ನರೇಗಾ ಯೋಜನೆಯಡಿ ಗೋಳಿತ್ತೊಟ್ಟು ಗ್ರಾ.ಪಂ.ನಿಂದ ಅತೀ ಹೆಚ್ಚು ಅನುದಾನ ಬಳಕೆ: ಚೆನ್ನಪ್ಪ ಗೌಡ
ನೆಲ್ಯಾಡಿ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಮತ್ತು ಕೇಂದ್ರ ಸರಕಾರದ 15ನೇ ಹಣಕಾಸು ಯೋಜನೆಯ ಗೋಳಿತ್ತೊಟ್ಟು ಗ್ರಾಮ ಪಂಚಾಯತ್‌ನ 2023-24ನೇ ಸಾಲಿನ ಪ್ರಥಮ ಮತ್ತು ದ್ವಿತೀಯ ಹಂತದ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮಸಭೆ ನ.2ರಂದು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕಡಬ ತಾ.ಪಂ.ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ ಅವರು ಮಾತನಾಡಿ, ಎಲ್ಲರೂ ಒಟ್ಟು ಸೇರಿ ಕೆಲಸ ನಿರ್ವಹಿಸಿದಾಗ ಗ್ರಾಮದ ಅಭಿವೃದ್ಧಿ ಸಾಧ್ಯವಿದೆ. ಉದ್ಯೋಗ ಖಾತರಿ ಯೋಜನೆಯಡಿ ಗೋಳಿತ್ತೊಟ್ಟು ಗ್ರಾಮ ಪಂಚಾಯತ್‌ನಲ್ಲಿ ಅತೀ ಹೆಚ್ಚು ಅನುದಾನ ಬಳಕೆಯಾಗಿದೆ. ಉದ್ಯೋಗ ಖಾತ್ರಿ ಯೋಜನೆಯ ಅನುದಾನ ಬಳಕೆಯಲ್ಲಿ ಕಡಬ ತಾಲೂಕಿನಲ್ಲಿ ಗೋಳಿತ್ತೊಟ್ಟು ಗ್ರಾಮ ಪಂಚಾಯತ್ ಮೊದಲ ಸ್ಥಾನದಲ್ಲಿದೆ. ಯೋಜನೆಯ ಕುರಿತು ಗ್ರಾಮಸ್ಥರು ಸಮರ್ಪಕ ಮಾಹಿತಿ ಪಡೆದುಕೊಂಡು ತಮ್ಮ ಜಮೀನಿನಲ್ಲಿ ಅನುಷ್ಠಾನಗೊಳಿಸಬೇಕು. ಈ ಮೂಲಕ ಗ್ರಾಮದ ಅಭಿವೃದ್ಧಿಗೂ ಪಾಲುದಾರರಾಗಬೇಕೆಂದು ಹೇಳಿದರು.
ಯೋಜನೆಯ ತಾಲೂಕು ಸಂಯೋಜಕ ಪ್ರವೀಣ್‌ಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಉದ್ಯೋಗ ಖಾತರಿ ಯೋಜನೆಯಡಿ ವೈಯಕ್ತಿಕ ಹಾಗೂ ಸಾರ್ವಜನಿಕ ಕೆಲಸಗಳನ್ನು ಮಾಡಬಹುದಾಗಿದೆ. ಕಾಮಗಾರಿ ಆರಂಭಿಸುವ ಮೊದಲು ಗ್ರಾಮ ಪಂಚಾಯತಿಗೆ ಬಂದು ಮಾಹಿತಿ ಪಡೆದುಕೊಂಡು ಅರ್ಜಿ ಸಲ್ಲಿಸಬೇಕು. ಯೋಜನೆಯ ನಿಯಮಾನುಸಾರವೇ ಕಾಮಗಾರಿ ನಿರ್ವಹಿಸಬೇಕು ಎಂದರು. ಗೋಳಿತ್ತೊಟ್ಟು ಗ್ರಾ.ಪಂ.ನಲ್ಲಿ ಕಳೆದ ಅವಧಿಯಲ್ಲಿ ಒಟ್ಟು 358 ಕಾಮಗಾರಿಗಳ ನಿರ್ವಹಣೆ ಮಾಡಲಾಗಿದೆ. ಈ ಪೈಕಿ ಸಾಮಾಜಿಕ ಪರಿಶೋಧನಾ ತಂಡವು 172 ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಎಲ್ಲಾ ಕಡೆಯೂ ಉತ್ತಮ ರೀತಿಯಲ್ಲಿ ಕೆಲಸ ನಡೆದಿದೆ. ಕಡತಗಳ ನಿರ್ವಹಣೆಯೂ ಅಚ್ಚುಕಟ್ಟಾಗಿ ನಡೆದಿದೆ. 6 ಕಾಮಗಾರಿಗಳಿಗೆ ಪಂಚಾಯಿತಿಯಿಂದ ರಾಜಧನ ಪಾವತಿಯಾಗಿಲ್ಲ. 15ನೇ ಹಣಕಾಸು ಯೋಜನೆಯಲ್ಲಿಯೂ ಸರಕಾರಕ್ಕೆ ತೆರಿಗೆ ಪಾವತಿಯಾಗಿಲ್ಲ. ನರೇಗಾ ಯೋಜನೆಯಡಿ ಗೋಳಿತ್ತೊಟ್ಟು ಗ್ರಾಮ ಪಂಚಾಯಿತಿಯಲ್ಲಿ ಕಡಬ ತಾಲೂಕಿನಲ್ಲಿಯೇ ಅತ್ಯುತ್ತಮ ಕೆಲಸ ಆಗಿದೆ ಎಂದರು. ನರೇಗಾ ಯೋಜನೆಯ ತಾಂತ್ರಿಕ ಸಹಾಯಕ ಭರತ್‌ರಾಜ್ ಅವರು ಯೋಜನೆಯ ಕುರಿತು ಮಾಹಿತಿ ನೀಡಿ, ನರೇಗಾ ಯೋಜನೆಯಡಿ ಒಬ್ಬ ವ್ಯಕ್ತಿಗೆ ಆತನ ಜೀವಿತಾವಧಿಯಲ್ಲಿ 5 ಲಕ್ಷ ರೂಪಾಯಿಯ ಕಾಮಗಾರಿ ಮಾಡಬಹುದಾಗಿದೆ. ಈ ಹಿಂದೆ ಒಬ್ಬ ವ್ಯಕ್ತಿಗೆ 2.5 ಲಕ್ಷ ರೂ. ನಿಗದಿಗೊಳಿಸಲಾಗಿತ್ತು. ಅದನ್ನು ಈಗ ರೂ. 5 ಲಕ್ಷಕ್ಕೆ ಏರಿಸಲಾಗಿದೆ ಎಂದರು. ಗ್ರಾ.ಪಂ.ಉಪಾಧ್ಯಕ್ಷ ಬಾಬು ಪೂಜಾರಿ ಕಿನ್ಯಡ್ಕ ಮಾತನಾಡಿ, ಹಿಂದಿನ ಆಡಳಿತ ಮಂಡಳಿಯವರ ಪ್ರಯತ್ನದಿಂದ ಹಾಗೂ ಗ್ರಾಮಸ್ಥರು, ಅಧಿಕಾರಿಗಳ ಸಹಕಾರದಿಂದ ಗೋಳಿತ್ತೊಟ್ಟು ಗ್ರಾ.ಪಂ.ನಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಉತ್ತಮ ಕೆಲಸ ಆಗಿದೆ. ಕಸವಿಲೇವಾರಿಗೆ ಸಂಬಂಧಿಸಿದಂತೆ ಜಿಲ್ಲೆಯ ವಿವಿಧ ಘನತ್ಯಾಜ್ಯ ಘಟಕಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ ಎಂದರು.
ಮೇಲ್ಮನವಿ ಸಲ್ಲಿಸಿ:
ಹಿಂದಿನ ಪಿಡಿಒ ಅವರ ಅವಧಿಯಲ್ಲಿ ಉದ್ಯೋಗ ಖಾತರಿ ಯೋಜನೆಯ ಕಾಮಗಾರಿಗಳಲ್ಲಿ ಆಗಿರುವ ಲೋಪಗಳ ಬಗ್ಗೆ ಹಿಂದಿನ ಸಾಮಾಜಿಕ ಪರಿಶೋಧನಾ ಸಭೆಯಲ್ಲಿ ಪ್ರಸ್ತಾಪಿಸಿ ಸೂಕ್ತ ಕ್ರಮಕ್ಕೆ ಒತ್ತಾಯಿಸಲಾಗಿತ್ತು. ಈ ಬಗ್ಗೆ ಏನು ಕ್ರಮ ಆಗಿದೆ ಎಂದು ಗ್ರಾಮಸ್ಥ ರಘು ಪಾಲೇರಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ತಾಲೂಕು ಸಂಯೋಜಕ ಪ್ರವೀಣ್‌ಕುಮಾರ್ ಅವರು, ಈ ಸಂಬಂಧ ಹಿಂದಿನ ಪಿಡಿಒ ಅವರಿಗೆ ನೋಟಿಸ್ ನೀಡಿ, ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದರು. ಈ ಬಗ್ಗೆ ಮತ್ತೆ ಚರ್ಚೆ ನಡೆಯುತ್ತಿದ್ದಂತೆ ಮಾತನಾಡಿದ ತಾ.ಪಂ.ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ ಅವರು, ಈ ಕ್ರಮ ಸಮಂಜಸವಲ್ಲ ಎಂದಾದಲ್ಲಿ ಗ್ರಾಮಸ್ಥರಿಗೆ ಮೇಲ್ಮನವಿಗೆ ಅವಕಾಶವಿದೆ. ಈ ಸಭೆಯಲ್ಲಿ ಈ ಅವಧಿಯಲ್ಲಿ ಆಗಿರುವ ಕಾಮಗಾರಿಗಳ ಬಗ್ಗೆ ಚರ್ಚೆ ಮಾಡುವ ಎಂದರು.
ಕಬಡ್ಡಿ ಅಂಕಣ ಕಾಮಗಾರಿ ಪೂರ್ಣಗೊಳಿಸಿ:
ಗೋಳಿತ್ತೊಟ್ಟು ಶಾಲೆಯಲ್ಲಿ ನಡೆಯುತ್ತಿರುವ ಕಬಡ್ಡಿ ಅಂಕಣದ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು ಎಂದು ಗ್ರಾಮಸ್ಥ ಜೋಸೆಫ್‌ರವರು ಆಗ್ರಹಿಸಿ, ಈ ಕಾಮಗಾರಿ ಬಗ್ಗೆ ಅಸಮಾಧಾನವಿದೆ. ಮುಂದಿನ ಕಾಮಗಾರಿ ನಡೆಯುವ ವೇಳೆ ಮಾಹಿತಿ ನೀಡಬೇಕು ಎಂದರು. ಯೋಜನೆಯ ತಾಂತ್ರಿಕ ಅಭಿಯಂತರರಾದ ಮನೋಜ್‌ಕುಮಾರ್‌ರವರು ಮಾತನಾಡಿ, ಅಂಕಣಕ್ಕೆ ಮಣ್ಣು ಹಾಕಿ ರೋಲಿಂಗ್ ಮಾಡಲು ಇದೆ. ಮುರಮಣ್ಣು, ಹೊಯಿಗೆ, ಮರದ ಹುಡಿ ಹಾಕಿ ಅಂಕಣ ಮಾಡಲಾಗುತ್ತದೆ. ಮಳೆನಿಂತ ಕೂಡಲೇ ಕಾಮಗಾರಿ ಆರಂಭಿಸಿ ಶೀಘ್ರ ಪೂರ್ಣಗೊಳಿಸುತ್ತೇವೆ. ಮುಂದಿನ ಕಾಮಗಾರಿ ವೇಳೆ ಮಾಹಿತಿ ನೀಡುವುವುದಾಗಿ ತಿಳಿಸಿದರು. ವಿವಿಧ ಕಾಮಗಾರಿಗಳ ಕುರಿತು ಗ್ರಾಮಸ್ಥರು ಪ್ರಶ್ನಿಸಿದರು.
ಗ್ರಾ.ಪಂ.ಅಧ್ಯಕ್ಷೆ ಸವಿತಾ ಆಲಂತಾಯ, ಪಿಡಿಒ ಜಗದೀಶ ನಾಯ್ಕ್, ತಾಂತ್ರಿಕ ಅಭಿಯಂತರರಾದ ಮನೋಜ್‌ಕುಮಾರ್, ಸವಿತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸದಸ್ಯರಾದ ಜನಾರ್ದನ ಗೌಡ, ನೋಣಯ್ಯ ಗೌಡ, ಶಿವಪ್ರಸಾದ್ ಎಸ್.ಎಸ್., ಬಾಲಕೃಷ್ಣ ಅಲೆಕ್ಕಿ, ಪದ್ಮನಾಭ ಪೂಜಾರಿ, ಹೇಮಲತಾ, ಪ್ರಜಲ, ಜೀವಿತ ಪೆರಣ, ವಾರಿಜಾಕ್ಷಿ, ಶೋಭಲತಾ, ಜಾನಕಿ, ಗುಲಾಬಿ ಹಾಗೂ ಗ್ರಾಮಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು. ಗ್ರಾಮಸ್ಥರಾದ ಅಬ್ದುಲ್ಲಾಕುಂಞಿ ಕೊಂಕೋಡಿ, ವಿಶ್ವನಾಥ ಗೌಡ, ಪ್ರಸಾದ್ ಕೆ.ಪಿ.ಮತ್ತಿತರರು ಯೋಜನೆಗೆ ಸಂಬಂಧಿಸಿದ ವಿವಿಧ ಪ್ರಶ್ನೆಗಳನ್ನು ಕೇಳಿದರು. ಕಾರ್ಯದರ್ಶಿ ಚಂದ್ರಾವತಿ ಸ್ವಾಗತಿಸಿ, ನಿರೂಪಿಸಿದರು. ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ಜಯಮಣಿ, ಸುಪ್ರಿಯಾ, ಶ್ವೇತಾಕ್ಷಿ, ಪ್ರಣಮ್ಯ, ಸವಿತಾ, ಯಶ್ಮಿತಾ, ಬಾಲಚಂದ್ರ, ಗ್ರಾ.ಪಂ.ಸಿಬ್ಬಂದಿಗಳಾದ ಬಾಬು ನಾಯ್ಕ್, ಪುಷ್ಪಾಜಯಂತ, ದಿನೇಶ್, ಯಶವಂತ, ಕೀರ್ತಿಕಾ ಸಹಕರಿಸಿದರು.
ನರೇಗಾದಲ್ಲಿ 1.09 ಕೋಟಿ ರೂ.ಖರ್ಚು:
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಗೋಳಿತ್ತೊಟ್ಟು ಗ್ರಾಮ ಪಂಚಾಯತ್‌ನಲ್ಲಿ 1-4-2022ರಿಂದ 31-3-2023ರ ತನಕದ ಅವಧಿಯಲ್ಲಿ ಒಟ್ಟು 1,09,92,717 ರೂ.ಖರ್ಚು ಮಾಡಲಾಗಿದೆ. ಇದರಲ್ಲಿ 64,68,684 ರೂ.ಕೂಲಿ ಮೊತ್ತ ಹಾಗೂ 45,24,033 ರೂ.ಸಾಮಾಗ್ರಿ ಮೊತ್ತ ಪಾವತಿಯಾಗಿದೆ. ಒಟ್ಟು 435 ಕುಟುಂಬಗಳು ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದು 940 ಮಂದಿ ಕೆಲಸ ನಿರ್ವಹಿಸಿದ್ದಾರೆ. 20,936 ಮಾನವ ದಿನ ಸೃಜನೆಯಾಗಿದೆ ಎಂದು ತಾಲೂಕು ಸಂಯೋಜಕರು ಮಾಹಿತಿ ನೀಡಿದರು.
15ನೇ ಹಣಕಾಸು ಯೋಜನೆಯಡಿ 38.88 ಲಕ್ಷ ರೂ.ಖರ್ಚು:ಕೇಂದ್ರ ಸರಕಾರದ 15ನೇ ಹಣಕಾಸು ಯೋಜನೆಯಡಿ ಗೋಳಿತ್ತೊಟ್ಟು ಗ್ರಾಮ ಪಂಚಾಯತ್‌ನಲ್ಲಿ 1-4-2022ರಿಂದ 31-3-2023ರ ತನಕದ ಅವಧಿಯಲ್ಲಿ 38,88,788 ರೂ.ಖರ್ಚು ಆಗಿದೆ. ಒಟ್ಟು 37 ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗಿದೆ ಎಂದು ಮಾಹಿತಿ ನೀಡಲಾಯಿತು.