ಪುತ್ತೂರು:ಮಂಗಳೂರುನಿಂದ ಸುಳ್ಯದ ಕಡೆಗೆ ಪಾಮ್‌ಆಯಿಲ್ ಸಾಗಾಟ ಮಾಡುತ್ತಿದ್ದ ಟ್ಯಾಂಕರೊಂದು ಪಲ್ಟಿಯಾಗಿ ಪಾಮ್ ಆಯಿಲ್ ಸೋರಿಕೆಯಾದ ಘಟನೆ ಅ.18ರ ರಾತ್ರಿ ಇಲ್ಲಿನ ಬೈಪಾಸ್ ರಸ್ತೆ ಉರ್ಲಾಂಡಿಯಲ್ಲಿ ನಡೆದಿದೆ.
ರಾತ್ರಿ 10.10ರ ಸುಮಾರಿಗೆ ಈ ಘಟನೆ ಸಂಭವಿಸಿದೆ.ಟ್ಯಾಂಕರ್ ಪಲ್ಟಿಯಾದ ಶಬ್ದ ಕೇಳುತ್ತಲೇ ಸ್ಥಳೀಯರು ಆಗಮಿಸಿ ಇತರರಿಗೆ ಮಾಹಿತಿ ನೀಡಿದ್ದರು.ಘಟನೆಯಿಂದ ವಿದ್ಯುತ್ ತಂತಿ ತುಂಡರಿಸಲ್ಪಟ್ಟಿದ್ದು ಸಂಪರ್ಕ ಕಡಿತಗೊಂಡಿದೆ.ಟ್ಯಾಂಕರ್ ವಿದ್ಯುತ್ ಕಂಬ, ತಂತಿಗಳಿಗೆ ತಾಗಿತ್ತಾದರೂ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಟ್ಯಾಂಕರ್ ಚಾಲಕನಿಗೆ ಗಾಯವಾಗಿದ್ದು ಪುತ್ತಿಲ ಪರಿವಾರದ ಮುಖ್ಯಸ್ಥ ಅರುಣ್ ಕುಮಾರ್ ಪುತ್ತಿಲ ಅವರು ಗಾಯಾಳು ಚಾಲಕನನ್ನು ತಮ್ಮ ಕಾರಿನಲ್ಲಿ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.ಅಗ್ನಿ ಶಾಮಕ ದಳದವರು ಸ್ಥಳಕ್ಕಾಗಮಿಸಿ ಮುನ್ನೆಚ್ಚರಿಕಾ ಕ್ರಮಕೈಗೊಂಡಿದ್ದಾರೆ.ಘಟನಾಸ್ಥಳದಲ್ಲಿ ಹಲವು ಮಂದಿ ಜಮಾಯಿಸಿದ್ದರು.