ಉಪ್ಪಿನಂಗಡಿ: ಔಷಧಿ ನೀಡುವಾಗ ಎಡವಟ್ಟು: ರೋಗಿಯ ಸ್ಥಿತಿ ಉಲ್ಭಣ-ತಪ್ಪೊಪ್ಪಿಕೊಂಡು ನಷ್ಟ ಮೊತ್ತ ಪಾವತಿಸಿದ ಮೆಡಿಕಲ್

0

ಉಪ್ಪಿನಂಗಡಿ: ಎಂಬಿಬಿಎಸ್ ಎಂ.ಡಿ. ಪದವಿ ಪಡೆದ ವೈದ್ಯರು ಸೂಚಿಸಿದ ಔಷಧವನ್ನು ಔಷಧಾಲಯದ ಸಿಬ್ಬಂದಿ ನೀಡದೇ ಅವರಿಗೆ ತೋಚಿದ ಬೇರೊಂದು ಔಷಧಿಯನ್ನು ನೀಡಿದ ಪರಿಣಾಮ ರೋಗಿಯೋರ್ವರ ಅನಾರೋಗ್ಯ ಉಲ್ಬಣಿಸಿದ ಘಟನೆಗೆ ಸಂಬಂಧಿಸಿ ತಪ್ಪಿತಸ್ಥ ಔಷದಾಲಯದ ಮಾಲಕರು ನಷ್ಟ ಮೊತ್ತವನ್ನು ಪಾವತಿಸಿದ ಘಟನೆ ವರದಿಯಾಗಿದೆ.


ಪ್ರಸಕ್ತ ಉಪ್ಪಿನಂಗಡಿಯ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಇರುವ ಫಾತಿಮಾ (ಹೆಸರು ಬದಲಾಯಿಸಲಾಗಿದೆ) ಎಂಬವರ ನರ ದೌರ್ಬಲ್ಯದ ಕಾರಣಕ್ಕೆ ಮಂಗಳೂರಿನ ನುರಿತ ವೈದ್ಯರಿಂದ ತಪಾಸಣೆ ನಡೆಸಿದ್ದು, ಅವರು ಅಗತ್ಯ ಔಷಧವನ್ನು ಪಡೆಯುವಂತೆ ಶಿಫಾರಸ್ಸು ಮಾಡಿದ್ದರು. ವೈದ್ಯರು ನೀಡಿದ ಚೀಟಿಯನ್ನು ಮಂಗಳೂರಿನ ಔಷಧಾಲಯವೊಂದಕ್ಕೆ ಕೊಂಡೊಯ್ದು ಔಷಧಿಯನ್ನು ಬಯಸಿದಾಗ , ವೈದ್ಯರು ನೀಡಿದ ಔಷಧಿಯು ಅಲ್ಲಿ ಲಭ್ಯವಿಲ್ಲದ ಕಾರಣ ಬೇರೊಂದು ಔಷಧಿಯನ್ನು ಅವರಿಗೆ ನೀಡಿ ಕಳುಹಿಸಲಾಗಿತ್ತು. ಔಷಧಾಲಯದಿಂದ ಪರ್ಯಾಯವಾಗಿ ಒದಗಿಸಿದ ಔಷಧಿಯನ್ನು ಸೇವಿಸಿದ ರೋಗಿಯ ಅನಾರೋಗ್ಯ ಉಲ್ಭಣಿಸಿ ದೇಹಾರೋಗ್ಯ ಹದಗೆಟ್ಟಾಗ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ರೋಗಿಯನ್ನು ದಾಖಲಿಸಲಾಗಿತ್ತು. ಈ ವೇಳೆ ಅಲ್ಲಿನ ವೈದ್ಯರು ರೋಗಿ ಈ ಹಿಂದೆ ಪಡೆದುಕೊಂಡ ಔಷಧಿಗಳನ್ನು ಪರಿಶೀಲನೆಗೆ ಒಳಪಡಿಸಿದಾಗ ವೈದ್ಯರು ಸೂಚಿಸಿದ ಔಷಧಕ್ಕೂ, ರೋಗಿಯು ಸ್ವೀಕರಿಸುತ್ತಿರುವ ಔಷಧಕ್ಕೂ ವ್ಯತ್ಯಾಸವಿರುವುದು ಕಂಡು ಬರುತ್ತದೆ. ಬಿಲ್‌ಗಳನ್ನು ಪರಿಶೀಲಿಸಿದಾಗ ಇದಕ್ಕೆ ಮಂಗಳೂರಿನ ಔಷಧಾಲಯದ ಸಿಬ್ಬಂದಿಯ ಕರ್ತವ್ಯ ಲೋಪವೇ ಕಾರಣವೆನ್ನುವುದು ತಿಳಿದುಬರುತ್ತದೆ.


ಈ ಬಗ್ಗೆ ಆಕ್ರೋಶಗೊಂಡ ರೋಗಿಯ ಕುಟುಂಬಸ್ಥರು ಮಂಗಳೂರಿನ ಔಷಧಾಲಯವನ್ನು ಸಂಪರ್ಕಿಸಿ, ವೈದ್ಯರು ಸೂಚಿಸಿದ ಔಷಧದ ಬದಲು ಅಲ್ಲಿನ ಸಿಬ್ಬಂದಿ ಅವರಿಗೆ ತೋಚಿದ ಔಷಧಿಯನ್ನು ನೀಡಿ ರೋಗಿಯ ದೇಹ ಸ್ಥಿತಿ ಬಿಗಡಾಯಿಸಲು ಕಾರಣವಾಗಿರುವ ಬಗ್ಗೆ ಇಲಾಖಾತ್ಮಕ ದೂರು ನೀಡುವುದಾಗಿ ಎಚ್ಚರಿಸಿದರು. ಎಚ್ಚೆತ್ತ ಔಷಧಾಲಯದ ಸಿಬ್ಬಂದಿ ಉಪ್ಪಿನಂಗಡಿಗೆ ಧಾವಿಸಿ ಬಂದು, ನಮ್ಮಿಂದ ತಪ್ಪಾಗಿದೆ. ವೈದ್ಯರು ಸೂಚಿಸಿದ ಔಷಧಿಗೆ ಪರ್ಯಾಯವಾಗಿ ಬದಲಿ ಔಷಧಿಯನ್ನು ನೀಡುವ ಅಧಿಕಾರ ನಮಗಿಲ್ಲ. ಬದಲಿ ಔಷಧಿ ನೀಡಿದ ಸಿಬ್ಬಂದಿಯ ಪ್ರಮಾದಕ್ಕಾಗಿ ಕ್ಷಮೆಯಾಚಿಸಿದರಲ್ಲದೆ, ಬದಲಿ ಔಷಧಿಯ ಕಾರಣದಿಂದ ಉಂಟಾದ ರೋಗಿಯ ಅನಾರೋಗ್ಯ ಉಲ್ಬಣಿಸಿ ಆಸ್ಪತ್ರೆಯ ವೆಚ್ಚವಾದ 25,760 ರೂಪಾಯಿಯನ್ನು ಚೆಕ್ ಮೂಲಕ ಪಾವತಿಸಿ, ಮುಂದಿನ ಎರಡು ತಿಂಗಳ ಕಾಲ ರೋಗಿಗೆ ತೆಗೆದುಕೊಳ್ಳಬೇಕಾದ ಎಲ್ಲಾ ಔಷಧಿಗಳು ನಮ್ಮ ಔಷಧಾಲಯವೇ ಭರಿಸುವುದೆಂದು ವಾಗ್ದಾನ ಮಾಡಿದ್ದಾರೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here