34 ನೆಕ್ಕಿಲಾಡಿಗೆ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ ಪ್ರಶಸ್ತಿ

0

ಉಪ್ಪಿನಂಗಡಿ: ಸ್ವಚ್ಛ ಸರ್ವೇಕ್ಷಣ ಗ್ರಾಮೀಣ- 2023 ಸಮೀಕ್ಷೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ಪುತ್ತೂರು ತಾಲೂಕಿನ ೩೪ ನೆಕ್ಕಿಲಾಡಿ ಗ್ರಾ.ಪಂ.ಗೆ ಅ.2ರಂದು ಬೆಂಗಳೂರಿನ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಅವರು ಪ್ರಶಸ್ತಿ ನೀಡಿ ಗೌರವಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ 34 ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷೆ ಸುಜಾತ ರೈ ಅಲಿಮಾರ್, ಗ್ರಾ.ಪಂ.ನ ಲೆಕ್ಕ ಸಹಾಯಕ ದೇವಪ್ಪ ನಾಯ್ಕ ಅವರು ಪ್ರಶಸ್ತಿ ಸ್ವೀಕರಿಸಿದರು. ಈ ಸಂದರ್ಭ ಗ್ರಾ.ಪಂ.ನ ಉಪಾಧ್ಯಕ್ಷ ಹರೀಶ ಡಿ., ನಿಕಟಪೂರ್ವಾಧ್ಯಕ್ಷ ಪ್ರಶಾಂತ್ ಎನ್., ನಿಕಟಪೂರ್ವ ಉಪಾಧ್ಯಕ್ಷೆ ಸ್ವಪ್ನ ಗಾಣಿಗ, ಸದಸ್ಯ ರಮೇಶ್ ನಾಯ್ಕ ಉಪಸ್ಥಿತರಿದ್ದರು.
ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಲಶಕ್ತಿ ಮಂತ್ರಾಲಯ ಇವರು ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ಸ್ವಚ್ಛ ಸರ್ವೇಕ್ಷಣ ಗ್ರಾಮೀಣ – 2023 ಸಮೀಕ್ಷೆಯನ್ನು ಹಮ್ಮಿಕೊಂಡಿತ್ತು. ಪ್ರಸ್ತುತ ತಾಲೂಕು ಮಟ್ಟದ ಮೌಲ್ಯಮಾಪನದಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ಗ್ರಾ.ಪಂ.ಗಳನ್ನು ಜಿಲ್ಲಾ ಮಟ್ಟಕ್ಕೆ ಅರ್ಹಗೊಳಿಸಿತ್ತು. ಈ ಪೈಕಿ ಪ್ರತಿ ಜಿಲ್ಲೆಯಿಂದ ಮೂರು ವರ್ಗಗಳಲ್ಲಿ ಒಟ್ಟು 269 ಗ್ರಾಮ ಪಂಚಾಯತ್‌ಗಳನ್ನು ಎಸ್‌ಬಿಎಂ- ಜಿ ಐಎಂಐಎಸ್ ಮೂಲಕ ರಾಜ್ಯ ಮಟ್ಟಕ್ಕೆ ಸಲ್ಲಿಸಲಾಗಿದೆ. ಎಸ್‌ಎಸ್‌ಜಿ ಮಾರ್ಗಸೂಚಿಯಂತೆ ಜಿಲ್ಲೆಗಳಿಂದ ಆಯ್ಕೆ ಮಾಡಿದ ಗ್ರಾ.ಪಂ.ಗಳ ಪೈಕಿ ಅಂಕಗಳ ಆಧಾರದ ಮೇಲೆ ಪ್ರತಿ ವರ್ಗಗಳಲ್ಲಿ ಐದು ಗ್ರಾ.ಪಂ.ಗಳಂತೆ ಒಟ್ಟು 15 ಗ್ರಾ.ಪಂ.ಗಳನ್ನು ರಾಜ್ಯದಿಂದ ಕೇಂದ್ರಕ್ಕೆ ಐಎಂಐಎಸ್‌ನಲ್ಲಿ ಗುರುತಿಸಿ ಸಲ್ಲಿಸಲಾಗಿದೆ. ರಾಜ್ಯ ಮಟ್ಟಕ್ಕೆ ಅರ್ಹವಾಗಿ, ಕೇಂದ್ರಕ್ಕೆ ಶಿಫಾರಸ್ಸು ಮಾಡಿದ ಗ್ರಾ.ಪಂ.ಗಳಲ್ಲಿ 34 ನೆಕ್ಕಿಲಾಡಿ ಗ್ರಾ.ಪಂ. ಕೂಡಾ ಒಂದಾಗಿದೆ.

34 ನೆಕ್ಕಿಲಾಡಿ ಗ್ರಾ.ಪಂ.ನಲ್ಲಿ ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಪ್ರತಿ ವಾರ್ಡ್‌ಗಳಿಗೂ ತ್ಯಾಜ್ಯ ಸಂಗ್ರಹ ವಾಹನ ದಿನಾ ಭೇಟಿ ನೀಡಿ ತ್ಯಾಜ್ಯ ಸಂಗ್ರಹಿಸಿ, ಅದನ್ನು ತ್ಯಾಜ್ಯ ಘಟಕದಲ್ಲಿ ಪರಿಷ್ಕರಿಸಲಾಗುತ್ತಿದೆ. ಸ್ವಚ್ಛತೆಯ ವಿಷಯದಲ್ಲಿ ನಮಗೆ ನಮ್ಮ ಗ್ರಾಮದವರು ಉತ್ತಮ ಸಹಕಾರ ನೀಡುತ್ತಿದ್ದಾರೆ. ಆದರೆ ಬೇರೆ ಗ್ರಾಮದವರು ಇಲ್ಲಿ ತಂದು ಕಸ ಸುರಿದು ಹೋಗುವುದು ಸ್ವಲ್ಪ ಸಮಸ್ಯೆಯಾಗುತ್ತಿದೆ. ಅಂಥವರ ಮೇಲೆ ಹದ್ದಿನ ಕಣ್ಣಿಟ್ಟಿದ್ದೇವೆ. ಆಯಕಟ್ಟಿನ ಜಾಗದಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಕಸ ಬಿಸಾಡಿದವರ ಮೇಲೆ ದಂಡನೆ ಹಾಕುವಂತಹ ಕೆಲಸಗಳನ್ನು ಮಾಡುತ್ತಿದ್ದೇವೆ. ಕೇವಲ ಗ್ರಾ.ಪಂ.ನಿಂದ ಮಾತ್ರ ಗ್ರಾಮದ ಸಂಪೂರ್ಣ ಸ್ವಚ್ಛತೆ ಸಾಧ್ಯವಿಲ್ಲ. ಜನರ ಸಹಕಾರವೂ ದೊರೆತಾಗ ಇದು ಪರಿಪೂರ್ಣವಾಗಿ ಅನುಷ್ಠಾನಗೊಳ್ಳಲು ಸಾಧ್ಯ. ಈ ಪ್ರಶಸ್ತಿ ನಮ್ಮ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ. ಸಂಘ- ಸಂಸ್ಥೆಗಳು, ಗ್ರಾ.ಪಂ. ಸದಸ್ಯರು ಹಾಗೂ ಗ್ರಾಮಸ್ಥರ ಸಹಕಾರವನ್ನು ಪಡೆದುಕೊಂಡು ನಮ್ಮ ಗ್ರಾಮದಲ್ಲಿ ತಿಂಗಳ ಒಂದು ಶನಿವಾರ ‘ಸ್ವಚ್ಛ ಶನಿವಾರ’ ಸ್ವಚ್ಛತಾ ಅಭಿಯಾನವನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸುತ್ತೇನೆ.

  • ಸುಜಾತ ರೈ ಅಲಿಮಾರ್
    ಅಧ್ಯಕ್ಷರು, 34 ನೆಕ್ಕಿಲಾಡಿ ಗ್ರಾ.ಪಂ.

LEAVE A REPLY

Please enter your comment!
Please enter your name here