ಅ.15 ರಿಂದ ಪುತ್ತೂರು ದಸರಾ ನಾಡಹಬ್ಬಕ್ಕೆ ಚಾಲನೆ

0

ಭಕ್ತಿಗೀತೆ, ಸಾಂಸ್ಕೃತಿಕ ವೈಭವ, ಭರತನಾಟ್ಯ, ಶಾಸ್ತ್ರೀಯ ಸಂಗೀತ, ಮಕ್ಕಳ ಯಕ್ಷಗಾನ ತಾಳಮದ್ದಳೆ ವಿಶೇಷ

ಪುತ್ತೂರು: ಡಾ|ಶಿವರಾಮ ಕಾರಂತರು 1931ರಲ್ಲಿ ಪ್ರಾರಂಭಿಸಿದ ಸಾಂಸ್ಕೃತಿಕ ಉತ್ಸವ ಪುತ್ತೂರು ದಸರಾ ನಾಡಹಬ್ಬ 70ನೇ ವರ್ಷದ ಕಾರ್ಯಕ್ರಮ ಅ.15ರಿಂದ ಅ. 23ರ ತನಕ ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಜರುಗಲಿದೆ. ಪ್ರತಿ ದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಶೈಲಿಯ ಹಾಡುಗಳು, ಸ್ಯಾಕ್ಸೋಫೋನ್ ವಾದನ, ಸಾಂಸ್ಕೃತಿಕ ವೈಭವ, ಭರತನಾಟ್ಯ, ಯಕ್ಷಗಾನ, ಕಾರ್ಯಕ್ರಮಗಳು ಜರುಗಲಿವೆ.

ಅ.15 ರಂದು ಸಂಜೆ ವಿದ್ವಾಂಸ ವೇ ಮೂ ಪಂಜ ಭಾಸ್ಕರ ಭಟ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದ ಬಳಿಕ ಸಂಜೆ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಲಿದೆ. ಅ.16ರಂದು ಸಂಜೆ ಪುತ್ತೂರು ಅಂತರಾಷ್ಟ್ರೀಯ ಈಜುಪಟು ಮತ್ತು ತರಬೇತುದಾರ ಪಾರ್ಥ ವಾರಣಾಶಿ ದೈಹಿಕ ಸಾಕ್ಷರತೆ ಕುರಿತು ಉಪನ್ಯಾಸ ನೀಡಲಿದ್ದಾರೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ವೈಷ್ಣವಿ ನಾಟ್ಯಾಲಯ ಪುತ್ತೂರು ಇವರಿಂದ ಶಾಸ್ತ್ರೀಯ ಭರತ ನಾಟ್ಯ ಪ್ರಸ್ತುತಿ ನಡೆಯಲಿದೆ.

ಅ.17ರಂದು ಸಂಜೆ ಉಪನ್ಯಾಸ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕಿ ಗಂಗಮ್ಮ ಹೆಚ್ ಅವರು ಜೀವನ ಮೌಲ್ಯಗಳನ್ನು ಬೆಳೆಸುವಲ್ಲಿ ಮಹಿಳೆಯರ ಪಾತ್ರದ ಕುರಿತು ಮಾತನಾಡಲಿದ್ದಾರೆ. ಬಳಿಕ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಂದಿನಿ ವಿನಾಯಕ್ ಅವರ ಹಾಡುಗಾರಿಕೆಯಲ್ಲಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ. ಅ.18ರಂದು ಸಂಜೆ ಉಪನ್ಯಾಸದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖ್ಯಗುರು ಆಶಾ ಬೆಳ್ಳಾರೆ ಅವರು ಕಲಾ ಸಮಯೋಜಿತ ಶಿಕ್ಷಣದ ಕುರಿತು ಮಾತನಾಡಲಿದ್ದಾರೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಂಚಜನ್ಯ ಯಕ್ಷಕಲಾ ವೃಂದ ಪುತ್ತೂರು ಇವರಿಂದ ಮಕ್ಕಳ ಯಕ್ಷಗಾನ ನರಕಾಸುರ ಮೋಕ್ಷ ಮತ್ತು ಮೈಂದ ದ್ವಿವಿದ ಎಂಬ ಪೌರಾಣಿಕ ಪ್ರಸಂಗ ಪ್ರದರ್ಶನಗೊಳ್ಳಲಿದೆ.

ಅ.19ರಂದು ಬೆಟ್ಟಂಪಾಡಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಗುರು ರಾಜೇಶ್ ನೆಲ್ಲಿತ್ತಡಿ ಅವರಿಂದ ಭಾರತೀಯ ಹಬ್ಬ ಹರಿದಿನಗಳು ಮತ್ತು ಅವುಗಳ ಔನತ್ಯದ ಕುರಿತು ಮಾತನಾಡಲಿದ್ದಾರೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದೀಪ್ತಿ ಫ್ರಭು ಉಪ್ಪಿನಂಗಡಿ ಮತ್ತು ಕೀರ್ತಿ ಕುಡ್ವ ಪುತ್ತೂರು ಅವರು ಹಿಂದೂಸ್ತಾನಿ ಶೈಲಿಯಲ್ಲಿ ಹಾಡಲಿದ್ದಾರೆ. ಅ.20ರಂದು ಸಂಜೆ ಮೃದು ಕೌಶಲ್ಯ ತರಬೇತುದಾರ ದಾಮೋದ ಪಾಟಾಳಿ ಅವರಿಂದ ಜೀವನವನ್ನು ಸಂಭ್ರಮಿಸಿ ಅನ್ನುವ ಕುರತು ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಬಳಿಕ ಮಧ್ವಾದೀಶ ಈಶ ಶ್ರೀ ರಾಮಕೃಷ್ಣ ಕಾಟುಕುಕ್ಕೆ ಮತ್ತು ಬಳಗದವರಿಂದ ದಾಸವಾಣಿ ಕಾರ್ಯಕ್ರಮ ನಡೆಯಲಿದೆ.

ಅ.21ರಂದು ದರ್ಬೆಯ ಡಾ. ಶ್ರೀಪ್ರಕಾಶ್ ಅವರಿಂದ ವೈದ್ಯಕೀಯ ವ್ಯಕ್ತಿಗೆ ಮೀರಿದ ವೈದ್ಯರ ಬದುಕಿನ ವೈವಿದ್ಯತೆಗಳು ಕುರಿತು ಉಪನ್ಯಾಸ ನಡೆಯಲಿದೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ತನ್ವಿ ಡಿ.ಐ ಅವರಿಂದ ಲಘು ಶಾಸ್ತ್ರೀಯ ಸಂಗೀತ ಮತ್ತು ಕೃತಿ ಕೈಲಾರ್ ಅವರಿಂದ ಭರತನಾಟ್ಯ ಪ್ರಸ್ತುತಿ ನಡೆಯಲಿದೆ. ಅ.22ರಂದು ಸಂಜೆ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾರತ ಸಂಚಾರ ನಿಗಮದ ನಿವೃತ್ತ ಉಪಮಂಡಲ ಅಭಿಯಂತರ ಶಂಕರಿ ಶರ್ಮ ಅವರು ’ನಗುವೇ ಬೆಳಕು’ ಎಂಬ ಕುರಿತು ಮಾತನಾಡಲಿದ್ದಾರೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಮಿನಿ ಭಟ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ. ಅ.23ರಂದು ಸಂಜೆ ಡಾ. ಪಿ.ಕೆ.ಗಣೇಶ್ ಅವರಿಂದ ಸ್ಯಕ್ಸೋಫೋನ್ ವಾದನ ನಡೆಯಲಿದೆ. ಬಳಿಕ ಸಮಾರೋಪ ಕಾರ್ಯಕ್ರಮದಲ್ಲಿ ಡಾ.ಪಿ.ಕೆ.ಗಣೇಶ್ ಮತ್ತು ಮಾಜಿ ಸೇನಾಧಿಕಾರಿಯಾಗಿರುವ ದಸರಾ ನಾಡಹಬ್ಬ ಸಮಿತಿ ಕೋಶಾಧಿಕಾರಿ ರಮೇಶ್ ಬಾಬು ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಯಸ್ ಕೇಶವ ಭಟ್ ಸಿಂಹಾವಲೋಕನ ಮಾಡಲಿದ್ದಾರೆ. ದಸರಾ ನಾಡಹಬ್ಬ ಸಮಿತಿ ಗೌರವಾಧ್ಯಕ್ಷ ಎನ್.ಕೆ.ಜಗನ್ನಿವಾಸ ರಾವ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರೋಪ ಸಮಾರಂಭದ ಬಳಿಕ ಮೊಟ್ಟೆತ್ತಡ್ಕ ನಾಟ್ಯರಂಜನಿ ಕಲಾಲಯದ ವಿದುಷಿ ಪ್ರಮೀಳಾ ಯಂ ನಿದೇರ್ಶನದಲ್ಲಿ ಭರತನಾಟ್ಯ ಪ್ರದರ್ಶನ ನಡೆಯಲಿದೆ.

LEAVE A REPLY

Please enter your comment!
Please enter your name here