ತನ್ನ ಹುಟ್ಟಿದ ದಿನವನ್ನು ‘ಹಿರಿಯ ವಿದ್ಯಾರ್ಥಿಗಳ ಗೌರವ ದಿನ’ವನ್ನಾಗಿ ಆಚರಿಸುತ್ತಿರುವ ಶ್ರೀನಿವಾಸ್ ಹೆಚ್.ಬಿ
ಪುತ್ತೂರು: ಸರ್ವೆ ಎಸ್‌ಜಿಎಂ ಪ್ರೌಢ ಶಾಲೆಯ ನಿವೃತ್ತ ಮುಖ್ಯಗುರು, ಜನ ಮೆಚ್ಚಿದ ಶಿಕ್ಷಕ ಖ್ಯಾತಿಯ ಶ್ರೀನಿವಾಸ್ ಹೆಚ್ ಬಿ ಅವರ 63ನೇ ಹುಟ್ಟು ಹಬ್ಬದ ಪ್ರಯುಕ್ತ ‘ಗುರು ಶಿಷ್ಯರ ಸಮ್ಮಿಲನ’ ಹೆಸರಿನಲ್ಲಿ ಹಿರಿಯ ವಿದ್ಯಾರ್ಥಿಗಳಿಗೆ ಅ.22ರಂದು ಮಂಗಳೂರಿನ ವಿವಿಧ ಕಡೆಗಳಿಗೆ ಪ್ರವಾಸ ಆಯೋಜಿಸಲಾಗಿತ್ತು.
ಶ್ರೀನಿವಾಸ್ ಹೆಚ್ ಬಿ ಅವರ ಹಿರಿಯ ವಿದ್ಯಾರ್ಥಿಗಳು ಹಾಗೂ ಆತ್ಮೀಯ ಬಳಗದಲ್ಲಿ ಗುರುತಿಸಿಕೊಂಡಿದ್ದ ಸುಮಾರು 37 ಮಂದಿ ಪ್ರವಾಸದಲ್ಲಿ ಭಾಗವಹಿಸಿದ್ದರು.
ಭಕ್ತಕೋಡಿ ಶ್ರೀ ರಾಮ ಭಜನಾ ಮಂದಿರದ ಬಳಿ ಲಕ್ಷ್ಮಣ ಆಚಾರ್ಯ ಅವರು ತೆಂಗಿನ ಕಾಯಿ ಒಡೆಯುವ ಮೂಲಕ ಪ್ರವಾಸಕ್ಕೆ ಚಾಲನೆ ನೀಡಿದರು. ಮೊದಲಿಗೆ ನರಹರಿ ಪರ್ವತ ಮತ್ತು ಕುದ್ರೋಳಿ ಗೋಕರ್ಣನಾಥ ದೇವಸ್ಥಾನಕ್ಕೆ ಭೇಟಿ ನೀಡಲಾಯಿತು. ನಂತರ ನಾಲ್ಕು ಗಂಟೆಗಳ ಕಾಲ ಬೋಟಿಂಗ್ ಸಂಚಾರ ನಡೆಯಿತು.
ಶ್ರೀನಿವಾಸ್ ಹೆಚ್.ಬಿ ಅವರ ಹುಟ್ಟು ಹಬ್ಬವನ್ನು ಕಡಲ ಕಿನಾರೆಯಲ್ಲಿ ಆಚರಿಸಲಾಯಿತು. ಮಂಗಳೂರು ಧಕ್ಕೆಯಿಂದ ಬೋಟಿಂಗ್ ಪ್ರಾರಂಭವಾಯಿತು. ಅದರಲ್ಲೇ ಶ್ರೀನಿವಾಸ್ ಎಚ್.ಬಿ ಅವರ ಹುಟ್ಟು ಹಬ್ಬವನ್ನು ಕೇಕ್ ಕತ್ತರಿಸಿ ಹಿರಿಯ ವಿದ್ಯಾರ್ಥಿಗಳು ಸಂಭ್ರಮಿಸಿದರು. ಪ್ರವಾಸದ ನೇತೃತ್ವ ವಹಿಸಿಕೊಂಡಿದ್ದ ಸುರೇಶ್ ಎಸ್.ಡಿ ಅವರನ್ನೂ ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ತಮ್ಮ ಗುರುವಿನ ಜನ್ಮದಿನದ ಪ್ರಯುಕ್ತ ಹಿರಿಯ ವಿದ್ಯಾರ್ಥಿಗಳೆಲ್ಲ ಸೇರಿ ಹಾಡು ಹಾಡಿ, ಡ್ಯಾನ್ಸ್ ಮಾಡಿ ಕುಣಿದು ಕುಪ್ಪಳಿಸಿದರು. ಶ್ರೀನಿವಾಸ್ ಎಚ್.ಬಿ ಅವರೂ ಡ್ಯಾನ್ಸ್‌ನಲ್ಲಿ ಹೆಜ್ಜೆ ಹಾಕಿದರು. ಸಭಾ ಕಾರ್ಯಕ್ರಮದ ವೇದಿಕೆಯಲ್ಲಿದ್ದ ಕಲ್ಲಮ ರಾಘವೇಂದ್ರ ಮಠದ ವ್ಯವಸ್ಥಾಪಕರಾದ ಡಾ.ಸೀತಾರಾಮ ಭಟ್ ಕಲ್ಲಮ, ನಿವೃತ್ತ ಶಿಕ್ಷಕ ಮಹಾಬಲ ರೈ, ಅಬಕಾರಿ ಇನ್ಸ್‌ಪೆಕ್ಟರ್ ಲೋಕೇಶ್ ಸುವರ್ಣ, ಶಶಿಧರ್ ಎಸ್.ಡಿ, ಅಶೋಕ್ ಎಸ್.ಡಿ, ಜನಾರ್ದನ ಉಪಸ್ಥಿತರಿದ್ದರು. ಹಿರಿಯ ವಿದ್ಯಾರ್ಥಿಗಳು, ಆತ್ಮೀಯರು ಅನಿಸಿಕೆ ವ್ಯಕ್ತಪಡಿಸಿದರು. ಸುಬ್ರಹ್ಮಣ್ಯ ಕರುಂಬಾರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಪ್ರಕಾಶ್‌ರವರಿಗೆ ಸನ್ಮಾನ:
ಬೆಂಗಳೂರಿನಲ್ಲಿ ಕನ್‌ಸ್ಟ್ರಕ್ಷನ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಹಿರಿಯ ವಿದ್ಯಾರ್ಥಿ ಪ್ರಕಾಶ್ ಪುರುಷರಕಟ್ಟೆ ಅವರನ್ನು ಶ್ರೀನಿವಾಸ್ ಹೆಚ್.ಬಿ ನೇತೃತ್ವದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಮೂರನೇ ವರ್ಷದ ಪ್ರವಾಸ:
ಶ್ರೀನಿವಾಸ್ ಹೆಚ್ ಬಿ ಅವರು ತಮ್ಮ ಹುಟ್ಟು ಹಬ್ಬವನ್ನು ಹಿರಿಯ ವಿದ್ಯಾರ್ಥಿಗಳ ಗೌರವ ದಿನವನ್ನಾಗಿ ಆಚರಿಸುತ್ತಿದ್ದು ಇದು ಮೂರನೇ ವರ್ಷದ ಕಾರ್ಯಕ್ರಮವಾಗಿದೆ. ಶಿಕ್ಷಕ ವೃತ್ತಿಯಿಂದ ನಿವೃತ್ತರಾದ ಬಳಿಕ ತಮ್ಮ 61ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಮೊದಲ ಬಾರಿ ಹಿರಿಯ ವಿದ್ಯಾರ್ಥಿಗಳ ಗೌರವ ದಿನ ಎನ್ನುವ ಹೆಸರಿನಲ್ಲಿ 2021ರಲ್ಲಿ ಬಿಸಿಲೆ ಘಾಟ್ ಗೆ ಪ್ರವಾಸ ಹಮ್ಮಿಕೊಂಡಿದ್ದ ಶ್ರೀನಿವಾಸ್ ಹೆಚ್ ಬಿ ಅವರು 2022ರಲ್ಲಿ ಮಡಿಕೇರಿಗೆ ಪ್ರವಾಸ ಆಯೋಜಿಸಿದ್ದರು. ಮಡಿಕೇರಿಗೆ ಪ್ರವಾಸದ ನೇತೃತ್ವವನ್ನು ಹಿರಿಯ ವಿದ್ಯಾರ್ಥಿ ಅಬಕಾರಿ ಇಲಾಖೆಯ ಇನ್ಸ್’ಪೆಕ್ಟರ್ ಲೋಕೇಶ್ ಸುವರ್ಣ ವಹಿಸಿದ್ದರು. ಈ ಬಾರಿಯ ಪ್ರವಾಸದ ನೇತೃತ್ವವನ್ನು ಸರ್ವೆ ಎಸ್‌ಜಿಎಂ ಪ್ರೌಢ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ಎಸ್.ಡಿ ವಹಿಸಿದ್ದರು. ತನ್ನ ಜನ್ಮ ದಿನದಂದು ಹಿರಿಯ ವಿದ್ಯಾರ್ಥಿಗಳನ್ನು ಗೌರವಿಸುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವ ಶ್ರೀನಿವಾಸ್ ಹೆಚ್ ಬಿ ಅವರು ನಿವೃತ್ತಿ ಜೀವನದಲ್ಲೂ ವಿಭಿನ್ನ ಕಾರ್ಯಕ್ರಮ ನಡೆಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಮುಂದಿನ ವರ್ಷ ಬೆಂಗಳೂರಿಗೆ:
ಶ್ರೀನಿವಾಸ್ ಎಚ್.ಬಿ ಅವರ 64ನೇ ವರ್ಷದ ಹುಟ್ಟು ಹಬ್ಬವನ್ನು ಬೆಂಗಳೂರಿಗೆ ಪ್ರವಾಸ ತೆರಳಿ ಅಲ್ಲಿ ಆಚರಿಸುವುದೆಂದು ತೀರ್ಮಾನಿಸಲಾಗಿದ್ದು ಅದರ ನೇತೃತ್ವವನ್ನು ಹಿರಿಯ ವಿದ್ಯಾರ್ಥಿ, ಬೆಂಗಳೂರಿನಲ್ಲಿ ಕನ್‌ಸ್ಟ್ರಕ್ಷನ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಪ್ರಕಾಶ್ ಪುರುಷರಕಟ್ಟೆ ವಹಿಸಿಕೊಳ್ಳಲಿದ್ದಾರೆ.