ವಿಪತ್ತು ನಿರ್ವಹಣಾ ತಂಡಗಳಿಂದ ಅಣಕು ಕಾರ್ಯಾಚರಣೆ

0

ಉಪ್ಪಿನಂಗಡಿ: ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ರಾಜ್ಯ ವಿಪತ್ತು ನಿರ್ವಹಣಾ ತಂಡ, ಅಗ್ನಿಶಾಮಕ ದಳ, ಗೃಹ ರಕ್ಷಕ ದಳ, ಪೊಲೀಸ್ ಇಲಾಖೆ , ಆರೋಗ್ಯ ಇಲಾಖೆಗಳನ್ನೊಳಗೊಂಡ ತಂಡಗಳಿಂದ ಉಪ್ಪಿನಂಗಡಿಯಲ್ಲಿ ಬುಧವಾರದಂದು ಅಣಕು ಕಾರ್ಯಾಚರಣೆಯ ಪ್ರದರ್ಶನ ಪುತ್ತೂರು ಸಹಾಯಕ ಕಮಿಷನರ್ ಗಿರೀಶ್ ನಂದನ್ ನೇತೃತ್ವದಲ್ಲಿ ನಡೆಯಿತು.


ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಬಳಿಯ ನೇತ್ರಾವತಿ- ಕುಮಾರಧಾರಾ ನದಿ ಸಂಗಮ ಸ್ಥಳದ ಬಳಿ ನಡೆಸಿದ ವಿಪತ್ತು ನಿರ್ವಹಣಾ ಅಣಕು ಪ್ರದರ್ಶನದಲ್ಲಿ ಪ್ರಕೃತಿ ವಿಕೋಪದಲ್ಲಿ ವ್ಯಕ್ತಿ ನದಿಯಲ್ಲಿ ಅಥವಾ ನೆರೆ ನೀರಿನಲ್ಲಿ ಕೊಚ್ಚಿಕೊಂಡು ಹೋದಾಗ, ಕಡಲು, ನದಿ, ಕೆರೆ, ಬಾವಿಗಳಲ್ಲಿ ಮುಳುಗಿದಾಗ, ಯಾವ ರೀತಿಯಲ್ಲೆಲ್ಲಾ ರಕ್ಷಿಸಬಹುದೆಂಬ ಶಿಕ್ಷಣವನ್ನು ನೀಡುತ್ತಾ ಪ್ರದರ್ಶನವನ್ನು ತೋರಿದರು. ನೆರೆ ಸಂಭವಿಸಿದಾಗ ನೆರೆ ನೀರಿನ ನಡುವೆ ಸಿಲುಕಿದ ಜನರನ್ನು ರಕ್ಷಿಸುವ ಬಗೆ, ನೀರಿನಾಳದಲ್ಲಿ ನಾಪತ್ತೆಯಾದಾತನನ್ನು ಪತ್ತೆ ಹಚ್ಚಲು ಬಳಸುವ ಜಿಗ್‌ಜ್ಯಾಗ್ ಶೈಲಿ, ಲೆಗ್ ಸ್ಟೆಪ್ ಶೈಲಿಗಳನ್ನದೆ, ನದಿಯಲ್ಲಿ ಮುಳುಗಿ ಪ್ರಜ್ಞೆ ತಪ್ಪಿದ ವ್ಯಕ್ತಿಯನ್ನು ಕರೆತಂದು ಪ್ರಥಮ ಚಿಕಿತ್ಸೆ ನೀಡುವ ಬಗ್ಗೆ ಪ್ರಾತಕ್ಷಿಕೆಗಳನ್ನು ಪ್ರದರ್ಶಿಸಿದರು.
ಅಣಕು ಪ್ರದರ್ಶನವನ್ನು ವೀಕ್ಷಿಸಲು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಮುಕ್ತ ಅವಕಾಶಗಳನ್ನು ಕಲ್ಪಿಸಿದ ಇಲಾಖೆ, ತಂಡದ ಯೋಧರು ಎಲ್ಲೆಲ್ಲಾ ತರಬೇತುಗಳನ್ನು ಪಡೆಯುತ್ತಾರೆ ಎನ್ನುವುದನ್ನು ವಿವರಿಸುತ್ತಿದ್ದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಜೆ. ಶಿವಶಂಕರ್, ಉಪ್ಪಿನಂಗಡಿ ಹೋಬಳಿ ಕಂದಾಯಾಧಿಕಾರಿ ರಂಜನ್ ಗೌಡ, ಪ್ರಭಾರ ಗ್ರಾಮ ಕರಣಿಕ ನರಿಯಪ್ಪ, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಮುಖ್ಯಸ್ಥ ಹರಿಶ್ಚಂದ್ರ ಪಾಂಡೆ, ಹೋಮ್ ಗಾರ್ಡ್ ಡೆಪ್ಯೂಟಿ ಕಮಾಂಡೆಂಟ್ ರಮೇಶ್ ಸಹಿತ ವಿವಿಧ ವಿಭಾಗಗಳ ಮುಖ್ಯಸ್ಥರು ಭಾಗವಹಿಸಿದ್ದರು.
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ವಿದ್ಯಾಲಕ್ಷ್ಮಿ ಪ್ರಭು, ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರಾಜೇಶ್ ಕೆ.ವಿ., ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್, ಜಯಂತ ಪೊರೋಳಿ, ಅರುಣ್ ಗೋಡ್ವಿನ್ ಮಿನೇಜಸ್, ಶಶಿಧರ್ ಶೆಟ್ಟಿ, ಕಿಶೋರ್ ಕುಮಾರ್, ಸುರೇಶ್ ಅತ್ರಮಜಲು, ನಾಗೇಶ್ ಪ್ರಭು, ಶಾಂತರಾಮ ಭಟ್ , ದಿನೇಶ್ ಬಿ., ಶೇಖರ್ ದುರ್ಗಾಗಿರಿ ಮೊದಲಾದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here