ನಾಪತ್ತೆಯಾಗಿದ್ದ ಹಳೆನೇರೆಂಕಿಯ ಹರೀಶ್ ಪೂಜಾರಿ ಬಿ.ಸಿ,ರೋಡ್‌ನಲ್ಲಿ ಅಸ್ವಸ್ಥರಾಗಿ ಪತ್ತೆ-ಮಂಗಳೂರಿನ ಆಸ್ಪತ್ರೆಯಲ್ಲಿ ಮೃತ್ಯು

0

ರಾಮಕುಂಜ: ಅ.3ರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದ ಕಡಬ ತಾಲೂಕಿನ ಹಳೆನೇರೆಂಕಿ ಗ್ರಾಮದ ಆರಾಟಿಗೆ ನಿವಾಸಿ ಹರೀಶ್ ಯಾನೆ ನಾಣ್ಯಪ್ಪ ಪೂಜಾರಿ(65ವ.)ಯವರು ಅ.4ರಂದು ಮಧ್ಯಾಹ್ನದ ವೇಳೆಗೆ ಬಿ.ಸಿ.ರೋಡ್‌ನ ಬಸ್‌ನಿಲ್ದಾಣದಲ್ಲಿ ಅಸ್ವಸ್ಥರಾಗಿ ಪತ್ತೆಯಾಗಿದ್ದು, ಚಿಕಿತ್ಸೆಗಾಗಿ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಿದ್ದರೂ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ನಡೆದಿದೆ..


ಹಳೆನೇರೆಂಕಿಯಲ್ಲಿ ದಿನಸಿ ಅಂಗಡಿ ಹೊಂದಿದ್ದ ಹರೀಶ್ ಯಾನೆ ನಾಣ್ಯಪ್ಪ ಪೂಜಾರಿಯವರು ಕಳೆದ ಹಲವು ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅ.3ರಂದು ಮಧ್ಯಾಹ್ನ ಮೊಬೈಲ್ ಅನ್ನು ಅಂಗಡಿಯಲ್ಲೇ ಬಿಟ್ಟು ತೆರಳಿದ್ದ ಅವರು ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಹಾಗೂ ಇತರೆಡೆ ಹುಡುಕಾಟ ನಡೆಸಿದ್ದ ಮನೆಯವರು ಉಪ್ಪಿನಂಗಡಿ ಪೊಲೀಸ್ ಠಾಣೆಗೂ ಮಾಹಿತಿ ನೀಡಿದ್ದರು. ಹರೀಶ್ ಪೂಜಾರಿಯವರು ಪತ್ತೆಯಾಗದ ಹಿನ್ನೆಲೆಯಲ್ಲಿ ಅ.4ರಂದು ಬೆಳಿಗ್ಗೆ ಮನೆಯವರು ಕಡಬ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಈ ಮಧ್ಯೆ ಮಧ್ಯಾಹ್ನದ ವೇಳೆಗೆ ಹರೀಶ್ ಅವರು ಅಂಗಡಿಯಲ್ಲಿಯೇ ಬಿಟ್ಟು ಹೋಗಿದ್ದ ಮೊಬೈಲ್‌ಗೆ ಕರೆ ಮಾಡಿದ ವ್ಯಕ್ತಿಯೋರ್ವರು ಹರೀಶ್ ಪೂಜಾರಿಯವರು ಬಿ.ಸಿ.ರೋಡ್ ಬಸ್‌ನಿಲ್ದಾಣದಲ್ಲಿ ಅಸ್ವಸ್ಥರಾಗಿ ಬಿದ್ದಿದ್ದು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಿರುವ ಬಗ್ಗೆ ಮಾಹಿತಿ ನೀಡಿದ್ದರು. ಮನೆಯವರು ಬಿ.ಸಿ.ರೋಡ್‌ಗೆ ಹೋಗಿ ಹರೀಶ್ ಪೂಜಾರಿಯವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ಕರೆದೊಯ್ದಿದ್ದು ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮಧ್ಯಾಹ್ನದ ವೇಳೆಗೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮೃತರು ಪತ್ನಿ ಮೀನಾಕ್ಷಿ, ಪುತ್ರ ಉಲ್ಲಾಸ್, ಪುತ್ರಿಯರಾದ ವಾಣಿ, ನಿಶಾ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here