ಕುಂಬ್ರ: ಒಳಮೊಗ್ರು ಗ್ರಾಪಂ ಪಿಡಿಒ ಅವಿನಾಶ್ ಬಿ.ಆರ್‌ರಿಗೆ ಗೌರಾವಾಭಿನಂದನೆ, ಬೀಳ್ಕೊಡುಗೆ

0

ಅವಿನಾಶ್‌ರವರು ಓರ್ವ ಭ್ರಷ್ಟಾಚಾರ ವಿರೋಧಿ, ದಕ್ಷ ಪ್ರಾಮಾಣಿಕ ಅಧಿಕಾರಿ: ಪ್ರಕಾಶ್ಚಂದ್ರ ರೈ ಕೈಕಾರ

ಪುತ್ತೂರು: ಎಲ್ಲರೂ ಯೋಗ್ಯ ವ್ಯಕ್ತಿಗಳೇ ಆದರೆ ಸಮಯ ಮತ್ತು ಸಂದರ್ಭಗಳನ್ನು ಯೋಗ್ಯ ರೀತಿಯಲ್ಲಿ ಬಳಸಿಕೊಂಡು ಸಿಕ್ಕಿದ ಅವಕಾಶವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳುತ್ತಾರೋ ಅವರು ಎಲ್ಲರಿಗಿಂತ ಯೋಗ್ಯ ವ್ಯಕ್ತಿಗಳಾಗುತ್ತಾರೆ. ಇಂತವರ ಸಾಲಲ್ಲಿ ಅವಿನಾಶ್ ಬಿ.ಆರ್ ನಿಲ್ಲುತ್ತಾರೆ. ವಿವೇಕಾನಂದರ ತ್ಯಾಗ ಮತ್ತು ಸೇವೆಯನ್ನು ಜೀವನದಲ್ಲಿ ಅಳವಡಿಸಿಕೊಂಡ ಓರ್ವ ಭ್ರಷ್ಟಾಚಾರ ವಿರೋಧಿ, ದಕ್ಷ ಪ್ರಾಮಾಣಿಕ ಅಧಿಕಾರಿ ಇದ್ದರೆ ಅದು ಅವಿನಾಶ್ ಬಿ.ಆರ್ ಎಂದು ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ಹೇಳಿದರು.
ಅವರು ಒಳಮೊಗ್ರು ಗ್ರಾಪಂ ಅಭಿವೃದ್ಧಿ ಅಧಿಕಾರಿಯಾಗಿದ್ದುಕೊಂಡು ಇದೀಗ ಸುಳ್ಯ ಶಾಸಕರ ಆಪ್ತ ಸಹಾಯಕರಾಗಿ ನೇಮಕಗೊಂಡ ಅವಿನಾಶ್ ಬಿ.ಆರ್‌ರವರಿಗೆ ಒಳಮೊಗ್ರು ಗ್ರಾಮ ಪಂಚಾಯತ್ ಹಾಗೂ ವಿವಿಧ ಸಂಘ ಸಂಸ್ಥೆಗಳು ಮತ್ತು ನಾಗರೀಕರ ಪರವಾಗಿ ಅ.19ರಂದು ಕುಂಬ್ರ ನವೋದಯ ರೈತ ಸಭಾ ಭವನದಲ್ಲಿ ನಡೆದ ಗೌರವಾಭಿನಂದನೆ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ ಅಭಿನಂದನಾ ಮಾತುಗಳನ್ನಾಡಿದರು. ಜೀವನದಲ್ಲಿ ನಿಂದಕರಿರಬೇಕು ಹಾಗಿದ್ದಾಗ ಮಾತ್ರ ಒಳ್ಳೆಯ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತದೆ ಎಂದ ಪ್ರಕಾಶ್ಚಂದ್ರ ರೈಯವರು, ಅವಿನಾಶ್ ಬಿ.ಆರ್.ರವರು ಒಳಮೊಗ್ರು ಗ್ರಾಪಂನಲ್ಲಿ ಕೇವಲ 2 ವರ್ಷಗಳ ಕಾಲ ಪಿಡಿಒ ಆಗಿ ಕೆಲಸ ಮಾಡಿದ್ದರೂ ಅವರು ಮಾಡಿದ ಸಾಧನೆ ನೂರು ವರ್ಷಕ್ಕೆ ಸಮವಾಗಿದೆ ಎಂದು ಹೇಳಿ ಶುಭ ಹಾರೈಸಿದರು.
ಜಿಲ್ಲೆಯಲ್ಲೇ ಗುರುತಿಸಲ್ಪಡುವ ಒಬ್ಬ ದಕ್ಷ ಅಧಿಕಾರಿ: ಭರತ್‌ರಾಜ್
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ತಾಲೂಕು ತಾಂತ್ರಿಕ ಸಂಯೋಜಕ ಭರತ್‌ರಾಜ್‌ರವರು ಮಾತನಾಡಿ, ಎಲ್ಲಾ ಪಂಚಾಯತ್‌ಗಳಲ್ಲಿ ಪಿಡಿಒಗಳಿದ್ದಾರೆ ಆದರೆ ಅವರಿಂದ ಎಷ್ಟು ಅಭಿವೃದ್ಧಿ ಆಗಿದೆ ಎಂಬುದು ಆ ಗ್ರಾಮದ ಜನರಿಗೆ ಮಾತ್ರ ಗೊತ್ತಿದೆ ಆದರೆ ಒಳಮೊಗ್ರು ಗ್ರಾಪಂನ ಪಿಡಿಒ ಅವಿನಾಶ್‌ರವರು ಕರ್ತವ್ಯಕ್ಕೆ ನ್ಯಾಯ ಒದಗಿಸಿದವರು, ಇವರು ಎಲ್ಲರಿಗಿಂತ ಭಿನ್ನ, ಇವರ ಆಲೋಚನೆಗಳು ಕೂಡ ಭಿನ್ನ ಇದಕ್ಕೆ ಸ್ಪಷ್ಟ ನಿದರ್ಶನ ಗ್ರಾಪಂ ಕಛೇರಿ ಕಟ್ಟಡವನ್ನು ಪಾರ್ಲಿಮೆಂಟ್ ಭವನದಂತೆ ನಿರ್ಮಿಸಿರುವುದು ಆ ಮೂಲಕ ಒಳಮೊಗ್ರು ಗ್ರಾಮವನ್ನು ರಾಜ್ಯದಲ್ಲೇ ಗುರುತಿಸುವಂತೆ ಮಾಡಿದ್ದಾರೆ. ಅವಿನಾಶ್‌ರವರು ಓರ್ವ ಪಿಡಿಒ ಆಗಿ ಭ್ರಷ್ಟಾಚಾರ ರಹಿತ ಸೇವೆಯ ಮೂಲಕ ಜನರಿಗೆ ಯಾವ ರೀತಿಯಲ್ಲಿ ಸೇವೆ ನೀಡಿದ್ದಾರೆ ಎಂಬುದು ಇಲ್ಲಿಗೆ ಬಂದಾಗ ಮಾತ್ರ ಅರ್ಥವಾಗುತ್ತದೆ ಆದ್ದರಿಂದ ಇವರು ಜಿಲ್ಲೆಯಲ್ಲೇ ಗುರುತಿಸಿಕೊಳ್ಳುವ ಒಬ್ಬ ಪ್ರಾಮಾಣಿಕ ದಕ್ಷ ಅಧಿಕಾರಿಯಾಗಿದ್ದಾರೆ ಎಂದು ಹೇಳಿ ಶುಭ ಹಾರೈಸಿದರು.

ಗ್ರಾಮಕ್ಕೆ ಅತ್ಯುತ್ತಮ ಸೇವೆ ನೀಡಿದ್ದಾರೆ : ನಮಿತಾ ಎ.ಕೆ
ಒಳಮೊಗ್ರು ಗ್ರಾ.ಪಂನ ಪ್ರಭಾರ ಅಭಿವೃದ್ಧಿ ಅಧಿಕಾರಿ ನಮಿತಾ ಎ.ಕೆ ಮಾತನಾಡಿ, ಸರಕಾರಿ ಕೆಲಸದಲ್ಲಿ ವರ್ಗಾವಣೆ, ಭಡ್ತಿ ಇದೆಲ್ಲಾ ಸಾಮಾನ್ಯ. ಒಬ್ಬ ಅಧಿಕಾರಿಯಾದವ ಒಂದೇ ಕಡೆಯಲ್ಲಿ ಇರಬಾರದು ಎಂಬುದು ನನ್ನ ಭಾವನೆ. ಅವಿನಾಶ್‌ರವರು ಪಿಡಿಒ ಆಗಿ ಏನು ಅಭಿವೃದ್ಧಿ ಮಾಡಿದ್ದಾರೆ ಎಂಬುದು ಎಲ್ಲರಿಗೆ ತಿಳಿದಿದೆ ಅವರ ಮುಂದಿನ ವೃತ್ತಿ ಜೀವನದಿಂದ ಇನ್ನಷ್ಟು ಅಭಿವೃದ್ಧಿ ಮೂಡಿಬರಲಿ ಎಂದು ಹೇಳಿ ಶುಭ ಹಾರೈಸಿದರು.

ಎಂದೆಂದಿಗೂ ನಮ್ಮದು ಭ್ರಷ್ಟಾಚಾರ ರಹಿತ ಆಡಳಿತ : ತ್ರಿವೇಣಿ ಪಲ್ಲತ್ತಾರು
ಸಭಾಧ್ಯಕ್ಷತೆ ವಹಿಸಿದ್ದ ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಮಾತನಾಡಿ, ಅವಿನಾಶ್ ಬಿ.ಆರ್‌ರವರು ಓರ್ವ ದಕ್ಷ,ಪ್ರಾಮಾಣಿಕ ಭ್ರಷ್ಟಾಚಾರ ರಹಿತ ಅಧಿಕಾರಿ ಎನ್ನುವುದಕ್ಕೆ ಅವರು ಗ್ರಾಪಂನಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳೇ ಸಾಕ್ಷಿಯಾಗಿವೆ. ಗ್ರಾಪಂಗೆ ಒಂದು ನೂತನ ಕಛೇರಿ ಕಟ್ಟಡ ಆಗಬೇಕು ಎಂಬ ಉದ್ದೇಶ ನನಗೂ ಇತ್ತು ಅದಕ್ಕೆ ಮತ್ತಷ್ಟು ವೇಗ ನೀಡಿದವರು ಅವಿನಾಶ್‌ರವರು, ಎಲ್ಲರ ಸಹಕಾರ ಪಡೆದುಕೊಂಡು ವಿಭಿನ್ನ ಕಛೇರಿ ಕಟ್ಟಡ, ಘನತ್ಯಾಜ್ಯ ವಿವೇಲಾರಿ ಘಟಕ ಸೇರಿದಂತೆ ಗ್ರಾಪಂನಲ್ಲಿ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿಸಿದ್ದಾರೆ. ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ನಾಂದಿ ಹಾಡಿದ ಗ್ರಾಪಂ ಇಂದಿಗೂ ಎಂದಿಗೂ ಎಂದೆಂದಿಗೂ ಭ್ರಷ್ಟಾಚಾರ ರಹಿತವಾಗಿ ಜನರಿಗೆ ಪ್ರಾಮಾಣಿಕ ಸೇವೆ ನೀಡಲು ಸದಾ ಸಿದ್ಧವಿದೆ. ಅವಿನಾಶ್‌ರವರಿಗೆ ಇನ್ನಷ್ಟು ಅಭಿವೃದ್ಧಿ ಕೆಲಸಗಳ ಕನಸು ಇತ್ತು ಅವುಗಳನ್ನು ಮುಂದಿನ ದಿನಗಳಲ್ಲಿ ಪೂರೈಸುತ್ತೇವೆ ಎಂದು ಹೇಳಿ ಶುಭ ಹಾರೈಸಿದರು.

ಅವಿನಾಶ್‌ರಂತಹ ಅಧಿಕಾರಿಗಳು ಗ್ರಾಪಂಗಳಿಗೆ ಅಗತ್ಯವಿದೆ : ಅಬ್ದುಲ್ ರಹೀಮಾನ್ ಹಾಜಿ ಅರಿಯಡ್ಕ
ನಾಗರೀಕರ ಪರವಾಗಿ ಗ್ರಾಪಂನ ಮಾಜಿ ಅಧ್ಯಕ್ಷ ಅಬ್ದುಲ್ ರಹೀಮಾನ್ ಹಾಜಿ ಅರಿಯಡ್ಕ ಮಾತನಾಡಿ, ಗ್ರಾಮದ ಕಟ್ಟಕಡೆಯ ವ್ಯಕ್ತಿಯನ್ನು ಆತ್ಮೀಯವಾಗಿ ಮಾತನಾಡಿಸಿ ಅವರ ಸಮಸ್ಯೆಗಳನ್ನು ಅರಿತುಕೊಂಡು ಸೇವೆ ನೀಡಿದ ಓರ್ವ ದಕ್ಷ, ಪ್ರಾಮಾಣಿಕ, ಭ್ರಷ್ಟಾಚಾರ ರಹಿತ ಆಡಳಿತಗಾರ ಇದ್ದರೆ ಅದು ಅವಿನಾಶ್ ಬಿ.ಆರ್ ಆಗಿದ್ದಾರೆ. ಇವರಂತಹ ಭ್ರಷ್ಟಾಚಾರ ರಹಿತ ಆಡಳಿತ ನಡೆಸುವ ಅಧಿಕಾರಿಗಳು ಗ್ರಾಪಂಗಳಿಗೆ ಬರಬೇಕು ಆಗಲೇ ಬ್ರೋಕರ್‌ಗಳ ಹಾವಳಿ, ಲಂಚಾವತಾರ ನಿಲ್ಲಲು ಸಾಧ್ಯ. ಅವಿನಾಶ್‌ರವರ ವ್ಯಕ್ತಿತ್ವವೇ ಪಂಚಾಯತ್‌ನಲ್ಲಿ ಅನಾವರಣಗೊಂಡಿದೆ ಎಂದು ಹೇಳಿ ಶುಭ ಹಾರೈಸಿದರು.

ಜಿಲ್ಲೆಗೆ ಉನ್ನತ ಅಧಿಕಾರಿಯಾಗುವ ಅವಕಾಶ ಸಿಗಲಿ: ಹುಸೈನ್ ದಾರಿಮಿ ರೆಂಜಲಾಡಿ
ನಾಗರೀಕರ ಪರವಾಗಿ ಖ್ಯಾತ ವಾಗ್ಮಿ ಹುಸೈನ್ ದಾರಿಮಿ ರೆಂಜಲಾಡಿ ಮಾತನಾಡಿ, ಕಳೆದ 25 ವರ್ಷಗಳಿಂದ ನಾನು ಒಳಮೊಗ್ರು ಗ್ರಾಪಂ ಅನ್ನು ನೋಡ್ತಾ ಇದ್ದೇನೆ. 25 ವರ್ಷಗಳಲ್ಲಿ ಆಗದ ಅಭಿವೃದ್ಧಿಯನ್ನು ಕೇವಲ ೨ ವರ್ಷಗಳಲ್ಲಿ ಮಾಡಿ ಮುಗಿಸಿದ ಅಧಿಕಾರಿ ಇದ್ದರೆ ಅದು ಅವಿನಾಶ್ ಬಿ.ಆರ್.ರವರು ಆಗಿದ್ದಾರೆ. ಒಬ್ಬ ಪ್ರಾಮಾಣಿಕ ಅಧಿಕಾರಿಯಾಗಿ ಬಡವನ ಸಮಸ್ಯೆಯನ್ನು ಆಲಿಸಿ ಆತನಿಗೆ ಸಹಕಾರ ನೀಡುವ ಮೂಲಕ ಬಡವನಲ್ಲಿ ದೇವರನ್ನು ಕಂಡ ಅಧಿಕಾರಿ ಇವರಿಗೆ ಜಿಲ್ಲೆಗೆ ಉನ್ನತ ಅಧಿಕಾರಿಯಾಗುವ ಅವಕಾಶ ದೊರೆಯಲಿ, ಇವರ ಸೇವೆ ಜಿಲ್ಲೆಗೆ ಸಿಗಲಿ ಎಂದು ಹೇಳಿ ಶುಭ ಹಾರೈಸಿದರು.

ಒಳಮೊಗ್ರು ಗ್ರಾಮದ ಉಕ್ಕಿನ ಮನುಷ್ಯ: ನಿತೀಶ್ ಕುಮಾರ್ ಶಾಂತಿವನ
ಬಿಜೆಪಿ ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ ಮಾತನಾಡಿ, ಹಠ, ಛಲ ಮತ್ತು ಇಚ್ಛಾಶಕ್ತಿ ಇದ್ದಾಗ ಮಾತ್ರ ಅಭಿವೃದ್ಧಿ ಸಾಧ್ಯ ಇದಕ್ಕೆ ಅವಿನಾಶ್ ಬಿ.ಆರ್‌ರವರು ಉತ್ತಮ ಉದಾಹರಣೆಯಾಗಿದ್ದಾರೆ. ಅವರು ಒಳಮೊಗ್ರು ಗ್ರಾಮದ ಉಕ್ಕಿನ ಮನುಷ್ಯ ಆಗಿದ್ದಾರೆ ಅದಕ್ಕಾಗಿ ಅವರಿಗೆ ಸರದಾರ್ ವಲ್ಲಭಬಾಯಿ ಪಟೇಲ್‌ರವರ ಚಿತ್ರವನ್ನು ಅರ್ಪಿಸಿದ್ದೇವೆ. 80 ವರ್ಷ ಹಳೆಯ ಗ್ರಾಪಂ ಕಟ್ಟಡಕ್ಕೆ ಮುಕ್ತಿ ನೀಡಿದವರು, ಇವರು ಬರುವ ಮೊದಲೇ ನಾವು ಕಟ್ಟಡಕ್ಕೆ ಜಾಗ ಗುರುತಿಸಿದ್ದೆವು ಇವರು ಬಂದ ಮೇಲೆ ಇನ್ನಷ್ಟು ವೇಗ ಸಿಕ್ಕಿತು ಅವರ ಮುಂದಿನ ವೃತ್ತಿ ಜೀವನ ಸುಖಮಯವಾಗಿರಲಿ ಎಂದು ಹೇಳಿ ಶುಭ ಹಾರೈಸಿದರು.

ಒಬ್ಬ ದಕ್ಷ, ಪ್ರಾಮಾಣಿಕ ಅಧಿಕಾರಿ : ಹರೀಶ್ ಬಿಜತ್ರೆ
ತಾಲೂಕು ಪಂಚಾಯತ್ ಮಾಜಿ ಸದಸ್ಯ ಹರೀಶ್ ಬಿಜತ್ರೆ ಮಾತನಾಡಿ,ಅವಿನಾಶ್‌ರವರು ಓರ್ವ ದಕ್ಷ,ಪ್ರಾಮಾಣಿಕ, ಭ್ರಷ್ಟಾಚಾರ ರಹಿತ ಸೇವೆ ನೀಡಿದ ಅಧಿಕಾರಿ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ ಅವರ ಜೀವನ ಶೈಲಿಯೇ ವಿಶೇಷವಾದದ್ದು ಆಗಿದೆ ಮುಂದಿನ ದಿನಗಳಲ್ಲಿ ಅವರಿಂದ ಇನ್ನಷ್ಟು ಅಭಿವೃದ್ಧಿ ಆಗಲಿ ಎಂದು ಹೇಳಿದರು.

ನಾನು ಕಂಡ ಒಬ್ಬ ಉತ್ತಮ ಅಧಿಕಾರಿ : ಉಷಾ ನಾರಾಯಣ್
ಒಳಮೊಗ್ರು ಗ್ರಾಪಂ ಮಾಜಿ ಸದಸ್ಯೆ ಉಷಾ ನಾರಾಯಣ್‌ರವರು ಮಾತನಾಡಿ, ಒಬ್ಬ ಅಭಿವೃದ್ಧಿ ಅಧಿಕಾರಿಯಾಗಿ ಅವಿನಾಶ್‌ರವರು ಗ್ರಾಮಕ್ಕೆ ಏನು ಮಾಡಿದ್ದಾರೆ ಎಂಬುದಕ್ಕೆ ಅವರು ಮಾಡಿದ ಸಾಧನೆಗಳೇ ಸಾಕ್ಷಿಯಾಗಿವೆ. ನಾನು ಕಂಡ ಒಬ್ಬ ದಕ್ಷ,ಪ್ರಾಮಾಣಿಕ ಅಧಿಕಾರಿಯಾಗಿದ್ದಾರೆ ಎಂದು ಹೇಳಿ ಶುಭ ಹಾರೈಸಿದರು.

ಅವಿನಾಶ್ ಬಿ.ಆರ್.ರವರಿಗೆ ಗೌರವಾಭಿನಂದನೆ, ಬೀಳ್ಕೊಡುಗೆ

ಅಧಿಕಾರ ಒಂದು ಅವಕಾಶ : ಅವಿನಾಶ್ ಬಿ.ಆರ್
ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯರವರ ಆಪ್ತ ಸಹಾಯಕರಾಗಿ ವರ್ಗಾವಣೆಗೊಂಡಿರುವ ಅವಿನಾಶ್ ಬಿ.ಆರ್.ರವರನ್ನು ಪಂಚಾಯತ್ ಹಾಗೂ ವಿವಿಧ ಸಂಘ ಸಂಸ್ಥೆಗಳು, ನಾಗರೀಕರ ಪರವಾಗಿ ಶಾಲು, ಹಾರ ಹಾಕಿ, ಪೇಟಾ ತೊಡಿಸಿ,ಫಲಪುಷ್ಪ, ಸ್ಮರಣಿಕೆ ನೀಡಿ ಗೌರವಿಸಿ,ಅಭಿನಂದಸಲಾಯಿತು. ಒಳಮೊಗ್ರು ಗ್ರಾಮ ಬಿಜೆಪಿ ಕಾರ್ಯಕರ್ತರಿಂದ, ಅಂಗನವಾಡಿ ಕಾರ್ಯಕರ್ತರಿಂದ, ಸಂಜೀವಿನಿ ಒಕ್ಕೂಟದಿಂದ, ಗ್ರಾಪಂ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದಿಂದ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಿಂದ, ನಾಗರೀಕರಿಂದ ಅವಿನಾಶ್ ಬಿ.ಆರ್.ರವರಿಗೆ ಗೌರವಾರ್ಪಣೆ ನಡೆಯಿತು. ಗ್ರಾಪಂನ ಅಧ್ಯಕ್ಷರಾಗಿ ಎರಡನೇ ಬಾರಿಯೂ ಆಯ್ಕೆಯಾಗಿ ಜನಪರ, ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತಿರುವ ತ್ರಿವೇಣಿ ಪಲ್ಲತ್ತಾರುರವರನ್ನು ಈ ಸಂದರ್ಭದಲ್ಲಿ ನಾಗರೀಕರ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಗೌರವಾರ್ಪಣೆ ಸ್ವೀಕರಿಸಿ ಮಾತನಾಡಿದ ಅವಿನಾಶ್ ಬಿ.ಆರ್.ರವರು, ನಾನು ಸನ್ಮಾನ ಬೇಡ ಎಂದು ಹೇಳಿದ್ದೆ ಆದರೆ ಎಲ್ಲರು ಒತ್ತಾಯ ಮಾಡುವಾಗ ನಿರಾಕರಿಸಲು ಸಾಧ್ಯವಾಗಲಿಲ್ಲ, ಸನ್ಮಾನ ಮಾಡಿ ಆದರೆ ನನಗೆ ಬೆಲೆಬಾಳುವ ಯಾವುದೇ ವಸ್ತು ನೀಡಬಾರದು ಎಂದು ಹೇಳಿದ್ದೆ, ನಾನು ಗ್ರಾಪಂಗೆ ಪಿಡಿಒ ಆಗಿ ಬರುವಾಗ ಸದಸ್ಯರಿಗೆ ಒಂದು ರೀತಿಯ ಗೊಂದಲ ಇತ್ತು ಕ್ರಮೇಣ ಎಲ್ಲವೂ ಸರಿಯಾಗಿ ಎಲ್ಲರೂ ನನಗೆ ಉತ್ತಮ ರೀತಿಯಲ್ಲಿ ಸಹಕಾರ ಕೊಟ್ಟಿದ್ದಾರೆ. ನಾನು ಏನು ಅಭಿವೃದ್ಧಿ ಮಾಡಿದ್ದೇನೊ ಅದೆಲ್ಲವೂ ಎಲ್ಲರ ಸಹಕಾರದಿಂದ ಸಾಧ್ಯವಾಗಿದೆ ಎಂದರು. ಪಂಚಾಯತ್‌ಗೆ ಜನಸ್ನೇಹಿ ಕಟ್ಟಡ ಆಗಬೇಕು ಎಂಬ ನಿಟ್ಟಿನಲ್ಲಿ ನಾವೆಲ್ಲರೂ ಬಹಳಷ್ಟು ಶ್ರಮ ಪಟ್ಟಿದ್ದೇವೆ. ಇನ್ನು 5 ಸೆಂಟ್ಸ್ ಜಾಗ ಸಿಗುತ್ತಿದ್ದರೆ ಬಹಳ ವ್ಯವಸ್ಥಿತವಾಗಿ ನಿರ್ಮಿಸುವ ಕನಸು ಇತ್ತು. ಕಟ್ಟಡ ಮಾಡುವಾಗ ಬಹಳಷ್ಟು ಅಡೆತಡೆ ಬಂದಿದೆ. ಡಿಸಿ ಕೋರ್ಟ್‌ನಲ್ಲಿ ನಾನೇ ವಾದ ಮಾಡಿದ ದಿನಗಳು ಇದೆ. ಆದರೆ ಕೊನೆಗೆ ಸತ್ಯಕ್ಕೆ ಜಯ ಸಿಕ್ಕಿತು. ಯಾವುದೇ ಕೆಲಸಗಳನ್ನು ನಾನು ಕಷ್ಟಪಟ್ಟು ಮಾಡಿಲ್ಲ ಇಷ್ಟಪಟ್ಟು ಮಾಡಿದ್ದೇನೆ ಆದ್ದರಿಂದ ನನಗೆ ಸುಸ್ತೇ ಆಗಿಲ್ಲ ಎಂದ ಅವಿನಾಶ್‌ರವರು, ನಾನು ಬೆಳಿಗ್ಗೆ 7 ರಿಂದ ರಾತ್ರಿ 8 ರ ತನಕವೂ ಕೆಲಸ ಮಾಡಿದ್ದೇನೆ. ಒಳ್ಳೆಯ ಕೆಲಸ ಒಬ್ಬನಿಂದ ಮಾತ್ರ ಸಾಧ್ಯವಿಲ್ಲ ಅದಕ್ಕೆ ನಮ್ಮ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ, ಗ್ರಾಮಸ್ಥರು ಎಲ್ಲರೂ ಸಹಕಾರ ನೀಡಿದ್ದಾರೆ. ಆದ್ದರಿಂದ ಒಳಮೊಗ್ರು ಗ್ರಾಪಂ ರಾಜ್ಯದಲ್ಲಿ ಗುರುತಿಸಿಕೊಳ್ಳುವ ಪಂಚಾಯತ್ ಆಯಿತು ಎಂದರು.


ಇನ್ನೂ ಹಲವು ಯೋಚನೆ, ಯೋಜನೆ ಇತ್ತು
ಗ್ರಾಮದಲ್ಲಿ ಒಂದು ಗ್ರಾಮೀಣ ಸಂತೆ ಮಾರುಕಟ್ಟೆ, ಮೀನು ಮಾರುಕಟ್ಟೆ,ಡಿಜಿಟಲ್ ಗ್ರಂಥಾಲಯ, ಮೀಟಿಂಗ್ ಹಾಲ್ ನಿರ್ಮಾಣ ಇವಿಷ್ಟು ನನ್ನ ಕನಸು ಆಗಿತ್ತು. ಇದನ್ನು ಮುಂದಿನ ದಿನಗಳಲ್ಲಿ ಆಡಳಿತ ಮಂಡಳಿ ಪೂರ್ಣಗೊಳಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ಅವಿನಾಶ್ ಬಿ.ಆರ್ ಹೇಳಿದರು. ಅಧಿಕಾರ ಅಲ್ಲ ಅವಕಾಶ, ನಾನು ಪಿಡಿಒ ಆಗಿ 10 ವರ್ಷ ಆಯಿತು. ಬಹಳಷ್ಟು ಕಲಿತಿದ್ದೇನೆ, ಕಲಿಯಲು ಇನ್ನಷ್ಟು ಬಾಕಿ ಇದೆ. ಇದೀಗ ಸುಳ್ಯ ಶಾಸಕರ ಆಪ್ತ ಸಹಾಯಕನಾಗಿ ಜನರ ಸೇವೆ ಮಾಡುವ ಭಾಗ್ಯ ಸಿಕ್ಕಿದೆ ಎಂದು ಭಾವಿಸಿ ಒಪ್ಪಿಕೊಂಡಿದ್ದೇನೆ. ಎಲ್ಲರ ಹಾರೈಕೆ ಇರಲಿ, ನನ್ನೊಂದಿಗೆ ಸಹಕರಿಸಿದ ಸಮಸ್ತರಿಗೂ ವಂದನೆಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದರು.
ಗ್ರಾಪಂ ಸದಸ್ಯ ಮಹೇಶ್ ರೈ ಕೇರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶುತಿ ಪಲ್ಲತ್ತಾರು ಪ್ರಾರ್ಥಿಸಿದರು. ಸಂಜೀವಿನಿ ಒಕ್ಕೂಟದ ಎಂಬಿಕೆ ಚಂದ್ರಿಕಾ ವಂದಿಸಿದರು. ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ನಿರ್ದೇಶಕ ಸಂತೋಷ್ ರೈ ಕಾರ್ಯಕ್ರಮ ನಿರೂಪಿಸಿದರು.

ಸುದ್ದಿಯ ಭ್ರಷ್ಟಾಚಾರ ವಿರೋಧ ಆಂದೋಲನ ನನಗೆ ಮತ್ತಷ್ಟು ಬಲ ಕೊಟ್ಟಿತು
ಸರಕಾರಿ ಸೇವೆಗೆ ಸೇರುವ ಮೊದಲೇ ನಾನು ಭ್ರಷ್ಟಾಚಾರ ವಿರೋಧಿಯಾಗಿದ್ದೆ. ಒಳಮೊಗ್ರು ಗ್ರಾ.ಪಂನಲ್ಲಿಯೂ ಸಾಮಾನ್ಯ ಸಭೆಯಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇವೆ ಎಂದು ಎಲ್ಲಾ ಸದಸ್ಯರ ಸಮ್ಮುಖದಲ್ಲಿ ಘೋಷಣೆ ಮಾಡಿ ನಿರ್ಣಯ ಮಾಡಿದ್ದೇವು. ಈ ಸಂದರ್ಭದಲ್ಲಿ ಸುದ್ದಿ ಬಿಡುಗಡೆಯವರು ಹಮ್ಮಿಕೊಂಡಿದ್ದ ಭ್ರಷ್ಟಾಚಾರ ವಿರೋಧಿ ಆಂದೋಲನ ನನಗೆ ಮತ್ತಷ್ಟು ಬಲ ಕೊಟ್ಟಿತ್ತು ಎಂದು ಅವಿನಾಶ್ ಬಿ.ಆರ್.ರವರು ಸುದ್ದಿಯ ಭ್ರಷ್ಟಾಚಾರ ವಿರೋಧಿ ಆಂದೋಲನದ ಬಗ್ಗೆ ನೆನಪಿಸಿಕೊಂಡರು.

ಇದುವೇ ನನ್ನ ಜೀವನ ಮೌಲ್ಯಗಳು
ನಾನು ಜೀವನದಲ್ಲಿ ಕೆಲವೊಂದು ಮೌಲ್ಯಗಳನ್ನು ಇಟ್ಟುಕೊಂಡಿದ್ದೇನೆ ಅವುಗಳೆಂದರೆ ಪ್ರಾಮಾಣಿಕತೆ ಮತ್ತು ಪಾರದರ್ಶಕತೆ, ನಿಷ್ಪಕ್ಷಪಾತತೆ, ಮಾನವೀಯತೆ, ಕಾನೂನಿನ ಬದ್ಧತೆ, ಇನ್ನೊಬ್ಬರ ಸಮಸ್ಯೆಯನ್ನು ನನ್ನ ಸಮಸ್ಯೆ ಎಂದು ತಿಳಿದುಕೊಳ್ಳುವುದು ಇದು ನಾನು ಕೆಲಸದಲ್ಲಿ ಇಟ್ಟುಕೊಂಡಿರುವ ಮೌಲ್ಯಗಳಾಗಿವೆ ಎಂದು ಅವಿನಾಶ್ ಬಿ.ಆರ್ ಹೇಳಿದರು.

LEAVE A REPLY

Please enter your comment!
Please enter your name here