ಸಾರ್ವಜನಿಕರಿಗೆ ಉಚಿತ ಗಿಡ ವಿತರಿಸಿ, ನಾಟಿ ಮಾಡಿಸಿದ‌ ಕಾಮಗಾರಿಯ ಬಿಲ್ ಪಾವತಿಗೆ 1 ಲಕ್ಷ ರೂ.ಲಂಚ ಸ್ವೀಕಾರ ಆರೋಪ – ಉಪ ಕೃಷಿನಿರ್ದೇಶಕಿ ಭಾರತಮ್ಮ ಲೋಕಾಯುಕ್ತ ಬಲೆಗೆ

0

ಪುತ್ತೂರು:ಸಾರ್ವಜನಿಕರಿಗೆ ಸರಕಾರದ ವತಿಯಿಂದ ಉಚಿತವಾಗಿ ಗಿಡಗಳನ್ನು ವಿತರಿಸಿ, ನಾಟಿ ಮಾಡಿಸಿದ ಕಾಮಗಾರಿಯ ಬಿಲ್ ಮೊತ್ತ ಪಾವತಿಗೆ ನಿವೃತ್ತ ವಲಯ ಅರಣ್ಯಾಧಿಕಾರಿಯೋರ್ವರಿಂದ 1 ಲಕ್ಷ ರೂ.ಲಂಚ ಸ್ವೀಕರಿಸುತ್ತಿದ್ದ ವೇಳೆ ಮಂಗಳೂರು ವಿಭಾಗದ ಉಪ ಕೃಷಿನಿರ್ದೇಶಕಿ ಭಾರತಮ್ಮ ಅವರನ್ನು ಲೋಕಾಯುಕ್ತ ಪೊಲೀಸರು ರೆಡ್‌ಹ್ಯಾಂಡ್ ಆಗಿ ಬಂಧಿಸಿರುವ ಘಟನೆ ವರದಿಯಾಗಿದೆ. ವಲಯ ಅರಣ್ಯಾಧಿಕಾರಿಯಾಗಿದ್ದು ಕರ್ನಾಟಕ ಜಲಾನಯನ ಅಭಿವೃದ್ಧಿ ಇಲಾಖೆ, ಕೃಷಿ ಇಲಾಖೆಯಲ್ಲಿ ವಲಯ ಅರಣ್ಯ ಅಧಿಕಾರಿಯಾಗಿ ನಿಯೋಜನೆ ನೆಲೆಯಲ್ಲಿ ಕರ್ತವ್ಯ ನಿರ್ವಹಿಸಿ ಸೆ.30ರಂದು ನಿವೃತ್ತರಾಗಿದ್ದ ಪರಮೇಶ್ವರ್ ಎನ್.ಪಿ ಅವರು ನೀಡಿದ ದೂರಿನಂತೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು ಆರೋಪಿತ ಅಧಿಕಾರಿಣಿಯನ್ನು ಬಲೆಗೆ ಕೆಡವಿದ್ದಾರೆ.

ತಾನು ಕರ್ತವ್ಯ ನಿರ್ವಹಿಸುತ್ತಿರುವ ಸಮಯ 2022-23 ಮತ್ತು 2023-24ನೇ ಸಾಲಿನಲ್ಲಿ, ಕೃಷಿ ಇಲಾಖೆಯ ಅಧೀನದಲ್ಲಿ ಬರುವ ಜಲಾನಯನ ಅಭಿವೃದ್ಧಿ ವಿಭಾಗದಪ್ರಧಾನ ಮಂತ್ರಿ ಕೃಷಿ ಸಿಂಚಾಯಿ(WDC 2.೦)’ಯೋಜನೆಯಡಿ ಬಂಟ್ವಾಳ ತಾಲೂಕು ಸಜಿಪಮುನ್ನೂರು, ಸಜಿಪಮೂಡ, ಸಜಿಪಪಡು, ಸಜಿಪನಡು, ಕುರ್ನಾಡು, ನರಿಂಗಾನ, ಬಾಳೆಪುಣಿ ಮತ್ತು ಮಂಜನಾಡಿ ಗ್ರಾಮಗಳ ಸಾರ್ವಜನಿಕಗ ಸರ್ಕಾರದ ವತಿಯಿಂದ ಸುಮಾರು ರೂ.50 ಲಕ್ಷ ಮೌಲ್ಯದ ವಿವಿಧ ಜಾತಿಯ ಅರಣ್ಯ ಮತ್ತು ತೋಟಗಾರಿಕಾ ಸಸಿಗಳನ್ನು ಉಚಿತವಾಗಿ ಸರಬರಾಜು ಮತ್ತು ನಾಟ ಕಾಮಗಾರಿ ಮಾಡಲಾಗಿದೆ. ಸದ್ರಿ ತೋಟಗಾರಿಕಾ ಸಸಿಗಳನ್ನು ಕಣ್ಣನ್ ನರ್ಸರಿ ಮಾಲಕ ಧೋರಿ, ಶಬರೀಶ್ ನರ್ಸರಿಯ ಬೈರೇ ಗೌಡ ಮುಂತಾದವರಿಂದ ಪಡೆದು ಸಾರ್ವಜನಿಕಗೆ ಸರಬರಾಜು ಮಾಡಿ ನಾಟಿ ಕಾಮಗಾರಿ ಮಾಡಲಾಗಿತ್ತು.ಸದರಿ ನರ್ಸರಿ ಗಿಡಗಳನ್ನು ಮಾಲಕರುಗಳಿಂದ ಪಡೆದು ಅವರಿಗೆ ನೀಡಬೇಕಾದ ಹಣ ರೂ.18 ಲಕ್ಷ ಹಾಗೂ ಅರಣ್ಯ ಗುತ್ತಿಗೆದಾರರಿಂದ ನಾಟಿ ಮಾಡಿಸಿದ ಮೊತ್ತ ರೂ.32 ಲಕ್ಷ ಹಣವನ್ನು ಬಾಕಿ ಇರಿಸಿ ಸಸಿಗಳನ್ನು ಮುಂಗಡವಾಗಿ ಪಡೆದು ನಾಟಿ ಮಾಡಲಾಗಿತ್ತು.ನರ್ಸರಿ ಮ್ಹಾಲಕರು ಹಾಗೂ ಗುತ್ತಿಗೆದಾರರಿಗೆ ಪಾವತಿಸಿದ ಮೊತ್ತ ರೂ.50 ಲಕ್ಷ ಸರಕಾರದಿಂದ ಬರಲು ಬಾಕಿಯಿದ್ದು ಈ ಹಣವನ್ನು ಒದಗಿಸುವಂತೆ ಮಾಲಕರು/ಗುತ್ತಿಗೆದಾರರು ನನ್ನಲ್ಲಿ ಕೇಳುತ್ತಿದ್ದರು. ನರ್ಸರಿ ಮಾಲಕರು ಮತ್ತು ಗುತ್ತಿಗೆದಾರರಿಗೆ ಪಾವತಿಸಬೇಕಾದ ಬಿಲ್ ಮೊತ್ತ ರೂ.50 ಲಕ್ಷವನ್ನು ಪಾವತಿಸುವಂತೆ, ಇಲಾಖೆ ಬಿಲ್ ಪಾವತಿ ಅಧಿಕಾರಿಯಾಗಿರುವ ಮಂಗಳೂರು ವಿಭಾಗದ ಉಪ ಕೃಷಿ ನಿರ್ದೇಶಕರಾದ ಭಾರತಮ್ಮರವರನ್ನು ಅ.4ರಂದು ನಾನು ಭೇಟಿಯಾಗಿ ಕೇಳಿಕೊಂಡಾಗ, ಬಿಲ್ ಪಾವತಿಸಬೇಕಾದರೆ ಬಿಲ್‌ನ ಮೊತ್ತದ ಶೇ.15 ಹಣವನ್ನು ಮುಂಗಡವಾಗಿ ತನಗೆ ಲಂಚದ ರೂಪದಲ್ಲಿ ನೀಡಬೇಕು ಇಲ್ಲವಾದರೆ ತಾನು ಬಿಲ್ ಪಾವತಿ ಮಾಡುವುದಿಲ್ಲ ಎಂದು ತಿಳಿಸಿದ್ದರು. ಇದಾದ ಬಳಿಕ ಅ.20ರಂದು ನಾನು ಮಂಗಳೂರು ಉಪ ಕೃಷಿ ನಿರ್ದೇಶಕರ ಕಛೇರಿಗೆ ತೆರಳಿ ಭಾರತಮ್ಮ ಅವರನ್ನು ಭೇಟಿಯಾಗಿ ಬಿಲ್‌ನ ಬಗ್ಗೆ ಮಾತನಾಡಿದಾಗ ಅವರು ರೂ.1 ಲಕ್ಷ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಪರಮೇಶ್ವರ್ ಎನ್.ಪಿ.ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಅ.21ರಂದು ಉಪ ಕೃಷಿ ನಿರ್ದೇಶಕಿ ಭಾರತಮ್ಮ ಅವರು ದೂರುದಾರ ಪರಮೇಶ್ ಅವರಿಂದ ಲಂಚದ ಹಣ ರೂ.1ಲಕ್ಷ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಅವರನ್ನು ರೆಡ್ ಹ್ಯಾಂಡ್ ಹಿಡಿದು ಬಂಧಿಸಿದ್ದಾರೆ. ಪರಮೇಶ್ ಅವರಿಂದ ಪಡೆದ ಲಂಚದ ಹಣವನ್ನು ವಶಪಡಿಸಿಕೊಂಡು ಆರೋಪಿತೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಕರ್ನಾಟಕ ಲೋಕಾಯುಕ್ತ ಮಂಗಳೂರು ಇದರ ಅಧೀಕ್ಷಕ ಸಿ.ಎ.ಸೈಮನ್‌ರವರ ಮಾರ್ಗದರ್ಶನದಲ್ಲಿ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕಿ ಕಲಾವತಿ ಕೆ, ಚಲುವರಾಜು ಬಿ. ಹಾಗೂ ಪೊಲೀಸ್ ನಿರೀಕ್ಷಕ ಸುರೇಶ್ ಕುಮಾರ್ ಪಿ ಹಾಗೂ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here