ದ.ಕ. ಮತ್ತು ಉಡುಪಿ ಜಿಲ್ಲೆಗಳ ಖಾಸಗಿ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿ ಒಕ್ಕೂಟದ ಮಹಾಸಭೆ
ಪುತ್ತೂರು: ಅವಿಭಜಿತ ದ.ಕ. ಜಿಲ್ಲೆಯಲ್ಲಿ ಖಾಸಗಿ ಆಂಗ್ಲಮಾಧ್ಯಮ ಶಾಲೆಗಳು ಬಹಳಷ್ಟು ಸವಾಲು ಎದುರಿಸುತ್ತಿದೆ. ಈ ನಿಟ್ಟಿನಲ್ಲಿ ಆಡಳಿತ ಮಂಡಳಿಯು ಒಕ್ಕೂಟವನ್ನು ಬಲಿಷ್ಠಗೊಳಿಸಬೇಕಿದೆ ಎಂದು ದ.ಕ. ಮತ್ತು ಉಡುಪಿ ಜಿಲ್ಲೆಗಳ ಖಾಸಗಿ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಗೌರವಾಧ್ಯಕ್ಷ, ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ. ಸೀತಾರಾಮ ರೈ ಸವಣೂರು ಹೇಳಿದರು.
ಅವರು ಮಂಗಳೂರಿನ ಬಲ್ಮಠದಲ್ಲಿರುವ ಹೊಟೇಲ್ ಕ್ವಾಲಿಟಿಯ ಕುಡ್ಲ ಪೆವಿಲಿಯನ್‌ನಲ್ಲಿ ಸೋಮವಾರ ನಡೆದ ದ.ಕ. ಮತ್ತು ಉಡುಪಿ ಜಿಲ್ಲೆಗಳ ಖಾಸಗಿ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಜಾರಿಯಾಗುತ್ತಿರುವ ವಿವಿಧ ವ್ಯವಸ್ಥೆ ಕಾನೂನುಗಳಿಂದಾಗಿ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳು ಬಹಳಷ್ಟು ಸಮಸ್ಯೆಗಳನ್ನು ಹೊಂದಿದ್ದರೂ ಅದಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಒಕ್ಕೂಟ ಸ್ಪಂದಿಸುತ್ತಿದೆ. ಹಾಗೆಯೇ ಮುಂದಿನ ದಿನಗಳಲ್ಲೂ ಎಲ್ಲರೂ ಸಂಘಟಿತರಾಗಿ ಕೆಲಸ ಮಾಡಬೇಕಿದೆ. ಆ ಮೂಲಕ ಒಕ್ಕೂಟವನ್ನು ಬಲಿಷ್ಠಗೊಳಿಸುವ ಅನಿವಾರ್ಯತೆ ಎದುರಾಗಿದೆ. ಹಾಗಾಗಿ ಎಲ್ಲಾ ಖಾಸಗಿ ಆಂಗ್ಲಮಾಧ್ಯಮ ಶಾಲೆಗಳ ಆಡಳಿತ ಮಂಡಳಿ ಸಹಕರಿಸಬೇಕಿದೆ ಎಂದರು.
ಜೋಕಟ್ಟೆ ಅಂಜುಮಾನ್ ಆಂಗ್ಲಮಾಧ್ಯಮ ಶಿಕ್ಷಣ ಸಂಸ್ಥೆಯ ಆಡಳಿತ ನಿರ್ದೇಶಕ ಮೂಸಬ್ಬ ಬಿ. ಬ್ಯಾರಿ ಅಧ್ಯಕ್ಷತೆ ವಹಿಸಿದ್ದರು. ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ಸಂಚಾಲಕ ಎಚ್. ಭಾಸ್ಕರ ಆಚಾರ್ ಹಿಂದಾರು ಉಪಸ್ಥಿತರಿದ್ದರು. ಸಭೆಯಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಗಳ ಖಾಸಗಿ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಒಕ್ಕೂಟದ ಪ್ರಧಾನ ಕಾರ್ಯದರ್ಶಿ, ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲಮಾಧ್ಯಮ ಶಾಲೆಯ ಆಡಳಿತ ನಿರ್ದೇಶಕ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಸ್ವಾಗತಿಸಿದರು. ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಗಳ ಸಂಚಾಲಕ ಜಯಸೂರ್ಯ ರೈ ಮಾದೋಡಿ ವಂದಿಸಿದರು.