ಉಚಿತ ವೈದ್ಯಕೀಯ ಶಿಬಿರ
ಉಚಿತ ಆಧಾರ್ ನೋಂದಣಿ, ತಿದ್ದುಪಡಿ
ಪುತ್ತೂರು: ಪಡ್ನೂರು ಹಿ.ಪ್ರಾ ಶಾಲಾ ಜನಾರ್ದನ ರಂಗ ಮಂದಿರದಲ್ಲಿ ಎರಡು ದಿನಗಳ ಕಾಲ ಸಂಭ್ರಮಿಸಲಿರುವ ಜನಾರ್ದನ ಯುವಕ ಮಂಡಲದ ಸುವರ್ಣ ಮಹೋತ್ಸವ ‘ ಪಡ್ನೂರು ಉತ್ಸವ’ಕ್ಕೆ ನ.4ರಂದು ಚಾಲನೆ ನೀಡಲಾಯಿತು.
ಬೆಳಿಗ್ಗೆ ಗಣಹೋಮದೊಂದಿಗೆ ಸುವರ್ಣ ಸಂಭ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ದೀಪ ಬೆಳಗಿಸಿ,ಭಾರತಮಾತೆಗೆ ಪುಷ್ಪಾರ್ಚನೆ ಸಲ್ಲಿಸಲಾಯಿತು.
ಸುವರ್ಣ ಮಹೋತ್ಸವದ ಅಂಗವಾಗಿ ಆಯೋಜಿಸಲಾದ ಉಚಿತ ವೈದ್ಯಕೀಯ ಶಿಬಿರವನ್ನು ಉದ್ಘಾಟಿಸಿದ ಮುರ ಜಯಂತ ಕ್ಲಿನಿಕ್ ನ ಡಾ.ಕೃಷ್ಣ ಪ್ರಸಾದ್ ಸರ್ಪಂಗಲ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಜನಾರ್ದನ ಯುವಕ ಮಂಡಲ ಹಲವು ಕಾರ್ಯಕ್ರಮಗಳ ಮೂಲಕ ಮೆಚ್ಚುಗೆ ಗಳಿಸಿರುವುದನ್ನು ಶ್ಲಾಘಿಸಿದರು. ಯುವಕ ಮಂಡಲದ ಸಮಾಜ ಮುಖಿ ಸೇವೆಯು ನಿರಂತರವಾಗಿ ಮುನ್ನಡೆಯಲಿ. ಜನರಿಗೆ ಇನ್ನಷ್ಟು ಸೇವೆಗಳು ದೊತೆಯುವಂತಾಗಲಿ ಎಂದರು.
ಮುಖ್ಯ ಅತಿಥಿ ಖ್ಯಾತ ವೈದ್ಯರಾದ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ಯುವಕ ಮಂಡಲದ ಅನೇಕ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ವೈದ್ಯಕೀಯ ಶಿಬಿರವು ಒಂದು. ಜನಾರ್ದನ ಯುವಕ ಮಂಡಲವು ಸಮಾಜದ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿರುತ್ತದೆ. ಕ್ರೀಡಾ ಕ್ಷೇತ್ರದ ಸಾಧನೆಗೆ ಸಭಾಂಗಣದಲ್ಲಿ ಅಳವಡಿಸಲಾದ ಫಲಕಗಳೆ ಕೈಗನ್ನಡಿಯಾಗಿದೆ ಎಂದು ಹೇಳಿದ ಅವರು ವೇಗದ ಯುಗದಲ್ಲಿ ಆರೋಗ್ಯದ ಕಡೆ ಗಮನ ಕಡಿಮೆಯಾಗಿದೆ. ಮಧುಮೇಹ, ರಕ್ತದೊತ್ತಡಗಳು ನಮಗೆ ಅರಿವಿಲ್ಲದಂತೆ ಬರುತ್ತದೆ. ಇವುಗಳ ನಿಯಂತ್ರಣ ಮಾಡಿದರೆ ಹಲವು ರೋಗಗಳನ್ನು ನಿಯಂತ್ರಣ ಮಾಡಿದಂತಾಗುತ್ತದೆ. ಹೀಗಾಗಿ ಆಗಾಗ ನಮ್ಮ ಆರೋಗ್ಯವನ್ನು ಪರೀಕ್ಷಿಸಿಕೊಳ್ಳಬೇಕು. ಇಂತಹ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿದ್ದು ಜನರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪಡ್ನೂರು ಸಮುದಾಯ ಆರೋಗ್ಯ ಅಧಿಕಾರಿ ಸೌಮ್ಯ ಮಾತನಾಡಿ, ಜನ ಸಮಾನ್ಯರಿಗೆ ಬೇಕಾದ ಎಲ್ಲಾ ಸೇವೆಗಳು ಜನಾರ್ದನ ಯುವಕ ಮಂಡಲದ ಮೂಲಕ ಜನರಿಗೆ ತಲುಪುತ್ತಿದೆ. ಆರೋಗ್ಯ ಶಿಬಿರ ಆಯೋಜಿಸುವ ಮೂಲಕ ಗ್ರಾಮಸ್ಥರಿಗೆ ಪೂರಕವಾದ ಸೇವೆಗಳನ್ನು ತಲುಪಿಸುವಲ್ಲಿ ಯುವಕ ಮಂಡಲವು ಇಲಾಖೆಯ ಜೊತೆ ಕೈಜೋಡಿಸುತ್ತಿದ್ದಾರೆ. ಸುವರ್ಣ ಮಹೋತ್ಸವದ ಅಂಗವಾಗಿ ನಡೆಯುವ ಆರೋಗ್ಯ ಶಿಬಿರವು ರೋಗಿಗಳಿಗೆ ಮಾತ್ರವಲ್ಲ. ಆರೋಗ್ಯವಂತರಿಗೂ ತಮ್ಮ ಆರೋಗ್ಯವನ್ನು ಪರೀಕ್ಷಿಸಿಕೊಳ್ಳಲು ಅನುಕೂಲವಾಗಲಿದೆ ಎಂದರು.
ಕೀಲು ಮತ್ತು ಎಲುಬು ತಜ್ಞ ಡಾ.ಸಚಿನ್ ಶಂಕರ್ ಹಾರಕರೆ, ಬೇರಿಕೆ ಶ್ರೀ ಆಧಿಶಕ್ತಿ ಭಜನಾ ಮಂದಿರದ ಅಧ್ಯಕ್ಷ ಕೃಷ್ಣಪ್ಪ ಕುಲಾಲ್ ಬೇರಿಕೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಡ್ನೂರು ಒಕ್ಕೂಟದ ಅಧ್ಯಕ್ಷ ತಿಮ್ಮಪ್ಪ ಪಡ್ನೂರು, ನವೋದಯ ಒಕ್ಕೂಟದ ಅಧ್ಯಕ್ಷೆ ಚಂದ್ರಾವತಿ, ಪಡ್ನೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರಾಮಣ್ಣ ಗೌಡ ಪುಳು, ಶ್ರೀರಾಂ ಫ್ರೆಂಡ್ಸ್ ನ ಅಧ್ಯಕ್ಷ ಯತೀಶ್ ಪಂಜಿಗುಡ್ಡೆ, ಯರ್ಮುಂಜಪಳ್ಳ ಗೆಳೆಯರ ಬಳಗದ ಅಧ್ಯಕ್ಷ ಕುಶಲ ಗೌಡ, ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷರಾದ ಬಾಲಕೃಷ್ಣ ಜೊಯಿಷ ಯರ್ಮಂಜ, ವಿಶ್ವನಾಥ ಗೌಡ ಪಟ್ಟೆ, ಸುವರ್ಣ ಸಮಿತಿ ಅಧ್ಯಕ್ಷ ಪೂವಪ್ಪ ಗೌಡ ದೇಂತಡ್ಕ, ಕಾರ್ಯದರ್ಶಿ ಶ್ರೀಧರ ಕುಂಜಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಡ್ನೂರು ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸುವರ್ಣ ಮಹೋತ್ಸವ ಸಮಿತಿ ಕೊಶಾಧಿಕಾರಿ ರಾಜೇಶ್ ಬೇರಿಕೆ ಸ್ವಾಗತಿಸಿದರು. ಯುವಕ ಮಂಡಲದ ಅಧ್ಯಕ್ಷ ರಾಜೇಶ್ ಪಟ್ಟೆ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ವಿಶ್ವಪ್ರಸಾದ್ ಸೇಡಿಯಾಪು ವಂದಿಸಿದರು. ಯುವಕ ಮಂಡಲದ ಸದಸ್ಯರಾದ ರಂಜಿತ್ ಕಡ್ತಿಮಾರ್, ಶ್ಯಾಮ್ ಪ್ರಸಾದ್ ಪಂಜಿಗುಡ್ಡೆ, ಶ್ರೀಧರ ಪಂಜಿಗುಡ್ಡೆ, ಲಿಖಿತ್ ಸೇಡಿಯಾಪು, ಹರ್ಷಿತ್ ಕಡ್ತಿಮಾರ್, ಸಾವಿತ್ರೊ ಕೊಡಂಗೆ, ರೇಖಾ ಆಟಿಕ್ಕು, ಜಗದೀಶ್ ಆಟಿಕ್ಕು, ವಿಶ್ವನಾಥ ಗೌಡ ಕಡ್ತಿಮಾರ್, ನವೀನ ಸೇಡಿಯಾಪು ಅತಿಥಿಗಳನ್ನು ಶಾಲು ಹಾಕಿ ಸ್ವಾಗತಿಸಿದರು.
ಬಳಿಕ ನಡೆದ ವೈದ್ಯಕೀಯ ಶಿಬಿರದಲ್ಲಿ ವೈದ್ಯಕೀಯ ತಜ್ಞ ಡಾ.ಸುರೇಶ್ ಪುತ್ತೂರಾಯ, ಕೀಲು ಮತ್ತು ಎಲುಬು ತಜ್ಞ ಡಾ.ಸಚಿನ್ ಶಂಕರ್ ಹಾರಕರೆ, ಡಾ.ಅನನ್ಯ ಲಕ್ಷ್ಮೀ ಸಂದೀಪ್, ಆಯುರ್ವೇದ ತಜ್ಞ ಡಾ.ಸಾಯಿಪ್ರಕಾಶ್, ಡಾ. ಕೃಷ್ಣ ಪ್ರಸಾದ್ ಸರ್ಪಂಗಲ ಶಿಬಿರದಲ್ಲಿ ವೈದ್ಯಕೀಯ ತಪಾಸಣೆ ನಡೆಸಿದರು. ನೂರಾರು ಮಂದಿ ಗ್ರಾಮಸ್ಥರು ಶಿಬಿರದ ಪ್ರಯೋಜನ ಪಡೆದುಕೊಂಡರು. ಆರೋಗ್ಯ ತಪಾಸಣೆ ಹಾಗೂ ಔಷಧಿಯನ್ನು ಉಚಿತವಾಗಿ ನೀಡಲಾಯಿತು.
ಉಚಿತ ಆಧಾರ್ ನೋಂದಣಿ, ತಿದ್ದುಪಡಿ:
ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸುವರ್ಣ ಮಹೋತ್ಸವದ ಅಂಗವಾಗಿ ಅಂಚೆ ಇಲಾಖೆಯ ಸಹಭಾಗಿತ್ವದಲ್ಲಿ ಉಚಿತ ಆಧಾರ್ ನೋಂದಣಿ ಹಾಗೂ ತಿದ್ದುಪಡಿ, ಅಂಚೆ ಇಲಾಖೆ ಖಾತೆಗೆ ಆಧಾರ್ ಜೋಡಣೆ ಹಾಗೂ ಅಂಚೆ ಇಲಾಖೆಯ ಇತರ ಸೇವೆಗಳ ಮಾಹಿತಿಯನ್ನು ಆಯೋಜಿಸಲಾಗಿತ್ತು.