ವಿಟ್ಲ: ಕದ್ದ ಮಾಲನ್ನು ಆಟೋ ರಿಕ್ಷಾವೊಂದರಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರನ್ನು ತಂಡವೊಂದು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ವಿಟ್ಲ- ಸಾಲೆತ್ತೂರು ರಸ್ತೆಯ ಕಡಂಬು ಎಂಬಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಸಾಲೆತ್ತೂರು ಗ್ರಾಮದ ಮೆದು ನಿವಾಸಿ ಸಿದ್ದಿಕ್ ಹಾಗೂ ಆತನೊಂದಿಗಿದ್ದ ಇಬ್ಬರು ಪೊಲೀಸರ ವಶವಾಗಿದ್ದಾರೆ. ಸಿದ್ದಿಕ್ ಹಾಗೂ ಬಿಹಾರ ಮೂಲದ ಓರ್ವ ಹಾಗೂ ಜಾರ್ಖಂಡ್ ಮೂಲದ ಓರ್ವ ಸೇರಿಕೊಂಡು ರಾತ್ರಿ ವೇಳೆ ಕನ್ಯಾನ ಸಮೀಪ ಜೆಸಿಬಿ ಬಿಡಿಭಾಗಗಳನ್ನು ಕಳವು ಮಾಡಿದ್ದರು. ಆ ಬಳಿಕ ಅದನ್ನು ಮಾರಾಟ ಮಾಡಲೆಂದು ವಿಟ್ಲದ ಗುಜಿರಿ ಅಂಗಡಿ ಬಳಿ ತಲುಪಿದಾಗ ಕಳವುಗೈದ ವಸ್ತುಗಳನ್ನು ಹುಡುಕಿಕೊಂಡು ತಂಡವೊಂದು ಅಲ್ಲಿಗೆ ಬಂದಿತ್ತು. ಈ ಬಗ್ಗೆ ಮಾಹಿತಿ ಅರಿತ ಸಿದ್ದಿಕ್ ಸಹಿತ ಮೂವರು ಆಟೋದಲ್ಲಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಬೆನ್ನಟ್ಟಿದ ತಂಡ ಆಟೋರಿಕ್ಷಾ ಸಹಿತ ಮೂವರನ್ನೂ ಕಡಂಬು ಸಮೀಪ ಅಡ್ಡಕಟ್ಟಿ ಆಟೋವನ್ನು ಪುಡಿಗೈದು ಅದರಲ್ಲಿದ್ದವರಿಗೆ ಹಲ್ಲೆ ನಡೆಸಿ ವಿಟ್ಲ ಠಾಣಾ ಪೊಲೀಸ್ ವಶಕ್ಕೆ ನೀಡಿದೆ ಎನ್ನಲಾಗಿದೆ. ಕಳವಾದ ಜೆಸಿಬಿ ಬಿಡಿಭಾಗಗಳು ಮರಳಿ ಸಿಕ್ಕಿದ್ದರಿಂದ ಜೆಸಿಬಿ ಮಾಲಕರು ದೂರು ನೀಡದ ಹಿನ್ನೆಲೆಯಲ್ಲಿ ಈ ಬಗ್ಗೆ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.