ಮಾಣಿಯಲ್ಲಿ ಎಸ್ ಸಿಡಿಸಿಸಿ ಬ್ಯಾಂಕ್ ನ 113 ನೇ ಶಾಖೆ ಉದ್ಘಾಟನೆ

0

*ಬ್ಯಾಂಕ್ ನ ಮೇಲಿರುವ ಜನರ ಪ್ರೀತಿ ನಮ್ಮ ಸಾಧನೆಯ ರಹದಾರಿ: ಡಾ| ಎಂ.ಎನ್.ರಾಜೇಂದ್ರ ಕುಮಾರ್
*ಆರ್ಥಿಕ ಚಟುವಟಿಕೆಯಲ್ಲಿ ಎಸ್ ಸಿ ಡಿ ಸಿ‌ ಸಿ ಬ್ಯಾಂಕ್ ಬಹುದೊಡ್ಡ ಸಾಧನೆ ಮಾಡಿದೆ: ಬಿ. ರಮಾನಾಥ ರೈ
*ಎಸ್ ಸಿಡಿಸಿಸಿಯಿಂದ ಪಾರದರ್ಶಕ ವ್ಯವಹಾರ ನಡೆಯುತ್ತಿದೆ: ಅಶೋಕ್ ಕುಮಾರ್ ರೈ
*ಜಿಲ್ಲೆಯ ಉತ್ತಮ ಶಾಖೆಯಾಗಿ ಮೂಡಿಬರಲಿ: ಇಬ್ರಾಹಿಂ ಮಾಣಿ

ವಿಟ್ಲ: ಮೊಳಹಳ್ಳಿ ಶಿವರಾಯರು ಪುತ್ತೂರಿನಲ್ಲಿ ಸ್ಥಾಪಿಸಿದ ಕಾರಣ ಇಂದು ದೇಶದ ಉನ್ನತ ಬ್ಯಾಂಕ್ ಆಗಿ ಮೂಡಿ ಬಂದಿದೆ. 22 ಕೋಟಿ ಠೇವಣಿ 1300 ಕ್ಕೂ ಮಿಕ್ಕಿ ಖಾತೆಯನ್ನು ತೆರದು ಬ್ಯಾಂಕ್ ನ ಅಭಿವೃದ್ಧಿಗೆ ಕೊಡುಗೆ ನೀಡುವ ಭರವಸೆ ನೀಡಿದ ಮಾಣಿ ಭಾಗದ ಜನತೆಗೆ ನಾನು ಸದಾ ಚಿರ ಋಣಿಯಾಗಿದ್ದೇನೆ.ಸಹಕಾರ ತತ್ವದಡಿಯಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮದಲ್ಲೂ ಜನಸಾಗರವೇ ಸೇರುವುದಕ್ಕೆ ಕಾರಣ ಸಹಕಾರಿ ಕ್ಷೇತ್ರ ಬೆಳೆದು ನಿಂತ ಬಗ್ಗೆ ತಿಳಿಸುತ್ತದೆ.ಜನರ ಬಳಿಗೆ ಹೋಗಿ ಜನರಿಗೆ ಸೇವೆ ನೀಡುವ ಜನರ ಬ್ಯಾಂಕ್ ಆಗಿ ಪರಿವರ್ತನೆಗೊಂಡಿದೆ ಎಂಬುದು ಸಹಕಾರಿ ಕ್ಷೇತ್ರದ ಹೆಗ್ಗಳಿಕೆಗೆ ಪಾತ್ರವಾಗಿದೆ. ಬ್ಯಾಂಕ್ ನ ಮೇಲಿರುವ ಜನರ ಪ್ರೀತಿ ನಮ್ಮ ಸಾಧನೆಯ ರಹದಾರಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರಾದ ಡಾ| ಎಂ.ಎನ್.ರಾಜೇಂದ್ರ ಕುಮಾರ್ ರವರು ಹೇಳಿದರು.

ಅವರು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ 113ನೇ ಶಾಖೆಯನ್ನು ಅ.31ರಂದು ಮಾಣಿಯ ಶ್ರೀ ಲಕ್ಷ್ಮೀನಾರಾಯಣ ಕಾಂಪ್ಲೆಕ್ಸ್ ನ ಪ್ರಥಮ ಮಹಡಿಯಲ್ಲಿ ಉದ್ಘಾಟಿಸಿ ಮಾತನಾಡಿದರು.

ಅವಿಭಜಿತ ದ.ಕ. ಜಿಲ್ಲೆಯಲ್ಲಿ ಕೃಷಿಕರಿಗೆ ಪೂರಕವಾಗಿ ನಿಗದಿತ ಅವಧಿಯಲ್ಲಿ ಸಾಲವನ್ನು ನೀಡಿ ಅವರ ಅರ್ಥಿಕ ಬೆಳವಣಿಗೆಗೆ ಸಹಕಾರಿ ಕ್ಷೇತ್ರದ ಕೊಡುಗೆ ಅನನ್ಯವಾಗಿದೆ. ನವೋದಯ ಸಂಘದ ಮೂಲಕ ಮಹಿಳೆಯರು ಸ್ವಾವಲಂಬಿ ಬದುಕಿಗೆ ಅರ್ಥಿಕ ಭದ್ರತೆಯನ್ನು ನೀಡಿ ಮಹತ್ತರವಾದ ಬದಲಾವಣೆಗೆ ಜಿಲ್ಲೆಯ ಸಹಕಾರಿ ಬ್ಯಾಂಕ್ ಗಳು ಕಾರಣವಾಗಿದೆ. ಸಹಕಾರಿ ಇನ್ನಷ್ಟು ಬೆಳೆಯುವ ನಿಟ್ಟಿನಲ್ಲಿ ಗ್ರಾಹಕರು ಉತ್ತಮ ಸಹಕಾರ ನೀಡಬೇಕಾಗಿದೆ.
110 ವರ್ಷಗಳ ಇತಿಹಾಸ ಎಸ್ ಸಿಡಿಸಿಸಿ ಬ್ಯಾಂಕ್ ಪುತ್ತೂರಿನಲ್ಲಿ ಹುಟ್ಟಿ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಬೆಳೆದು ನಿಂತಿದೆ. ಎಲ್ಲರನ್ನು ಒಟ್ಟುಗೂಡಿಸಿ ಜನರನ್ನು ತಲುಪುವ ಮೂಲಕ ನಮ್ಮ ಬ್ಯಾಂಕ್ ಕೆಲಸ ಮಾಡುತ್ತಿದೆ. ಸಹಕಾರಿ ಬ್ಯಾಂಕ್ ಜನರ ಬ್ಯಾಂಕ್ ಆಗಿ ಪರಿವರ್ತನೆ ಆಗಿದೆ. ಕೃಷಿ ಸಾಲ ನೀಡುವಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘಗಳು ಬಹಳಷ್ಟು ಕೆಲಸ ಮಾಡುತ್ತಿದೆ‌. ಕೃಷಿ ಸಾಲ ಮರುಪಾವತಿ ಮಾಡದೆ ರೈತ ಆತ್ಮಹತ್ಯೆ ಮಾಡಿಕೊಂಡ ಇತಿಹಾಸ ನಮ್ಮ ಜಿಲ್ಲೆಯಲ್ಲಿಲ್ಲ. ಮಹಿಳೆಯರನ್ನು ಮೇಲಕ್ಕೆತ್ತುವ ಕೆಲಸ ನವೋದಯ ಸಂಘಗಳಿಂದ ಆಗುತ್ತಿದೆ. ಸಹಕಾರಿ ಕ್ಷೇತ್ರ ಇನ್ನಷ್ಟು ಬೆಳೆಯಲಿ ಎಂದರು.

ಆರ್ಥಿಕ ಚಟುವಟಿಕೆಯಲ್ಲಿ ಎಸ್ ಸಿ ಡಿ ಸಿ‌ ಸಿ ಬ್ಯಾಂಕ್ ಬಹುದೊಡ್ಡ ಸಾಧನೆ ಮಾಡಿದೆ:
ಮಾಜಿ ಸಚಿವರಾದ ರಮಾನಾಥ ರೈರವರು ನವೋದಯ ಸ್ವಸಹಾಯ ಸಂಘಗಳನ್ನು ಉದ್ಘಾಟನೆ ಮಾಡಿ ಮಾತನಾಡಿ ಸಹಕಾರಿ ಕ್ಷೇತ್ರವನ್ನು ಉತ್ತುಂಗ ಶಿಖರಕ್ಕೆ ಕೊಂಡೊಯ್ದ ಕೀರ್ತಿ ರಾಜೇಂದ್ರ ಕುಮಾರ್ ರವರಿಗೆ ಸಲ್ಲಬೇಕು. ಬ್ಯಾಂಕ್ ನ ಆರಂಭ ಬೆಳೆಯುತ್ತಿರುವ ಮಾಣಿ ಪೇಟೆಯ ಅಂದವನ್ನು ಇಮ್ಮುಡಿಗೊಳಿಸಿದೆ. ಆರ್ಥಿಕ ಚಟುವಟಿಕೆಯಲ್ಲಿ ಸಹಕಾರಿ‌ ಕ್ಷೇತ್ರದಲ್ಲಿ ಎಸ್ ಸಿ ಡಿ ಸಿ‌ ಸಿ ಬ್ಯಾಂಕ್ ಬಹಳಷ್ಟು ದೊಡ್ಡ ಸಾಧನೆ ಮಾಡಿದೆ. ಸಾಲಗಳು ಕ್ಲಪ್ತ ಸಮಯಕ್ಕೆ ಪಾವತಿಯಾದಾಗ ಸಹಕಾರಿ ಸಂಘಗಳು ಯಶಸ್ಸಾಗಲು ಸಾಧ್ಯ. ದ.ಕ.ಜಿಲ್ಲೆಯ ಎಲ್ಲಾ ಪಿಎಲ್ ಡಿ ಬ್ಯಾಂಕ್ ಗಳು ಸಾಲ ನೀಡಲು ಅರ್ಹತೆ ಇರುವಂತದ್ದು. ಸುಂದರವಾದ ಅಚ್ಚುಕಟ್ಟಾದ ವ್ಯವಸ್ಥೆ ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಆಗಿದೆ. ಕೃಷಿಕರ ಅಭ್ಯುದಯಕ್ಕಾಗಿ ಸ್ಥಾಪನೆಯಾದ ಸಹಕಾರಿಗಳು ಸಾಲವನ್ನು ನೀಡಲು ಅರ್ಹತೆಯನ್ನು ಪಡೆಯಬೇಕು. ಕೇಂದ್ರ ಸಹಕಾರಿ ಬ್ಯಾಂಕ್ ರಾಷ್ಟ್ರ ಮಟ್ಟದಲ್ಲಿ ಪ್ರಸಿದ್ಧಿಯನ್ನು ಪಡೆಯುತ್ತಿರುವ ಹೆಮ್ಮೆಯ ವಿಚಾರವಾಗಿದೆ ಎಂದರು.

ಎಸ್ ಸಿಡಿಸಿಸಿಯಿಂದ ಪಾರದರ್ಶಕ ವ್ಯವಹಾರ ನಡೆಯುತ್ತಿದೆ:
ಪುತ್ತೂರು‌ ಶಾಸಕರಾದ ಅಶೋಕ್ ಕುಮಾರ್ ರೈರವರು ಭದ್ರತಾಕೋಶವನ್ನು ಉದ್ಘಾಟಿಸಿ ಮಾತನಾಡಿ ಉತ್ತಮ ರೀತಿಯ ಕಾರ್ಯಕ್ರಮಕ್ಕೆ ನಾವೆಲ್ಲರೂ ಇಂದಿಲ್ಲಿ ಸಾಕ್ಷಿಯಾಗಿದ್ದೇವೆ. ಬ್ಯಾಂಕ್ ನಡೆಸುವುದು ಅಷ್ಟೊಂದು ಸುಲಭದ ವಿಚಾರವಲ್ಲ‌. ಅದನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುವುದು ಬಲು ಕಷ್ಟ. ಪಾರದರ್ಶಕ ವ್ಯವಹಾರ ಎಸ್ ಸಿಡಿಸಿಸಿ ಯಿಂದ ಆಗುತ್ತಿದೆ. ಎಸ್ ಸಿಡಿಸಿಸಿ ಕಪ್ಪುಚುಕ್ಕೆ ಇಲ್ಲದ ಸಹಕಾರಿ. ಮಹಿಳೆಯರನ್ನು ಸಭಲೆಯರನ್ನಾಗಿ ಮಾಡಿರುವ ಕೀರ್ತಿ ರಾಜೇಂದ್ರ ಕುಮಾರ್ ರವರಿಗೆ ಸಲ್ಲಬೇಕು. ಪ್ರತೀ ಕ್ಷೇತ್ರಗಳಿಗೆ ಶಕ್ತಿ ತುಂಬುವ ಕೆಲಸ ಅವರಿಂದ ಆಗುತ್ತಿದೆ. ಮಹಿಳೆಯರ ಕೈಗಟ್ಟಿಗೊಳಿಸುವ ಕೆಲಸ ಕೈ ಸರಕಾರದಿಂದ ಆಗಿದೆ‌. ಕೆಲವೊಂದು ಟೆಕ್ನಿಕಲ್ ವಿಚಾರದ ಹಿನ್ನೆಲೆ ಕೆಲವರಿಗೆ ಸವಲತ್ತು ಸಿಕ್ಕಿಲ್ಲ. ಮಹಿಳೆ ಗಟ್ಟಿಯಾದರೆ ಕುಟುಂಬ ಬೆಳೆದಂತೆ. ಬ್ಯಾಂಕ್ ಒಳ್ಳೆಯ ರೀತಿಯಲ್ಲಿ ಕೆಲಸವಾಗುತ್ತಿದೆ. ಹವಾಮಾನ ಆಧಾರಿತ ಬೆಳೆ ವಿಮೆ ಪಡೆದವರಲ್ಲಿ ನಾನು ಓರ್ವ. ಈ ಹಿಂದೆ ದೊಡ್ಡ ದೊಡ್ಡ ಕೃಷಿ ಜಮೀನು ಇದ್ದವರಿಗೆ ಮಾತ್ರ ಸಿಗುತ್ತಿತ್ತು. ಈಗ ಎಲ್ಲರಿಗೂ ಸಿಗುವಂತಹ ಪ್ರಯತ್ನ ಮಾಡಲಾಗಿದೆ. ಎಸ್ ಸಿ ಡಿಸಿಸಿ ಬ್ಯಾಂಕ್ ನ ಹುಟ್ಟು ನಮ್ಮ ಪುತ್ತೂರಿನಲ್ಲಿ ಆಗಿದೆ ಎನ್ನುವ ಸಂತಸ ನಮಗಿದೆ ಎಂದರು.

ಜಿಲ್ಲೆಯ ಉತ್ತಮ ಶಾಖೆಯಾಗಿ ಮೂಡಿಬರಲಿ:
ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಇಬ್ರಾಹಿಂ ಮಾಣಿರವರು ಸಾಲಪತ್ರವನ್ನು ವಿತರಿಸಿ ಮಾತನಾಡಿ ನಮಗೆಲ್ಲರಿಗೂ ಸಂತಸದ ಸಂದರ್ಭ ಇದಾಗಿದೆ‌. ರಾಷ್ಟ್ರೀಕೃತ ಬ್ಯಾಂಕ್ ನಂತಹ ಒಂದು ಬ್ಯಾಂಕ್ ನಮ್ಮ ಮಾಣಿಯಲ್ಲಿ ಆರಂಭವಾಗಿರುವುದು ಉತ್ತಮ ವಿಚಾರ. ರಾಜ್ಯದ ಉತ್ತಮ ಬ್ಯಾಂಕ್ ಎಂಬ ಹೆಗ್ಗಳಿಕೆ ಎಸ್ ಡಿಸಿಸಿಗೆ ಸಲ್ಲುತ್ತದೆ. ಹಿರಿಯರ ಸಲಹೆ ಸಹಕಾರದೊಂದಿಗೆ ಸಂಸ್ಥೆ ಈ ಮಟ್ಟಕ್ಕೆ ಬೆಳಯಲು ಸಾಧ್ಯವಾಗಿದೆ. ಜಿಲ್ಲೆಯ ಉತ್ತಮ ಶಾಖೆಯಾಗಿ ಇದು ಮೂಡಿಬರಲಿ ಎಂದರು.

ಗಣಕೀಕರಣದ ಉದ್ಘಾಟನೆಯನ್ನು ನೇರಳಕಟ್ಟೆ ಸಹಕಾರಿ ವ್ಯವಸಾಯ ಸಂಘದ ಅಧ್ಯಕ್ಷ ಪುಷ್ಪರಾಜ ಚೌಟ ನಡೆಸಿದರು.ಇದೇ ಸಂದರ್ಭದಲ್ಲಿ ವಿಶ್ವನಾಥ ಹಾಗೂ ವಂದನಾ ಕೆ.ರವರಿಗೆ ಪ್ರಥಮ ಠೇವಣಿ ಪತ್ರ ವಿತರಿಸಲಾಯಿತು. ನಾರಾಯಣ ಪೈ, ಭವಾನಿರವರಿಗೆ ಲಾಕರ್ ಕೀ ಹಸ್ತಾಂತರ ಮಾಡಲಾಯಿತು. ವಾಹನ ಸಾಲ ಪಡೆದ ಉಮೇಶ್ ಆಳ್ವರವರಿಗೆ ಸಾಲಪತ್ರ ವಿತರಣೆ ಮಾಡಲಾಯಿತು. ಗೃಹ ಸಾಲ ಪಡೆದ ಯೋಗೀಶ್ ರವರಿಗೆ ಸಾಲಪತ್ರ ವಿತರಿಸಲಾಯಿತು. ಬಂಟ್ವಾಳ ತಾಲೂಕಿನ ಸಹಕಾರಿಗಳ ಪರವಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರಾದ ಡಾ| ಎಂ.ಎನ್.ರಾಜೇಂದ್ರ ಕುಮಾರ್ ರವರನ್ನು ಸನ್ಮಾನಿಸಲಾಯಿತು. ಅದೇ ರೀತಿ ಕಟ್ಟಡದ ಮಾಲೀಕರಾದ ಎಮ್. ನಾರಾಯಣ ಪೈ, ನೇರಳಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷರಾದ ಪುಷ್ಪರಾಜ ಚೌಟ ಹಾಗೂ ದ.ಕ.ಜಿಲ್ಲಾ ಸಹಾಕರಿ ಗಳ ಕ್ರೀಡಾ ಕೂಟದ ಉಸ್ತುವಾರಿ ವಹಿಸಿರುವ ದಯಾನಂದ ರೈರವರನ್ನು ಗೌರವಿಸಲಾಯಿತು. ವಿವಿಧ ಜವಾಬ್ದಾರಿಗಳು ನಿಭಾಯಿಸಿದವರನ್ನು ಹಾಗೂ ಸಹಕಾರ ನೀಡಿದವರನ್ನು, ಮೇಲ್ವಿಚಾರಕರನ್ನು ಗೌರವಿಸಲಾಯಿತು.

ಬ್ಯಾಂಕ್ ನ ಉದ್ಘಾಟನಾ ಸಮಾರಂಭದ ಪ್ರಯುಕ್ತ ಆಯೋಜಿಸಲಾಗಿದ್ದ ಲಕ್ಕಿ ಕೂಪನ್ ನಲ್ಲಿ4 ಗ್ರಾಂ ಗೋಲ್ಡ್ ಕಾಯಿನ್ ಅನ್ನು ಮೀನಾಕ್ಷಿ ಕೆ.ರವರು ಪಡೆದುಕೊಂಡು, ಪುಷ್ಪಾನಂದ ರವರು ದ್ವೀತಿಯ ಬಹುಮಾನ ಎರಡು ಗ್ರಾಂ ಚಿನ್ನದ ಪದಕವನ್ನು ಪಡೆದುಕೊಂಡರು.ಎಫ್ ‌ಡಿ.ಯಲ್ಲಿ ಡೆಪಾಸಿಟ್ ಇಟ್ಟವರ ಪೈಕಿ ಬಿ.ಹೇಮಾವತಿರವರು 4 ಗ್ರಾಂ ಗೋಲ್ಡ್ ಕಾಯಿನ್ ಅನ್ನು ಲಕ್ಕಿ ಕೂಪನ್ ಮೂಲಕ ಪಡೆದುಕೊಂಡರು‌ ದ್ವೀತಿಯ ಬಹುಮಾನದ 2 ಗ್ರಾಂ ಚಿನ್ನದ ಕಾಯಿನ್ ಅನ್ನು ಪದ್ಮನಾಭ ಅವರು ಪಡೆದುಕೊಂಡರು.ಉಪಾಧ್ಯಕ್ಷರಾದ ವಿನಯಕುಮಾರ್ ಸೂರಿಂಜೆ, ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ಕೆ., ನಿರ್ದೇಶಕರಾದ ಎಸ್. ಬಿ. ಜಯರಾಮ ರೈ, ಮೋನಪ್ಪ ಶೆಟ್ಟಿ ಎಕ್ಕಾರು, ಹರಿಶ್ಚಂದ್ರ ಕೆ., ಸದಾಶಿವ ಉಳ್ಳಾಲ್, ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ಮಾಣಿ ಶಾಖಾ ವ್ಯವಸ್ಥಾಪಕಿ ವತ್ಸಲಾ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಗತ್ ಪ್ರಾರ್ಥಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ನಿರ್ದೇಶಕರಾದ ಟಿ.ಜಿ.ರಾಜರಾಮ್ ಭಟ್ ಸ್ವಾಗತಿಸಿ, ಪ್ರಾಸ್ತಾವಿಕ‌ ಮಾತುಗಳನ್ನಾಡಿದರು. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು ರವರು ವಂದಿಸಿದರು. ಆರ್. ಜೆ. ಪ್ರಸನ್ನ ರವರು ಕಾರ್ಯಕ್ರಮ ನಿರೂಪಿಸಿದರು.

ಸಂತೃಪ್ತ ಗ್ರಾಹಕ ಬ್ಯಾಂಕಿನ ಆಸ್ತಿ
ಸಂತೃಪ್ಪ ಗ್ರಾಹಕ ಬ್ಯಾಂಕಿನ ಆಸ್ತಿ. ಮಾಣಿ ಶಾಖೆಗೆ ದಾಖಲೆಯ ಸಂಖ್ಯೆಯ ಠೇವಣಿ ಲಭಿಸಿದೆ. ಭರವಸೆಯ ಮಾತಿಗೆ ಸಂತಸವನ್ನು ವ್ಯಕ್ತಪಡಿಸುತ್ತಿದ್ದೇನೆ. ಇವತ್ತು ನಮ್ಮ ಒಟ್ಟು ಟರ್ನೋವರ್ ಹದಿನಾಲ್ಕು ಸಾವಿರ ಕೋಟಿ ರೂಪಾಯಿ ದಾಟಿದೆ. ಮಹಿಳೆಯರ ಸಭಲೀಕರಣಕ್ಕಾಗಿ ಒತ್ತು ಕೊಟ್ಟ ವ್ಯಕ್ತಿ ನಮ್ಮ ಅಧ್ಯಕ್ಷರು. ಮಾಣಿಯ ಜನತೆ ನಮ್ಮ ಮೇಲಿಟ್ಟಿರುವ ಕಾಳಜಿಗೆ ನಾವೂ ಸದಾ ಅಭಾರಿಯಾಗಿದ್ದೇವೆ. ನಮ್ಮ 113ನೇ ಮಾಣಿ ಶಾಖೆಯನ್ನು ಅದ್ಭುತವಾಗಿ ನಡೆಸಿ ಕನಸು ನನಸಾಗಿಸುವ ಕೆಲಸ ಬ್ಯಾಂಕ್ ನಿಂದ ಆಗಲಿದೆ.
ಟಿ.ಜಿ.ರಾಜರಾಮ್ ಭಟ್
ನಿರ್ದೇಶಕರು

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್

ನಮ್ಮ ಅಧ್ಯಕ್ಷರ ಹಲವಾರು ವರುಷದ ಕನಸು ನನಸಾಗಿದೆ
ನಮ್ಮ ಅಧ್ಯಕ್ಷರ ಹಲವಾರು ವರುಷದ ಕನಸು ನನಸಾಗಿದೆ. ಮಾಣಿಯಲ್ಲೊಂದು ಶಾಖೆ ತೆರೆಯಬೇಕೆನ್ನುವ ಅವರ ಆಸೆ ಇಂದು ಚಿಗುರೊಡೆದಿದೆ.ಕೆಲವಾರು ದಿನಗಳಿಂದ ಕಾರ್ಯಕ್ರಮ ಜೋಡಣೆ ಮಾಡಲಾಗಿದೆ. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ವಂದನೆಗಳು. ಇದೊಂದು ಅದ್ಭುತ ಕಾರ್ಯಕ್ರಮವಾಗಿ ಯಶಸ್ಸು ಕಂಡಿದೆ. ಸಂಸ್ಥೆಯ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯ. ನೀವೆಲ್ಲರೂ ನಮ್ಮ ಸಂಸ್ಥೆಯ ಮೇಲಿಟ್ಟಿರುವ ಪ್ರೀತಿ ವಿಶ್ವಾಸಕ್ಕೆ ನಾವು ಸದಾ ಅಭಾರಿಯಾಗಿದ್ದೇವೆ.
ಶಶಿಕುಮಾರ್ ರೈ ಬಾಲ್ಯೊಟ್ಟು
ನಿರ್ದೇಶಕರು
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್

ನಿರ್ದೇಶಕರಾದ ಟಿ.ಜಿ. ರಾಜಾರಾಮ್ ಭಟ್, ಶಶಿಕುಮಾರ್ ರೈ ಬಾಲ್ಯೊಟ್ಟುರವರ ಸೇವೆ ಅನನ್ಯ
ನಿರ್ದೇಶಕರುಗಳಾದ ಟಿ.ಜಿ. ರಾಜಾರಾಮ್ ಭಟ್ ಹಾಗೂ ಶಶಿಕುಮಾರ್ ರೈ ಬಾಲ್ಯೊಟ್ಟುರವರಿಗೆ ಈ ಒಂದು ಕಾರ್ಯಕ್ರಮದ ಜವಾಬ್ದಾರಿಯನ್ನು ವಹಿಸಿಕೊಡಲಾಗಿತ್ತು. ಅವರಿಬ್ಬರು ಸೇರಿಕೊಂಡು ಈ ಒಂದು ಕಾರ್ಯಕ್ರಮವನ್ನು ಯಶಸ್ವಿಯಾಗಿಸಿದ್ದಾರೆ. ಬ್ಯಾಂಕ್ ನ ಉದ್ಘಾಟನೆ ಕಾರ್ಯಕ್ರಮವನ್ನು ಜನಮೆಚ್ಚುವ ಕಾರ್ಯಕ್ರಮವನ್ನಾಗಿ ಮಾಡಿದ್ದಾರೆ.
ಮಹಿಳೆಯರಿಗೆ ಸ್ವಾವಲಂಬಿ ಜೀವನ ನೀಡುವ ಕೆಲಸ ಸಹಕಾರ ಕ್ಷೇತ್ರದಿಂದ ಆಗಿದೆ. ಮಹಿಳೆಯರನ್ನು ಮತ್ತಷ್ಟು ಸದೃಡ ಗೊಳಿಸುವ ಕೆಲಸ ನಿರಂತರವಾಗಿ ನಡೆಯಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರಾದ ಡಾ| ಎಂ.ಎನ್.ರಾಜೇಂದ್ರ ಕುಮಾರ್ ರವರು ಹೇಳಿದರು.

ನ.30: ಪುತ್ತೂರಿನಲ್ಲಿ ಸಹಕಾರಿಗಳ ಕ್ರೀಡಾಕೂಟ
ನ.30ರಂದು ಪುತ್ತೂರಿನಲ್ಲಿ ಸಹಕಾರಿಗಳ ಆಟೋಟ ಸ್ಪರ್ಧೆ ಯನ್ನು ಏರ್ಪಡಿಸಲಾಗಿದೆ. ಪುತ್ತೂರಿನ ಶಾಸಕರಾದ ಅಶೋಕ್ ಕುಮಾರ್ ರೈರವರ ಸಹಕಾರದಲ್ಲಿ ನಮ್ಮ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟುರವರ ನೇತೃತ್ವದಲ್ಲಿ ಈ ಒಂದು ಆಟೋಟ ಸ್ಪರ್ಧೆ ನಡೆಯಲಿದೆ. ಎಲ್ಲರೂ ಈ ಆಟೋಟ ಸ್ಪರ್ದೆಯಲ್ಲಿ ಭಾಗವಹಿಸಬೇಕು ಎಂದು
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರಾದ ಡಾ| ಎಂ.ಎನ್.ರಾಜೇಂದ್ರ ಕುಮಾರ್ ರವರು ಹೇಳಿದರು.

LEAVE A REPLY

Please enter your comment!
Please enter your name here