ಮಗಳು ಮಾಡಿದ ಸಾಲದ ಹೊಣೆ ಹೊತ್ತ ತಾಯಿ – ಮರುಪಾವತಿಸದೆ ಕಂಗಾಲಾಗಿದ್ದ ಹಿರಿಜೀವ – ನೆರವಿನ ಹಸ್ತ ಚಾಚಿ ಹೊರೆ ಇಳಿಸಿದ ಶಾಸಕ – ನೆಮ್ಮದಿಯ ನಿಟ್ಟುಸಿರು ಬಿಟ್ಟ ಅಮ್ಮ

0

ಉಪ್ಪಿನಂಗಡಿ: ಬಡವರು, ಅಶಕ್ತರು, ವೃದ್ಧರು ಎಂದರೇ ಸದಾ ಮಿಡಿಯುವ ಮಾನವೀಯ ಹೃದಯವುಳ್ಳ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರು ಅಜ್ಜಿಯೋರ್ವರು ಬ್ಯಾಂಕ್‌ನಲ್ಲಿರುವ ಸಾಲವನ್ನು ಮರುಪಾವತಿಸಲಾಗದೇ, ತಿಂಗಳಿಗೆ ತನ್ನ ಉಳಿತಾಯ ಖಾತೆಗೆ ಬರುವ ಒಂದು ಸಾವಿರ ರೂಪಾಯಿ ಪೆನ್ಶನ್ ಹಣವನ್ನೂ ಸಂಕಷ್ಟ ಸ್ಥಿತಿಯಲ್ಲಿರುವುದನ್ನು ಅರಿತು ಅವರ ಬ್ಯಾಂಕ್‌ನಲ್ಲಿರುವ ಸಾಲವನ್ನು ಚುಕ್ತಾಗೊಳಿಸುವ ಮೂಲಕ ಆ ಅಜ್ಜಿಯ ಬಾಳಿಗೆ ಬೆಳಕಾಗಿದ್ದಾರೆ.
34 ನೆಕ್ಕಿಲಾಡಿಯ ಬೀತಲಪ್ಪು ಎಂಬಲ್ಲಿಯ ಅಪ್ಪಿ ಅವರು ಹೇಳುವಂತೆ, ಅವರ ಹೆಸರಿನಲ್ಲಿ ಅವರ ಮಗಳು ಉಪ್ಪಿನಂಗಡಿಯ ಯೂನಿಯನ್ ಬ್ಯಾಂಕ್‌ನಿಂದ ಅಜ್ಜಿಯ ಹೆಸರನಲ್ಲಿ ಸಾಲ ಪಡೆದಿದ್ದರಂತೆ. ಪಡೆದ ಸಾಲವನ್ನು ಸರಿಯಾಗಿ ಮರುಪಾವತಿ ಮಾಡುತ್ತಿದ್ದರಾದರೂ, ಕೆಲ ಸಮಯದ ಹಿಂದೆ ಅವರ ಮಗಳು ಅನಾರೋಗ್ಯದಿಂದ ನಿಧನರಾಗಿದ್ದರು. ಬಳಿಕ ದುಡಿಯಲು ಸಾಧ್ಯವಾಗದ ಅಜ್ಜಿಗೆ ಸಾಲ ಮರುಪಾವತಿ ಕಷ್ಟವಾಗಿತ್ತು. ಇತ್ತ ಬ್ಯಾಂಕ್ ಸಾಲ ಬೆಳೆಯುತ್ತಲೇ ಹೋಗಿತ್ತು. ಸಾಲ ಬಾಕಿಯಾಗಿದ್ದರಿಂದ ಬ್ಯಾಂಕ್‌ನವರು ಅಪ್ಪಿಯವರ ಉಳಿತಾಯ ಖಾತೆಯನ್ನು ಬ್ಲಾಕ್ ಮಾಡಿದ್ದರು. ಇದರಿಂದ ಇನ್ನೊಂದೆಡೆ ಅಪ್ಪಿಯವರಿಗೆ ತಿಂಗಳಿಗೆ ಬರುತ್ತಿದ್ದ ಒಂದು ಸಾವಿರ ರೂ. ಪೆನ್ಶನ್ ಹಣವನ್ನೂ ಅವರಿಗೆ ಪಡೆದುಕೊಳ್ಳಲು ಅಸಾಧ್ಯವಾಯಿತು. ಬ್ಯಾಂಕ್‌ನವರು ಒಟಿಎಸ್ (ಒನ್ ಟೈಂ ಸಟ್ಲ್‌ಮೆಂಟ್)ಗೆ ಅವಕಾಶ ಮಾಡಿಕೊಟ್ಟರೂ ಅಜ್ಜಿಯ ಕೈಯಲ್ಲಿ ಅದನ್ನು ಕಟ್ಟಲು ದುಡ್ಡಿರಲಿಲ್ಲ. ಅಜ್ಜಿಯು ತನ್ನ ಸಂಕಷ್ಟ ಸ್ಥಿತಿಯನ್ನು 34 ನೆಕ್ಕಿಲಾಡಿ ಕಾಂಗ್ರೆಸ್ ವಲಯಾಧ್ಯಕ್ಷೆ ಅನಿ ಮಿನೇಜಸ್ ಅವರಲ್ಲಿ ಹೇಳಿದ್ದರು. ಇದನ್ನು ಅನಿ ಮಿನೇಜಸ್ ಅವರು ಶಾಸಕ ಅಶೋಕ್ ಕುಮಾರ್ ರೈಯವರ ಗಮನಕ್ಕೆ ತಂದಿದ್ದರು. ತನ್ನ ರೈ ಎಸ್ಟೇಟ್ ಆಂಡ್ ಚಾರಿಟೇಬಲ್ ಟ್ರಸ್ಟ್‌ನ ಮೂಲಕ ಅದೆಷ್ಟೋ ಮಂದಿಗೆ ಸಹಾಯ ಹಸ್ತ ಚಾಚಿರುವ ಶಾಸಕ ಅಶೋಕ್ ಕುಮಾರ್ ರೈಯವರು ತಕ್ಷಣ ಈ ಬಗ್ಗೆ ಸ್ಪಂದಿಸಿದ್ದು, ಬ್ಯಾಂಕ್ ವ್ಯವಸ್ಥಾಪಕರನ್ನು ಸಂಪರ್ಕಿಸಿದ್ದಲ್ಲದೆ, ಅಪ್ಪಿಯವರ ಸಾಲವನ್ನು ಚುಕ್ತಾಗೊಳಿಸಲು ಬೇಕಾದ 13 ಸಾವಿರ ರೂಪಾಯಿಯನ್ನು ಶಾಸಕ ಅಶೋಕ್ ಕುಮಾರ್ ರೈಯವರು ಚೆಕ್ ಮೂಲಕ ನೀಡಿದರು. ಶಾಸಕರು ನೀಡಿದ ಚೆಕ್ ಅನ್ನು ಅಪ್ಪಿಯವರು ಬ್ಯಾಂಕ್ ವ್ಯವಸ್ಥಾಪಕರಿಗೆ ನೀಡಿದ್ದು, ತನ್ನ ಸಾಲವನ್ನು ಚುಕ್ತಾಗೊಳಿಸಿದ್ದಾರೆ. ಶಾಸಕರು ನೀಡಿರುವ ನೆರವಿನಿಂದಾಗಿ ಅಜ್ಜಿಯು ಇದೀಗ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

LEAVE A REPLY

Please enter your comment!
Please enter your name here