‘ದುಶ್ಚಟಗಳು ಬದುಕನ್ನು ಸುಡುವ ಬೆಂಕಿಯಂತೆ’-ಕಡಬ ತಾ| ಸ್ವಾಸ್ಥ್ಯ ಸಂಕಲ್ಪ ಸಪ್ತಾಹಕ್ಕೆ ಚಾಲನೆ ನೀಡಿ ಶಾಸಕಿ ಭಾಗೀರಥಿ ಮುರುಳ್ಯ ಹೇಳಿಕೆ

0

ಕಡಬ: ದುಶ್ಚಟಗಳನ್ನು ಅಳವಡಿಸಿಕೊಂಡವರು ಎಂದಿಗೂ ಉದ್ಧಾರವಾದ ಉದಾಹರಣೆಗಳಿಲ್ಲ. ದುಶ್ಚಟಗಳು ಬದುಕನ್ನು ಸುಡುವ ಬೆಂಕಿಯಂತೆ. ಆದುದರಿಂದ ವಿದ್ಯಾರ್ಥಿಗಳು ಈ ಕುರಿತು ಜಾಗರೂಕರಾಗಿರಬೇಕು ಎಂದು ಸುಳ್ಯ ವಿಧಾನಸಭಾ ಕ್ಷತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ಅಭಿಪ್ರಾಯಪಟ್ಟರು.


ಕಡಬ ಸರಕಾರಿ ಪ.ಪೂ.ಕಾಲೇಜಿನ ಸಭಾಂಗಣದಲ್ಲಿ ಶ್ರೀ ಕ್ಷತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ಕಡಬ ತಾಲೂಕು ಘಟಕದ ಆಶ್ರಯದಲ್ಲಿ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಕಡಬ ಕೇಂದ್ರ ಒಕ್ಕೂಟದ ಸಹಕಾರದೊಂದಿಗೆ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗಾಗಿ ನಡೆಸಲ್ಪಡುವ ತಾಲೂಕು ಮಟ್ಟದ ಸ್ವಾಸ್ಥ್ಯ ಸಂಕಲ್ಪ ಸಪ್ತಾಹ-೨೦೨೩ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ದುಶ್ಚಟಮುಕ್ತ ಸಮಾಜವನ್ನು ನಿರ್ಮಿಸುವಲ್ಲಿ ವಿದ್ಯಾರ್ಥಿ ಸಮುದಾಯದ ಪಾತ್ರ ಅತ್ಯಂತ ಪ್ರಮುಖವಾದುದು. ನೀವು ಪಡೆದ ಮಾಹಿತಿಯನ್ನು ನಿಮ್ಮ ಪರಿಸರದಲ್ಲಿನ ಜನರಿಗೆ ತಲುಪಿಸಿ ಅವರಲ್ಲಿ ಧನಾತ್ಮಕ ಬದಲಾವಣೆಯನ್ನು ತರುವ ಕೆಲಸವನ್ನು ಮಾಡಬೇಕು. ಆ ಉದ್ದೇಶದಿಂದ ಧರ್ಮಾಽಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆಯವರು ವಿದ್ಯಾರ್ಥಿಗಳಿಗಾಗಿ ಸ್ವಾಸ್ಥ್ಯ ಸಂಕಲ್ಪ ಎನ್ನುವ ಕಾರ್ಯಕ್ರಮವನ್ನು ಜಾರಿಗೊಳಿಸಿದ್ದಾರೆ. ಅವರ ಸದುದ್ದೇಶದ ಕಾರ್ಯಕ್ರಮದಲ್ಲಿ ನಾವೆಲ್ಲರೂ ಕೈಜೋಡಿಸೋಣ ಎಂದವರು ಹೇಳಿದರು.


ಸಂಪನ್ಮೂಲವ್ಯಕ್ತಿಯಾಗಿ ಆಗಮಿಸಿದ್ದ ಜನ ಜಾಗೃತಿ ಯೋಜನಾಽಕಾರಿ ಗಣೇಶ್ ಆಚಾರ್ಯ ಅವರು ವಿದ್ಯಾರ್ಥಿಗಳಿಗೆ ಪ್ರತಿಜ್ಞ ವಿಧಿ ಬೋಧಿಸಿ ಮಾತನಾಡಿ ದುಶ್ಚಟಗಳು ಕೇವಲ ಒಬ್ಬ ವ್ಯಕ್ತಿಯನ್ನು ಮಾತ್ರ ಕೆಡಿಸುವುದಿಲ್ಲ. ಆತನ ಕುಟುಂಬ ಸದಸ್ಯರನ್ನೂ ಕೆಡಿಸುತ್ತದೆ. ಮನೆಯೊಳಗೆ ಒಮ್ಬ ಮದ್ಯಪಾನಿ ಇದ್ದರೆ ಆ ಮನೆಯ ಪರಿಸ್ಥಿತಿ ನರಕದಂತಾಗುತ್ತದೆ. ಆದುದರಿಂದ ಕ್ಷಣಿಕ ಸುಖದ ಆಸೆಗೆ ಬಿಲಿಬಿದ್ದು ಯಾರೂ ದುಶ್ಚಟಗಳ ದಾಸರಾಗಿ ಜೀವನವನ್ನು ಹಾಳುಮಾಡಿಕೊಳ್ಳದಿರಿ ಎಂದು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಜನ ಜಾಗೃತಿ ವೇದಿಕೆಯ ಕಡಬ ತಾಲೂಕು ಘಟಕದ ಅಧ್ಯಕ್ಷ ಮಹೇಶ್ ಕೆ. ಸವಣೂರು ಅವರು ವಿದ್ಯಾರ್ಥಿ ಜೀವನ ಎನ್ನುವುದು ನಮ್ಮ ಜೀವನದ ಅತ್ಯಂತ ಸ್ಮರಣೀಯ ದಿನಗಳು. ಹಾಗೆಯೇ ಸರಿ ತಪ್ಪುಗಳನ್ನು ಕಲಿಯುವ ಅವಕಾಶವನ್ನು ನೀಡುವ ವ್ಯವಸ್ಥೆ. ಆದುದರಿಂದ ಇಂದಿನ ಕಾರ್ಯಕ್ರಮದಲ್ಲಿ ನೀವು ತಿಳಿದುಕೊಂಡ ಒಳ್ಳೆಯ ವಿಚಾರಗಳನ್ನು ಇತರರಿಗೂ ತಿಳಿಸುವ ಮೂಲಕ ದುಶ್ಚಟಗಳ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಿ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕಾರಣಕರ್ತರಾಗೋಣ ಎಂದರು.


ಕಾಲೇಜಿನ ಪ್ರಾಂಶುಪಾಲ ವಾಸುದೇವ ಗೌಡ ಕೋಲ್ಪೆ, ಜನ ಜಾಗೃತಿ ವೇದಿಕೆಯ ಕಡಬ ತಾಲೂಕು ಅಧ್ಯಕ್ಷ ಕರುಣಾಕರ ಗೋಗಟೆ, ಸದಸ್ಯೆ ಸರೋಜಿನಿ ಆಚಾರ್ಯ, ಕಡಬ ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಶಿವಪ್ರಸಾದ್ ರೈ ಮೈಲೇರಿ ಅತಿಥಿಗಳಾಗಿ ಆಗಮಿಸಿದ್ದರು.ಗ್ರಾಮಾಭಿವೃದ್ಧಿ ಯೋಜನೆಯ ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ನಾವೂರು ಸ್ವಾಗತಿಸಿ, ಪ್ರಸ್ತಾವನೆಗೈದರು. ಕಡಬ ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ನಿರೂಪಿಸಿ, ಉಪನ್ಯಾಸಕಿ ಲಾವಣ್ಯ ವಂದಿಸಿದರು.

LEAVE A REPLY

Please enter your comment!
Please enter your name here