ಪುತ್ತೂರು:ಸಂತ ಫಿಲೋಮಿನಾ ಕಾಲೇಜು ಹಿರಿಯ ವಿದ್ಯಾರ್ಥಿ ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ ಹಾಗೂ ಸಂತ ಫಿಲೋಮಿನಾ ಕಾಲೇಜು ಶ್ರೀ ಗಣೇಶೋತ್ಸವ ವಿದ್ಯಾರ್ಥಿ ಸಮಿತಿಯ ಆಶ್ರಯದಲ್ಲಿ ದರ್ಬೆ ವಿನಾಯಕ ನಗರದಲ್ಲಿ ಎರಡು ದಿನಗಳ ಕಾಲ ನಡೆದ 41ರ ಗಣೇಶೋತ್ಸವ ಸಂಭ್ರಮವು ಯಶಸ್ವಿಯಾಗಿ ತೆರೆ ಕಂಡಿದ್ದು, ಈ ನಿಟ್ಟಿನಲ್ಲಿ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸುವ ಕೃತಜ್ಞತಾ ಸಭೆಯು ಸೆ.23 ರಂದು ಟ್ರಸ್ಟ್ ಗೌರವಾಧ್ಯಕ್ಷ ಪ್ರಕಾಶ್ ಮುಕ್ರಂಪಾಡಿರವರ ಅಧ್ಯಕ್ಷತೆಯಲ್ಲಿ ಮುಕ್ರಂಪಾಡಿಯಲ್ಲಿ ನೆರವೇರಿತು.
ಫಿಲೋಮಿನಾ ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ ಗಣೇಶೋತ್ಸವ ಪ್ರಯುಕ್ತ ಹಮ್ಮಿಕೊಂಡ ಸ್ವಯಂ ರಕ್ತದಾನ ಶಿಬಿರ, ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಹಿರಿಯ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಹಗ್ಗ-ಜಗ್ಗಾಟ ಸ್ಪರ್ಧೆ, ಪ್ರಧಾನ ಅರ್ಚಕ ಪ್ರೀತಂ ಪುತ್ತೂರಾಯರ ನೇತೃತ್ವದಲ್ಲಿ ಎರಡು ದಿನಗಳ ಗಣೇಶೋತ್ಸವದ ಧಾರ್ಮಿಕ ಕಾರ್ಯಕ್ರಮಗಳು, ರಂಗೇರಿಸಿದ ಕಾಮಿಡಿ ಕಿಲಾಡಿಗಳು, ಪ್ರತಿಭಾವಂತರಿಗೆ ಸನ್ಮಾನ, ಸಾರ್ವಜನಿಕ ಅನ್ನಸಂತರ್ಪಣೆ ಹೀಗೆ ಎಲ್ಲಾ ಕಾರ್ಯಕ್ರಮಗಳು ಸುಸೂತ್ರವಾಗಿ ನಡೆದಿದ್ದು ಇದಕ್ಕೆ ಕಾರಣ ಕಾಲೇಜು ವಿದ್ಯಾರ್ಥಿ ಬಳಗ, ಹಿರಿಯ ವಿದ್ಯಾರ್ಥಿಗಳ ಪ್ರಾಮಾಣಿಕ ಸೇವೆ. ಎಲ್ಲರನ್ನೂ ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬೇಕಾಗಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ್ ಗೌರವಾಧ್ಯಕ್ಷ ಪ್ರಕಾಶ್ ಮುಕ್ರಂಪಾಡಿ, ಕೋಶಾಧಿಕಾರಿ ದುರ್ಗಾಪ್ರಸಾದ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಕ್ರಂ ಆಳ್ವ, ಕಾರ್ಯದರ್ಶಿ ಹೃದಯ್ ಎಸ್.ನಾಯ್ಕ್, ಜೊತೆ ಕಾರ್ಯದರ್ಶಿ ರಕ್ಷಾ ಅಂಚನ್ ಸಹಿತ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.