ಪುತ್ತೂರು:ಮಂಗಳೂರಿನಿಂದ ಗೋವಾಗೆ ಹೊಸದಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಇದೇ ಅಕ್ಟೋಬರ್ ಅಂತ್ಯದೊಳಗೆ ಆರಂಭವಾಗಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ದ.ಕ.ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಭರವಸೆ ನೀಡಿದ್ದಾರೆ.
ಸಂಸದ ನಳಿನ್ ಕುಮಾರ್ ಕಟೀಲ್ ಅವರು ಸೆ.೨೨ರಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ರವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಈ ಕುರಿತು ಮನವಿ ಸಲ್ಲಿಸಿದ್ದು ಸಚಿವರು ಪೂರಕವಾಗಿ ಸ್ಪಂದಿಸಿ ಈ ಭರವಸೆ ನೀಡಿದ್ದಾರೆ.ಬೆಂಗಳೂರು ಕಣ್ಣೂರು ರೈಲನ್ನು ಕೊಚ್ಚಿನ್‌ವರೆಗೆ ವಿಸ್ತರಿಸುವಂತೆ ಇರುವ ಕೇರಳಿಗರ ಮನವಿಯನ್ನು ಯಾವುದೇ ಕಾರಣಕ್ಕೂ ಪುರಸ್ಕರಿಸದಂತೆ ಸಚಿವರನ್ನು ಒತ್ತಾಯಿಸಿದ್ದು, ಇದಕ್ಕೆ ಸ್ಪಂದಿಸಿರುವ ಸಚಿವರು ಅಂತಹ ಯಾವುದೇ ಪ್ರಸ್ತಾವನೆಗೆ ಒಪ್ಪಿಗೆ ನೀಡುವುದಿಲ್ಲವೆಂದು ತಿಳಿಸಿದ್ದಾರೆ.ರೈಲ್ವೆ ಇಲಾಖೆಯನ್ನು ಕೇರಳ ಹಿಡಿತದಿಂದ ತಪ್ಪಿಸಲು ದಕ್ಷಿಣ ರೈಲ್ವೆಯ ಪಾಲಕ್ಕಾಡು ವಿಭಾಗದಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯ ಭಾಗವನ್ನು ನೈರುತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರಿಸಬೇಕೆಂಬ ಮನವಿಗೆ ಸಚಿವರು ಈಗಾಗಲೇ ಅಗತ್ಯವಾದ ಸೂಚನೆಯನ್ನು ನೀಡಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ದಕ್ಷಿಣ ರೈಲ್ವೆ ಹಾಗೂ ಕೊಂಕಣ ರೈಲ್ವೆಗಳ ವಿಭಾಗಗಳ ನಡುವೆ ಸಂಚರಿಸುವ ರೈಲುಗಳ ಅನಗತ್ಯ ವಿಳಂಬ ನಿವಾರಣೆ ಬಗ್ಗೆಯೂ ಸಚಿವರ ಗಮನ ಸೆಳೆದಾಗ ಈ ಕುರಿತು ಸಚಿವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಪ್ರತಿ ದಿನ ಮುಂಜಾನೆ ಸುಬ್ರಹ್ಮಣ್ಯ ರಸ್ತೆಯಿಂದ ಹೊರಟು ಮಂಗಳೂರಿಗೆ ಹಾಗೂ ಸಂಜೆ ಮಂಗಳೂರಿನಿಂದ ಸುಬ್ರಹ್ಮಣ ರಸ್ತೆಗೆ ಪ್ಯಾಸೆಂಜರ್ ರೈಲು ಒದಗಿಸಲು ಸಚಿವರು ಒಪ್ಪಿಗೆ ಸೂಚಿಸಿದ್ದಾರೆ-
ನಳಿನ್ ಕುಮಾರ್ ಕಟೀಲ್ ದ.ಕ.ಸಂಸದ