




ನೆಲ್ಯಾಡಿ: ಆಲಂತಾಯ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಶಾರದಾಪೂಜೆ, ಹಿರಿಯ ನಾಗರಿಕರಿಗೆ ಸನ್ಮಾನ ಮತ್ತು ಪೊಲೀಸ್ ಇಲಾಖೆಯಿಂದ ಜಾಗೃತಿ ಮೂಡಿಸುವ ಮಾಹಿತಿ ಕಾರ್ಯಕ್ರಮ ಅ.27ರಂದು ನಡೆಯಿತು.




ಬೆಳಿಗ್ಗೆ ಪೆರ್ಲ ಶ್ರೀ ಷಣ್ಮುಖ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಬಡಿಕ್ಕಿಲ್ಲಾಯರವರ ನೇತೃತ್ವದಲ್ಲಿ ಶಾರದಾ ಪೂಜೆ ನಡೆಯಿತು. ನಂತರ ಶಿವಾರು ರಾಜ ರಾಜೇಶ್ವರಿ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ರವಿ ಬಿ.ಎಸ್.ಅವರು ಮಾದಕ ವಸ್ತುಗಳ ಬಳಕೆ ಹಾಗೂ ಅತಿಯಾದ ಮೊಬೈಲ್ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಿದರು. ಮಕ್ಕಳು ಸುಂದರ ಕನಸ್ಸನ್ನು ಕಾಣಬೇಕು, ಕನಸನ್ನು ನನಸನ್ನಾಗಿ ಮಾಡಲು ಪ್ರಯತ್ನಿಸಬೇಕು. ಗುರುಹಿರಿಯರನ್ನು ಗೌರವಿಸಬೇಕು ಹಾಗೂ ಅಶೀರ್ವಾದ ಪಡೆಯಬೇಕೆಂದು ಹಿತ ನುಡಿಗಳನ್ನು ಹೇಳಿದರು.






ಹಿರಿಯ ನಾಗರಿಕರಿಗೆ ಸನ್ಮಾನ:
ಆಲಂತಾಯ ಗ್ರಾಮದ ಎಂಟು ಮಂದಿ ಹಿರಿಯ ನಾಗರಿಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. 110 ವರ್ಷದ ಸೋಮಪ್ಪ ನಾಯ್ಕ್ ಗುಂಪಕಲ್ಲು ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಉಳಿದಂತೆ ಹಿರಿಯ ನಾಗರಿಕರಾದ ಅಣ್ಣು ನಾಯ್ಕ್ ಶಿವಾರುಕೋಡಿ, ಕಮಲ ಅರಂತಬೈಲು, ಚೆನ್ನಮ್ಮ ಕೆರೆಮೇಲು, ಸೇಸಮ್ಮ ಕೆರೆಮೇಲು, ರುಕ್ಮಿಣಿ ಆಚಾರಿ ಪಾಲೇರಿ, ಕೊರಗೆತ್ತಿ ಪಾಲೇರಿ, ನೀಲಮ್ಮ ಅನಾಲು ಶಿವಾರು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವಿದ್ಯಾರ್ಥಿಗಳಿಗೆ ಸನ್ಮಾನ:
ವಲಯ ಮಟ್ಟದ ಕ್ರೀಡೆಯಲ್ಲಿ ಪ್ರಶಸ್ತಿ ಪಡೆದು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಶಾಲೆಯ ವಿದ್ಯಾರ್ಥಿಗಳಾದ ಪ್ರೀತಂ ಹಾಗೂ ಕೌಶಿಕ್‌ರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಗೋಳಿತ್ತೊಟ್ಟು ಗ್ರಾ.ಪಂ.ಅಧ್ಯಕ್ಷೆ ಸವಿತಾ ಆಲಂತಾಯ, ಉಪಾಧ್ಯಕ್ಷ ಬಾಬು ಪೂಜಾರಿ ಕಿನ್ಯಡ್ಕ, ಸದಸ್ಯರಾದ ಶಿವಪ್ರಸಾದ್, ಪದ್ಮನಾಭ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಸ್‌ಡಿಎಂಸಿ ಅಧ್ಯಕ್ಷ ಅಶೋಕ್ ಸಿ.ಬಿ.ಆಲಂತಾಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕಿ ಲವ್ಲಿಜೋಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿಯರಾದ ನವ್ಯಶ್ರೀ ಸ್ವಾಗತಿಸಿ, ರಶ್ಮಿ ವಂದಿಸಿದರು. ಪ್ರೇಮಾ ನಿರೂಪಿಸಿದರು. ಶಿಕ್ಷಕ ವರ್ಗೀಸ್, ಶಿಕ್ಷಕಿ ವೀಣಾ ಸಹಕರಿಸಿದರು. ಗ್ರಾ.ಪಂ.ಸದಸ್ಯರು, ಎಸ್‌ಡಿಎಂಸಿ ಸದಸ್ಯರು, ಪೋಷಕರು, ಪೂರ್ವ ವಿದ್ಯಾರ್ಥಿಗಳು, ಊರಿನ ನಾಗರಿಕರು, ಶಿಕ್ಷಕವೃಂದದವರು ಹಾಗೂ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.






