ಪುತ್ತೂರು: ಮಂಗಳೂರಿನ ಕೊಡಿಯಾಲ್ ಬೈಲ್ ನಲ್ಲಿನ ಧರ್ಮಾಧ್ಯಕ್ಷರ ನಿವಾಸದಲ್ಲಿ ಕಾರ್ಯಾಚರಿಸುತ್ತಿರುವ ಕಥೋಲಿಕ್ ಸಭಾ ಮಂಗಳೂರು ಪ್ರದೇಶ ಇದರ ವತಿಯಿಂದ ಕ್ರೈಸ್ತ ಪತ್ರಕರ್ತರ ಸಹಮಿಲನ ಹಾಗೂ ಸನ್ಮಾನ ಕಾರ್ಯಕ್ರಮ ಅ.22ರಂದು ಸಂಜೆ ಜೆಪ್ಪು ಸಂತ ಅಂತೋನಿ ಆಶ್ರಮದಲ್ಲಿನ ಸಂಭ್ರಮ ಸಭಾಭವನದಲ್ಲಿ ನಡೆಯಿತು.
ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ 12 ವಲಯಗಳಲ್ಲಿನ ವಿವಿಧ ಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಸಂಸ್ಥಾಪಕರಾಗಿ, ಸಂಪಾದಕರಾಗಿ, ಪತ್ರಕರ್ತರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೊಂಕಣಿ ಕ್ರೈಸ್ತ ಪತ್ರಕರ್ತರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಚರಿತ್ರೆಯಲ್ಲಿ ಮೊದಲ ಬಾರಿಗೆ ಹಮ್ಮಿಕೊಳ್ಳಲಾಗಿತ್ತು. ಅದರಂತೆ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಕಳೆದ 14 ವರ್ಷಗಳಿಂದ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿರುವ ಹಾಗೂ ಪುತ್ತೂರು ತಾಲೂಕು ಜರ್ನಲಿಸ್ಟ್ ಯೂನಿಯನ್ ಪ್ರಧಾನ ಕಾರ್ಯದರ್ಶಿಯಾಗಿರುವ ಸಂತೋಷ್ ಮೊಟ್ಟೆತ್ತಡ್ಕ ಸೇರಿದಂತೆ ಮಂಗಳೂರು ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 43 ಮಂದಿ ಕ್ರೈಸ್ತ ಪತ್ರಕರ್ತರನ್ನು ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ.ವಂ|ಡಾ|ಪೀಟರ್ ಪಾವ್ಲ್ ಸಲ್ದಾನ್ಹಾರವರು ಶಾಲು ಹೊದಿಸಿ ಸನ್ಮಾನಿಸಿದರು.
ಕಥೋಲಿಕ್ ಸಭಾ ಕೇಂದ್ರ ಸಮಿತಿ ಅಧ್ಯಕ್ಷ ಆಲ್ವಿನ್ ಡಿ’ಸೋಜ ಪಾನೀರುರವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಕಥೋಲಿಕ್ ಸಭಾ ಕೇಂದ್ರಿಯ ಅಧ್ಯಾತ್ಮಿಕ ನಿರ್ದೇಶಕ ವಂ|ಡಾ|ಜೆ.ಬಿ ಸಲ್ದಾನ್ಹಾ, ಜೆಪ್ಪು ಸಂತ ಅಂತೋನಿ ಆಶ್ರಮದ ನಿರ್ದೇಶಕ ವಂ|ಜೆ.ಬಿ ಕ್ರಾಸ್ತಾ, ದಾಯ್ಜಿವಲ್ಡ್೯ ಮೀಡಿಯಾ ಲಿಮಿಟೆಡ್ ನ ಸಂಸ್ಥಾಪಕ ವಾಲ್ಟರ್ ನಂದಳಿಕೆ, ಮಹಾರಾಷ್ಟ್ರ ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ, ಕರಾವಳಿ ಸುದ್ದಿ ವಾರಪತ್ರಿಕೆಯ ಸಂಪಾದಕ ಹಾಗೂ ಪ್ರಕಾಶಕ ಭೊನಿಪಾಸ್ ರೋಶನ್ ಮಾರ್ಟಿಸ್, ಕಥೋಲಿಕ್ ಸಭಾ ಕೇಂದ್ರ ಸಮಿತಿಯ ಕಾರ್ಯದರ್ಶಿ ವಿಲ್ಮಾ ಮೊಂತೇರೊ, ಪತ್ರಕರ್ತರ ಸಹಮಿಲನ ಹಾಗೂ ಸನ್ಮಾನ ಕಾರ್ಯದ ಸಂಚಾಲಕ ಪಾವ್ಲ್ ರೋಲ್ಫಿ ಡಿ’ಕೋಸ್ಟರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನದ ಸಂದರ್ಭದಲ್ಲಿ ಸಂತೋಷ್ ಮೊಟ್ಟೆತ್ತಡ್ಕರವರ ತಾಯಿ ಐರಿನ್ ಮೊರಾಸ್, ಪತ್ನಿ ಪ್ರಮೀಳಾ ಸಿಕ್ವೇರಾ, ಪುತ್ರಿ ಸಿಯೋನಾ ಮೊರಾಸ್, ಪುತ್ರ ಸೇವಿಯನ್ ಮೊರಾಸ್, ತಂಗಿ ಮಗಳು ಕ್ಯಾರಲ್ ಸಿಕ್ವೇರಾ ಉಪಸ್ಥಿತರಿದ್ದರು.
ಪುತ್ತೂರು ತಾಲೂಕಿನ ಕ್ರೈಸ್ತ ಧರ್ಮದ, ಸಂಘ-ಸಂಸ್ಥೆಯ ವರದಿಗಳನ್ನು ಸಕಾಲದಲ್ಲಿ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಭಿತ್ತರಿಸಿದ್ದಕ್ಕೆ ಪುತ್ತೂರು ಮಾಯಿದೆ ದೇವುಸ್ ಚರ್ಚ್ ಸಮುದಾಯ ದಿನದಂದು ಡೊನ್ ಬೊಸ್ಕೊ ಕ್ಲಬ್ ನಿಂದ, ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿಯಿಂದ, ಚರ್ಚ್ ನ ಹಲವಾರು ವಾಳೆಗಳಿಂದ ಸನ್ಮಾನ ಜೊತೆಗೆ ಮೊಟ್ಟೆತ್ತಡ್ಕ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಿಂದ, ಮೊಟ್ಟೆತ್ತಡ್ಕ ಮಣ್ಣಾಪು ಶ್ರೀ ಕೊರಗಜ್ಜ ದೈವಸ್ಥಾನದಲ್ಲಿ, ಆರ್ಯಾಪು ಶ್ರೀ ಮಾರಿಯಮ್ಮ ದೇವಸ್ಥಾನದಿಂದ ಸನ್ಮಾನ ಜೊತೆಗೆ ಹಲವು ಸಂಘ ಸಂಸ್ಥೆಗಳಿಂದ ಗೌರವ ಪುರಸ್ಕಾರ ಪಡೆದಿರುವ ಸಂತೋಷ್ ಮೊಟ್ಟೆತ್ತಡ್ಕ ಅವರು ತುಳು ನಾಟಕಗಳಾದ ‘ತಪ್ಪುಗು ತಕ್ಕ ಶಿಕ್ಷೆ’, ‘ದೇವೆರೆ ತೀರ್ಪು’ ಜೊತೆಗೆ ಹಲವಾರು ಕೊಂಕಣಿ ಪ್ರಹಸನಗಳಲ್ಲಿ ಅಭಿನಯಿಸಿ ಗಮನ ಸೆಳೆದಿದ್ದಾರೆ.