ಆಲಂಕಾರಿನ ಎ.ಕೃಷ್ಣಪ್ಪ ಪೂಜಾರಿಯವರಿಗೆ ’ಶ್ರೇಷ್ಠ ಶಿಕ್ಷಕ ಸೌರಭ ಪ್ರಶಸ್ತಿ’

0

ರಾಮಕುಂಜ: ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಬಾಲಕೃಷ್ಣ ಆಚಾರ್ ಮತ್ತು ಅವರ ಪತ್ನಿ ರಾಷ್ಟ್ರಪ್ರಶಸ್ತಿ ಪುರಸ್ಕೃತರಾದ ವಾಣಿ ಬಿ.ಆಚಾರ್ ಬೆಂಗಳೂರು ಅವರು ಕನ್ನಡ ಸಂಘದಲ್ಲಿ ಸ್ಥಾಪಿಸಿದ ದತ್ತಿನಿಧಿಯಿಂದ ನೀಡುವ ’ಶ್ರೇಷ್ಠ ಶಿಕ್ಷಕ ಸೌರಭ’ ಪ್ರಶಸ್ತಿಗೆ ಕಡಬ ತಾಲೂಕಿನ ಆಲಂಕಾರು ನಿವಾಸಿ, ನಿವೃತ್ತ ಪ್ರಾಂಶುಪಾಲ ಎ.ಕೃಷ್ಣಪ್ಪ ಪೂಜಾರಿ ಆಯ್ಕೆಗೊಂಡಿದ್ದಾರೆ.

ಕನ್ನಡ ಸಂಘ-ಕಾಂತಾವರ ಕಾರ್ಕಳ ಇವರ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರ ಬೆಂಗಳೂರು ಇವರ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ದಿನವಾದ ನ.1ರಂದು ಕಾರ್ಕಳ ತಾಲೂಕಿನ ಕಾಂತಾವರದಲ್ಲಿ ನಡೆಯುವ ’ಕಾಂತಾವರ ಉತ್ಸವ-2023’ರಲ್ಲಿ ಇವರಿಗೆ ಪ್ರಶಸ್ತಿ ಪ್ರದಾನ ಆಗಲಿದೆ. ಪ್ರಶಸ್ತಿಯು 10 ಸಾವಿರ ರೂ.ನಗದು ಮತ್ತು ತಾಮ್ರ ಪತ್ರವನ್ನೊಳಗೊಂಡಿದೆ.
ಎ.ಕೃಷ್ಣಪ್ಪ ಪೂಜಾರಿ ಅವರು ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ರಾಜ್ಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮತ್ತು ಮಣಿಪಾಲ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಎಡ್ ಪದವಿ ಮಾಡಿರುತ್ತಾರೆ. ರಾಮಕುಂಜ, ಉಪ್ಪಿನಂಗಡಿ, ಪದ್ಮುಂಜ ಹಾಗೂ ಬೆಳ್ತಂಗಡಿಯ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಇವರು ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲೂ ಸಕ್ರಿಯವಾಗಿ ಸೇವೆ ಸಲ್ಲಿಸಿದ್ದಾರೆ. ಬೆಳ್ತಂಗಡಿ ಶ್ರೀ ಸತ್ಯಸಾಯಿ ಸೇವಾ ಸಮಿತಿಯ ಸಂಚಾಲಕರಾಗಿ, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷರಾಗಿ, ಉಪ್ಪಿನಂಗಡಿ ಜೇಸಿಐ ಅಧ್ಯಕ್ಷರಾಗಿ, ರಾಮಕುಂಜೇಶ್ವರ ಯಕ್ಷಗಾನ ಸಂಘದ ಸಂಚಾಲಕರಾಗಿ, ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ, ಪುತ್ತೂರು ಶ್ರೀ ಗುರುನಾರಾಯಣ ಸೇವಾ ಸಂಘದ ಉಪಾಧ್ಯಕ್ಷರಾಗಿ, ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಉತ್ಸವ ಸಮಿತಿಯ ಅಧ್ಯಕ್ಷರಾಗಿ, ಬೆಳ್ತಂಗಡಿ ಶ್ರೀ ಗುರುರಾಘವೇಂದ್ರ ಮಠದ ಗೌರವ ಸಲಹೆಗಾರರಾಗಿ ಮತ್ತು ಇತರ ಅನೇಕ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಅವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪ್ರಶಸ್ತಿ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸನ್ಮಾನ, ಬಿಲ್ಲವಾಸ್ ದುಬೈ ಗೌರವ ಪ್ರಶಸ್ತಿ, ಮುಂಬೈ ಬಿಲ್ಲವ ಮಹಾಮಂಡಲದ ಗೌರವ ಪ್ರಶಸ್ತಿ, ಅರ್ಕುಳ ಚಾರಿಟೇಬಲ್ ಟ್ರಸ್ಟ್‌ನಿಂದ ಸಮಾಜ ಸೇವಾ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಮತ್ತು ಸನ್ಮಾನಗಳನ್ನು ಇವರಿಗೆ ಪ್ರದಾನ ಮಾಡಲಾಗಿದೆ. ಶೈಕ್ಷಣಿಕ ಕಾರ‍್ಯಾಗಾರಗಳು, ಧಾರ್ಮಿಕ ಉಪನ್ಯಾಸಗಳು, ಯಕ್ಷಗಾನ, ನಾಟಕ ಹಾಗೂ ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಎ.ಕೃಷ್ಣಪ್ಪ ಪೂಜಾರಿಯವರು ಆಲಂಕಾರು ಗ್ರಾಮದ ಎಣ್ಣೆತ್ತೋಡಿ ನಿವಾಸಿ, ನಿವೃತ್ತ ಶಿಕ್ಷಕ ಎಂ.ತಿಮ್ಮಪ್ಪ ಪೂಜಾರಿ ಹಾಗೂ ಮುತ್ತಕ್ಕ ದಂಪತಿಯ ಪುತ್ರರಾಗಿದ್ದಾರೆ.

LEAVE A REPLY

Please enter your comment!
Please enter your name here