ಪುತ್ತೂರು: ಪುತ್ತೂರು ದಸರಾ ನವದುರ್ಗಾರಾಧನಾ ಸಮಿತಿಯಿಂದ 21 ನೇ ವರ್ಷದ ಪುತ್ತೂರು ದಸರಾ ಮಹೋತ್ಸವ ಅ.15 ರಿಂದ ಸಂಪ್ಯ ಉದಯಗಿರಿ ಶ್ರೀ ವಿಷ್ಣುಮೂರ್ತಿ, ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಜರುಗಲಿದೆ ಎಂದು ಪುತ್ತೂರು ದಸರಾ ಮಹೋತ್ಸವ ಸಮಿತಿ ಸಂಚಾಲಕ ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಶ್ರೀ ಗಣಪತಿ ಶಾರದೆ ಸಹಿತ ನವದುರ್ಗೆಯರ ಪ್ರತಿಷ್ಠೆಯೊಂದಿಗೆ ಪುತ್ತೂರು ದಸರಾ ಆರಂಭಗೊಳ್ಳಲಿದೆ. ಅ.15 ಕ್ಕೆ ಗಣಪತಿ, ನವದುರ್ಗೆಯರ ಪ್ರತಿಷ್ಠೆ, ಅ.20 ಕ್ಕೆ ಶಾರದಾ ಪ್ರತಿಷ್ಠೆ, ಅ.22 ಕ್ಕೆ ಸಾಮೂಹಿಕ ಆಯುಧ ಪೂಜೆ, ಅ.26 ಕ್ಕೆ ಸಾಮೂಹಿಕ ಚಂಡಿಕಾಹವನ ಮತ್ತು ಸಂಜೆ ವಿಜೃಂಭನೆಯ ಪುತ್ತೂರು ದಸರಾ ಮೆರವಣಿಗೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
ಉದ್ಘಾಟನೆ:
ಅ.15 ರಂದು ಬೆಳಿಗ್ಗೆ ಗಣಪತಿ ಸಮಿತಿ ನವದುರ್ಗಾರಾಧನೆಯ ಪ್ರತಿಷ್ಠೆ ಬಳಿಕ ಪ್ರತಿ ವರ್ಷಪ್ರತಿಯಂತೆ ಸ್ಥಳೀಯ ಗ್ರಾ.ಪಂ ಅಧ್ಯಕ್ಷರಿಂದ ದೀಪ ಪ್ರಜ್ವಲನೆ, ಭಗವಧ್ವಜ ಇಡುವ ಮೂಲಕ ಚಾಲನೆ ನೀಡಲಾಗುತ್ತದೆ. ಸಂಜೆ ಪುತ್ತೂರು ದಸರಾದ ಅಧೀಕೃತ ಸಭಾ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಶಾಸಕ ಅಶೋಕ್ ಕುಮಾರ್ ರೈ, ಚಿತ್ರನಟ ಚೇತನ್ ರೈ ಮಾಣಿ, ರಚನಾ ರೈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದು ಹೇಳಿದ ಪ್ರೀತಂ ಪುತ್ತೂರಾಯ ಅವರು ಪ್ರತಿ ದಿನ ಬೆಳಿಗ್ಗೆ ಭಜನೆ, ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಅ.26ರಂದು ಸಂಜೆ ಗಂಟೆ 4ಕ್ಕೆ ದರ್ಬೆ ಅಶ್ವಿನಿ ಸರ್ಕಲ್ ಬಳಿಯಿಂದ ವೈಭವದ ಶೋಭಯಾತ್ರೆ ನಡೆಯಲಿದೆ. ಶೋಭಯಾತ್ರೆಯು ದರ್ಬೆಯಿಂದ ಬೊಳುವಾರು ತನಕ ನಡೆಯಲಿದ್ದು, ಶೋಭಾಯಾತ್ರೆಯಲ್ಲಿ ಸಾಂಪ್ರದಾಯಿಕ ಸಂಸ್ಕೃತಿಯನ್ನು ಬಿಂಬಿಸುವ ಕುಣಿತ ಭಜನೆ ವಿಶೇಷ ಆಕರ್ಷಣೆಯಾಗಲಿದೆ ಎಂದು ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಪುತ್ತೂರು ದಸರಾ ಮಹೋತ್ಸವ ಸಮಿತಿ ಅಧ್ಯಕ್ಷ ಜಯಂತ ಶೆಟ್ಟಿ ಕಂಬಳತ್ತಡ್ಡ, ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಕುಕ್ಕಾಡಿ, ಗೌರವ ಸಲಹೆಗಾರ ರಾಜೇಶ್ ಬನ್ನೂರು, ಸದಸ್ಯ ರಂಗನಾಥ್ ರಾವ್ ಉಪಸ್ಥಿತರಿದ್ದರು.
ಛದ್ಮವೇಷ ಸ್ಪರ್ಧೆ:
ವಿಶೇಷವಾಗಿ ಪ್ರತಿ ವರ್ಷ ಪುತ್ತೂರು ದಸರಾದಲ್ಲಿ ಭಜನೆ ಸಹಿತ ಬೇರೆ ಬೇರೆ ಕಾರ್ಯಕ್ರಮದಲ್ಲಿ ಸ್ಪರ್ದೆಗಳು ನಡೆಸಲಾಗುತ್ತಿದ್ದು ಈ ಬಾರಿ ಅ.15 ಕ್ಕೆ ಸಾಮೂಹಿಕ ಛದ್ಮವೇಷ ಸ್ಪರ್ಧೆ ನಡೆಯಲಿದೆ. ಅ.26ರಂದು ನಡೆಯುವ ಸಾಮೂಹಿಕ ಚಂಡಿಕಾಹವನದಲ್ಲಿ ಪೂಜಾ ಸೇವೆ ರಶೀದಿ ಮಾಡಿದವರಿಗೆ ಶ್ರೀ ದೇವರ ಪ್ರಸಾದ ರೂಪದಲ್ಲಿ ಸೀರೆ ವಿತರಣೆ ನಡೆಯಲಿದೆ ಎಂದು ಪ್ರೀತಂ ಪುತ್ತೂರಾಯ ಹೇಳಿದರು.