ಅರಿಯಡ್ಕ:ಸೆಲ್ಕೋ ಸೋಲಾರ್ ಲೈಟ್ ಹಾಗೂ ಸೋಲಾರ್ ಆಧಾರಿತ ಸ್ವ- ಉದ್ಯೋಗ ತರಬೇತಿ ಕಾರ್ಯಾಗಾರ

0

ಪುತ್ತೂರು: ಅರಿಯಡ್ಕ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ,ಮಂಗಳೂರು ಪ್ರಯೋಜಕರು ಬ್ಯಾಂಕ್ ಆಫ್ ಬರೋಡ, ವಿಜಯ ಗ್ರಾಮೀಣಾಭಿವೃದ್ಧಿ ಸಮಿತಿ ಅರಿಯಡ್ಕ, ಇದರ ವತಿಯಿಂದ ಗ್ರಾಮದ ಜನತೆಗೆ ಸೆಲ್ಕೋ ಸೋಲಾರ್ ಲೈಟ್ ಹಾಗೂ ಸೋಲಾರ್ ಆಧಾರಿತ ಸ್ವ- ಉದ್ಯೋಗ ತರಬೇತಿ ಕಾರ‍್ಯಾಗಾರ ಅ.24 ರಂದು ಪಾಪೆಮಜಲು ಅಮ್ಮಣ್ಣ ರೈ.ಡಿ ಯವರ ಮನೆಯಲ್ಲಿ ಜರಗಿತು.


ಕಾರ‍್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ವಿ.ಆರ್.ಡಿ.ಎಫ್ ಮಂಗಳೂರು ಇದರ ಕಾರ‍್ಯಕಾರಿಣಿ ಸದಸ್ಯ ಕಡಮಜಲು ಸುಭಾಶ್ ರೈ ಮಾತಾಡಿ ವಿಜಯ ಬ್ಯಾಂಕ್, ಕೃಷಿಕರ ಬ್ಯಾಂಕ್ ಇದೀಗ ಮೂರು ಬ್ಯಾಂಕ್‌ಗಳು ವಿಲೀನ ಹೊಂದಿ ಬ್ಯಾಂಕ್ ಆಫ್ ಬರೋಡ ಆಗಿದೆ. ಗ್ರಾಮೀಣಾಭಿವೃದ್ಧಿ ಆಗಬೇಕೆಂಬ ಸುಂದರರಾಮ್ ಶೆಟ್ರ ಕನಸು ನನಸಾಗಿದೆ. ಇಂದು ವಿಜಯ ಗ್ರಾಮೀಣಾಭಿವೃದ್ಧಿ ಸಮಿತಿಯಲ್ಲಿ 4500 ಸದಸ್ಯರಿದ್ದಾರೆ. ನಮ್ಮ ಉದ್ದೇಶ ಗ್ರಾಮೀಣಾಭಿವೃದ್ಧಿ. ನಾವೆಲ್ಲರೂ ಬ್ಯಾಂಕಿನ ಗ್ರಾಹಕರು ಇಂದು ನಮಗೆ ಬೇಕಾದ ವಿದ್ಯುತ್‌ನ್ನು ಸೋಲಾರ್ ಅಳವಡಿಕೆಯ ಮೂಲಕ ನಾವೇ ಉತ್ಪಾದನೆ ಮಾಡಬಹುದು. ಯೋಚನೆ, ಆಲೋಚನೆ ಸಮರ್ಪಕವಾಗಿದ್ದಾಗ ಯೋಜನೆಗಳು ಕಾರ‍್ಯರೂಪಕ್ಕೆ ಬರುತ್ತವೆ. ಬ್ಯಾಂಕುಗಳು ಮತ್ತು ಕೃಷಿಕನ ಸಂಬಂಧ ಉತ್ತಮ ಇದ್ದಾಗ ಪ್ರಗತಿ ಸಾಧಿಸಬಹುದೆಂದು ಹೇಳಿದರು.


ಮುಖ್ಯ ಅತಿಥಿಯಾಗಿ ಸೆಲ್ಕೋ ಲೈಟ್ ಪುತ್ತೂರು ಇದರ ಏರಿಯಾ ಮ್ಯಾನೇಜರ್ ಸಂಜಿತ್ ರೈ ಮಾತನಾಡಿ ’ಕತ್ತಲು ಮುಕ್ತ ಗ್ರಾಮ ಆಗಬೇಕೆಂಬುದೇ ಸೆಲ್ಕೋ ಸೋಲಾರ್ ಉದ್ದೇಶ’. ಮಾನವನ ಕುಲಕಸುಬುಗಳ ಮುಖೇನ ರೈತರಿಗೆ ಸೋಲಾರ್ ಅಳವಡಿಸಲು ನಾನಾ ರೀತಿಯ ಯೋಜನೆಗಳು ಸೆಲ್ಕೋ ಸೋಲಾರ್‌ನಲ್ಲಿದೆ. ರೈತತನ ಜೊತೆ ಸದಾ ನಾವಿದ್ದೇವೆ ಎಂದು ಶುಭಾ ಹಾರೈಸಿದರು.


ಸಂಪನ್ಮೂಲ ವ್ಯಕ್ತಿ ಸೆಲ್ಕೋ ಲೈಟ್ ಹಾಸನ ಇದರ ಏರಿಯಾ ಮ್ಯಾನೇಜರ್ ಪ್ರಸಾದ್.ಬಿ ಮಾಹಿತಿ ನೀಡಿ ಆರೋಗ್ಯ, ವಿದ್ಯಾಭ್ಯಾಸ, ಜೀವನಾಧಾರಿತ ಸ್ವ-ಉದ್ಯೋಗಕ್ಕೆ ಸೌರಶಕ್ತಿಯ ಮಖೇನ ಗುಣಮಟ್ಟದ ವಿದ್ಯುತ್‌ನ್ನು ಒದಗಿಸುವ ನಿಟ್ಟಿನಲ್ಲಿ ಸೆಲ್ಕೋ ಸೋಲಾರ್ ಕಾರ‍್ಯಪ್ರವೃತವಾಗಿದೆ.ಸೆಲ್ಕೋ ಒಂದು ಸಾಮಾಜಿಕ ಉದ್ಯಮವಾಗಿದ್ದು, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಹಕರ ಅವಶ್ಯಕತೆಗಳಿಗೆ ಅನುಸಾರವಾದ ವಿನ್ಯಾಸದೊಂದಿಗೆ ವಿಶ್ವಾಸಾರ್ಹ, ಕೈಗೆಟುಕುವ ಬೆಲೆಯಲ್ಲಿ ಹಾಗೂ ಪರಿಸರ ಸ್ನೇಹಿ ವಿದ್ಯುತ್ ಶಕ್ತಿ ಸೌಲಭ್ಯಗಳನ್ನು ಮನೆಗಳು, ವ್ಯಾಪಾರಿ ಕೇಂದ್ರಗಳು, ಶಾಲೆಗಳು, ಆಸ್ಪತ್ರೆಗಳು, ಕಛೇರಿಗಳು ಹಾಗೂ ಹೋಟೆಗಳಿಗೆ ಒದಗಿಸುತ್ತದೆ. ಬ್ಯಾಂಕುಗಳು ಮತ್ತು ಸಣ್ಣ ಹಣಕಾಸು ಸಂಸ್ಥೆಗಳಿಂದ ಸೌರಶಕ್ತಿ ಬಳಕೆಗೆ ಆರ್ಥಿಕ ಸೌಲಭ್ಯ ಹಾಗೂ ಉನ್ನತ ಗುಣಮಟ್ಟದ ಪರಿಹಾರ ಮಾರ್ಗಗಳ ಸೇವೆಗಳನ್ನು ತಮ್ಮ ಮನೆ ಬಾಗಿಲಿಗೆ ತಲುಪಿಸುವ ಸಂಸ್ಥೆಯಗಿದೆ ಎಂದು ಹೇಳಿದರು.


ಸಭಾಧ್ಯಕ್ಷತೆ ವಹಿಸಿದ ವಿ.ಡಿ.ಸಿ ಅರಿಯಡ್ಕ ಇದರ ಅಧ್ಯಕ್ಷ ಅಮ್ಮಣ್ಣ ರೈ.ಡಿ ಪಾಪೆಮಜಲು ಮಾತನಾಡಿ ವಿಜಯ ಗ್ರಾಮೀಣಾಭಿವೃದ್ಧಿ ಸಮಿತಿ ಜನತೆಗೆ ವಿವಿಧ ಕಾರ‍್ಯಕ್ರಮಗಳನ್ನು ಅಳವಡಿಸಿಕೊಂಡು ಉತ್ತಮ ಸೇವೆ ನೀಡುತ್ತಿದೆ. ಗ್ರಾಮದಲ್ಲಿ ಹೊಸದಾಗಿ ಸಮಿತಿಯನ್ನು ರಚಿಸಿದ್ದೇವೆ. ಗ್ರಾಮದ ಹೆಚ್ಚಿನ ಸಂಖ್ಯೆಯ ಜನರು ನಮ್ಮ ಜೊತೆ ಕೈ ಜೋಡಿಸಿ ಗ್ರಾಮದ ಅಭಿವೃದ್ದಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.


ಕಾರ‍್ಯಕ್ರಮದಲ್ಲಿ ಕೆಯ್ಯೂರು ವಿ.ಡಿ.ಸಿ ಯ ಅಧ್ಯಕ್ಷ ರಮೇಶ್ ರೈ ಬೊಳೊಡಿ, ಕಾರ‍್ಯದರ್ಶಿ ವಿಶ್ವನಾಥ ಪೂಜಾರಿ ಕಂಗೆಡೇಲು ಕೆಯ್ಯೂರು, ಕೆದಂಬಾಡಿ ರಬ್ಬರ್ ಬೋರ್ಡಿನ ಅಧ್ಯಕ್ಷ ಎ.ಕೆ. ಜಯರಾಮ ರೈ, ವಿ.ಆರ್.ಡಿ.ಎಂ ಮಂಗಳೂರು ಇದರ ಕಾರ‍್ಯಕಾರಿಣಿ ಸದಸ್ಯ ಜಯಪ್ರಕಾಶ್ ರೈ ನೂಜಿಬೈಲು, ಶ್ರೀಕೃಷ್ಣ ಭಜನಾ ಮಂದಿರ ಕೌಡಿಚ್ಚಾರು ಇದರ ಅಧ್ಯಕ್ಷ ರಾಮದಾಸ ರೈ ಮದ್ಲ, ಅರಿಯಡ್ಕ ಗ್ರಾ.ಪಂ. ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಉಪಾಧ್ಯಕ್ಷೆ ಮೀನಾಕ್ಷಿ ಪಾಪೆಮಜಲು, ಕೆದಂಬಾಡಿ ವಿ.ಡಿ.ಸಿ. ಅಧ್ಯಕ್ಷ ವಿಜಯಕುಮಾರ್ ಕೋರಂಗ, ವಿ.ಡಿ.ಸಿ ಅರಿಯಡ್ಕ ಇದರ ಖಜಾಂಜಿ ನಾರಾಯಣ ನಾಯ್ಕ ಚಾಕೋಟೆ, ಅರಿಯಡ್ಕ ಗ್ರಾಮ ಪಂಚಾಯತ್ ಸದಸ್ಯರಾದ ಭಾರತಿ ವಸಂತ್ ಕೌಡಿಚ್ಚಾರು ಮತ್ತು ಪುಷ್ಪಲತಾ ಮರತ್ತಮೂಲೆ, ಸರಕಾರಿ ಪ್ರೌಢಶಾಲೆ ಪಾಪೆಮಜಲು ಇದರ ಕಾರ್ಯಧ್ಯಕ್ಷ ಇಕ್ಬಾಲ್ ಹುಸೇನ್ ಕೌಡಿಚ್ಚಾರು ಹಾಗೂ ವಿ.ಡಿ.ಸಿ. ಅರಿಯಡ್ಕ ಇದರ ಸದಸ್ಯರು, ಸೆಲ್ಕೋ ಸೋಲಾರ್ ಪ್ರೈ.ಲಿ. ಸಿಬ್ಬಂದಿಗಳು, ನಾಗರಿಕ ಬಂಧುಗಳು ಉಪಸ್ಥಿತರಿದ್ದರು.


ವಿ.ಡಿ.ಸಿ. ಅರಿಯಡ್ಕ ಇದರ ಪ್ರ.ಕಾರ‍್ಯದರ್ಶಿ ತಿಲಕ್ ರೈ ಕುತ್ಯಾಡಿ ಸ್ವಾಗತಿಸಿ, ಕಾರ‍್ಯಕ್ರಮ ನಿರೂಪಿಸಿದರು. ಅಸ್ಮಿ ಪಾಪೆಮಜಲು ಪ್ರಾರ್ಥಿಸಿ, ಸೆಲ್ಕೋ ಲೈಟ್ ಪುತ್ತೂರು ಶಾಖೆಯ ವ್ಯವಸ್ಥಾಪಕ ಸುಧಾಕರ ಆಳ್ವ ವಂದಿಸಿದರು.

LEAVE A REPLY

Please enter your comment!
Please enter your name here