ಅ.7ಕ್ಕೆ ಪುತ್ತೂರಿನಲ್ಲಿ ಶೌರ್ಯ ಜಾಗರಣಾ ರಥಯಾತ್ರೆ – ಶೋಭಯಾತ್ರೆ, ಕಿಲ್ಲೆ ಮೈದಾನದಲ್ಲಿ ಹಿಂದೂ ಶೌರ್ಯ ಸಂಗಮ

0

ಪುತ್ತೂರು: ವಿಶ್ವ ಹಿಂದೂ ಪರಿಷತ್ 60ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭ ದೇಶಾದ್ಯಾಂತ ಶೌರ್ಯ ಜಾಗರಣ ರಥಯಾತ್ರೆ ಆರಂಭಗೊಂಡಿದ್ದು, ರಾಜ್ಯದಲ್ಲಿ ಸೆ.25ರಿಂದ ಅ.10 ರ ತನಕ ಶೌರ್ಯ ಜಾಗರಣ ರಥಯಾತ್ರೆ ನಡೆಯಲಿದೆ. ಈ ರಥಯಾತ್ರೆಯು ಅ.7ರಂದು ಪುತ್ತೂರಿಗೆ ಆಗಮಿಸಲಿದ್ದು, ಆ ದಿನ ಸಂಜೆ ಪುತ್ತೂರಿನಲ್ಲಿ ಶೋಭಯಾತ್ರೆ ಮತ್ತು ಕಿಲ್ಲೆ ಮೈದಾನದಲ್ಲಿ ಬೃಹತ್ ಹಿಂದೂ ಶೌರ್ಯ ಸಂಗಮ ಸಮಾವೇಶ ನಡೆಯಲಿದೆ ಎಂದು ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಹಸಂಯೋಜಕ ಮುರಳಿಕೃಷ್ಣ ಹಸಂತಡ್ಕ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಸೆ.25ಕ್ಕೆ ಚಿತ್ರದುರ್ಗದಿಂದ ಶೌರ್ಯ ಜಾಗರಣ ರಥಯಾತ್ರೆ ಆರಂಭಗೊಂಡಿದ್ದು, ಕರ್ನಾಟಕ ದಕ್ಷಿಣ ಪ್ರಾಂತದಲ್ಲಿರುವ ಎಲ್ಲಾ ಜಿಲ್ಲೆಗಳ ಮೂಲಕ ಹಾದು ಸುಳ್ಯ, ಕುಕ್ಕೆ ಸುಬ್ರಹ್ಮಣ್ಯ ಮೂಲಕ ಪುತ್ತೂರಿಗೆ ಆಗಮಿಸಲಿದೆ. ಪುತ್ತೂರಿನಲ್ಲಿ ಸಂಜೆ ಬೊಳುವಾರಿನಲ್ಲಿ ರಥವನ್ನು ಸ್ವಾಗತಿಸಿ, ಬೃಹತ್ ಶೋಭಯಾತ್ರೆ ನಡೆಯಲಿದೆ. ಶೋಭಯಾತ್ರೆಯಲ್ಲಿ ಶಂಖನಾದ, ಭಜನೆ, ಕೀರ್ತನೆಗಳು, ಅನಾದಿ ಕಾಲದಿಂದಲೂ ಹಿಂದು ಪರ ಹೋರಾಟದಲ್ಲಿ ಶೌರ್ಯ ಮೆರೆದವರನ್ನು ನೆನಪಿಸುವ ನಿಟ್ಟಿನಲ್ಲಿ ಅವರ ವೇಷಧರಿಸಿದ ಕಾರ್ಯಕರ್ತರು ಸೇರಿದಂತೆ ಸಾಂಸ್ಕೃತಿಕ ಧಾರ್ಮಿಕ ರೀತಿಯಲ್ಲಿ ಶೋಭಾಯಾತ್ರೆ ನಡೆಯಲಿದೆ. ಶೋಭಯಾತ್ರೆಗೆ ಅಲ್ಲಲ್ಲಿ ಹಿಂದುಗಳು ಪುಷ್ಪಾರ್ಚಣೆ ಮಾಡುವಂತೆ ಅವರು ಮನವಿ ಮಾಡಿದ ಅವರು ಕಿಲ್ಲೆ ಮೈದಾನದಲ್ಲಿ ಶೋಭಯಾತ್ರೆ ಸಮಾವೇಶಗೊಳ್ಳಲಿದ್ದು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜ್ಯೇಷ್ಠ ಪ್ರಚಾರಕ್ ಸು.ರಾಮಣ್ಣ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಸುಮಾರು 10 ಸಾವಿರಕ್ಕೂ ಮಿಕ್ಕಿ ಹಿಂದು ಬಾಂಧವರು ಶೌರ್ಯ ಸಂಗಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು. ಶೌರ್ಯ ಜಾಗರಣಾ ರಥಯಾತ್ರೆ ಮತ್ತು ಹಿಂದೂ ಶೌರ್ಯ ಸಂಗಮದ ಸ್ವಾಗತ ಸಮಿತಿ ಸಂಚಾಲಕ ಕೃಷ್ಣಪ್ರಸಾದ್ ಬೆಟ್ಟ, ಅಧ್ಯಕ್ಷ ಕಿಶೋರ್ ಕುಮಾರ್ ಬೊಟ್ಯಾಡಿ, ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ವಿರೂಪಾಕ್ಷ ಭಟ್ ಮಚ್ಚಿಮಲೆ ಮತ್ತು ವಿಶ್ವಹಿಂದೂ ಪರಿಷತ್ ಜಿಲ್ಲಾ ಸಹಕಾರ್ಯವಾಹ ಶ್ರೀಧರ್ ತೆಂಕಿಲ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


ಶಿವಮೊಗ್ಗದ ಘಟನೆಯನ್ನು ಎನ್‌ಐಎ ತನಿಖೆ ಮಾಡಬೇಕು
ಹಿಂದು ಸಮಾಜವನ್ನು ಸಂಘಟಿಸುವ ಕಲ್ಪನೆಯನ್ನು ಇಟ್ಟುಕೊಂಡು ಬಾಲಗಂಗಾಧರ ತಿಲಕ್ ಅವರು ದೇಶಾದ್ಯಾಂತ ಆಯೋಜಿಸಿದ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಗಳು ಇವತ್ತು ಎಲ್ಲಾ ಕಡೆಯುತ್ತಿದೆ. ಎಲ್ಲಾ ಕಡೆ ಬಹಳ ವ್ಯವಸ್ಥಿತವಾಗಿ ಶಿಸ್ತುಬದ್ಧವಾಗಿ ನಡೆಯುತ್ತಿದೆ. ಎಲ್ಲೂ ಕೂಡಾ ನಮ್ಮ ಕಾರ್ಯಕ್ರಮಗಳು ಚ್ಯುತಿ ಬಾರದಂತೆ ನಡೆಯುತ್ತಿದೆ. ಅದರೆ ಶಿವಮೊಗ್ಗದಲ್ಲಿ ಈದ್ ಮೀಲಾದ್ ಸಂದರ್ಭ ಕಾರ್ಯಕ್ರಮದಲ್ಲಿ ಹಾಕಿದ್ದ ಪ್ರಚೋದನಾಕಾರಿ ಕಟೌಟ್ ಅನ್ನು ಪೊಲೀಸರೆ ಆಕ್ಷೇಪ ಮಾಡಿ ತೆರವು ಮಾಡುವ ಸಂದರ್ಭ ಅಲ್ಲಿರುವ ದುಷ್ಟ ಶಕ್ತಿಗಳು ಸುಮಾರು 400 ರಷ್ಟು ಸಂಖ್ಯೆಯಲ್ಲಿ ಒಂದು ಹಳ್ಳಿಗೆ ಹೋಗಿ ಅಲ್ಲಿರುವ ಹಿಂದು ಸಮಾಜದ ಮೇಲೆ ಆಕ್ರಮಣ ಮಾಡಿರುವುದು ಖಂಡನೀಯ. ಇದು ಹಿಂದು ಸಮಾಜ ಸಹಿಸಲು ಅಸಾಧ್ಯವಾದ ಘಟನೆಯಾಗಿದೆ. ಈ ವಿಚಾರವನ್ನು ರಾಷ್ಟ್ರೀಯ ತನಿಖಾ ದಳದ ಮೂಲಕ ತನಿಖೆ ನಡೆಸಿ ದುಷ್ಟ ಶಕ್ತಿಗಳಿಗೆ ಶಿಕ್ಷೆ ವಿಧಿಸುವ ಕೆಲಸ ಆಗಬೇಕೆಂದು ಸರಕಾರಕ್ಕೆ ಒತ್ತಾಯ ಮಾಡುತ್ತೇವೆ ಮತ್ತು ಸರಕಾರ ಈ ವಿಚಾರದಲ್ಲಿ ತುಷ್ಟಿಕರಣ ನೀತಿ ಮಾಡಿದರೆ ಮುಂದಿನ ಪರಿಣಾಮ ಎದುರಿಸಬೇಕಾದಿತು ಎಂದು ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಹಸಂಯೋಜಕ ಮುರಳಿಕೃಷ್ಣ ಹಸಂತಡ್ಕ ಎಚ್ಚರಿಕೆ ನೀಡಿದರು.

LEAVE A REPLY

Please enter your comment!
Please enter your name here