ಮನೆ ಮನದಲ್ಲಿ ರಾಮತತ್ವ ಸ್ಥಿರವಾಗಬೇಕು : ಸೂರ್ಯನಾರಾಯಣ ಭಟ್
ಪುತ್ತೂರು: ಮನೆ ಮನೆಯಲ್ಲೂ, ಮನ-ಮನದಲ್ಲೂ ರಾಮತತ್ವ ಸ್ಥಿರವಾಗಿ ನೆಲೆಸಿದಾಗ ಮತ್ತೆ ಭಾರತ ವಿಶ್ವಗುರುವಾಗುವುದರಲ್ಲಿ ಸಂದೇಹವಿಲ್ಲ. ಮಾನವನ ಆಯುಸ್ಸಿನ ಅತ್ಯಮೂಲ್ಯ ಸಮಯ ಮೊದಲ 20 ವರ್ಷಗಳು. ಅದು ಸಾಧನೆಯ ಕಾಲ. ಆ ಕಾಲಘಟ್ಟದಲ್ಲಿ ಉತ್ಕೃಷ್ಟ ವಿಷಯಗಳನ್ನು ಸಾಧಿಸಬೇಕು ಎಂದು ವೈದಿಕ ವಿದ್ವಾಂಸ ಕಶೆಕೋಡಿ ಸೂರ್ಯನಾರಾಯಣ ಭಟ್ ಹೇಳಿದರು.
ಅವರು ನಗರದ ನಟ್ಟೋಜ ಪೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ವಿದ್ಯಾಥಿಗಳಿಗೆ ರಾಮತಾರಕ ನಾಮಜಪವನ್ನು ಉಪದೇಶಿಸಿ ಶುಕ್ರವಾರ ಮಾತನಾಡಿದರು.
ವಸ್ತುಗಳು ನೀಡುವ ಭೋಗದ ಸುಖ ಅದು ನೈಜ ಸುಖವಲ್ಲ. ಸಂಸ್ಕಾರದಿಂದ ಸಿಗುವ ಸುಖ, ಪ್ರಕೃತಿಯಿಂದ ಸಿಗುವ ಸುಖ ನಿಜವಾದ ಸುಖ. ಅಪ್ಪ ಅಮ್ಮನ ಕನಸುಗಳನ್ನು ಶಿಕ್ಷಣ ಸಂಸ್ಥೆಯ ಹಂಬಲವನ್ನು ಪೂರ್ತಿ ಮಾಡುವ ಗುರುತರ ಜವಾಬ್ದಾರಿ ವಿದ್ಯಾಥಿಗಳ ಮೇಲಿದೆ. ಸಂಸಾರದ ಕೆಸರಿನಿಂದ ಮೇಲೆ ಬರಬೇಕಾದರೆ ’ಶ್ರೀ ರಾಮ ಜಯರಾಮ ಜಯ ಜಯ ರಾಮ’ ಎಂಬ ವಸಿಷ್ಟ ಮಹರ್ಷಿಗಳ ಹೇಳಿಕೊಟ್ಟ ಮಂತ್ರ ಜಪಿಸಬೇಕು ಎಂದು ನುಡಿದರಲ್ಲದೆ ರಾಮಮಂತ್ರದ ಮಹಿಮೆ ಅಪಾರ ಎಂದರು.
ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತಾಡಿ ರಾಮ ಮಂತ್ರದ ಮಹಿಮೆ, ಮರ್ಯಾದಾ ಪುರುಷತ್ತಮ ಶ್ರೀರಾಮನ ತತ್ವದ ಬಗ್ಗೆ ಪ್ರವಚನ, ರಾಮ ಮಂತ್ರದ ಉಪದೇಶ ಅಥವಾ ದೀಕ್ಷೆ ಅಂಬಿಕಾದಲ್ಲೊಂದು ದಾಖಲೆ ಸೃಷ್ಠಿಸಿದೆ. ಹಾಗೂ ಕರ್ನಾಟಕದಲ್ಲಿ ಮೊದಲ ಬಾರಿಗೆ ರಾಮ ಮಂತ್ರದ ದೀಕ್ಷೆ ತೊಟ್ಟು ಅಂಬಿಕಾ ಸಾರ್ಥಕತೆ ಮೆರೆದಿದೆ. ಇದನ್ನು ಕಾಯಾ, ವಾಚಾ, ಮನಸಾ, ಶಿರಸಾ ಪಾಲಿಸುವುದು ದೇಶದ ಅಭಿವೃದ್ಧಿಗೆ ಅವಶ್ಯಕ ಎಂದರು.
ವೈದಿಕ ವಿದ್ವಾಂಸ, ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆತ್ಮಶ್ರೀ ಮತ್ತು ಸಾನ್ವಿ ಕಜೆ ಪ್ರಾರ್ಥಿಸಿದರು. ವಿದ್ಯಾರ್ಥಿಗಳೆಲ್ಲಾ ಶ್ರುತಿ ಬದ್ಧವಾಗಿ ರಾಮಮಂತ್ರ ಜಪಿಸಿದರು. ಉಪನ್ಯಾಸಕ ಸುಬ್ರಹ್ಮಣ್ಯ ಕೆ ಕಾರ್ಯಕ್ರಮ ನಿರೂಪಿಸಿದರು. ಬೋಧಕ – ಬೋಧಕೇತರ ವೃಂದ ಸಭೆಯಲ್ಲಿ ಹಾಜರಿದ್ದರು. ಪ್ರಯೋಗಾಲಯ ಸಹಾಯಕ ಮುರಳಿ ಮೋಹನ್ ಸಹಕರಿಸಿದರು.