ಕಡಬ ಪರಿಸರದಲ್ಲಿ ನಿರಂತರ ಕಾಡಾನೆ ಹಾವಳಿ – ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ರೈತ ಹಕ್ಕೊತ್ತಾಯ ಮೆರವಣಿಗೆ, ಸಭೆ

0

ಕಡಬ:ಕಡಬ ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಆನೆ ಹಾಗೂ ಇತರ ಕಾಡು ಪ್ರಾಣಿಗಳ ಉಪಟಳ ಮಿತಿ ಮೀರುತ್ತಿದ್ದು, ಅದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಅ.26ರಂದು ಕಡಬದಲ್ಲಿ ಬೃಹತ್ ಹಕ್ಕೊತ್ತಾಯ ಮೆರವಣಿಗೆ ನಡೆಸಿ ಕಡಬ ತಾಲೂಕು ಆಡಳಿತದ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.

ಮೆರವಣಿಗೆಯ ಬಳಿಕ ತಾಲೂಕು ಆಡಳಿತ ಸೌಧದ ಮುಂಭಾಗ ನಡೆದ ಸಭೆಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್‌ರವರು, ಕಡಬ ತಾಲೂಕಿನ ಹೆಚ್ಚಿನ ಗ್ರಾಮಗಳಲ್ಲಿ ನಡೆಯುವ ಆನೆ ಹಾವಳಿಗೆ ಶಾಶ್ವತ ಪರಿಹಾರ ನೀಡಬೇಕು ಆನೆಗಳನ್ನು ಸ್ಥಳಾಂತರ ಮಾಡಬೇಕು ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರೂ ಸೇರಿದಂತೆ ಜಿಲ್ಲೆಯೆ ಶಾಸಕರು ವಿಧಾನ ಸಭೆಯಲ್ಲಿ ಈಗಾಗಲೇ ಆಗ್ರಹ ಹಾಗೂ ಹಕ್ಕೊತ್ತಾಯವನ್ನು ಮಂಡಿಸಿದ್ದೇವೆ. ಅರಣ್ಯ ಸಚಿವರಿಗೂ ಈ ಕುರಿತು ಮನವಿ ಮಾಡಿದ್ದೇವೆ. ನಮ್ಮ ಮನವಿಗೆ ಸಚಿವರು ಪೂರಕ ಸ್ಪಂದನೆ ನೀಡಿದ್ದಾರೆ ಎಂದರು.
ಮಲೆನಾಡು, ಕರಾವಳಿಯಲ್ಲಿ ಕಾಡಾನೆಗಳ ದಾಳಿಯಿಂದಾಗಿ ರೈತರು ಸಾವನ್ನಪ್ಪುತ್ತಿದ್ದಾರೆ. ಕೃಷಿ ಹಾನಿಯಾಗುತ್ತಲೇ ಇದೆ. ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಒದಗಿಸುವುದು, ರೈತರ ಹಿತ ಕಾಯುವುದು ಸರಕಾರದ ಕರ್ತವ್ಯ. ಯಾವುದೇ ಸರ್ಕಾರ ಬಂದರೂ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಹಾಗಿಲ್ಲ. ಸರಕಾರ ಈಗಾಗಲೇ ಮೂಡಿಗೆರೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಬೇಲಿ ನಿರ್ಮಾಣ ಮಾಡಿ ಆನೆಗಳ ಹಾವಳಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ. ಅದೇ ತಂತ್ರಜ್ಞಾನ ಅಥವಾ ರೈಲ್ವೇ ಕಂಬಿ ಬಳಸಿ ಬೇಲಿ ನಿರ್ಮಾಣ ಮಾಡಿ ಆನೆಗಳಿಗೆ ಕಡಿವಾಣ ಹಾಕಬಹುದಾ ಎಂದು ತಜ್ಞರಲ್ಲಿ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದ ಹರೀಶ್ ಕುಮಾರ್‌ರವರು ಸರಕಾರ ಈ ಭಾಗದ ರೈತರ ಬೇಡಿಕೆಗೆ ಖಂಡಿತಾ ಸ್ಪಂದಿಸುತ್ತದೆ. ನಾನು ನಿಮ್ಮೊಂದಿಗೆ ಇದ್ದೇನೆ. ನಿಮ್ಮ ಹಕ್ಕೊತ್ತಾಯವನ್ನು ಸರಕಾರದ ಮಟ್ಟದಲ್ಲಿ ಚರ್ಚಿಸಿ ಶೀಘ್ರ ಕ್ರಮ ಜರಗಿಸುವಂತೆ ಮಾಡುತ್ತೇನೆ. ಇನ್ನೊಮ್ಮೆ ಹಕ್ಕೊತ್ತಾಯ ಮಂಡನೆಗೆ ಅವಕಾಶವಾಗದಂತೆ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು. ಐತ್ತೂರು-ಮರ್ದಾಳ ಜಾಗೃತ ರೈತ ಕುಟುಂಬಗಳ ಒಕ್ಕೂಟದ ಅಧ್ಯಕ್ಷ ಅತ್ಯಡ್ಕ ನಾರಾಯಣ ಶೆಟ್ಟಿ, ಜಿ.ಪಂ. ಮಾಜಿ ಸದಸ್ಯರಾದ ಪಿ.ಪಿ,ವರ್ಗೀಸ್, ಕೃಷ್ಣ ಶೆಟ್ಟಿ ಕಡಬ, ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ| ಅನಿಲ್ ಈಶೋ ಮತ್ತಿತರರು ಮಾತನಾಡಿ ಸರ್ಕಾರ ಕಾಡಾನೆ ಹಾವಳಿಯಿಂದ ಕಂಗಾಲಾಗಿರುವ ಕೃಷಿಕರ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು. ವಿವಿಧ ಪಕ್ಷದ ಮುಖಂಡರು, ಜನಪ್ರತಿನಿಽಗಳು, ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು. ಕಡಬ ಕೃಷಿ ಪತ್ತಿನ ಸಹಕಾರಿ ಸಂಘದ ಕಚೇರಿಯ ಆವರಣದಿಂದ ಆರಂಭಗೊಂಡ ಮೆರವಣಿಗೆ ಕಡಬದ ಮುಖ್ಯ ರಸ್ತೆಯಲ್ಲಿ ಸಾಗಿ ತಾಲೂಕು ಆಡಳಿತ ಸೌಧದ ಬಳಿ ಸಮಾಪನಗೊಂಡಿತು. ಉಪ ತಹಶಿಲ್ದಾರ್ ಗೋಪಾಲ್ ಕಲ್ಲುಗುಡ್ಡೆ ಮನವಿ ಸ್ವೀಕರಿಸಿದರು. ಒಕ್ಕೂಟದ ಪದಾಽಕಾರಿ ತಮ್ಮಯ್ಯ ಗೌಡ ಮನವಿ ಓದಿದರು. ಉಮೇಶ್ ಶೆಟ್ಟಿ ಸಾಯಿರಾಮ್ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here