ರಾಮಕುಂಜ: ಶ್ರೀ ಶಾರದೋತ್ಸವ ಸಮಿತಿ ರಾಮಕುಂಜ ವಲಯ ಇದರ ವತಿಯಿಂದ 20ನೇ ವರ್ಷದ ಶ್ರೀ ಶಾರದೋತ್ಸವ ಅ.22 ಮತ್ತು 23ರಂದು ರಾಮಕುಂಜ ಶಾರದಾನಗರದಲ್ಲಿ ನಡೆಯಿತು.
ಅ.22ರಂದು ಬೆಳಿಗ್ಗೆ ಶ್ರೀ ಶಾರದಾಂಬಾ ಕಲಾಮಂಟಪದಲ್ಲಿ ಗಣಪತಿ ಹೋಮ ಮತ್ತು ಗೋ ಪೂಜೆ ನಡೆಯಿತು. ಸಂಜೆ ಶ್ರೀ ಶಾರದಾಂಬಾ ಮಂದಿರದಲ್ಲಿ ಶ್ರೀ ಶಾರದಾಂಬೆಯ ಪ್ರತಿಷ್ಠೆ, ಆಹ್ವಾನಿತ ಭಜನಾ ತಂಡಗಳಿಂದ ಭಜನೆ, ರಾತ್ರಿ ಮಹಾಪೂಜೆ, ಪ್ರಸಾದ ಭೋಜನ, ಸ್ಥಳೀಯ ಮಕ್ಕಳು ಮತ್ತು ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಅ.23ರಂದು ಬೆಳಿಗ್ಗೆ ವಾಹನ ಪೂಜೆ, ಮಾರಿ ಚಾಮುಂಡಿ, ಗುಳಿಗ ದೈವಗಳ ತಂಬಿಲ, ವಾಲಿಬಾಲ್ ಪಂದ್ಯಾಟ, ಗಾನಸಿರಿ ಕಲಾಕೇಂದ್ರ ಶಾರದಾನಗರ ಶಾಖೆ ವಿದ್ಯಾರ್ಥಿಗಳಿಂದ ’ ಸುಮಧುರ ಭಕ್ತಿ ಗೀತಾಂಜಲಿ’ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ಭೋಜನ, ರಂಗೋಲಿ ಸ್ಪರ್ಧೆ, ಸಂಜೆ ಸಾಮೂಹಿಕ ದುರ್ಗಾಪೂಜೆ, ರಾತ್ರಿ ಮಹಾಪೂಜೆ ನಡೆಯಿತು.
ಶಾರದಾ ಕಲಾಮಂಟಪ ಉದ್ಘಾಟನೆ:
ಮಾಜಿ ಸಚಿವ ಎಸ್.ಅಂಗಾರ ಅವರ 10 ಲಕ್ಷ ರೂ.,ಅನುದಾನದಲ್ಲಿ ನಿರ್ಮಾಣಗೊಂಡ ಶಾರದಾ ಕಲಾಮಂಟಪವನ್ನು ಅ.23ರಂದು ಉದ್ಘಾಟಿಸಲಾಯಿತು. ಮಾಜಿ ಸಚಿವ ಎಸ್.ಅಂಗಾರ ಅವರು ಉದ್ಘಾಟಿಸಿ ಶುಭಹಾರೈಸಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ನಿಕಟಪೂರ್ವ ಸದಸ್ಯ ದಯಾನಂದ ಕತ್ತಲ್‌ಸಾರ್ ಧಾರ್ಮಿಕ ಉಪನ್ಯಾಸ ನೀಡಿದರು. ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿದ್ದರು. ಶಾರದಾ ಕಲಾಮಂಟಪದ ಗುತ್ತಿಗೆದಾರ ಎಸ್.ಆರ್.ಕೆ ಲ್ಯಾಡರ‍್ಸ್‌ನ ಮಾಲಕ ಕೇಶವ ಅಮೈಯವರನ್ನು ಗೌರವಿಸಲಾಯಿತು. ಶಾರದೋತ್ಸವ ಸಮಿತಿ ಗೌರವಾಧ್ಯಕ್ಷ ಪ್ರದೀಪ್ ಬಾಂತೊಟ್ಟು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗೌರವ ಸಲಹೆಗಾರ ಗಣರಾಜ್ ಕುಂಬ್ಳೆ ಸ್ವಾಗತಿಸಿದರು. ಅಧ್ಯಕ್ಷ ವಾಸುದೇವ ಕುಲಾಲ್ ವಂದಿಸಿದರು. ಶಿಕ್ಷಕ ಜಯಪ್ರಕಾಶ್ ಅಮೈ ಕಾರ್ಯಕ್ರಮ ನಿರೂಪಿಸಿದರು. ಬಳಿಕ ’ಕಲ್ಜಿಗದ ಮಾಯ್ಕಾರೆ ಪಂಜುರ್ಲಿ’ ತುಳು ನಾಟಕ ಪ್ರದರ್ಶನಗೊಂಡಿತು.
ಧಾರ್ಮಿಕ ಸಭೆ:
ಅ.24ರಂದು ಬೆಳಿಗ್ಗೆ ಸರಸ್ವತಿ ಪೂಜೆ, ವಿದ್ಯಾರಂಭ, ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳು, ಭಜನೆ, ಮಧ್ಯಾಹ್ನ ಪ್ರಸಾದ ಭೋಜನ ನಡೆಯಿತು. ಸಂಜೆ ರಾಮಕುಂಜ ಗ್ರಾ.ಪಂ.ಅಧ್ಯಕ್ಷೆ ಸುಚೇತಾ ಬರೆಂಬೆಟ್ಟು ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಿತು. ಅತಿಥಿಗಳಾಗಿದ್ದ ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುಪ್ರಸಾದ್ ರಾಮಕುಂಜ, ರಾಮಕುಂಜ ಗ್ರಾ.ಪಂ.ಉಪಾಧ್ಯಕ್ಷ ಕೇಶವ ಗಾಂದಿಪೇಟೆ ಶುಭಹಾರೈಸಿದರು. ನಿವೃತ್ತ ಸೈನಿಕ ಮಾಯಿಲಪ್ಪ ಪಿ.ಎಸ್., ಕುಣಿತ ಭಜನಾ ಶಿಕ್ಷಕಿ ಉಷಾ ಸುನಿಲ್ ಮೇಲೂರು ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ಮಾಡಲಾಯಿತು.
ಪಲ್ಲಕ್ಕಿ ಮೆರವಣಿಗೆ:
ಸಂಜೆ ವಿವಿಧ ಭಜನಾ ತಂಡಗಳ ಕುಣಿತ ಭಜನೆಯೊಂದಿಗೆ ಶಾರದಾ ನಗರದಿಂದ, ಗೋಳಿತ್ತಡಿ, ಗಣೇಶ ನಗರ ಮೂಲಕ ಆತೂರಿನವರೆಗೆ ಶಾರದಾಂಬೆಯ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಶಾರಾದೋತ್ಸವ ಸಮಿತಿ ಗೌರವಾಧ್ಯಕ್ಷ ಪ್ರದೀಪ್ ಬಾಂತೋಟ್ಟು, ಅಧ್ಯಕ್ಷ ವಾಸುದೇವ ಕುಲಾಲ್, ಕಾರ್ಯದರ್ಶಿ ಆದರ್ಶ್ ಶಾರದನಗರ, ಕೋಶಾಧಿಕಾರಿ ಜಯಪ್ರಕಾಶ್ ಅಮೈ, ಗೌರವ ಸಲಹೆಗಾರಾದ ಗಣರಾಜ ಕುಂಬ್ಳೆ, ಎ.ಎನ್ ಕೊಳಂಬೆ, ರಮೇಶ್ ಎನ್.ಸಿ, ಎಚ್.ವೆಂಕಟೇಶ್ ಭಟ್, ಉಪಾಧ್ಯಕ್ಷರಾದ ಹರೀಶ್ ಕಾಜರುಕ್ಕು, ಅಶೊಕ್ ಕೊಯಿಲ, ಶೇಖರ ಕಟ್ಟಪುಣಿ, ಲಕ್ಷ್ಮೀನಾರಾಯಣ ರಾವ್ ಆತೂರು, ಜೊತೆ ಕಾರ್ಯದರ್ಶಿ ವಿಜಯ ಬರಮೇಲು, ಸಾಂಸ್ಕೃತಿಕ ಕಾರ್ಯದರ್ಶಿ ಸದಾನಂದ ಆಚಾರ್ಯ, ಭಜನಾ ಕಾರ್ಯದರ್ಶಿಗಳಾದ ಗಣೇಶ್ ಕೆದಿಲ, ಸುರೇಶ್ ಇರ್ಕಿ, ಕ್ರೀಡಾ ಕಾರ್ಯದರ್ಶಿ ಯತೀಶ್ ಬರಮೇಲು ಮತ್ತಿತರರು ಉಪಸ್ಥಿತರಿದ್ದರು.