ಪಡಿತರ ಚೀಟಿ ತಿದ್ದುಪಡಿ ಪ್ರಕ್ರಿಯೆಗೆ ಮೊದಲ ದಿನವೇ ಸರ್ವರ್‌ ಸಮಸ್ಯೆ-ಜನರ ಪರದಾಟ

0

ಪ್ರವೀಣ್ ಚೆನ್ನಾವರ


ಪುತ್ತೂರು : ಪಡಿತರ ಚೀಟಿಗಳಲ್ಲಿ ಹೊಸ ಸದಸ್ಯರ ಹೆಸರು ಸೇರ್ಪಡೆ , ಬದಲಾವಣೆ ,ತಿದ್ದುಪಡಿ , ಪಡಿತರ ಚೀಟಿ ಮುಖ್ಯಸ್ಥರ ಹೆಸರು ಬದಲಾವಣೆ ,ಮಹಿಳೆಯನ್ನು ಕುಟುಂಬದ ಯಜಮಾನಿ ಎಂದು ಬದಲಾಯಿಸುವುದು ಮೊದಲಾದ ತಿದ್ದುಪಡಿಗೆ ದ.ಕ. ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಅ.8ರಿಂದ ಅ.10ರ ತನಕ ಅವಕಾಶ ನೀಡಲಾಗಿತ್ತು.
ಇದರಲ್ಲಿ ಮೊದಲ ದಿನವಾದ ಅ.8 ರಂದು ಸರ್ವರ್‌ಸಮಸ್ಯೆಯಿಂದ ಸೇವಾ ಕೇಂದ್ರದವರು ಹಾಗೂ ಜನರು ಪರದಾಡುವಂತಾಯಿತು. ಆಹಾರ ಇಲಾಖೆಯ ವೆಬ್‌ಸೈಟ್‌ತೆಗೆದು ಪ್ರಕ್ರಿಯೆ ಆರಂಭಿಸುತ್ತಿದ್ದಂತೆ Server is too busy ಎಂದು ಪ್ರಕ್ರಿಯೆ ಸ್ಥಗಿತಗೊಳ್ಳುತ್ತಿತ್ತು.
ಪಡಿತರ ಚೀಟಿ ತಿದ್ದುಪಡಿಗೆ ಸರ್ಕಾರ ಅವಕಾಶ ನೀಡಿದೆ ಎಂದು ಹೇಳುತ್ತಿದ್ದರೂ ಇನ್ನೂ ಸರ್ವರ್ ಸಮಸ್ಯೆ ನೀಗದ ಕಾರಣ ಗ್ರಾಹಕರು ಮಾತ್ರ ಸೇವಾ ಕೇಂದ್ರಗಳಿಗೆ ಅಲೆಯುವುದು ತಪ್ಪದೆ ತತ್ತರಿಸಿ ಹೋಗುವಂತಾಗಿದೆ.ಸರ್ವರ್‌ಸಮಸ್ಯೆಯಿಂದ ಗ್ರಾಹಕ ಸೇವಾ ಕೇಂದ್ರದ ಆಪರೇಟರ್‌ಕೂಡ ತೊಂದರೆಗೀಡಾಗುವಂತಾಗಿದೆ.


ಕಳೆದ ತಿಂಗಳು ಕೂಡ ಪಡಿತರ ತಿದ್ದುಪಡಿಗೆ ಅವಕಾಶ ನೀಡಲಾಗಿದ್ದರೂ ಸರ್ವರ್‌ಸಮಸ್ಯೆಯೊಂದಿಗೆ ಮುಕ್ತಾಯಗೊಂಡಿತ್ತು. ಇನ್ನೇನು ಸರ್ವರ್ ಸಮಸ್ಯೆ ಇರುವುದಿಲ್ಲ . ನೆಮ್ಮದಿಯಾಗಿ ಪಡಿತರ ಕಾರ್ಡುಗಳಲ್ಲಿ ಹಲವು ಬದಲಾವಣೆಗಳನ್ನು ಮಾಡಿಸಿಕೊಳ್ಳಬಹುದು ಎಂದು ಭಾವಿಸಿದ್ದವರಿಗೆ ಅ.೮ರಂದು ಮತ್ತೆ ನಿರಾಶೆ ಮೂಡಿದೆ. ಬೆಳಿಗ್ಗೆ 10 ಗಂಟೆಗೆ ಬಂದು ಸಂಜೆಯವರೆಗೂ ಕಾದು ಕುಳಿತ ಕೆಲವೇ ಕೆಲವು ಜನರಿಗೆ ತಿದ್ದುಪಡಿ ಮಾಡಲು ಸಾಧ್ಯವಾಗಿದೆ.


ಇನ್ನೂ ತಪ್ಪದ ಸರ್ವರ್ ಸಮಸ್ಯೆ: ಕಳೆದ ಬಾರಿ ಕೂಡ ಹಲವು ಮಂದಿ ಕೈಯಲ್ಲಿ ಕಾರ್ಡುಗಳನ್ನು ಹಿಡಿದುಕೊಂಡು ತಾಲೂಕು ಕೇಂದ್ರಕ್ಕೆ ಸೈಬರ್ ಕೇಂದ್ರ, ಗ್ರಾಮ ಒನ್ ಹಾಗೂ ಬಾಪೂಜಿ ಸೇವಾ ಕೇಂದ್ರಗಳತ್ತ ಸಾಗಿದರೂ ಸರ್ವರ್ ಇಲ್ಲದೆ ವಾಪಾಸ್ ಹೋಗುವಂತಾಗಿದೆ.
ಪಡಿತರ ಚೀಟಿ ತಿದ್ದುಪಡಿ ಗಹಲಕ್ಷ್ಮೀ ಯೋಜನೆಗಾಗಿ ಮಾತ್ರ ಆವಶ್ಯಕತೆಯಿರುವುದಲ್ಲ ,ವಿವಿಧ ನಿಗಮ ಹಾಗೂ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ದೊರಕುವ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಮಕ್ಕಳ ಹೆಸರನ್ನು ಪಡಿತರ ಚೀಟಿಗೆ ಸೇರಿಸಲೂ ಹೆಚ್ಚಿನ ಸಂಖ್ಯೆಯಲ್ಲಿ ಸೇವಾ ಕೇಂದ್ರಗಳತ್ತ ಜನರು ಆಗಮಿಸಿದ್ದರು.
ವಾಸಸ್ಥಾನ ಬದಲಾಯಿಸಿದವರು ಲೋನ್ ಸೇರಿದಂತೆ ವಿವಿಧ ಸೌಲಭ್ಯಕ್ಕಾಗಿ ಪಡಿತರ ಚೀಟಿ ಬದಲಾಯಿಸದೇ ಪರದಾಡುವಂತಾಗಿದೆ.ಮದುವೆಯಾಗಿ ಬಂದವರು ಗಂಡನ ಮನೆಯ ಪಡಿತರ ಚೀಟಿಗೆ ಹೆಸರು ಸೇರ್ಪಡೆ ಮಾಡುವುದಕ್ಕೂ ಆಗದೇ ಪರಿತಪಿಸುವಂತಾಗಿದೆ.
ಕೆಲವೆಡೆ ಆರೋಗ್ಯ ಸೇವೆ ಪಡೆಯುವುದಕ್ಕೂ ಕೂಡ ಪಡಿತರ ಚೀಟಿಗೆ ಹೆಸರು ಸೇರ್ಪಡೆ ಮತ್ತು ಬದಲಾವಣೆಗೆ ಆಗಮಿಸಿದ್ದರು.ಒಟ್ಟಿನಲ್ಲಿ ಆಹಾರ ಇಲಾಖೆಯ ಸರ್ವರ್‌ಸಮಸ್ಯೆ ಮುಗಿಯುವಂತದ್ದು ಅಲ್ಲ ಎಂದು ಗ್ರಾಹಕರು ಮುನಿಸಿಕೊಂಡು ಮನೆಯತ್ತ ತೆರಳಿದರು.


ಮೈಸೂರು ವಿಭಾಗದಲ್ಲಿ ಹೆಚ್ಚಿದ ಸರ್ವರ್‌ಸಮಸ್ಯೆ
: ರಾಜ್ಯದ ಆಡಳಿತಾತ್ಮಕ ಉದ್ದೇಶಗಳಿಗಾಗಿ ನಾಲ್ಕು ವಿಭಾಗಗಳಿದ್ದು , ಬೆಂಗಳೂರು ,ಬೆಳಗಾವಿ ,ಕಲಬುರಗಿ ,ಮೈಸೂರು ಆಗಿದ್ದು, ಇವುಗಳ ಪೈಕಿ ಆಹಾರ ,ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಮೈಸೂರು ವಿಭಾಗದ ವ್ಯಾಪ್ತಿಯಲ್ಲಿ ಹೆಚ್ಚು ಸರ್ವರ್ ಸಮಸ್ಯೆ ಇದೆ ಎಂಬುದು ಗ್ರಾಹಕ ಸೇವಾ ಕೇಂದ್ರದವರ ಅಭಿಪ್ರಾಯ. ಬೆಂಗಳೂರು ನಗರದಲ್ಲಿ ಆಹಾರ ಇಲಾಖೆಯ ಸರ್ವರ್ ವೇಗವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದು , ಬೇರೆ ಕಡೆಗಳಲ್ಲಿ ಸಮಸ್ಯೆ ನಿರಂತರವಿದೆ ಎನ್ನಲಾಗಿದೆ.


ನಿಯಮಿತ ಸಮಯ ಸರಿಯಲ್ಲ: ಪಡಿತರ ಚೀಟಿ ತಿದ್ದುಪಡಿಗೆ ನಿಯಮಿತ ದಿನಗಳ ಅವಕಾಶ ಸರಿಯಲ್ಲ.. ಅಲ್ಲದೆ ಈ ಬಾರಿ ಬೆಳಿಗ್ಗೆ ೧೦ರಿಂದ ಸಂಜೆ ೭ ಗಂಟೆಯವರೆಗೆ ಮಾತ್ರ ಅವಕಾಶ ನೀಡಲಾಗಿದೆ. ನಿರಂತರವಾಗಿ ಈ ಪ್ರಕ್ರಿಯೆಗೆ ಅವಕಾಶ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


ಮುಂದಿನ 2 ದಿನದಲ್ಲಾದರೂ ಸಮಸ್ಯೆ ಪರಿಹಾರವಾಗಲಿ
ಪಡಿತರ ಚೀಟಿ ತಿದ್ದುಪಡಿಯ ಮೊದಲ ದಿನ ಸರ್ವರ್ ಸಮಸ್ಯೆಯಿಂದ ಮುಕ್ತಾಯವಾಗಿದ್ದು, ಮುಂದಿನ 2 ದಿನಗಳಾದ ಅ.9 ,10 ರಂದು ಈ ಸರ್ವರ್ ಸಮಸ್ಯೆ ಪರಿಹಾರವಾಗಿ ಜನರಿಗೆ ಅನುಕೂಲವಾಗುವಂತಾಗಲಿ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಸಾಮಾಜಿಕ ಜಾಲತಾಣದಲ್ಲೂ ಆಕ್ರೋಶ
ಸರ್ವರ್ ಸಮಸ್ಯೆ ಕುರಿತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದರಲ್ಲಿದ್ದ ಒಂದು ಕಮೆಂಟ್‌ಈ ರೀತಿ ಇದೆ. ರೇಷನ್‌ಕಾರ್ಡ್ ಸರ್ವರ್ ಪರಿಸ್ಥಿತಿ ತುಂಬಾ ಚಿಂತಾಜನಕವಾಗಿರುವುದರಿಂದ 108ಗೆ ಕರೆ ಮಾಡಿ ಆಂಬುಲೆನ್ಸ್ ಬುಕ್‌ಮಾಡಿಯಪ್ಪಾ?. ಎಷ್ಟು ಖರ್ಚಾದರೂ ಪರ್ವಾಗಿಲ್ಲ..ಒಳ್ಳೆಯ ಆಸ್ಪತ್ರೆಗೆ ದಾಖಲಿಸಿ ಎಲ್ಲರ ಹಿತಕ್ಕಾಗಿ ಗುಣಪಡಿಸುತ್ತೇನೆ ಎಂದು ಕಮೆಂಟ್ ಹಾಕಿ ಆಕ್ರೋಶ ವ್ಯಕ್ತಪಡಿಸಲಾಗಿದೆ.

LEAVE A REPLY

Please enter your comment!
Please enter your name here