53.40 ಲಕ್ಷ ನಿವ್ವಳ ಲಾಭ: ಶೆ.18 ಡಿವಿಡೆಂಟ್ ಘೋಷಣೆ
ಉಪ್ಪಿನಂಗಡಿ: ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘವು 2022-23ನೇ ಸಾಲಿನಲ್ಲಿ 156 ಕೋಟಿ 39 ಲಕ್ಷ ವ್ಯವಹಾರ ನಡೆಸಿ 53 ಲಕ್ಷದ 40 ಸಾವಿರ ಲಾಭಗಳಿಸಿದ್ದು, ಲಾಭಾಂಶದಲ್ಲಿ ಸದಸ್ಯರಿಗೆ ಶೇ.18 ಡಿವಿಡೆಂಟ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಎಸ್. ತೋಯಜಾಕ್ಷ ಶೆಟ್ಟಿ ತಿಳಿಸಿದರು.
ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘದ ಎರಡನೇ ಮಹಡಿಯಲ್ಲಿ ಸೆ. 23ರಂದು ನಡೆದ ಸಂಘದ 2022-23ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘವು ಆರಂಭದಿಂದಲೂ ಅಭಿವೃದ್ಧಿಯ ಪಥದಲ್ಲೇ ಸಾಗುತ್ತಿದೆ. ಈಗ ನೂತನ ಸಭಾಂಗಣದೊಂದಿಗೆ ಸಂಘದ ಕಟ್ಟಡವನ್ನು ವಿಸ್ತರಣೆ ಮಾಡಲಾಗಿದ್ದು, ಸಾರ್ವಜನಿಕ ಸೇವೆಯಡಿ ಸಂಚಾರಿ ಶವದಾನ ಪೆಟ್ಟಿಗೆಯನ್ನು ಖರೀದಿಸಿ ಗ್ರಾ.ಪಂ.ಗೆ ಹಸ್ತಾಂತರಿಸಿದೆ. ಕಳೆದ 17 ವರ್ಷಗಳಿಂದ ಸತತವಾಗಿ ನಮ್ಮ ಸಂಘವು ಶೇ.100 ಸಾಲ ವಸೂಲಾತಿ ಮಾಡಿದ್ದು, ಲೆಕ್ಕ ಪರಿಶೋಧನಾ ವರ್ಗೀಕರಣದಲ್ಲಿ ‘ಎ’ ತರಗತಿ ಸ್ಥಾನವನ್ನು ಪಡೆಯುತ್ತಿದೆ. ಇದಕ್ಕೆ ಸದಸ್ಯರ, ಗ್ರಾಹಕರ, ಠೇವಣಿದಾರರ, ಆಡಳಿತ ಮಂಡಳಿ ಹಾಗೂ ಕಾರ್ಯನಿರ್ವಹಣಾಧಿಕಾರಿಯವರ ಸಹಿತ ಸಿಬ್ಬಂದಿ ವರ್ಗದ ಸಹಕಾರ ಕಾರಣವಾಗಿದ್ದು, ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರಲ್ಲದೆ, ಸಂಘವು ಪೆರ್ನೆ- ಬಿಳಿಯೂರು ವ್ಯಾಪ್ತಿಯನ್ನು ಹೊಂದಿದ್ದು, ಸಾಲ ಮತ್ತು ಮಾರಾಟ ಜೋಡಣೆಯಂತೆ ರೈತರ ಕೃಷಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ವರದಿ ವರ್ಷದಲ್ಲಿ 143 ಟನ್ ಅಡಿಕೆಯನ್ನು ಕ್ಯಾಂಪ್ಕೋ ಮೂಲಕ ವ್ಯವಹಾರ ನಡೆಸಿದೆ. ಬ್ಯಾಂಕಿAಗ್ ವ್ಯವಹಾರದ ಜೊತೆಗೆ ನಮ್ಮ ಸಂಘವು ಕೃಷಿ ಉತ್ಪನ್ನಗಳ ಮಾರಾಟದಿಂದಲೂ ಉತ್ತಮ ಲಾಭವನ್ನು ಪಡೆದುಕೊಂಡಿದೆ ಎಂದರು.
ಎಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ 4 ಮಂದಿ ವಿದ್ಯಾರ್ಥಿಗಳಿಗೆ ಈ ಸಂದರ್ಭ ವಿದ್ಯಾನಿಧಿ ನೀಡಿ ಗೌರವಿಸಲಾಯಿತು. ಸಂಘದ ರೈತಾಪಿ ವರ್ಗದ ಹಿರಿಯ 25 ಮಂದಿ ಸದಸ್ಯರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ನಿರ್ದೇಶಕರಾದ ಡಾ. ರಾಜಗೋಪಾಲ ಶರ್ಮಾ, ನೀಲಪ್ಪ ಗೌಡ, ಲಕ್ಷ್ಮಣ ನಾಯ್ಕ, ಜಯಲಕ್ಷ್ಮೀ, ರೇವತಿ, ಸುನಿಲ್ ನೆಲ್ಸನ್ ಪಿಂಟೋ, ವಿಶ್ವನಾಥ ಶೆಟ್ಟಿ, ಬಶೀರ್ ಕೆ., ಮುಹಮ್ಮದ್ ಶರೀಫ್, ಚೆನ್ನಕೇಶವ, ಬೇಬಿ ಉಪಸ್ಥಿತರಿದ್ದರು.
ಪ್ರಮುಖರಾದ ಉಮಾನಾಥ ಶೆಟ್ಟಿ ಪೆರ್ನೆ, ಕೃಷ್ಣ ನಾಯಕ್, ಗೋಪಾಲ ಶೆಟ್ಟಿ, ಅಲ್ಬರ್ಟ್ ಲೋಬೋ, ನರಸಿಂಹ ನಾಯಕ್, ಸೀತಾರಾಮ ಶೆಟ್ಟಿ, ಅಬ್ದುಲ್ ಶಾಫಿ, ಮಿತ್ರದಾಸ ರೈ, ಸೀತಾರಾಮ ಶೆಟ್ಟಿ, ದಾವುದ್, ಪದ್ಮನಾಭ ಸಾಮಾನಿ, ಮೋನಪ್ಪ ಗೌಡ ಉಪಸ್ಥಿತರಿದ್ದು, ಚರ್ಚೆಯಲ್ಲಿ ಭಾಗವಹಿಸಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುಷ್ಪಾ ಡಿ. ಸ್ವ್ವಾಗತಿಸಿ, ವರದಿ ಮಂಡಿಸಿದರು. ಉಪಾಧ್ಯಕ್ಷ ತನಿಯಪ್ಪ ಪೂಜಾರಿ ವಂದಿಸಿದರು.