ಫಿಲೋಮಿನಾದಲ್ಲಿ 2 ದಿನಗಳ ಕ್ರೀಡಾಕೂಟ ಸಮಾಪ್ತಿ

0

ಕ್ರೀಡೆ ಮಾನವನ ಸರ್ವಾಂಗೀಣ ಅಭಿವೃದ್ಧಿಗೆ ಕಾರಣೀಭೂತ-ಅಶೋಕ್ ಕುಮಾರ್ ರೈ

ಪುತ್ತೂರು: ಮಾಯಿದೆ ದೇವುಸ್ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಮೊ|ಆಂಟೊನಿ ಪತ್ರಾವೋರವರ ಸ್ಮರಣಾರ್ಥವಾಗಿ ಸಂತ ಫಿಲೋಮಿನಾ ಕಾಲೇಜಿನ ಮೈದಾನದಲ್ಲಿ ನಡೆದ ಎರಡು ದಿನಗಳ ಕ್ರೀಡಾಕೂಟಕ್ಕೆ ನ.1ರಂದು ಸಂಭ್ರಮದಿಂದ ತೆರೆ ಎಳೆಯಲಾಯಿತು. ಸುಡು ಬಿಸಿಲಿನಲ್ಲಿ ಶಾಸಕ ಅಶೋಕ್ ಕುಮಾರ್ ರೈಯವರು ಕ್ರೀಡಾ ಕೂಟಕ್ಕೆ ಭೇಟಿ ನೀಡಿ ಕ್ರೀಡಾಪಟುಗಳನ್ನು ಹುರಿದುಂಬಿಸಿದರು. ಕ್ರೀಡೆಯು ಮಾನವನ ಸರ್ವಾಂಗೀಣ ಅಭಿವೃದ್ಧಿಗೆ ಕಾರಣೀಭೂತವಾಗಿದೆ. ಪುತ್ತೂರಿನ ಕ್ರೀಡಾಪಟುಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುತ್ತಿರುವುದು ಸಂತಸ ತಂದಿದೆ.


ನನ್ನ ವಿದ್ಯಾರ್ಥಿ ಜೀವನದಲ್ಲಿ ಈ ಮೈದಾನದಲ್ಲಿ ಹಲವಾರು ಬಾರಿ ಕ್ರಿಕೆಟ್ ಪಂದ್ಯಾಟಗಳಲ್ಲಿ ಭಾಗವಹಿಸಿದ ಕ್ಷಣಗಳು ಅವಿಸ್ಮರಣೀಯ ಎಂದ ಶಾಸಕರು, ಕ್ಯಾಥೊಲಿಕ್ ಶಿಕ್ಷಣ ಸಂಸ್ಥೆಗಳ ಸಾಮಾಜಿಕ ಕಳಕಳಿ ಪ್ರಶಂಸನೀಯ. ಈ ಸಂಸ್ಥೆಗಳ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಇನ್ನಷ್ಟು ಸಾಧನೆ ಮಾಡಲಿ ಎಂದು ಹೇಳಿದರು. ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಅತಿ ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ಶಾಸಕರಿಗೆ ಹೂಗುಚ್ಛ, ಸ್ಮರಣಿಕೆ ನೀಡಿ ಗೌರವಿಸಿದರು.
ಕ್ರೀಡಾಕೂಟದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಹಾಯಕ ಆಯುಕ್ತ ಗಿರೀಶ್ ನಂದನ್‌ರವರು ಕ್ರೀಡೆಯು ವಿದ್ಯಾರ್ಥಿ ಜೀವನಕ್ಕೆ ಬಹಳ ಪ್ರಮುಖವಾಗಿದೆ. ಜೀವನದ ಏಳು ಬೀಳುಗಳನ್ನು ಸಮರ್ಥವಾಗಿ ನಿಭಾಯಿಸಲು ಕ್ರೀಡೆಗಳು ಸಹಾಯ ಮಾಡುತ್ತವೆ ಎಂದು ಹೇಳಿ ವಿಜೇತರಿಗೆ ಅಭಿನಂದನೆ ಸಲ್ಲಿಸಿದರು.
ಸಮಾರಂಭದ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಿದ್ದ ಸುದಾನ ವಿದ್ಯಾಸಂಸ್ಥೆಯ ಸಂಚಾಲಕ ರೆ|ವಿಜಯ ಹಾರ್ವಿನ್‌ರವರು ಶಾರೀರಿಕ ಆರೋಗ್ಯದೊಂದಿಗೆ ಮಾನಸಿಕ ಸ್ವಾಸ್ಥ್ಯ ಅತಿ ಅಗತ್ಯ. ತಮ್ಮ ಆರೋಗ್ಯ ಮತ್ತು ಸಾಮರ್ಥ್ಯಕ್ಕನುಗುಣವಾಗಿ ಅನೇಕ ವಿದ್ಯಾರ್ಥಿಗಳು ಇಂದು ಪದಕ ವಿಜೇತರಾಗಿದ್ದಾರೆ. ಸ್ಪರ್ಧೆಯಲ್ಲಿ ಸೋತವರು ಇಂದಿನಿಂದಲೇ ತಮ್ಮ ಗುರಿಯತ್ತ ಗಮನಹರಿಸಬೇಕು. ಪದಕ ವಿಜೇತರು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ಮುಂದಿನ ಘಟ್ಟದ ಸ್ಪರ್ಧೆಗಳಿಗಾಗಿ ತಯಾರಾಗಬೇಕು. ಈ ಕ್ರೀಡಾಕೂಟವು ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿವೃಂದದ ಸಮ್ಮಿಲನವಾಗಿದೆ ಎಂದರು.
ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಅತಿ ವಂ| ಲಾರೆನ್ಸ್ ಮಸ್ಕರೇಞಸ್‌ರವರು ನಮ್ಮ ಸಂಸ್ಥಾಪಕರಾದ ಮೊ| ಆಂಟೊನಿ ಪತ್ರಾವೋರವರ ಸ್ಮರಣಾರ್ಥವಾಗಿ ನಡೆದ ಈ ಕ್ರೀಡಾ ಕೂಟಕವು ಯಶಸ್ವಿಯಾಗಿ ನೆರವೇರಿದೆ. ಎರಡು ದಿನಗಳ ಕ್ರೀಡಾ ಕೂಟವನ್ನು ಸುವ್ಯವಸ್ಥಿತವಾಗಿ ಆಯೋಜಿಸಿದ ಸಂಘಟಕರ ಶ್ರಮ ಪ್ರಶಂಸನೀಯ ಎಂದು ಹೇಳಿದರು.
ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಜೆರಾಲ್ಡ್ ಡಿ ಕೋಸ್ಟ, ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲರಾದ ವಂ|ಡಾ| ಆಂಟೊನಿ ಪ್ರಕಾಶ್ ಮೊಂತೆರೋ, ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ವಂ| ಅಶೋಕ್ ರೆಯಾನ್ ಕ್ರಾಸ್ತಾ, ಸಂತ ಫಿಲೋಮಿನಾ ಪ್ರೌಢಶಾಲೆಯ ಮುಖ್ಯಗುರುಗಳಾದ ವಂ| ಮಾಕ್ಸಿಮ್ ಡಿಸೋಜ, ಸಂತ ವಿಕ್ಟರನ ಬಾಲಿಕಾ ಪ್ರೌಢಶಾಲೆಯ ಮುಖ್ಯ ಗುರುಗಳಾದ ರೋಸಲಿನ್ ಲೋಬೋ, ಸಂತ ವಿಕ್ಟರ್ ನ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಹ್ಯಾರಿ ಡಿಸೋಜ, ಮಾಯಿದೆ ದೇವುಸ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿಯಾದ ಜಾನೆಟ್ ಡಿಸೋಜ, ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಗುರುಗಳಾದ ಸಿಸ್ಟರ್ ಲೋರಾ ಪಾಯಸ್, ಸಂತ ಫಿಲೋಮಿನಾ ಪುರುಷರ ಹಾಸ್ಟೆಲ್ ವಾರ್ಡನ್ ವಂ| ರೂಪೇಶ್ ತಾವ್ರೋ, ಸಂತ ಫಿಲೋಮಿನಾ ಮಹಿಳೆಯರ ಹಾಸ್ಟೆಲ್ ವಾರ್ಡನ್ ಸಿಸ್ಟರ್ ಲೂರ್ದ್ ಮೇರಿ, ಈ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ ರಕ್ಷಕ ಸಂಘಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಹಾಗೂ ಮಾಯಿದೆ ದೇವುಸ್ ವಿದ್ಯಾಸಂಸ್ಥೆಗಳ ಸಿಬ್ಬಂದಿ ವರ್ಗ ಮತ್ತು 4೦೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದರು. ಕ್ರೀಡಾಕೂಟದ ಕೊನೆಯಲ್ಲಿ ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಸುಮನಾ ಸ್ವಾಗತಿಸಿದರು. ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕರಾದ ವಂ|ಸ್ಟ್ಯಾನಿ ಪಿಂಟೋ ವಂದಿಸಿದರು. ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜಿನ ಭೌತಶಾಸ್ತ್ರ ವಿಭಾಗದ ಉಪನ್ಯಾಸಕಿ ರಶ್ಮಿ ಕಾರ್ಯಕ್ರಮ ನಿರೂಪಸಿದರು.

LEAVE A REPLY

Please enter your comment!
Please enter your name here