ರಾಮನಗರ- ನಿನ್ನಿಕಲ್ಲು ರಸ್ತೆ ವಿಸ್ತರಣಾ ಕಾಮಗಾರಿ ಆರಂಭ-ವಿಸ್ತರಣೆಗೆ ಸ್ಥಳೀಯರ ಆಕ್ರೋಶ

0

ಉಪ್ಪಿನಂಗಡಿ: ಇಲ್ಲಿನ ರಾಮನಗರದದಿಂದ ನಿನ್ನಿಕಲ್ಲು ತನಕದ ರಸ್ತೆ ವಿಸ್ತರಣೆ ಕಾಮಗಾರಿ ಆರಂಭವಾಗಿದ್ದು, ಯಾವುದೇ ಪೂರ್ವ ಸೂಚನೆ ನೀಡದೆ ಗುತ್ತಿಗೆದಾರರು ಏಕಾಏಕಿ ಕಾಮಗಾರಿ ಆರಂಭಿಸಲು ಮುಂದಾಗಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.


ಪುತ್ತೂರು ತಾಲೂಕಿನ ಉಪ್ಪಿನಂಗಡಿ ಗ್ರಾಮದ ಗಾಂಧಿಪಾರ್ಕ್ ಬಳಿಯಿಂದ ಹಿರೇಬಂಡಾಡಿ ಮೂಲಕ ಕೊಯಿಲ ಪಶು ವೈದ್ಯಕೀಯ ಕೇಂದ್ರಕ್ಕೆ ಸಂಪರ್ಕಿಸುವ ರಸ್ತೆಯ ವಿಸ್ತರಣಾ ಕಾಮಗಾರಿಗೆ ಈ ಹಿಂದಿನ ಸರಕಾರ ಅನುದಾನ ಮಂಜೂರುಗೊಳಿಸಿತ್ತು. ಆದರೆ ಗಾಂಧಿಪಾರ್ಕ್ ಬಳಿಯಿಂದ ಹಿರೇಬಂಡಾಡಿ ಸಂಪರ್ಕಿಸುವ ಮಧ್ಯೆ ರಾಮನಗರ ರಸ್ತೆಯ ಇಕ್ಕಡೆಗಳಲ್ಲಿ ಪಟ್ಟಾ ಸ್ಥಳ ಖರೀದಿಸಿ ಬಹುತೇಕ ಮಧ್ಯಮ ವರ್ಗ ಕುಟುಂಬಗಳು ನಿರ್ಮಿಸಿದ ಮನೆಗಳಿವೆ. ಈ ನಡುವೆ ಇಲಾಖೆ ರಸ್ತೆಗೆ ಬೇಕಾಗುವ ಭೂಮಿ ಗುರುತು ಕಾರ್ಯ ನಡೆಸುತ್ತಿದ್ದು, ಇದರಿಂದ ಹಲವು ಮನೆಗಳಿಗೆ ಹಾಗೂ ಎರಡೂ ಕಲಾ ಮಂದಿರ, ಅಂಗನವಾಡಿ ಕೇಂದ್ರಕ್ಕೆ ತೊಂದರೆಯಾಗುವ ಪರಿಸ್ಥಿತಿ ಇದೆ. ಆದರೆ ರಾಜ್ಯ ಹೆದ್ದಾರಿ ಇಲಾಖೆಯಿಂದ ಯಾವುದೇ ಪರಿಹಾರ ಒದಗಿಸಲು ಅಸಾಧ್ಯವೆಂದು ಈಗಾಗಲೇ ಸ್ಪಷ್ಟಪಡಿಸಿರುವುದರಿಂದ ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ.


ಈ ಬಗ್ಗೆ ಗ್ರಾಮಸ್ಥರಾದ ಯು.ರಾಮ ಪ್ರತಿಕ್ರಿಯಿಸಿ, ರಸ್ತೆ ಅಭಿವೃದ್ಧಿಪಡಿಸಲು ತಮ್ಮದು ಯಾವುದೇ ತಕರಾರು ಇಲ್ಲ. ಆದರೆ ರಸ್ತೆ ಅಗಲೀಕರಣದ ವೇಳೆ ಹಾನಿಗೊಳಗಾಗುವ ತಡೆಗೋಡೆ, ಕಟ್ಟಡಗಳನ್ನು, ಮನೆಗಳ ಆವರಣ ಗೋಡೆಗಳನ್ನು ಮತ್ತೆ ನಿರ್ಮಿಸಿಕೊಡಬೇಕುವುದಾದರೆ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದ್ದಾರೆ.
ಲೋಕೋಪಯೋಗಿ ಕಿರಿಯ ಎಂಜಿನಿಯರ್ ಕಾನಿಷ್ಕ ಮಾತನಾಡಿ, ಈ ರಸ್ತೆ ಜಿ.ಪಂ. ರಸ್ತೆಯಾಗಿದ್ದು ಮೇಲ್ದರ್ಜೆಗೇರಿ ಲೋಕೋಪಯೋಗಿ ಇಲಾಖೆಯ ಸುಪರ್ದಿಗೆ ಬಂದಿದೆ. ಇಲ್ಲಿನ ರಸ್ತೆ ಕಿರಿದಾಗಿದ್ದು ವಿಸ್ತರಣೆಯ ಸರ್ವೇ ಕಾರ್ಯ ನಡೆಸುತ್ತಿದ್ದೇವೆ. ರಸ್ತೆ ವಿಸ್ತರಣೆಗೆ ಇಲ್ಲಿ ಕೆಲವು ಗೊಂದಲಗಳಿರುವುದು ಮನವರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಪರಿಶೀಲಿಸಿ ಬಳಿಕ ಕಾಮಗಾರಿ ಆರಂಭಿಸುವುದಾಗಿ ತಿಳಿಸಿದ್ದಾರೆ.


ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜರಾಮ ಕೆ.ಬಿ ಮಾತನಾಡಿ, ರಸ್ತೆ ವಿಚಾರದಲ್ಲಿ ಕೆಲವರು ಗೊಂದಲಕ್ಕೆಗೊಳಗಾಗಿರುವುದು ಗಮನಕ್ಕೆ ಬಂದಿದ್ದು, ಕ್ಷೇತ್ರದ ಶಾಸಕರಲ್ಲಿ ಚರ್ಚಿಸಿ ಸಮಸ್ಯೆಯನ್ನು ಬಗೆ ಹರಿಸಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here