ಪುತ್ತೂರು: ಇಲ್ಲಿನ ಬನ್ನೂರು ನಿವಾಸಿ ರವಿಪ್ರಸಾಸ್ ಶೆಟ್ಟಿಯವರ ವಿರುದ್ಧ ಮಹಾವೀರ ಆಸ್ಪತ್ರೆಯ ಡಾ.ಸುರೇಶ್ ಪುತ್ತೂರಾಯ ಅವರು ದಾಖಲಿಸಿದ್ದ ಖಾಸಗಿ ದೂರು ಹಾಗೂ ಎಫ್‌ಐಆರ್ ಅನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.
ಕೋವಿಡ್ ಸಂದರ್ಭದಲ್ಲಿ ಡಾ.ಸುರೇಶ್ ಪುತ್ತೂರಾಯ ಅವರು ವಾಟ್ಸಪ್ ಗ್ರೂಪ್‌ನಲ್ಲಿ ಹಾಕಿದ್ದ ಬರಹವೊಂದರ ಸ್ಕ್ರೀನ್‌ಶಾಟ್ ತೆಗೆದು ರವಿಪ್ರಸಾದ್ ಶೆಟ್ಟಿಯವರು ಇದನ್ನು ತನ್ನದೇ ರೀತಿಯಲ್ಲಿ ವ್ಯಾಖ್ಯಾನಿಸಿ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಹಂಚಿಕೊಂಡಿದ್ದರು. ಇದನ್ನು ಪ್ರಶ್ನಿಸಿ ರವಿಪ್ರಸಾದ್ ಶೆಟ್ಟಿಯವರ ವಿರುದ್ಧ ಡಾ.ಸುರೇಶ್ ಪುತ್ತೂರಾಯರವರು 23-03-2020ರಂದು ನಗರ ಠಾಣೆಗೆ ದೂರು ನೀಡಿದ್ದರು. ಬಳಿಕ ಠಾಣೆಯ ಸೂಚನೆಯಂತೆ 06-05-2020ರಂದು ಪುತ್ತೂರಿನ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಡಾ.ಸುರೇಶ್ ಪುತ್ತೂರಾಯ ಅವರು ಖಾಸಗಿ ದೂರು ದಾಖಲಿಸಿದ್ದರು. ನ್ಯಾಯಾಲಯದ ನಿರ್ದೇಶನದಂತೆ ಪುತ್ತೂರು ನಗರ ಠಾಣೆಯಲ್ಲಿ ಎಫ಼್‌ಐಆರ್ ದಾಖಲಾಯಿತು. ಈ ಸಂದರ್ಭದಲ್ಲಿ ರವಿಪ್ರಸಾದ್ ಶೆಟ್ಟಿಯವರು ನ್ಯಾಯವಾದಿ ಶ್ಯಾಮ್ ಪ್ರಸಾದ್ ಕೈಲಾರ್ ಮೂಲಕ ನ್ಯಾಯಾಲಯಕ್ಕೆ ಹಾಜರಾಗಿ ಮಧ್ಯಂತರ ಜಾಮೀನು ಪಡೆದುಕೊಂಡಿದ್ದರು. ಅನಂತರ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ರವಿಪ್ರಸಾದ್ ಶೆಟ್ಟಿಯವರು ನ್ಯಾಯವಾದಿ ಲತೀಫ್ ಬಡಗನ್ನೂರು ಮೂಲಕ ಹೈಕೋರ್ಟ್‌ನಲ್ಲಿ ಕ್ರಿಮಿನಲ್ ಪಿಟಿಷನ್ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಹೈಕೋರ್ಟ್ ರವಿಪ್ರಸಾದ್ ಶೆಟ್ಟಿಯವರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ರದ್ದುಗೊಳಿಸಿ ಆದೇಶಿದೆ.