ನನ್ನ ವಿರುದ್ಧ ವಿದೌಟ್ ಪ್ರೂಫ್ ಎಲಿಗೇಶನ್-ಶ್ಯಾಮಸುದರ್ಶನ್ ಭಟ್
ವಂಚನೆ ಬಯಲಿಗೆಳೆದುದಕ್ಕೆ ವೈಯಕ್ತಿಕ ದ್ವೇಷದಿಂದ ನನ್ನ ವಿರುದ್ಧ ದೂರು-ನವೀನ್ ರೈ
ಪುತ್ತೂರು: 90 ಲಕ್ಷ ರೂ.ಸಾಲ ಪಡೆದು ಹಿಂತಿರುಗಿಸದೆ ವಂಚನೆ ಮಾಡಿರುವುದಲ್ಲದೆ, ಅವಾಚ್ಯವಾಗಿ ಬೈದು ಜೀವಬೆದರಿಕೆಯೊಡ್ಡಿರುವ ಆರೋಪದಲ್ಲಿ ಬನ್ನೂರಿನ ಶೇಖರ್ ಎಂಬವರು ನೀಡಿರುವ ದೂರಿನ ಕುರಿತು ಪ್ರತಿಕ್ರಿಯೆ ನೀಡಿರುವ ಪುತ್ತೂರಿನ ಶ್ಯಾಮಸುದರ್ಶನ ಭಟ್, ತನ್ನ ವಿರುದ್ಧ ವಿದೌಟ್ ಪ್ರೂಫ್ ಎಲಿಗೇಶನ್ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಶೇಖರ್ ಮಾಡಿದ್ದ ವಂಚನೆಯನ್ನು ಬಯಲಿಗೆಳೆದ ದ್ವೇಷದಿಂದ ತನ್ನ ವಿರುದ್ಧ ಸುಳ್ಳು ದೂರು ನೀಡಲಾಗಿದೆ ಎಂದು ನವೀನ್ ರೈ ಕೈಕಾರ ಸ್ಪಷ್ಟನೆ ನೀಡಿದ್ದಾರೆ.
90 ಲಕ್ಷ ರೂ.ಸಾಲ ಪಡೆದುಕೊಂಡು ಪೂರ್ಣ ಹಿಂತಿರುಗಿಸದೇ ವಂಚನೆ ಮಾಡಿರುವುದಾಗಿ ಆರೋಪಿಸಿ ಬನ್ನೂರು ನಿವಾಸಿ ಶೇಖರ್ ಎನ್.ಪಿ.ಎಂಬವರು ವಿಜಯನಗರ ಜಿಲ್ಲೆಯ ಶಿವಮೂರ್ತಿ, ಪುತ್ತೂರುನ ಶ್ಯಾಮಸುದರ್ಶನ್ ಭಟ್ ಮತ್ತು ನವೀನ್ ರೈ ಕೈಕಾರ ಎಂಬವರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಗ ದೂರು ನೀಡಿದ್ದು ಅ.22ರಂದು ಕೇಸು ದಾಖಲಾಗಿತ್ತು.
2022ನೇ -ಪೆಬ್ರವರಿ ತಿಂಗಳಲ್ಲಿ ವಿಜಯನಗರ ಜಿಲ್ಲೆಯ ಬೊಮ್ಮನಹಳ್ಳಿ ತಾಲೂಕಿನ ಹಣಸಿ ಗ್ರಾಮದ ಶಿವಮೂರ್ತಿ ಎಂಬವರು ಹೊಯಿಗೆ ವ್ಯವಹಾರಕ್ಕೆಂದು 90 ಲಕ್ಷ ರೂ.ಸಾಲವಾಗಿ ಪಡೆದುಕೊಂಡು 1 ವರ್ಷದಲ್ಲಿ ಲಾಭಾಂಶ ಸಮೇತ ಹಿಂತಿರುಗಿಸುವುದಾಗಿ ತಿಳಿಸಿದ್ದರು. ಆ ಬಳಿಕ ಶಿವಮೂರ್ತಿ 25 ಲಕ್ಷ, 15 ಲಕ್ಷ ಮತ್ತು 50 ಲಕ್ಷದ ಚೆಕ್ ನೀಡಿದ್ದರು. ಸದ್ರಿ ಚೆಕ್‌ಗಳು ಹಣವಿಲ್ಲದ ಕಾರಣ ಬ್ಯಾಂಕ್ ನಿಂದ ತಿರಸ್ಕೃತಗೊಂಡಿತ್ತು. ಸಾಲವಾಗಿ ಪಡೆದ ಹಣವನ್ನು ಹಿಂತಿರುಗಿಸುವಂತೆ ಶಿವಮೂರ್ತಿಯವರಲ್ಲಿ ಕೇಳಿದಾಗ ಬೇರೆ ಬೇರೆ ದಿನಗಳಲ್ಲಿ ಒಟ್ಟು 23.5 ಲಕ್ಷ ರೂ.ವಾಪಸ್ ನೀಡಿದ್ದಾರೆ. ಉಳಿದ 56.5 ಲಕ್ಷವನ್ನು ಸ್ವಲ್ಪ ಸಮಯದ ನಂತರ ಹಿಂತಿರುಗಿಸುವುದಾಗಿ ನಂಬಿಸಿದ್ದರು. ಕೆಲ ದಿನಗಳ ಬಳಿಕ ಹಣ ವಾಪಸ್ ನೀಡದೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡಿ, ನನಗೆ ಬರಬೇಕಾಗಿದ್ದ ಹಣದಲ್ಲಿ 20 ಲಕ್ಷ ರೂ.ಗಳನ್ನು ಪುತ್ತೂರಿನ ಕಹಳೆ ನ್ಯೂಸ್ ಚಾನೆಲ್‌ನ ಶ್ಯಾಮಸುದರ್ಶನ್ ಭಟ್ ಮತ್ತು ನವೀನ್ ರೈ ಕೈಕಾರ ಎಂಬವರಿಗೆ ನೀಡಿದ್ದು ಅವರಿಂದ ಪಡೆದುಕೊಳ್ಳಿ ಎಂದು ತಿಳಿಸಿದ್ದಾರೆ ಎಂದು ಶಿವಮೂರ್ತಿ ಹೇಳಿರುವುದಾಗಿ ಶೇಖರ್ ನೀಡಿದ್ದ ದೂರಿನಲ್ಲಿ ಆರೋಪಿಸಲಾಗಿದೆ.
ವಿದೌಟ್ ಪ್ರೂಫ್-ಎಲಿಗೇಶನ್-ಶ್ಯಾಮಸುದರ್ಶನ್ ಭಟ್:
ಶ್ಯಾಮಸುದರ್ಶನ ಭಟ್ ಮತ್ತು ನವೀನ್ ರೈ ಕೈಕಾರ ಅವರಲ್ಲಿ 20 ಲಕ್ಷ ರೂ.ಕೊಟ್ಟಿರುವುದಾಗಿ ಶಿವಮೂರ್ತಿಯವರು ಹೇಳಿದ್ದಾರೆ ಎಂದು ಶೇಖರ್ ಅವರು ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಆದರೆ ಶ್ಯಾಮಸುದರ್ಶನ್ ಯಾರೆಂದೇ ನನಗೆ ಗೊತ್ತಿಲ್ಲ. ಈ ಕ್ಷಣದವರೆಗೆ ನನ್ನ ಮತ್ತು ಅವರ ನಡುವೆ ಯಾವುದೇ ಸಂಭಾಷಣೆ ನಡೆದಿಲ್ಲ. ಬೇರೆ ಯಾವುದೇ ಸಂಪರ್ಕವಿಲ್ಲ ಎಂದು ಶಿವಮೂರ್ತಿಯವರೇ ಸ್ಪಷ್ಟವಾಗಿ ಹೇಳಿದ್ದಾರೆ. ಮತ್ತು ಈ ಕುರಿತು ಅವರು ಲಿಖಿತ ಹೇಳಿಕೆ ನೀಡಿದ್ದು ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ನನ್ನ ವಿರುದ್ಧ ವಿದೌಟ್ ಪ್ರೂಫ್-ಎಲಿಗೇಶನ್ ಮಾಡಲಾಗಿದೆ ಎಂದು ಶ್ಯಾಮಸುದರ್ಶನ್ ಭಟ್ ಸ್ಪಷ್ಟನೆ ನೀಡಿದ್ದಾರೆ.
ವಂಚನೆ ಹಗರಣ ಬಯಲಿಗೆಳೆದ ದ್ವೇಷದಿಂದ ಸುಳ್ಳು ದೂರು-ನವೀನ್ ರೈ:
ಬನ್ನೂರು ನಿವಾಸಿ ಶೇಖರ್ ಎನ್.ಪಿ.ಮಾಡಿರುವ ಕೋಟಿ ರೂ.ಗಳ ವಂಚನೆಯನ್ನು ನಾನು ಬಯಲಿಗೆಳೆದ ದ್ವೇಷದಿಂದ ನನ್ನ ವಿರುದ್ಧ ಸುಳ್ಳು ಆರೋಪ ಹೊರಿಸಿ ದೂರು ನೀಡಲಾಗಿದೆ. ಆತನ ವಿರುದ್ಧ ಕೊಟ್ಟೂರು ಠಾಣೆಯಲ್ಲಿ ಎಫ್ಐಆರ್ ದಾಖಲಾದ ಬಳಿಕ ಇಲ್ಲಿ ಬಂದು ಸುಳ್ಳು ದೂರು ನೀಡಿದ್ದಾರೆ. ಈ ಮೊದಲು ಆತ ನನ್ನ ಭಾವಚಿತ್ರವನ್ನು ಎಡಿಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ರವಾನೆ ಮಾಡಿದ್ದು ಇದೆಲ್ಲವೂ ವೈಯಕ್ತಿಕ ದ್ವೇಷದಿಂದ ಮಾಡಿದ್ದು ಇದರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ನವೀನ್ ರೈ ಕೈಕಾರ ಹೇಳಿದ್ದಾರೆ.