ನ.25 ಮತ್ತು 26 ರಂದು ಬೆಂಗಳೂರು ಕಂಬಳ: 130 ಜೋಡಿ ಕೋಣಗಳು ಭಾಗಿ

0

ಇತಿಹಾಸದ ಪುಟದಲ್ಲಿ ದಾಖಲಾಗಲಿದೆ ರಾಜಧಾನಿಯ ಕಂಬಳ: ಅಶೋಕ್ ರೈ
ಪುತ್ತೂರು: ನವೆಂಬರ್ 25 ಮತ್ತು 26ರಂದು ಬೆಂಗಳೂರು ಕಂಬಳವು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಲಿದ್ದು, ಈಗಾಗಲೇ ಸಿದ್ದತಾ ಕಾರ್ಯ ಆರಂಭಗೊಂಡಿದ್ದು ಕಂಬಳದಲ್ಲಿ ಒಟ್ಟು 130 ಹೆಚ್ಚು ಕೋಣಗಳು ಭಾಗವಹಿಸಲಿದ್ದು, ರಾಜ್ಯದ ರಾಜಧಾನಿಯಲ್ಲಿ ನಡೆಯುವ ಕಂಬಳ ಇತಿಹಾಸದ ಪುಟದಲ್ಲಿ ದಾಖಲಾಗುವ ಜೊತೆಗೆ ಕಂಬಳದ ಮೆರುಗನ್ನು ದೇಶ, ವಿದೇಶದಲ್ಲಿ ಪಸರಿಸುವಂತೆ ಮಾಡಲಿದೆ ಎಂದು ಬೆಂಗಳೂರು ಕಂಬಳದ ರುವಾರಿ ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.


ಅವರು ಮಂಗಳುರಿನ ವುಡ್‌ಲ್ಯಾಂಡ್ ಹೊಟೇಲ್‌ನಲ್ಲಿ ಆಯೋಜಿಸಲಾಗಿದ್ದ ಕಂಬಳ ಕೋಣದ ಮಾಲಕರುಗಳ ಸಭೆಯಲ್ಲಿ ಮಾತನಾಡಿದರು.
ದ.ಕ ಮತ್ತು ಉಡುಪಿ ಜಿಲ್ಲಾ ಕಂಬಳ ಸಮಿತಿ ಬೆಂಬಲದೊಂದಿಗೆ ಕಂಬಳವನ್ನು ಆಯೋಜಿಸಲಾಗಿದೆ. ಕಂಬಳಕ್ಕೆ ದ ಕ , ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಿಂದ ಕೋಣಗಳು ಬರಲಿದ್ದು ಒಟ್ಟು 130 ಕ್ಕೂ ಹೆಚ್ಚು ಕೋಣಗಳು ಭಾಗವಹಿಸಲಿದೆ. ಎರಡು ದಿನಗಳ ಕಾಲ ನಡೆಯುವ ಕಂಬಳದಲ್ಲಿ 7 ರಿಂದ 8 ಲಕ್ಷ ಮಂದಿ ಸೇರುವ ನಿರೀಕ್ಷೆ ಇದ್ದು ರಾಜ್ಯದ ಪ್ರಮುಖ ರಾಜಕೀಯ ನೇತಾರರು ಸಹಿತ ಖ್ಯಾತ ಬಾಲಿಹುಡ್ ನಟರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ರಸ್ತೆ ಮಾರ್ಗವಾಗಿ ಕೋಣಗಳ ಸಾಗಾಟ
ರಸ್ತೆ ಮಾರ್ಗವಾಗಿ ಲಾರಿಗಳಲ್ಲಿ ಕೋಣಗಳ ಸಾಗಾಟ ನಡೆಯಲಿದೆ. ಹಾಸನದಲ್ಲಿ ವಿರಾಮದ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಕೋಣಗಳ ಆರೋಗ್ಯದಲ್ಲಿ ಏರುಪೇರಾಗದಂತೆ ಎಲ್ಲಾ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ. ಕೋಣಗಳನ್ನು ಕೊಂಡೊಯ್ಯುವ ವೇಳೆ ಜೊತೆಗೆ 8 ಪಶು ವೈದ್ಯಕೀಯ ಆಂಬುಲೆನ್ಸ್‌ಗಳು ಜೊತೆಗಿರುತ್ತದೆ. ಜಿಲ್ಲೆಯ ಪಶು ವೈದ್ಯರುಗಳ ವಿಶೇಷ ತಂಡವನ್ನು ಕರೆದೊಯ್ಯಲಾಗುತ್ತದೆ. ಕುಡಿಯುವ ನೀರಿನಲ್ಲಿ ವೆತ್ಯಾಸ ಆಗದಂತೆ ನೋಡಿಕೊಳ್ಳಲು 8 ಟ್ಯಾಂಕರ್‌ಗಳಲ್ಲಿ ಕೋಣಗಳಿಗೆ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತ್ತದೆ ಎಂದು ಹೇಳಿದರು.

ಜಿಲ್ಲೆಯ ಮಾದರಿಯಲ್ಲೇ ಕರೆ ವ್ಯವಸ್ಥೆ
ಜಿಲ್ಲೆಯಲ್ಲಿ ನಡೆಯುವ ಕರೆಗಳ ಮಾದರಿಯಲ್ಲೇ ಬೆಂಗಳೂರಿನಲ್ಲಿ ಕರೆಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಇಲ್ಲಿ ಏನಿದೆಯೋ ಅದು ಎಲ್ಲವೂ ಅಲ್ಲಿ ಇರಲಿದೆ. ಕೋಣಗಳಿಗೆ ಟೆಂಟ್ ಹಾಕಿ ವ್ಯವಸ್ಥೆಯನ್ನು ಮಾಡಲಾಗಿದೆ. ಹುಲ್ಲು ಮತ್ತು ಇತರೆ ಆಹಾರವನ್ನು ಅಲ್ಲೇ ಮಾಡಲಾಗಿದೆ ಎಂದು ಶಾಸಕರು ತಿಳಿಸಿದರು.

ವಿಜೇತ ಕೋಣಗಳಿಗೆ ಬಹುಮಾನ, ಭಾಗವಹಿಸಿದ ಕೋಣಗಳಿಗೂ ಬಹುಮಾನ
ಕಂಬಳದಲ್ಲಿ ವಿಜೇತ ಕೋಣಗಳಿಗೆ ಬಹುಮಾನವನ್ನು ನೀಡುವುದರ ಜೊತೆ ಭಾಗವಹಿಸಿದ ಕೋಣಗಳಿಗೂ ಪದಕ ಹಾಗೂ ಬಹುಮಾನಗಳನ್ನು ನೀಡಲಾಗುವುದು. ಪ್ರಥಮ ಹಾಗೂ ದ್ವಿತೀಯ ಬಹುಮಾನಗಳನ್ನು ವಿವಿಧ ಹಂತಗಳ ಸ್ಪರ್ದೆಗಳಿಗೆ ನೀಡಲಾಗುವುದು. ಕಂಬಳ ಕೋಣದ ಚಾಕರಿ ಮಾಡುವ ಮತ್ತು ಓಡಿಸುವ ಮತ್ತು ಕೋಣದ ಮಾಲಕರಿಗೆ ತಂಗುವ ವ್ಯವಸ್ಥೆಯನ್ನು ಮಾಡಲಾಗಿದ್ದು ಓಟೋಪಷಾರವೂ ಇರುತ್ತದೆ.

6 ಕೋಟಿ ಖರ್ಚಿನಲ್ಲಿ ಕಂಬಳ
ಸುಮಾರು ಆರು ಕೋಟಿ ಖರ್ಚಿನಲ್ಲಿ ಕಂಬಳ ನಡೆಯಲಿದೆ. ಕಂಬಳ ಮೈದಾನದಲ್ಲಿ ಒಂದು ಕಡೆ ಕಂಬಳ ನಡೆಯುತ್ತಿದ್ದರೆ ಇನ್ನೊಂದು ವೇದಿಕೆಯಲ್ಲಿ ಕರಾವಳಿ ಸಾಂಸ್ಕೃತಿಕ ವೈಭವದ ಪ್ರದರ್ಶನ ನಡೆಯಲಿದೆ. ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ನೇತೃತ್ವದಲ್ಲಿ ಕರಾವಳಿ ಜನತೆಯ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ. ಜೊತೆಗೆ ವಿವಿಧ ಸ್ಟಾಲ್‌ಗಳಲ್ಲಿ ಕರಾವಳಿಯ ಖಾಧ್ಯಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಕರಾವಳಿ ಜಿಲ್ಲೆಯ ಅಹಾರ ಉತ್ಪನ್ನಗಳನ್ನು ಬೆಂಗಳೂರಿಗೆ ಉಣಬಡಿಸುವ ಕಾರ್ಯವೂ ಜೊತೆಯಾಗಿಯೇ ನಡೆಯಲಿದೆ ಎಂದು ಶಾಸಕರು ಹೇಳಿದರು.

ಸ್ಪಾನ್ಸರ್‌ಗೆ ಬಹುಬೇಡಿಕೆ ಇದೆ
ಕಂಬಳದ ಕೋಣಗಳನ್ನು ಓಡಿಸುವಲ್ಲಿ ಸ್ಪಾನ್ಸರ್‌ಗಳಿಂದ ಬಹು ಬೇಡಿಕೆ ಬಂದಿದೆ. ಮುಖ್ಯಮಂತ್ರಿಯಿಂದ ಹಿಡಿದು ಕೇಂದ್ರ ಸಚಿವರುಗಳು ತಮ್ಮ ಹೆಸರಿನಲ್ಲಿ ಕೋಣ ಓಡಿಸುವಂತೆ ಈಗಾಗಲೇ ಕೇಳಿಕೊಂಡಿದ್ದಾರೆ. ಸ್ಪೀಕರ್ ಖಾದರ್ ರವರು ಈಗಾಗಲೇ ಸ್ಪಾನ್ಸರ್ ಕೊಡಿಸಿ ಎಂದು ಮನವಿ ಮಾಡಿದ್ದಾರೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರೂ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಿದ ಶಾಸಕರು ಕೋಣದ ಮಾಲಕರು ಈ ವಿಚಾರಕ್ಕೆ ಒಪ್ಪಿಗೆ ಸೂಚಿಸಿದ್ದಲ್ಲಿ ಮಾತ್ರ ಸ್ಪಾನ್ಸರ್ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಹೇಳಿದರು.

ವಿವಿಧ ಗಣ್ಯರು ಭಾಗಿ
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆಶಿವಕುಮಾರ್, ಕೇಂದ್ರ ಸಚಿವರುಗಳು, ಖ್ಯಾತ ಬಾಲಿವುಡ್ ನಟಿರರಾದ ಐಶ್ವರ್ಯಾ ರೈ, ಅನುಷ್ಕಾ, ತಮಿಳು ಚಿತ್ರನಟ ರಜನಿಕಾಂತ್ ಸಹಿತ ನೂರಾರು ಸೆಲೆಬ್ರಿಟಿಗಳು, ರಾಜಕೀಯ ನೇತಾರರು ಭಾಗವಹಿಸಲಿದ್ದಾರೆ.

ಎಂಟು ಲಕ್ಷ ಮಂದಿ ನಿರೀಕ್ಷೆ
ಈಗಾಗಲೇ ಸಿದ್ದತಾ ಕೆಲಸ ಆರಂಭಗೊಂಡಿದ್ದು ಸುಮಾರು 7 ರಿಂದ 8 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯದ ರಾಜಧಾನಿಯಲ್ಲಿ ಕಂಬಳ ಆಯೋಜನೆ ಮಾಡಲಾಗಿದ್ದು ದಕ ಉಡುಪಿ ಹೊರತುಪಡಿಸಿ ಉಳಿದ ಜಿಲ್ಲೆಗಳಿಂದ ಹಾಗೂ ವಿವಿಧ ರಾಜ್ಯಗಳಿಂದ ಕಂಬಳಾಭಿಮಾನಿಗಳು ಸೇರುವ ನಿರೀಕ್ಷೆ ಇದ್ದು ಈ ಬಗ್ಗೆ ಈಗಾಗಲೇ ರಾಜ್ಯ ಸರಕಾರದ ಜೊತೆ ಮಾತುಕತೆ ನಡೆಸಲಾಗಿದ್ದು ಜನಸೇರುವ ಬಗ್ಗೆ ಈಗಾಗಲೇ ಪೊಲೀಸ್ ಇಲಾಖೆಗೂ ಮಾಹಿತಿ ನೀಡಲಾಗಿದೆ.

ನ್ಯಾಯಾಲಯದಲ್ಲಿ ಅಫಿದಾವಿತ್
ಕಂಬಳ ನಡೆಸದಂತೆ ಪ್ರಾಣಿದಯಾ ಸಂಘಟನೆಗಳು ಅಥವಾ ಬೇರೆ ಯಾವುದೇ ಸಂಘಟಕರು ಕಾನೂನಿನ ಮೊರೆ ಹೋದಲ್ಲಿ ಅದರ ಬಗ್ಗೆ ಈಗಾಗಲೇ ನ್ಯಾಯಾಲಯದಲ್ಲಿ ಕೇವಿಯಟ್ ಸಲ್ಲಿಸಲಾಗಿದೆ. ಹೈಕೋರ್ಟು ಸೇರಿದಂತೆ ಕೆಳ ನ್ಯಾಯಾಲಯದಲ್ಲಿಯೂ ಕೆವಿಯಟ್ ಸಲ್ಲಿಸಲಾಗಿದೆ ಎಂದು ಶಾಸಕರು ತಿಳಿಸಿದರು.

ಇತಿಹಾಸ ಪುಟದಲ್ಲಿ ದಾಖಲಾಗಲಿದೆ
ರಾಜಧಾನಿಯಲ್ಲಿ ನಡೆಯುವ ಕಂಬಳ ಇತಿಹಾಸ ಪುಟದಲ್ಲಿ ದಾಖಲಾಗಲಿದೆ. ದೇಶದದ್ಯಂತ ಇರುವ ಮಂದಿ ನಮ್ಮ ಕಂಬಳವನ್ನು ವೀಕ್ಷಣೆ ಮಾಡಲಿದ್ದು. ರಾಷ್ಟ್ರೀಯ, ಅಂತರ ರಾಷ್ಟ್ರೀಯ ಚಾನೆಲ್‌ಗಳಲ್ಲಿ ನೇರ ಪ್ರಸಾರಗೊಳ್ಳಲಿದೆ. ಸ್ಪೋಟ್ಸ್ ಚಾನೆಲ್‌ನಲ್ಲಿ ಕಂಬಳದ ನೇರ ಪ್ರಸಾರ ಕಾರ್ಯ ನಡೆಯಲಿದೆ. ನಮ್ಮ ಜಿಲ್ಲೆಯ ಕಂಬಳ ಕೋಣದ ಮಾಲಿಕರ ಹೆಸರು ಜಗತ್ತಿನಾದ್ಯಂತ ಪ್ರಚಾರಗೊಳ್ಳಲಿರುವುದು ಮಾತ್ರವಲ್ಲದೆ ಕಂಬಳ ಏನೆಂಬುದನ್ನು ಅರಿಯದ ಜನರಿಗೆ ಕಂಬಳದ ಪೂರ್ಣ ವಿಚಾರ ಗೊತ್ತಾಗಲಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ನಡೆಯಲಿರುವ ಈ ಕಂಬಳವನ್ನು ಜಗತ್ತಿನಾದ್ಯಂತ ಇರುವ ಕಂಬಳಾಭಿಮಾನಿಗಳು ಕಣ್ತುಂಬಿಕೊಳ್ಳಲಿದ್ದಾರೆ ಎಂದು ಶಾಸಕರು ಹೇಳಿದರು. ಈ ಬಾರಿ ಮೊದಲ ಬಾರಿಗೆ ಆಯೋಜನೆ ಮಾಡಲಾಗಿದ್ದು ಎಲ್ಲರ ಸಹಕಾರವಿದ್ದಲ್ಲಿ ಮುಂದೆ ಪ್ರತೀ ವರ್ಷವೂ ರಾಜಧಾನಿಯಲ್ಲಿ ಕಂಬಳ ನಡೆಯಲಿದೆ ಎಂದು ಶಾಸಕರು ತಿಳಿಸಿದರು.
ಈ ಸಂದರ್ಭದಲ್ಲಿ ದ.ಕ ಮತ್ತು ಉಡಪಿ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿ ಬೆಳಪು ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here