ಕಾಮಗಾರಿಗೆ ತಡೆ-ಸಮಸ್ಯೆ ಸರಿಪಡಿಸಲು ಜಿ.ಪಂ. ತಾಕೀತು
ಉಪ್ಪಿನಂಗಡಿ : ಹೆದ್ದಾರಿ ಅಗಲೀಕರಣದ ಕಾಮಗಾರಿಗೆಂದು ನಡೆಯುತ್ತಿರುವ ಕಾಮಗಾರಿಯ ವೇಳೆ ಕುಡಿಯುವ ನೀರಿನ ಪೈಪುಗಳನ್ನು ಹಾನಿಗೊಳಿಸಿದ ಕಾರಣಕ್ಕೆ ಕಳೆದ ನಾಲ್ಕು ದಿನಗಳಿಂದ ನೀರಿಲ್ಲದೆ ಸಂಕಷ್ಠಗೀಡಾದ ಮಂದಿ ಶನಿವಾರದಂದು ಆಕ್ರೋಶಗೊಂಡು ಕಾಮಗಾರಿಗೆ ತಡೆಯೊಡ್ಡಿದ ಘಟನೆ ನಡೆದಿದೆ.
ಉಪ್ಪಿನಂಗಡಿಯ ಕುಡಿಯುವ ನೀರು ಶುದ್ದೀಕರಣ ಘಟಕದಿಂದ ಹಲವೆಡೆಗೆ ಸರಬರಾಜಾಗುವ ನೀರಿನ ಪೈಪುಗಳು ಕಾಮಗಾರಿಯ ವೇಳೆ ತುಂಡರಿಸಲ್ಪಟ್ಟಿದ್ದವು. ಇದನ್ನು ಸರಿಪಡಿಸಬೇಕೆಂದು ಪಂಚಾಯತ್ ಆಡಳಿತ ಕಾಮಗಾರಿ ನಿರತ ಸಂಸ್ಥೆಯ ಅಧಿಕಾರಿಗಳನ್ನು ಒತ್ತಾಯಿಸಿತ್ತು. ಸ್ಪಂದಿಸುವ ಭರವಸೆ ನೀಡಿದ್ದ ಸಂಸ್ಥೆಯ ಅಧಿಕಾರಿಗಳು ಬಳಿಕ ಮೌನವಹಿಸಿದ್ದರಿಂದಾಗಿ ಸತತ ನಾಲ್ಕು ದಿನಗಳ ಕಾಲ ನೀರಿಲ್ಲದೆ ಉಪ್ಪಿನಂಗಡಿ ಪೇಟೆಯ ಜನತೆ ಸಮಸ್ಯೆಗೀಡಾದರು.
ಈ ಮಧ್ಯೆ ಶನಿವಾರದಂದು ಸ್ಥಳೀಯ ನಿವಾಸಿಗರು ಕುಡಿಯುವ ನೀರಿನ ಪೈಪುಗಳನ್ನು ಸರಿಪಡಿಸದೆ ಕಾಮಗಾರಿ ಮುಂದುವರೆಸಲು ಅವಕಾಶ ನೀಡಬಾರದೆಂದು ಒತ್ತಾಯಿಸಿ ಸ್ಥಳದಲ್ಲಿ ಜಮಾಯಿಸಿದರು. ಸ್ಥಳಕ್ಕಾಗಮಿಸಿದ ಪಂಚಾಯತ್ ಉಪಾಧ್ಯಕ್ಷೆ ವಿದ್ಯಾಲಕ್ಷ್ಮಿ ಪ್ರಭು, ಪಂಚಾಯತ್ ಸದಸ್ಯ ಅಬ್ದುಲ್ ರಹಿಮಾನ್ ಕುಡಿಯುವ ನೀರಿನ ಪೈಪುಲೈನ್ ಗಳನ್ನು ಆದ್ಯತೆಯ ಮೇರೆಗೆ ಸರಿ ಪಡಿಸಿಕೊಡಬೇಕೆಂದು ಒತ್ತಾಯಿಸಿದರು.
ಮಾತ್ರವಲ್ಲದೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳನ್ನು ಸಂಪರ್ಕಿಸಿದ ಉಪಾಧ್ಯಕ್ಷೆ ವಿದ್ಯಾಲಕ್ಷ್ಮಿ ಪ್ರಭು , ಸತತ ನಾಲ್ಕು ದಿನಗಳಿಂದ ನೀರಿಲ್ಲದೆ ಜನ ತೀರಾ ಆಕ್ರೋಶಿತಗೊಂಡಿದ್ದು ಕಾಮಗಾರಿಯ ಗುತ್ತಿಗೆ ವಹಿಸಿದ ಸಂಸ್ಥೆಯ ಅಧಿಕಾರಿಗಳನ್ನು ದಿಗ್ಭಂಧನ ಹಾಕುವ ಮಾತುಗಳನ್ನಾಡುತ್ತಿರುವುದರಿಂದ ತಕ್ಷಣ ಸ್ಪಂದಿಸುವಂತೆ ಅಗ್ರಹಿಸಿದರು.
ಎಚ್ಚೆತ್ತ ಜಿಲ್ಲಾಡಳಿತ ಸಂಬಂಧಿತ ಸಂಸ್ಥೆಯ ಅಧಿಕಾರಿಗಳಿಗೆ ಸೂಚನೆ ನೀಡಿ ಸಮಸ್ಯೆಗೆ ಪರಿಹಾರ ಒದಗಿಸಬೇಕೆಂದು ತಾಕೀತು ಮಾಡಿತು. ಅದರಂತೆ ಸಾಯಂಕಾಲದ ವೇಳೆಗೆ ಸ್ಥಳಕ್ಕೆ ಭೇಟಿ ನೀಡಿದ ಕೆಎನ್‌ಆರ್ ಸಂಸ್ಥೆಯ ಅಧಿಕಾರಿಗಳು ಹಾನಿಗೀಡಾದ ಪೈಪುಗಳನ್ನು ಆದಿತ್ಯವಾರದೊಳಗೆ ಸರಿಪಡಿಸುವ ಭರವಸೆ ನೀಡಿದರು . ಹಾಗೂ ಯಾವುದೇ ಕಾಮಗಾರಿ ನಡೆಸುವ ಸಮಯದಲ್ಲಿ ಭೂಮಿಯಲ್ಲಿ ಅಂತರ್ಗತವಾಗಿರುವ ವಸ್ತುಗಳ ಬಗ್ಗೆ ಸ್ಥಳೀಯಾಡಳಿತ ಕಾಮಗಾರಿ ತಂಡಕ್ಕೆ ಪೂರ್ವ ಮಾಹಿತಿ ನೀಡಬೇಕು. ಮಾಹಿತಿ ಇಲ್ಲದೆ ಕಾಮಗಾರಿ ನಡೆಸುವ ಸಮಯದಲ್ಲಿ ಇಂತಹ ಅವಾಂತರಗಳು ಘಟಿಸುವುದು ಸಹಜವಾಗಿರುತ್ತದೆ. ಹಾಗೂ ಹೆದ್ದಾರಿ ಅಗಲೀಕರಣದ ಕಾರಣಕ್ಕೆ ಈಗಾಗಲೇ ಹೆದ್ದಾರಿ ಪ್ರ‍್ರಾಧಿಕಾರ ಸೂಕ್ತ ಪರಿಹಾರ ಧನವನ್ನು ವಿತರಿಸಿದ್ದು, ಪಂಚಾಯತ್ ಪೈಪು ಲೈನ್ ಬಾಬ್ತು ಪರಿಹಾರ ಧನವನ್ನು ಪಾವತಿಸಿದ್ದರೆ, ಪಂಚಾಯತ್ ಆಡಳಿತವೇ ಈ ಮೊದಲೇ ಪರ್ಯಾಯ ಸ್ಥಳದಲ್ಲಿ ಪೈಲು ಲೈನ್ ಗಳನ್ನು ಅಳವಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಾಗಿತ್ತು ಎಂದು ತಿಳಿಸಿದ್ದಾರೆ.
ಲೋಪದಲ್ಲಿ ಪಂಚಾಯತ್ ಪಾತ್ರವೂ ಇದೆ-ಉಪಾಧ್ಯಕ್ಷೆ ವಿದ್ಯಾಲಕ್ಷ್ಮಿ ಪ್ರಭು
ಹೆದ್ದಾರಿ ಅಗಲೀಕರಣದ ಕಾಮಗಾರಿ ನಡೆಯುವ ವೇಳೆ ನಮ್ಮ ಸೊತ್ತುಗಳು ಎಲ್ಲೆಲ್ಲಾ ಹಾದುಹೋಗಿದೆ ಎನ್ನುವ ಬಗ್ಗೆ ಸಂಬಂಧಿತ ಸಂಸ್ಥೆಯ ಅಧಿಕಾರಿಗಳಿಗೆ ಪಂಚಾಯತ್ ಅಧಿಕಾರಿಗಳು ಸೂಕ್ತ ಮಾಹಿತಿ ನೀಡಬೇಕಾಗಿತ್ತು. ಹಾಗೂ ಕಾಮಗಾರಿ ನಡೆಯುವ ಸಮಯದಲ್ಲಿ ಪಂಚಾಯತ್ ಸಿಬ್ಬಂದಿಗಳು ಸ್ಥಳದಲ್ಲಿದ್ದು ಕಾಮಗಾರಿ ನಿರತರೊಂದಿಗೆ ಸಂವಹನ ಹೊಂದಿರಬೇಕಿತ್ತು. ಅದ್ಯಾವುದೂ ಆಗದೆ ಒಂದಷ್ಟು ನಿರ್ಲಕ್ಷ್ಯತೆ ಕಾಣಿಸಿಕೊಂಡ ಕಾರಣದಿಂದ ಸತತ ನಾಲ್ಕು ದಿನ ನೀರಿಲ್ಲದ ಸ್ಥಿತಿ ನಿರ್ಮಾಣವಾಯಿತು. ಅದಕ್ಕಾಗಿ ವಿಷಾದಿಸುತ್ತೇವೆ. ಆದಿತ್ಯವಾರದಿಂದ ಸಮಸ್ಯೆ ಬಗೆಹರಿಸುವ ನಿರೀಕ್ಷೆ ಹೊಂದಿರುತ್ತೇನೆ ಎಂದು ಉಪ್ಪಿನಂಗಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ವಿದ್ಯಾಲಕ್ಷ್ಮಿ ಪ್ರಭು ಪ್ರತಿಕ್ರಿಯಿಸಿದ್ದಾರೆ.