ಶರತ್ ಕುಮಾರ್ ಪಾರ
ಪುತ್ತೂರು: ಚೀನಾದ ನಡೆದ 19ನೇ ಏಷಿಯಾ ಸ್ಕೇಟಿಂಗ್ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಪಡೆದು ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ ಭಾರತೀಯ ಜೂನಿಯರ್ ಮಹಿಳಾ ತಂಡದಲ್ಲಿ ಪುತ್ತೂರಿನ ಪ್ರಜ್ಞಾ ವೈ ಗಾಯತ್ರಿರವರು ಭಾಗವಹಿಸಿ ಪುತ್ತೂರಿಗೆ ಹೆಮ್ಮೆ ತಂದಿದ್ದಾರೆ.
ಅ.22ರಿಂದ 28ರವರೆಗೆ ಚೀನಾ ದೇಶದ ಬಿಧಾಯಿಯಲ್ಲಿ ನಡೆದ ಚಾಂಪಿಯನ್ಶಿಪ್ನಲ್ಲಿ ಭಾರತೀಯ ತಂಡ 3ನೇ ಸ್ಥಾನ ಪಡೆದು ಕಂಚಿನ ಪದಕ ಪಡೆದುಕೊಂಡಿತ್ತು. ಕರ್ನಾಟಕದ ಐವರು ಆಟಗಾರರು ಸೇರಿ ಒಟ್ಟು 12 ಆಟಗಾರರೊಂದಿಗಿನ ಈ ತಂಡದಲ್ಲಿ ಪುತ್ತೂರಿನ ಮರೀಲ್ ನಿವಾಸಿ, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಪ್ರಜ್ಞಾ ವೈ ಗಾಯತ್ರಿರವರು ಒಬ್ಬರಾಗಿದ್ದಾರೆ. ಬೆಂಗಳೂರಿನ ನಾರಾಯಣ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾಗಿರುವ ಪ್ರಜ್ಞಾ ವೈ.ರವರು ಕಳೆದ ಏಳು ವರ್ಷಗಳಿಂದ ಕರ್ನಾಟಕ ತಂಡದ ಆಟಗಾರರಾಗಿದ್ದಾರೆ. ರಾಷ್ಟ್ರಮಟ್ಟದ ಹಲವು ಕ್ರೀಡಾಕೂಟದಲ್ಲಿ ಭಾಗವಹಿಸಿ ಪದಕಗಳನ್ನು ಪಡೆದಿದ್ದಾರೆ. 2018ರಲ್ಲಿ ಹರಿಯಾಣದ ಕುರುಕ್ಷೇತ್ರದಲ್ಲಿ ನಡೆದ ಕ್ರೀಡಾಕೂಟದಲ್ಲಿ ಕಂಚಿನ ಪದಕ, 2019ರಲ್ಲಿ ಆಂದ್ರಪ್ರದೇಶದ ವಿಶಾಖಪಟ್ಟಣದಲ್ಲಿ ಹಾಗೂ ಚಂಡೀಗಢದಲ್ಲಿ ನಡೆದ ಕ್ರೀಡಾಕೂಟದಲ್ಲಿ ಇವರ ನಾಯಕತ್ವದ ತಂಡ ಚಿನ್ನದ ಪದಕ, 2020ರಲ್ಲಿ ಚಂಡೀಗಢದಲ್ಲಿ ನಡೆದ ಇವರ ನಾಯಕತ್ವದ ತಂಡ ಚಿನ್ನದ ಪದಕ, 2022ರಲ್ಲಿ ಬೆಂಗಳೂರಿನಲ್ಲಿ ಹಾಗೂ ರಾಜಸ್ಥಾನದ ಜೈಪುರದಲ್ಲಿ ನಡೆದ ಕ್ರೀಡಾಕೂಟದಲ್ಲಿ ಕಂಚಿನ ಪದಕ ಪಡೆದುಕೊಂಡ ಕ್ರೀಡಾ ಪ್ರತಿಭೆಯಾಗಿದ್ದಾರೆ. ಇದೀಗ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಇವರ ತಂಡ ಕಂಚಿನ ಪದಕ ಪಡೆದುಕೊಂಡಿದೆ. ಪ್ರಜ್ಞಾ ವೈರವರು ಮರೀಲ್ ಅನ್ನಪೂರ್ಣ ಕೃಪಾ ನಿವಾಸಿ, ಬೆಂಗಳೂರಿನ ಪ್ರತಿಷ್ಟಿತ ಎಲ್ಜಿ ಕಂಪೆನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಯೋಗೀಶ್ ಎಸ್., ಸಾಫ್ಟ್ವೇರ್ ಇಂಜಿನಿಯರ್ ಭವ್ಯಾ ಎಚ್.ಆರ್. ದಂಪತಿ ಪುತ್ರಿಯಾಗಿದ್ದಾರೆ.
ಚಿನ್ನದ ಪಡೆಯಬೇಕೆಂಬ ಆಸೆ
ಏಷಿಯಾ ಸ್ಕೇಟಿಂಗ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿದ್ದು ತುಂಬಾ ಹೆಮ್ಮೆಯಾಗಿದೆ. ಬೇರೆ ದೇಶಗಳ ಆಟಗಾರರ ಶೈಲಿ, ಯೋಜನೆಗಳನ್ನು ಕಲಿಯುವುದು ತುಂಬಾ ಇತ್ತು. ಇದೊಂದು ಉತ್ತಮ ಅನುಭವ. ಮುಂದಿನ ದಿನಗಳಲ್ಲಿ ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆಯಬೇಕೆಂಬ ಆಸೆ ಇದೆ
ಪ್ರಜ್ಞಾ ವೈ
ಭಾರತ್ ದೇಶವನ್ನು ಪ್ರತಿನಿಧಿಸಿದ್ದು ಹೆಮ್ಮೆಯ ವಿಚಾರ
ಸುಮಾರು 7 ವರ್ಷಗಳ ಸತತ ಪ್ರಯತ್ನದಿಂದ ಕಂಚಿನ ಪದಕ ಪಡೆಯುವಲ್ಲಿ ಸಫಲವಾಗಿದ್ದಾಳೆ. ಓದಿನ ಜೊತೆಗೆ ಕ್ರೀಡೆಯಲ್ಲಿ ಭಾಗವಹಿಸುತ್ತಿದ್ದಾಳೆ. ಓದು ಮತ್ತು ಕ್ರೀಡೆಯನ್ನು ಸರಿದೂಗಿಸಿಕೊಂಡು ಹೋಗುತ್ತಿರುವುದು ಸಂತಸ. ಅಲ್ಲದೆ ಭಾರತ ದೇಶವನ್ನು ಪ್ರತಿನಿಧಿಸುತ್ತಿರುವುದು ಹೆಮ್ಮೆಯ ವಿಚಾರ
ಯೋಗೀಶ್ ಎಸ್.
ಪ್ರಜ್ಞಾರವರ ತಂದೆ