ತನ್ನ ಹುಟ್ಟುಹಬ್ಬವನ್ನು ‘ಹಿರಿಯ ವಿದ್ಯಾರ್ಥಿಗಳ ಗೌರವ’ ದಿನವನ್ನಾಗಿ ಆಚರಿಸುವ ಅಪರೂಪದ ಶಿಕ್ಷಕ
ಪುತ್ತೂರು: ಸರ್ವೆ ಎಸ್ ಜಿ ಎಂ ಪ್ರೌಢ ಶಾಲೆಯ ನಿವೃತ್ತ ಮುಖ್ಯ ಗುರು, ಜನ ಮೆಚ್ಚಿದ ಶಿಕ್ಷಕ ಖ್ಯಾತಿಯ ಶ್ರೀನಿವಾಸ್ ಹೆಚ್ ಬಿ ಅವರ 63ನೇ ಹುಟ್ಟು ಹಬ್ಬದ ಪ್ರಯುಕ್ತ ಹಿರಿಯ ವಿದ್ಯಾರ್ಥಿಗಳಿಗೆ ಅ.22ರಂದು ಪ್ರವಾಸ ಆಯೋಜಿಸಲಾಗಿದೆ.ಶ್ರೀನಿವಾಸ್ ಹೆಚ್ ಬಿ ಅವರ ಹಿರಿಯ ವಿದ್ಯಾರ್ಥಿಗಳು ಹಾಗೂ ಆತ್ಮೀಯ ಬಳಗದವರು ಪ್ರವಾಸದಲ್ಲಿ ಭಾಗವಹಿಸುತ್ತಿದ್ದು ಮಂಗಳೂರಿನ ವಿವಿಧ ಕಡೆಗಳಿಗೆ ಪ್ರವಾಸ ಆಯೋಜಿಸಲಾಗಿದೆ.ಪ್ರವಾಸದಲ್ಲಿ 36 ಮಂದಿ ಭಾಗವಹಿಸುತ್ತಿದ್ದಾರೆ.ಶ್ರೀನಿವಾಸ್ ಹೆಚ್ ಬಿ ಅವರು ತಮ್ಮ ಹುಟ್ಟು ಹಬ್ಬವನ್ನು ಹಿರಿಯ ವಿದ್ಯಾರ್ಥಿಗಳ ಗೌರವ ದಿನವನ್ನಾಗಿ ಆಚರಿಸುತ್ತಿದ್ದು ಇದು ಮೂರನೇ ವರ್ಷದ ಕಾರ್ಯಕ್ರಮವಾಗಿದೆ.
ಶಿಕ್ಷಕ ವೃತ್ತಿಯಿಂದ ನಿವೃತ್ತರಾದ ಬಳಿಕ ತಮ್ಮ 61ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಮೊದಲ ಬಾರಿ ಹಿರಿಯ ವಿದ್ಯಾರ್ಥಿಗಳ ಗೌರವ ದಿನ ಎನ್ನುವ ಹೆಸರಿನಲ್ಲಿ 2021ರಲ್ಲಿ ಬಿಸಿಲೆ ಘಾಟ್ ಗೆ ಪ್ರವಾಸ ಹಮ್ಮಿಕೊಂಡಿದ್ದ ಶ್ರೀನಿವಾಸ್ ಹೆಚ್ ಬಿ ಅವರು 2022ರಲ್ಲಿ ಮಡಿಕೇರಿಗೆ ಪ್ರವಾಸ ಆಯೋಜಿಸಿದ್ದರು. ಮಡಿಕೇರಿಗೆ ಪ್ರವಾಸದ ನೇತೃತ್ವವನ್ನು ಹಿರಿಯ ವಿದ್ಯಾರ್ಥಿ ಅಬಕಾರಿ ಇಲಾಖೆಯ ಇನ್ಸ್’ಪೆಕ್ಟರ್ ಲೋಕೇಶ್ ಸುವರ್ಣ ವಹಿಸಿದ್ದರು. ಈ ಬಾರಿಯ ಪ್ರವಾಸದ ನೇತೃತ್ವವನ್ನು ಸರ್ವೆ ಎಸ್ ಜಿ ಎಂ ಪ್ರೌಢ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ಎಸ್ ಡಿ ವಹಿಸಿದ್ದಾರೆ.
ತನ್ನ ಜನ್ಮ ದಿನದಂದು ಹಿರಿಯ ವಿದ್ಯಾರ್ಥಿಗಳನ್ನು ಗೌರವಿಸುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವ ಶ್ರೀನಿವಾಸ್ ಹೆಚ್ ಬಿ ಅವರು ನಿವೃತ್ತಿ ಜೀವನದಲ್ಲೂ ವಿಭಿನ್ನ ಕಾರ್ಯಕ್ರಮ ನಡೆಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.