ಬಿಜೆಪಿ ಟಿಕೆಟ್ ಕೊಡಿಸುವುದಾಗಿ 2.03 ಕೋಟಿ ರೂ.ವಂಚನೆ-ಪಿಎಂಎಲ್ ಕಾಯ್ದೆಯಡಿ ತನಿಖೆ ನಡೆಸಲು ಈಡಿಗೆ ದೂರು

0

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ಅವರಿಂದ ದೂರು
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ತುರ್ತು ತನಿಖೆ ನಡೆಸಲು ಆಗ್ರಹ

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ಹೇಳಿ 2.03 ಕೋಟಿ ರೂ.ಹಣ ಪಡೆದು ವಂಚಿಸಿರುವ ಪ್ರಕರಣ, ಅಕ್ರಮ ಹಣ ವರ್ಗಾವಣೆಯಾಗಿರುವುದರಿಂದ ಪಿಎಂಎಲ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ಅವರು ಜಾರಿ ನಿರ್ದೇಶನಾಲಯ(ಈಡಿ)ಕ್ಕೆ ದೂರು ನೀಡಿದ್ದಾರೆ.

ವಂಚನೆಗೊಳಗಾದ ಸಿ.ಶಿವಮೂರ್ತಿ ಎಂಬವರು ಈಗಾಗಲೇ ವಿಜಯನಗರ ಜಿಲ್ಲೆಯ ಕೊಟ್ಟೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಬಿಜೆಪಿ ಮುಖಂಡರಾದ ರೇವಣಸಿದ್ದಪ್ಪ ಹಾಗೂ ಎನ್.ಪಿ.ಶೇಖರ್ ಎಂಬವರು ಹಗರಿಬೊಮ್ಮನಹಳ್ಳಿಯ ಮೀಸಲು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಹಂತ ಹಂತವಾಗಿ ತನ್ನಿಂದ 2 ಕೋಟಿ 3 ಲಕ್ಷ ರೂ. ಪಡೆದಿರುವ ಬಗ್ಗೆ ಶಿವಮೂರ್ತಿಯವರು ದೂರಿನಲ್ಲಿ ಆರೋಪಿಸಿದ್ದಾರೆ.ಈ ಹಿನ್ನೆಲೆಯಲ್ಲಿ, ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಬೇಕೆಂದು ಎಸ್.ಮನೋಹರ್ ದೂರಿನಲ್ಲಿ ಒತ್ತಾಯಿಸಿದ್ದಾರೆ.ರಾಜ್ಯ ಬಿಜೆಪಿ ಘಟಕದ ಪ್ರಮುಖ ನಾಯಕರು ಈ ಹಣ ವರ್ಗಾವಣೆಯಲ್ಲಿ ಭಾಗಿಯಾಗಿದ್ದಾರೆಂದು ದೂರುದಾರರು ನೀಡಿರುವ ಹೇಳಿಕೆಯ ಹಿನ್ನೆಲೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತುರ್ತಾಗಿ ತನಿಖೆ ನಡೆಸಿ ಮಾಹಿತಿ ಒದಗಿಸಬೇಕೆಂದು ದೂರಿನಲ್ಲಿ ಎಸ್.ಮನೋಹರ್ ಮನವಿ ಮಾಡಿದ್ದಾರೆ.

ಸಿ.ಶಿವಮೂರ್ತಿ ತಂದೆ ಬಸಪ್ಪ, (ನಿವೃತ್ತ ಸಹಾಯಕ ಅಭಿಯಂತರರು ಪಿಡಬ್ಲ್ಯೂಡಿ)ವಾಸ ಹನಸಿ ಗ್ರಾಮ, ಹಗರಿಬೊಮ್ಮನಹಳ್ಳಿ ತಾಲೂಕು, ಹಾಲಿ ವಾಸ ಬಸವೇಶ್ವರನಗರ ಕೊಟ್ಟೂರುಪಟ್ಟಣ ವಿಜಯನಗರ ಎಂಬವರು ನೀಡಿರುವ ದೂರಿನ ಮೇರೆಗೆ ರೇವಣಸಿದ್ಧಪ್ಪ ಬೆನಕನಹಳ್ಳಿ ಮತ್ತು ಶೇಖರ್ ಎನ್.ಪಿ.(ಪುರುಷೋತ್ತಮ ನರ‍್ಲಕಟ್ಟೆರವರ ಮಗ)ಪುತ್ತೂರು ಟೌನ್ ಎಂಬವರ ವಿರುದ್ಧ ಈಗಾಗಲೇ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆನಕನಹಳ್ಳಿ ಗ್ರಾಮದ ಬಿಜೆಪಿ ಮುಖಂಡರಾದ ರೇವಣ್ಣ ಸಿದ್ಧಪ್ಪ ಎಂಬವರು ನನ್ನನ್ನು ಪರಿಚಯ ಮಾಡಿಕೊಂಡು ಕೊಟ್ಟೂರು ಪಟ್ಟಣದಲ್ಲಿರುವ ನನ್ನ ಮನೆಗೆ ಬಂದು, ತನಗೆ ಕರ್ನಾಟಕ ರಾಜ್ಯದ ಬಿಜೆಪಿ ಪಕ್ಷದ ಹಿರಿಯ ಮುಖಂಡರುಗಳ ಪರಿಚಯ ಇದೆ ಎಂದು ಹೇಳಿ, ಮುಖಂಡರ ಜೊತೆ ತೆಗೆಸಿಕೊಂಡಿರುವ ಫೊಟೋಗಳನ್ನು ತೋರಿಸಿ, 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಎಂ.ಎಲ್.ಸಿ ಟಿಕೆಟ್‌ನ್ನು ನಿಮಗೆ ಕೊಡಿಸುತ್ತೇನೆ.ನೀವು ಟಿಕೆಟ್ ಪಡೆಯಲು ಯೋಗ್ಯರು ಎಂದು ಹೇಳಿ ನಂಬಿಸಿ, ರೇವಣ್ಣ ಸಿದ್ಧಪ್ಪರವರು ತನ್ನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಹೊಟೇಲ್ ಒಂದರಲ್ಲಿ ಪುತ್ತೂರಿನ ಬಿಜೆಪಿ ಮುಖಂಡರಾದ ಆರೋಪಿ ಎನ್.ಪಿ.ಶೇಖರ್‌ರವರನ್ನು ಪರಿಚಯಿಸಿದ್ದರು.ರೇವಣ್ಣ ಸಿದ್ಧಪ್ಪ ಮತ್ತು ಎನ್.ಪಿ.ಶೇಖರ್ ಇಬ್ಬರೂ ಸೇರಿ ನನಗೆ 2023ರ ವಿಧಾನಸಭಾ ಚುನಾವಣೆಯಲ್ಲಿ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಎಸ್.ಸಿ.ಮೀಸಲು ಕ್ಷೇತ್ರದ ಬಿಜೆಪಿ ಟೆಕೆಟ್ ಕೊಡಿಸುವುದಾಗಿ ನಂಬಿಸಿ 9-10-2022ರಿಂದ 30-04-3023ರ ಮಧ್ಯದ ಅವಧಿಯಲ್ಲಿ ಒಟ್ಟು 2 ಕೋಟಿ 03 ಲಕ್ಷ ರೂ.ಹಣವನ್ನು ಪಡೆದುಕೊಂಡಿದ್ದರು.

ಬಳಿಕ ಟಿಕೆಟ್ ಕೊಡಿಸದೆ ವಂಚನೆ ಮಾಡಿದ್ದು ಹಣವನ್ನು ವಾಪಸ್ ಕೊಡುವಂತ ಕೇಳಿದ್ದಕ್ಕೆ, ಹಣ ಕೊಡುವಂತೆ ಪೀಡಿಸಿದರೆ ನಿನಗೆ ಉಳಿಸುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾರೆಎಂದು ಶಿವಮೂರ್ತಿಯವರು ಕೊಟ್ಟೂರು ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.ಈ ಪ್ರಕರಣದ ಆರೋಪಿಯಾಗಿರುವ ಎನ್.ಪಿ.ಶೇಖರ್ ಯಾನೆ ರಾಜಶೇಖರ್ ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅರುಣ್ ಕುಮಾರ್ ಪುತ್ತಿಲ ಅವರ ಜೊತೆ ಗುರುತಿಸಿಕೊಂಡಿದ್ದು, ಪುತ್ತಿಲ ಅವರ ಪ್ರಚಾರ ಸಭೆಗಳಲ್ಲಿ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು.ಶಿವಮೂರ್ತಿಯವರು ನೀಡಿರುವ ದೂರಿನಲ್ಲಿ ಈತನನ್ನು ಪುತ್ತೂರಿನ ಬಿಜೆಪಿ ಮುಖಂಡ ಎಂದು ಉಲ್ಲೇಖಿಸಲಾಗಿದೆ.
ಪುತ್ತೂರು ಪೊಲೀಸರಿಗೆ ಎನ್.ಪಿ.ಶೇಖರ್ ದೂರು: ತನ್ನ ವಿರುದ್ಧ ಕೊಟ್ಟೂರು ಠಾಣೆಗೆ ದೂರು ನೀಡಿದ ಬೆನ್ನಲ್ಲೇ ಎನ್.ಪಿ.ಶೇಖರ್ ಅವರು ಸಿ.ಶಿವಮೂರ್ತಿ, ಪುತ್ತೂರುನ ಶ್ಯಾಮಸುದರ್ಶನ ಭಟ್ ಮತ್ತು ನವೀನ್ ರೈ ಕೈಕಾರ ಎಂಬವರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರೊಂದನ್ನು ನೀಡಿ, 90 ಲಕ್ಷ ರೂ.ಸಾಲ ಪಡೆದು ಪೂರ್ಣ ಹಿಂತಿರುಗಿಸದೆ ವಂಚನೆ ಮಾಡಿರುವುದಲ್ಲದೆ, ಅವಾಚ್ಯವಾಗಿ ಬೈದು ಜೀವಬೆದರಿಕೆಯೊಡ್ಡಿರುವುದಾಗಿ ಆರೋಪಿಸಿದ್ದರು.

2022ನೇ ಫೆಬ್ರವರಿ ತಿಂಗಳಲ್ಲಿ ವಿಜಯನಗರ ಜಿಲ್ಲೆಯ ಬೊಮ್ಮನಹಳ್ಳಿ ತಾಲೂಕಿನ ಹಣಸಿ ಗ್ರಾಮದ ಶಿವಮೂರ್ತಿ ಎಂಬವರು ಹೊಯಿಗೆ ವ್ಯವಹಾರಕ್ಕೆಂದು ತನ್ನಿಂದ 90 ಲಕ್ಷ ರೂ.ಸಾಲವಾಗಿ ಪಡೆದುಕೊಂಡು 1 ವರ್ಷದಲ್ಲಿ ಲಾಭಾಂಶ ಸಮೇತ ಹಿಂತಿರುಗಿಸುವುದಾಗಿ ತಿಳಿಸಿದ್ದರು.ಆ ಬಳಿಕ ಶಿವಮೂರ್ತಿಯವರು 25 ಲಕ್ಷ, 15 ಲಕ್ಷ ಮತ್ತು 50 ಲಕ್ಷದ ಚೆಕ್ ನೀಡಿದ್ದರು.ಸದ್ರಿ ಚೆಕ್‌ಗಳು ತಿರಸ್ಕೃತಗೊಂಡಿದ್ದು ಸಾಲವಾಗಿ ಪಡೆದ ಹಣವನ್ನು ಹಿಂತಿರುಗಿಸುವಂತೆ ಶಿವಮೂರ್ತಿಯವರಲ್ಲಿ ಕೇಳಿದಾಗ ಬೇರೆ ಬೇರೆ ದಿನಗಳಲ್ಲಿ ಒಟ್ಟು 23.5 ಲಕ್ಷ ರೂ.ವಾಪಸ್ ನೀಡಿದ್ದಾರೆ.ಉಳಿದ 56.5 ಲಕ್ಷವನ್ನು ಸ್ವಲ್ಪ ಸಮಯದ ನಂತರ ಹಿಂತಿರುಗಿಸುವುದಾಗಿ ನಂಬಿಸಿದ್ದರು.

ಕೆಲ ದಿನಗಳ ಬಳಿಕ ಹಣ ವಾಪಸ್ ನೀಡದೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡಿ, ನನಗೆ ಬರಬೇಕಾಗಿದ್ದ ಹಣದಲ್ಲಿ 20 ಲಕ್ಷ ರೂ.ಗಳನ್ನು ಪುತ್ತೂರಿನ ಕಹಳೆ ನ್ಯೂಸ್ ಚಾನೆಲ್‌ನ ಶ್ಯಾಮಸುದರ್ಶನ್ ಭಟ್ ಮತ್ತು ನವೀನ್ ರೈ ಕೈಕಾರ ಎಂಬವರಿಗೆ ನೀಡಿದ್ದು ಅವರಿಂದ ಪಡೆದುಕೊಳ್ಳಿ ಎಂದು ತಿಳಿಸಿದ್ದಾರೆ ಎಂದು ಶಿವಮೂರ್ತಿಯವರು ಹೇಳಿರುವುದಾಗಿ ಎನ್.ಪಿ.ಶೇಖರ್ ನೀಡಿದ್ದ ದೂರಿನಲ್ಲಿ ಆರೋಪಿಸಲಾಗಿದೆ.ತಮ್ಮ ವಿರುದ್ಧದ ಆರೋಪಕ್ಕೆ ಸಂಬAಧಿಸಿ ಶ್ಯಾಮಸುದರ್ಶನ ಭಟ್ ಮತ್ತು ನವೀನ್ ರೈ ಕೈಕಾರ ಅವರು ಈಗಾಗಲೇ ಸ್ಪಷ್ಟನೆಯನ್ನೂ ನೀಡಿದ್ದಾರೆ.

LEAVE A REPLY

Please enter your comment!
Please enter your name here