ಥದಲ್ಲಿ ಹಿಂದುತ್ವದ ದೊಡ್ಡ ಪಯರ್ ಬ್ರ್ಯಾಂಡ್. ಇವರಿಗೆ ಅನ್ಯಾಯ ಮಾಡಿದವರಿಗೆ ಮಹಾಲಿಂಗೇಶ್ವರ ದೇವರು ನೋಡುತ್ತಾನೆ ಎಂದು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಉಪಾಧ್ಯಕ್ಷ ರವೀಂದ್ರ ಶೆಟ್ಟಿ ನುಳಿಯಾಲು ಹೇಳಿದರು.