





ವಿಟ್ಲ: ಮನೆಗೆ ನುಗ್ಗಿ ಕಳವು ಮಾಡಿದ ಅಂತರಾಜ್ಯ ಕಳ್ಳರ ಪೈಕಿ ಓರ್ವ ಕಳ್ಳನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಮಂಚಿ ಗ್ರಾಮದ ಕಾಡಂಗಡಿ ಎಂಬಲ್ಲಿ ನಡೆದಿದೆ.


ಕೇರಳ ಮೂಲದ ಕೊಲ್ಲಂ ಜಿಲ್ಲೆಯ ಕರಕ್ಕಲ್ ನಿವಾಸಿ ಪ್ರವೀಣ್ ಎಂಬಾತ ಪೊಲೀಸರ ವಶವಾದ ವ್ಯಕ್ತಿಯಾಗಿದ್ದಾರೆ. ಈತನ ಸ್ನೇಹಿತ ಪರಾರಿಯಾಗಿದ್ದಾನೆ. ಕಳ್ಳತನಕ್ಕೆ ಬಳಸಿದ ಬೈಕ್ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇಬ್ಬರು ಜೊತೆಯಾಗಿ ಕಳವು ನಡೆಸಿದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಮಂಚಿ ಮಸೀದಿ ಬಳಿಯ ನಿವಾಸಿ ಸಹೋದರರಾದ ಕಮರುದ್ದೀನ್ ಹಾಗೂ ಜಲಾಲುದ್ದೀನ್ ರವರ ಎರಡು ಮನೆ ಹಾಗೂ ಕಾಡಂಗಡಿ ಎಂಬಲ್ಲಿ ಹಮೀದ್ ಎಂಬವರ ಮನೆಗೆ ಕಳ್ಳರು ನುಗ್ಗಿದ್ದಾರೆ. ಮಂಚಿ ಮಸೀದಿ ಬಳಿಯಿರುವ ಸಹೋದರರಾದ ಕಮಾರುದ್ದೀನ್ ಹಾಗೂ ಜಲಾಲುದ್ದೀನ್ ಅವರ ಮನೆಯ ಹಿಂಬಾಗಿಲು ಮುರಿದು ಒಳಗೆ ಪ್ರವೇಶ ಮಾಡಿದ ಕಳ್ಳರು ಕಪಾಟುಗಳನ್ನು ಒಡೆದು ಜಾಲಡಿದ್ದಾರೆ.ಆದರೆ ಯಾವುದೇ ಬೆಲೆಬಾಳುವ ವಸ್ತುಗಳು ಕೈಗೆ ಸಿಗದ ಹಿನ್ನೆಲೆಯಲ್ಲಿ ಅಲ್ಲಿಂದ ವಾಪಾಸಾಗಿದ್ದಾರೆ.





ಅಲ್ಲೇ ಸ್ವಲ್ಪ ದೂರದಲ್ಲಿ ಕಾಡಂಗಡಿ ಎಂಬಲ್ಲಿರುವ ಹಮೀದ್ ಎಂಬವರ ಮನೆಗೆ ನುಗ್ಗಿದ ಕಳ್ಳರು ಕಪಾಟಿನ ಒಳಗೆ ಇದ್ದ ಸುಮಾರು 3 ಸಾವಿರ ರೂ.ನಗದು ಕಳವು ಮಾಡಿದ್ದಾರೆ ಎಂದು ಹೇಳಲಾಗಿದೆ. ಬೈಕಿನಲ್ಲಿ ಬಂದ ಕಳ್ಳರಿಬ್ಬರು ಯಾರು ಇಲ್ಲದ ಮನೆಯನ್ನು ಆಯ್ದುಕೊಂಡು ಕಳ್ಳತನ ಮಾಡುವವರನ್ನು ಸಾರ್ವಜನಿಕರು ಹಿಡಿದು ವಿಚಾರಿಸಿದ ವೇಳೆ ಬಾಯಿಬಿಟ್ಟಿದ್ದಾರೆ ಎಂದು ಮಾಹಿತಿ ಲಭಿಸಿದೆ.

ಅ.21ರಂದು ರಾತ್ರಿ ಈ ಮೂರು ಮನೆಯಲ್ಲಿ ಯಾರು ಇರಲಿಲ್ಲ. ಈ ಮೂರು ಮನೆಯವರು ಸಂಬಂಧಿಕರ ಮನೆಗೆ ತೆರಳಿದ್ದರು.ಹಾಗಾಗಿ ಮನೆಯ ಲೈಟ್ ಆಫ್ ಆಗಿತ್ತು. ಲೈಟ್ ಉರಿಯದ ಮನೆಗಳನ್ನು ನೋಡಿಕೊಂಡು ಅಲ್ಲಿ ಯಾರಾದರೂ ಇದ್ದಾರಾ ಎಂಬುದನ್ನು ಖಚಿತಪಡಿಸಿಕೊಂಡು ಬಳಿಕ ಮನೆಗೆ ನುಗ್ಗಿ ಕಳ್ಳತನ ನಡೆಸುತ್ತಿದ್ದರು.
ಅ.21ರಂದು ರಾತ್ರಿ ಸುಮಾರು 7 ಗಂಟೆ ಹೊತ್ತಿಗೆ ಒಂದು ಕಡೆ ಜೋರಾಗಿ ಮಳೆ,ಇನ್ನೊಂದು ಕಡೆ ಸಿಡಿಲು ಈ ನಡುವೆ ಇವರಿಬ್ಬರು ಕಳ್ಳರು ಲೈಟ್ ಉರಿಯದ ಮಸೀದಿ ಬಳಿ ಇರುವ ಸಹೋದರರ ಎರಡು ಮನೆಗಳಿಗೆ ನುಗ್ಗಿದ್ದಾರೆ.ಅಲ್ಲಿ ಜಾಲಾಡಿ ಏನು ಸಿಗದ ಬಳಿಕ ಕಾಡಂಗಡಿಯ ಹಮೀದ್ ಅವರ ಮನೆಗೆ ನುಗ್ಗಿ ಕಪಾಟಿನಲ್ಲಿರಿಸಿದ್ದ ಮೂರು ಸಾವಿರ ಹಣವನ್ನು ಕದ್ದು ಹೋಗುವ ವೇಳೆ ಹಮೀದ್ ಅವರ ಸಂಬಂಧಿಕರ ಕಣ್ಣಿಗೆ ಕಾಣಿಸಿಕೊಂಡಿದ್ದಾನೆ. ಸಿಡಿಲು ಮಳೆಯ ಹಿನ್ನೆಲೆಯಲ್ಲಿ ಮನೆಯ ಇನ್ ವರ್ಟ್ ರ್ ನ್ನು ಆಫ್ ಮಾಡಿ ಬಿಡುವಂತೆ ಹಮೀದ್ ಅವರು ಸಮೀಪದ ಸಂಬಂಧಿಕರೋರ್ವರಲ್ಲಿ ತಿಳಿಸಿದ್ದಾರೆ. ಇನ್ ವರ್ಟ್ ರ್ ಆಫ್ ಮಾಡಲು ಬಂದಿರುವ ವ್ಯಕ್ತಿಗೆ ಮನೆಯ ಕಡೆಯಿಂದ ಇಬ್ಬರು ವ್ಯಕ್ತಿಗಳು ಓಡಿ ಹೋಗುವ ದೃಶ್ಯ ಕಂಡು ಬಂದಿದೆ. ಕೂಡಲೇ ಅವರು ಸ್ನೇಹಿತರಿಗೆ ತಿಳಿಸಿ ಹುಡುಕುವ ಪ್ರಯತ್ನ ಮಾಡಿದ್ದಾರೆ. ಬೈಕಿನಲ್ಲಿ ಬಂದ ಕಳ್ಳರು ಇವರನ್ನು ನೋಡಿ ಓಡುವ ಭರದಲ್ಲಿ ಬೈಕ್ ಬಿಟ್ಟು ಪರಾರಿಯಾಗಿದ್ದಾರೆ. ಇಬ್ಬರು ಕಳ್ಳರು ಬೇರೆ ಬೇರೆ ದಿಕ್ಕಿನಲ್ಲಿ ಪರಾರಿಯಾಗಲು ಯತ್ನಿಸಿ ಓರ್ವ ಮಾತ್ರ ಕೊನೆಗೂ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದಿದ್ದಾನೆ.
ರಾತ್ರಿ ಸುಮಾರು 8 ಗಂಟೆಗೆ ಹುಡುಕುವ ಪ್ರಯತ್ನ ಮಾಡಿದ ಗ್ರಾಮಸ್ಥರಿಗೆ ಮುಂಜಾವಿನ ವೇಳೆ ಓರ್ವ ಕಳ್ಳನನ್ನು ಹಿಡಿಯುವಲ್ಲಿ ಸಫಲರಾಗಿದ್ದಾರೆ. ಇನ್ನೊರ್ವ ಕಳ್ಳ ಇವರ ಕೈ ಗೆ ಸಿಗದೆ ಪರಾರಿಯಾಗಿದ್ದಾನೆ.ಕೈ ಗೆ ಸಿಕ್ಕಿದ ಕಳ್ಳನನ್ನು ಸಾರ್ವಜನಿಕರು ವಿಚಾರಣೆ ನಡೆಸಿದ ವೇಳೆ ಕಳ್ಳತನದ ಬಗ್ಗೆ ಮಾಹಿತಿ ನೀಡಿದ್ದು, .ಅ ಬಳಿಕ ಆತನನ್ನು ಪೋಲೀಸರಿಗೊಪ್ಪಿಸಿದ್ದಾರೆ.
ಘಟನಾ ಸ್ಥಳಕ್ಕೆ ಗ್ರಾಮಾಂತರ ಎಸ್.ಐ.ಹರೀಶ್ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಬೆರಳಚ್ಚು ತಜ್ಞರ ತಂಡ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.ಪರಾರಿಯಾಗಿರುವ ಇನ್ನೋರ್ವ ಆರೋಪಿಗಾಗಿ ಶೋಧ ಕಾರ್ಯು ಮುಂದುವರಿಸಿದ್ದಾರೆ.





