ಪುತ್ತೂರು: ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯಕ್ಕೆ ಒಳಪಟ್ಟ ನಗರದ ಹೊರ ವಲಯದಲ್ಲಿನ ಮರೀಲು ಸೆಕ್ರೇಡ್ ಹಾರ್ಟ್ ಚರ್ಚ್‌ನ ನೂತನ ಧರ್ಮಗುರುಗಳಾಗಿ ವಂ|ಡೊನಾಲ್ಡ್ ನೀಲೇಶ್ ಕ್ರಾಸ್ತಾರವರು ನೇಮಕಗೊಂಡಿದ್ದಾರೆ.
ಕಳೆದ ಐದು ವರ್ಷಗಳಿಂದ ಚರ್ಚ್‌ನಲ್ಲಿ ಪ್ರಧಾನ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದ ಹಿರಿಯ ಧರ್ಮಗುರು ವಂ|ವಲೇರಿಯನ್ ಫ್ರ್ಯಾಂಕ್‌ರವರು ಅನಾರೋಗ್ಯದ ಹಿನ್ನೆಲೆಯಲ್ಲಿ ಧರ್ಮಗುರುಗಳ ವಿಶ್ರಾಂತಿ ಗೃಹವಾದ ಸೈಂಟ್ ಜುಜೆ ವಾಸ್ ಜೆಪ್ಪು ಇಲ್ಲಿಗೆ ತೆರಳಲಿದ್ದು, ಅವರ ಸ್ಥಾನಕ್ಕೆ ವಂ|ಡೊನಾಲ್ಡ್ ನೀಲೇಶ್ ಕ್ರಾಸ್ತಾರವರನ್ನು ನೇಮಕಗೊಳಿಸಿ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ|ವಂ|ಡಾ|ಪೀಟರ್ ಪಾವ್ಲ್ ಸಲ್ದಾನ್ಹಾರವರು ಆದೇಶ ಹೊರಡಿಸಿದ್ದಾರೆ.
ನೂತನ ಧರ್ಮಗುರುಗಳಾಗಿ ನೇಮಕಗೊಂಡ ಸಂಪಾಜೆ ನಿವಾಸಿ ಸಿರಿಲ್ ಕ್ರಾಸ್ತಾ ಹಾಗೂ ಮೋಲಿ ಡಿ’ಸೋಜ ದಂಪತಿ ಪುತ್ರ ವಂ|ಡೊನಾಲ್ಡ್ ನೀಲೇಶ್ ಕ್ರಾಸ್ತಾರವರು 2016, ಏಪ್ರಿಲ್ 8 ರಂದು ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷರಾದ ಅತಿ|ವಂ|ಡಾ|ಅಲೋಶಿಯಸ್ ಪಾವ್ಲ್ ಡಿ’ಸೋಜರವರಿಂದ ಧರ್ಮಗುರು ದೀಕ್ಷೆಯನ್ನು ಪಡೆದು ಪೆರ್ಮನ್ನೂರು ಸೈಂಟ್ ಸೆಬಾಸ್ಟಿಯನ್ ಚರ್ಚ್‌ನಲ್ಲಿ ಒಂದು ವರ್ಷ ಸಹಾಯಕ ಧರ್ಮಗುರುಗಳಾಗಿ ಸೇವೆಯನ್ನು ಆರಂಭಿಸಿದ್ದರು. ಬಳಿಕ 2017 ರಿಂದ 2022ರ ತನಕ ಮಂಗಳೂರಿನ ಕೊಡಿಯಾಲ್‌ಬೈಲ್ ಪ್ರೆಸ್‌ನಲ್ಲಿ ಸಹಾಯಕ ನಿರ್ದೇಶಕರಾಗಿ ಸೇವೆ, 2021 ರಿಂದ 2023ರ ವರೆಗೆ ವಾಮಂಜೂರು ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಂಬಿಎ ಪದವಿ ಜೊತೆಗೆ ದೇರಳಕಟ್ಟೆಯ ಫಾ|ಮುಲ್ಲರ‍್ಸ್ ಹೋಮಿಯೋಪತಿ ಫಾರ್ಮಾಸುಟಿಕಲ್ ವಿಭಾಗದಲ್ಲಿ ಇಂಟರ್ನ್‌ಶಿಪ್ ಪಡೆದಿರುತ್ತಾರೆ.
ಈ ಸಂದರ್ಭದಲ್ಲಿ ದೇರಳಕಟ್ಟೆಯ ಫಾ|ಮುಲ್ಲರ‍್ಸ್ ಹೋಮಿಯೋಪತಿ ಫಾರ್ಮಾಸುಟಿಕಲ್ ವಿಭಾಗದ ಸಹಾಯಕ ಆಡಳಿತಾಧಿಕಾರಿ ವಂ.ಅಶ್ವಿನ್ ಕ್ರಾಸ್ತಾ, ಆಧ್ಯಾತ್ಮಿಕ ನಿರ್ದೇಶಕ ವಂ|ಜೋನ್ ವಾಸ್, ಫಿಲೋಮಿನಾ ಕಾಲೇಜು ಪುರುಷರ ವಸತಿನಿಲಯದ ವಾರ್ಡನ್ ವಂ|ರೂಪೇಶ್ ತಾವ್ರೋ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೋನ್ ಮಸ್ಕರೇನ್ಹಸ್, ಕಾರ್ಯದರ್ಶಿ ಎಡ್ವಿನ್ ಡಿ’ಸೋಜ, ವಾಳೆ ಗುರಿಕಾರರು ಹಾಗೂ ಪ್ರತಿನಿಧಿಗಳು, ವಿವಿಧ ಸಂಘಟನೆಯ ಪದಾಧಿಕಾರಿಗಳು, ಕ್ರೈಸ್ತ ಬಾಂಧವರು ಉಪಸ್ಥಿತರಿದ್ದರು.
ಸೇವಾ ಹುದ್ದೆಯ ಹಸ್ತಾಂತರ..
ಪುತ್ತೂರು ವಲಯ ಚರ್ಚ್‌ಗಳ ಹಾಗೂ ಮಾಯಿದೆ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ಫೆ.7ರಂದು ಸಂಜೆ ಪೂಜಾ ವಿಧಿಗಳನ್ನು ನೆರವೇರಿಸಿದ ಬಳಿಕ ನೂತನವಾಗಿ ನೇಮಕಗೊಂಡ ಧರ್ಮಗುರು ವಂ|ಡೊನಾಲ್ಡ್ ನೀಲೇಶ್ ಕ್ರಾಸ್ತಾರವರಿಗೆ ನಿರ್ಗಮಿತ ಧರ್ಮಗುರು ವಂ|ವಲೇರಿಯನ್ ಫ್ರ್ಯಾಂಕ್‌ರವರ ಸಮ್ಮುಖದಲ್ಲಿ ಸೇವಾ ಹುದ್ದೆಯನ್ನು ಹಸ್ತಾಂತರಗೊಳಿಸಿದರು.