ಕಲ್ಲೇಗ ಟೈಗರ‍್ಸ್ ಮುಖ್ಯಸ್ಥ ಅಕ್ಷಯ್ ಕೊಲೆ ಪ್ರಕರಣ-ರಿವೇಂಜ್ ಮರ್ಡರ್ ಎಚ್ಚರಿಕೆ ನೀಡಿದವರಿಗೆ ಡಿವೈಎಸ್‌ಪಿ ‘ಕ್ಲಾಸ್’-ವಾರ್ನಿಂಗ್

0

ಬರಹ: ಸಂತೋಷ್ ಕುಮಾರ್ ಶಾಂತಿನಗರ


ಪುತ್ತೂರು: ಜನಪ್ರಿಯ ಹುಲಿವೇಷ ಕುಣಿತ ತಂಡವಾಗಿ ಗುರುತಿಸಿಕೊಂಡಿರುವ ‘ಕಲ್ಲೇಗ ಟೈಗರ‍್ಸ್’ ತಂಡದ ಮುಖ್ಯಸ್ಥ ಅಕ್ಷಯ್ ಕಲ್ಲೇಗ(26ವ.)ರವರನ್ನು ನ.6ರಂದು ರಾತ್ರಿ ನೆಹರೂನಗರದಲ್ಲಿ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಪೊಲೀಸ್ ಗಸ್ತು ಬಿರುಸುಗೊಳಿಸುವುದು, ಸಿ.ಸಿ.ಟಿ.ವಿ. ದುರಸ್ತಿ ಮಾಡಿಸುವುದು, ಹೆಚ್ಚುವರಿ ಸಿಸಿಟಿವಿಗಳನ್ನು ಅಳವಡಿಸುವುದು, ರೌಡಿ ಶೀಟರ್‌ಗಳ ಮೇಲೆ ಮತ್ತು ಮಾದಕ ವ್ಯಸನಿಗಳ ಮೇಲೆ ನಿಗಾ ಇಡುವುದು, ರಾತ್ರಿ ಅನಗತ್ಯವಾಗಿ ಓಡಾಟ ನಡೆಸುವವರಿಗೆ ಬಿಸಿ ಮುಟ್ಟಿಸುವುದು ಸೇರಿದಂತೆ ವಿವಿಧ ಮುಂಜಾಗ್ರತಾ ಕ್ರಮ ವಹಿಸಿರುವ ಪೊಲೀಸ್ ಇಲಾಖೆ ಕೆಲವು ಆಯಕಟ್ಟಿನ ಸ್ಥಳಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಇದರೊಂದಿಗೆ ಅಕ್ಷಯ್ ಕಲ್ಲೇಗ ಅವರ ಕೊಲೆಗೆ ಪ್ರತೀಕಾರವಾಗಿ ಕೊಲೆ ಮಾಡುತ್ತೇವೆ ಮತ್ತು ಕೊಲೆ ಮಾಡಿದವರ ಆಪ್ತರನ್ನು ಟಾರ್ಗೆಟ್ ಮಾಡುತ್ತೇವೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎನ್ನಲಾಗುತ್ತಿರುವ ವ್ಯಕ್ತಿಗಳನ್ನು ಗುರುತಿಸಿ ತನ್ನ ಕಚೇರಿಗೆ ಕರೆಸಿಕೊಂಡಿರುವ ಡಿವೈಎಸ್‌ಪಿ ಡಾ. ಗಾನಾ ಪಿ. ಕುಮಾರ್ ಅವರು ಅವರಿಗೆ ಕ್ಲಾಸ್ ನೀಡಿದ್ದಾರೆ. ಅಲ್ಲದೆ ಕಾನೂನು ವಿರೋಽ ಕೃತ್ಯಕ್ಕೆ ಕೈ ಹಾಕದಂತೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಜತೆಗೆ ಅಕ್ಷಯ್ ಕಲ್ಲೇಗ ಅವರ ಕಲ್ಲೇಗ ಟೈಗರ‍್ಸ್ ತಂಡದ ಸದಸ್ಯರ ಸಹಿತ ಅವರ ಆಪ್ತರನ್ನು ಠಾಣೆಗೆ ಕರೆಸಿ ಗುಪ್ತವಾಗಿ ಮಾತುಕತೆ ನಡೆಸಿರುವ ಪೊಲೀಸರು ಹಲವು ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ.


ಹಿನ್ನೆಲೆ ಪರಿಶೀಲನೆ:
ಕ್ಷುಲ್ಲಕ ಕಾರಣಕ್ಕೆ ಮರ್ಡರ್ ಆಯಿತೇ? ಬೇರೆ ಕಾರಣ ಇದೆಯಾ?:
ಅಕ್ಷಯ್ ಕಲ್ಲೇಗ ಅವರಿಗೆ 50ಕ್ಕೂ ಅಧಿಕ ಸಲ ಕಡಿದು ಕೊಲೆಮಾಡಿದ ಆರೋಪದಡಿ ಜೈಲು ಸೇರಿರುವ ಬನ್ನೂರು ದಾರಂದಕ್ಕು ನಿವಾಸಿಯಾಗಿದ್ದು ಪಡೀಲ್‌ನಲ್ಲಿ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟ, ಖರೀದಿ ವ್ಯವಹಾರ ನಡೆಸುತ್ತಿದ್ದ ಮನೀಶ್, ಸೇ-ವೇ ಖಾಸಗಿ ಬಸ್ ಚಾಲಕನಾಗಿದ್ದ ಬನ್ನೂರು ಕೃಷ್ಣನಗರ ನಿವಾಸಿ ಚೇತನ್, ಬನ್ನೂರು ನಿವಾಸಿಯಾಗಿದ್ದು ಇಲೆಕ್ಟ್ರಿಶಿಯನ್ ಆಗಿದ್ದ ಮಂಜುನಾಥ್ ಯಾನೆ ಮಂಜ ಯಾನೆ ಹರಿ ಮತ್ತು ಬ್ಲಾಕ್ ಕಾಂಗ್ರೆಸ್ ಎಸ್.ಸಿ. ಘಟಕದ ಅಧ್ಯಕ್ಷರಾಗಿದ್ದ ಪಡೀಲು ನಿವಾಸಿ ಕೇಶವರವರ ಹಿನ್ನೆಲೆಯ ಕುರಿತೂ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಕ್ಷುಲ್ಲಕ ಕಾರಣಕ್ಕಾಗಿ ಅಕ್ಷಯ್‌ರವರನ್ನು ಬರ್ಬರವಾಗಿ ಕಡಿದು ಹತ್ಯೆ ಮಾಡಲಾಯಿತೇ ಅಥವಾ ಇದರ ಹಿಂದೆ ಹೆಣ್ಣು, ಹೊನ್ನು ವಿಚಾರ ಇರಬಹುದೇ ಎಂದೂ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಈ ನಿಟ್ಟಿನಲ್ಲಿಯೂ ಪೊಲೀಸ್ ತನಿಖೆ ನಡೆಯುತ್ತಿದ್ದು ಪ್ರಕರಣದ ಚಾರ್ಜ್‌ಶೀಟ್ ಸಲ್ಲಿಕೆ ವೇಳೆ ಎಲ್ಲಾ ವಿಚಾರ ಬಯಲಾಗಲಿದೆ. ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಸಿ.ಬಿ. ರಿಷ್ಯಂತ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮಪ್ಪ ಮತ್ತು ಪುತ್ತೂರು ಡಿವೈಎಸ್‌ಪಿ ಡಾ. ಗಾನಾ ಪಿ. ಕುಮಾರ್ ಅವರ ಮಾರ್ಗದರ್ಶನದಲ್ಲಿ ಪ್ರಕರಣದ ತನಿಖಾಽಕಾರಿಯಾಗಿರುವ ನಗರ ಠಾಣಾ ಇನ್ಸ್‌ಪೆಕ್ಟರ್ ಸುನೀಲ್ ಕುಮಾರ್ ಮಾಹಿತಿ ಸಂಗ್ರಹದಲ್ಲಿ ತೊಡಗಿದ್ದಾರೆ. ಅಲ್ಲದೆ, ಪೊಲೀಸ್ ತಂಡ ಪುತ್ತೂರಿನಲ್ಲಿ ಗ್ಯಾಂಗ್‌ವಾರ್ ಮತ್ತು ಡ್ರಗ್ಸ್ ಜಾಲ ಭೇದಿಸಲು ಕಠಿಣ ಕ್ರಮಕ್ಕೆ ಮುಂದಾಗಿದೆ.


ಕಾರು ಬದಲಾಯಿಸಿದ ಮನೀಶ್?:
ಕೊಲೆ ಕೃತ್ಯ ನಡೆಯುವ ಕೆಲವೇ ಹೊತ್ತಿನ ಮೊದಲು ನೆಹರೂನಗರದ ಹೊಟೇಲ್‌ಗೆ ಬಂದು ಕಬಾಬ್ ಸಹಿತ ತಿಂಡಿಗಳನ್ನು ಪಾರ್ಸೆಲ್ ಕೊಂಡು ಹೋಗಿದ್ದ ಮನೀಶ್ ಆ ವೇಳೆ ಬೇರೆ ಕಾರಿನಲ್ಲಿ ಬಂದಿದ್ದ. ಆದರೆ, ತಲವಾರು ಹಿಡಿದುಕೊಂಡು ಬಂದು ಅಕ್ಷಯ್ ಅವರನ್ನು ಚೇತು, ಮಂಜ ಮತ್ತು ಕೇಶವ ಅವರೊಂದಿಗೆ ಸೇರಿ ಕೊಲೆ ಮಾಡುವಾಗ ಬೇರೆ ಕಾರಲ್ಲಿ ಮನೀಶ್ ಬಂದಿದ್ದ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ನೆಹರೂನಗರದ ಹಲವು ವ್ಯವಹಾರ ಕೇಂದ್ರಗಳಲ್ಲಿ ಸಿಸಿಟಿವಿ ಇದೆಯಾದರೂ ಕೊಲೆ ಕೃತ್ಯವಾಗಲೀ, ಹಂತಕರ ಆಗಮನ, ನಿರ್ಗಮನವಾಗಲೀ ಯಾವ ಕೆಮರಾದಲ್ಲಿಯೂ ಸೆರೆಯಾಗಿಲ್ಲ. ರಸ್ತೆಗೆ ಕವರ್ ಆಗುವ ಹಾಗೆ ಸಿಸಿಟಿವಿ ಅಳವಡಿಸಿದರೆ ಸಂಚಾರ ಠಾಣಾ ಪೊಲೀಸರು ಪ್ರತೀ ಬಾರಿ ಬಂದು ಆ ಪೂಟೇಜ್ ಕೊಡಿ ಈ ಪೂಟೇಜ್ ಕೊಡಿ ಎಂದು ಕೇಳುತ್ತಲೇ ಇರುತ್ತಾರೆ. ಹಾಗಾಗಿ ಅಂಗಡಿ ಮಾಲಕರು ತಮ್ಮ ವ್ಯವಹಾರ ಕಾಣುವ ಸ್ಥಳಗಳಿಗಷ್ಟೇ ಸಿಮಿತವಾಗಿ ಸಿಸಿ ಕೆಮರಾ ಪೋಕಸ್ ಮಾಡಿದ್ದಾರೆ. ಇದರಿಂದಾಗಿ ಕೊಲೆ ಕೃತ್ಯದ ದೃಶ್ಯಾವಳಿ ಪುತ್ತೂರಿನಂತಹ ಪ್ರಮುಖ ಪಟ್ಟಣದ ಸ್ಥಳಗಳಲ್ಲಿ ಸೆರೆಯಾಗಿಲ್ಲ. ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ಅವಧಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಇಲಾಖೆಯ ಸಹಯೋಗದೊಂದಿಗೆ ಅಳವಡಿಸಲಾಗಿದ್ದ ಸಿಸಿಟಿವಿಗಳು ಈ ಹಿಂದೆ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿತ್ತಾದರೂ ಇದೀಗ ಕೈ ಕೊಟ್ಟಿವೆ. ಸಿಸಿ ಟಿವಿ ಮೂಲಕ ಅಪರಾಧಗಳನ್ನು ಸುಲಭವಾಗಿ ಪತ್ತೆ ಮಾಡಲು ಸಾಧ್ಯವಿರುವುದರಿಂದ ಅದನ್ನು ಸರಿಪಡಿಸುವ ಕಾರ್ಯ ನಡೆಯುತ್ತಿದೆ.

LEAVE A REPLY

Please enter your comment!
Please enter your name here