ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ವಿಸ್ತರಣಾ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿರುವ ಕೆಎನ್‌ಆರ್ ಸಂಸ್ಥೆಯಲ್ಲಿ ಸೈಟ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ತಮಿಳುನಾಡು ಮೂಲದ ಅನೂಫ್ (47) ಸಂಶಯಾಸ್ಪದವಾಗಿ ಸಾವನ್ನಪ್ಪಿದ ಘಟನೆ ಪೆರ್ನೆ ಎಂಬಲ್ಲಿ ನಡೆದಿದೆ.
ಕೊಲ್ಲಂ ತಾಲೂಕಿನ ಮಾಧವನ್ ಎಂಬವರ ಮಗನಾದ ಅನೂಪ್ ಕೆ.ಎನ್.ಆರ್. ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದು, ಕಳೆದ ಅ.21 ರಂದು ಉಪ್ಪಿನಂಗಡಿ ಪ್ರದೇಶದಲ್ಲಿ ಕಾರ್ಯನಿರ್ವಹಿಸಲು ವರ್ಗಾವಣೆಗೊಂಡು ಬಂದವರು ಪೆರ್ನೆಯ ಮುಸ್ತಾಫ ಎಂಬವರ ಒಡೆತನದ ಮನೆಯಲ್ಲಿ ವಾಸ್ತವ್ಯ ಇದ್ದರು. ಅ.22 ರಂದು ಮಧ್ಯಾಹ್ನ ಜೋಗಿಬೆಟ್ಟು ಎಂಬಲ್ಲಿನ ಸಂಸ್ಥೆಯ ಸಹ ಉದ್ಯೋಗಿಗಳ ನಿವಾಸಕ್ಕೆ ಹೋಗಿದ್ದ ಇವರು, ಅಲ್ಲಿ ಮಧ್ಯಾಹ್ನದ ಭೋಜನ ಸೇವಿಸಿ ಹಿಂದುರುಗಿದವರು ಬಳಿಕ ರಜೆಯ ಕಾರಣಕ್ಕೆ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಮಂಗಳವಾರದಂದು ವಾಹನ ಚಾಲಕ ಅನೂಫ್‌ರವರಿಗೆ ಪೋನ್ ಮಾಡಿದಾಗ ಕರೆಯನ್ನು ಸ್ವೀಕರಿಸದೇ ಇದ್ದಾಗ ಸಂದೇಹ ಮೂಡಿ, ಅವರ ವಾಸ್ತವ್ಯದ ಮನೆಗೆ ಭೇಟಿ ನೀಡಿದ್ದು, ಆಗ ಅಲ್ಲಿ ಒಳಗಿನಿಂದ ಚಿಲಕ ಹಾಕಿಕೊಂಡಿತ್ತು. ಕಿಟಕಿಯಿಂದ ಅವರ ಬೆಡ್ ರೂಮ್ ನ್ನು ನೋಡಿದಾಗ ಬಾಯಿ ಮತ್ತು ಮೂಗಿನಿಂದ ರಕ್ತಸ್ರಾವವಾದ ರೀತಿಯಲ್ಲಿ ನೆಲದಲ್ಲಿ ಬಿದ್ದುಕೊಂಡು ಸಾವನ್ನಪ್ಪಿದ ಸ್ಥಿತಿಯಲ್ಲಿ ಅವರ ಮೃತ ದೇಹ ಕಂಡು ಬಂದಿದೆ. ಸಂಸ್ಥೆಯ ಚಾಲಕ ರಮೇಶ್ ಎಂಬವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.