ಮಾಜಿ ಶಾಸಕ ರಘುಪತಿ ಭಟ್ ಪತ್ನಿ ನಾಪತ್ತೆ, ಆತ್ಮಹತ್ಯೆ ಪ್ರಕರಣ:ಆರೋಪಿ ಅತುಲ್ ರಾವ್‌ಗೆ ಜೈಲು ಶಿಕ್ಷೆ, ದಂಡ-ಪ್ರಾಸಿಕ್ಯೂಶನ್ ಪರ ಎಸ್‌ಪಿಪಿ ಶಿವಪ್ರಸಾದ್ ಆಳ್ವ ವಾದ ಮಂಡನೆ

0

ಪುತ್ತೂರು:15 ವರ್ಷಗಳ ಹಿಂದೆ ನಡೆದಿದ್ದ, ಉಡುಪಿಯ ಮಾಜಿ ಶಾಸಕ ಕೆ.ರಘುಪತಿ ಭಟ್ ಅವರ ಪತ್ನಿ ಪದ್ಮಪ್ರಿಯ ನಾಪತ್ತೆ ಹಾಗೂ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮೋಸ, ವಂಚನೆ ಹಾಗೂ ನಕಲಿ ದಾಖಲೆ ಸೃಷ್ಠಿಸಿರುವ ಆರೋಪದಲ್ಲಿ ಅತುಲ್ ರಾವ್‌ಗೆ ಒಂದು ವರ್ಷ ಜೈಲುಶಿಕ್ಷೆ, ದಂಡ ವಿಧಿಸಿ ಉಡುಪಿ ನ್ಯಾಯಾಲಯ ಆದೇಶ ನೀಡಿದೆ.ಈ ಪ್ರಕರಣದಲ್ಲಿ ಸಿಒಡಿ ಪರ ವಿಶೇಷ ಸರಕಾರಿ ಅಭಿಯೋಜಕರಾಗಿ ಮಂಗಳೂರು ವಲಯದ ಹಿರಿಯ ಕಾನೂನು ಅಽಕಾರಿಯಾಗಿರುವ ಪುತ್ತೂರಿನ ಕೆ.ಶಿವಪ್ರಸಾದ್ ಆಳ್ವ ಅವರು ವಾದ ಮಂಡನೆ ಮಾಡಿ ಆಪಾದಿತನಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.


2008ರ ಜೂ.10ರಂದು ಪದ್ಮಪ್ರಿಯ ಅವರು ಕರಂಬಳ್ಳಿಯ ತನ್ನ ಮನೆಯಿಂದ ನಾಪತ್ತೆಯಾಗಿದ್ದರು.ರಘುಪತಿ ಭಟ್ ಅವರ ಬಾಲ್ಯ ಸ್ನೇಹಿತನಾಗಿದ್ದ ಅದೇ ಊರಿನ ಅತುಲ್ ರಾವ್, ಮನೆಯಿಂದ ಪದ್ಮಪ್ರಿಯ ಅವರನ್ನು ಆಕೆಯ ಕಾರಿನಲ್ಲಿಯೇ ಕರೆದುಕೊಂಡು ಹೋಗಿ ಕುಂಜಾರುಗಿರಿಯ ದಾರಿ ಮಧ್ಯೆ ಕಾರನ್ನು ಇಟ್ಟು, ಅದರ ಒಳಗೆ ಬಳೆಯ ಚೂರು, ರಕ್ತದ ಕಲೆಗಳನ್ನು ಮಾಡಿ ಅಪಹರಣದ ನಾಟಕ ಮಾಡಿದ್ದರೆಂದು ಆರೋಪಿಸಲಾಗಿತ್ತು.ಕಾರನ್ನು ಅಲ್ಲೇ ಬಿಟ್ಟು ಅತುಲ್ ರಾವ್ ತನ್ನ ಕಾರಿನಲ್ಲಿ ಪದ್ಮಪ್ರಿಯ ಅವರನ್ನು ಕುಮಟಾದವರೆಗೆ ಕರೆದುಕೊಂಡು ಹೋಗಿದ್ದನು.ಕುಮಟಾಕ್ಕೆ ಬೆಂಗಳೂರಿನ ಚಾಲಕನೋರ್ವನನ್ನು ಕರೆಸಿ, ತನ್ನ ಕಾರನ್ನು ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದನು.ಇತ್ತ ಪದ್ಮಪ್ರಿಯ ಅವರನ್ನು ಅತುಲ್ ರಾವ್ ಬಾಡಿಗೆ ಕಾರಿನಲ್ಲಿ ಕುಮಟಾದಿಂದ ಗೋವಾ ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಹೋಗಿದ್ದನು.ಅತುಲ್ ತನ್ನ ಪತ್ನಿ ಮೀರಾ ಅವರ ಡ್ರೈವಿಂಗ್ ಲೈಸನ್ಸ್‌ಗೆ ಪದ್ಮಪ್ರಿಯ ಅವರ ಪೋಟೋ ಅಂಟಿಸಿ, ಮೀರಾ ಹೆಸರಿನಲ್ಲಿ ಪದ್ಮಪ್ರಿಯ ಅವರನ್ನು ಗೋವಾ ವಿಮಾನ ನಿಲ್ದಾಣದ ಮೂಲಕ ದೆಹಲಿಗೆ ಕರೆದುಕೊಂಡು ಹೋಗಿದ್ದನು.ಈ ಘಟನೆ ನಡೆಯುವ ಮೊದಲು ದೆಹಲಿಗೆ ಹೋಗಿದ್ದ ಅತುಲ್ ರಾವ್, ಅಲ್ಲಿ ಮನೆ ಬಾಡಿಗೆ ಪಡೆದುಕೊಂಡಿದ್ದನು.ಅದಕ್ಕೆ ಬೆಂಗಳೂರಿನ ನಕಲಿ ವಿಳಾಸ ನೀಡಿ ಬಾಡಿಗೆ ಕರಾರು ಪತ್ರ ಮಾಡಿಸಿಕೊಂಡಿದ್ದನು.ಇದು ಅಲ್ಲಿನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿಯಾಗಿತ್ತು.ಆ ಬಾಡಿಗೆ ಕರಾರು ಪತ್ರದಿಂದಲೇ ಅತುಲ್ ರಾವ್ ಅಲ್ಲಿ ಬ್ಯಾಂಕ್ ಖಾತೆ ತೆರೆದಿದ್ದನು.ಅತುಲ್ ರಾವ್ ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಹೊಂದಿ ಪಿಡಬ್ಲ್ಯುಡಿ ಇಲಾಖೆಯಲ್ಲಿ ಕ್ಕರ್ಕ್ ಆಗಿದ್ದರೂ ಅಲ್ಲಿ ತನ್ನ ವಿದ್ಯಾರ್ಹತೆಯನ್ನು ಬಿಇ ಮತ್ತು ಇಂಟಲ್ ಕಂಪೆನಿಯಲ್ಲಿ ಇಂಜಿನಿಯರ್ ಎಂಬುದಾಗಿ ಉಲ್ಲೇಖ ಮಾಡಿದ್ದನು ಎಂದು ಆರೋಪಿಸಲಾಗಿದೆ.


ದೆಹಲಿಯಲ್ಲಿ ಬಾಡಿಗೆ ರೂಮಿಗೆ ಓಡಾಟ ನಡೆಸುತ್ತಿದ್ದಾಗ ಲಾಡ್ಜ್‌ನಲ್ಲಿಯೂ ಬೆಂಗಳೂರಿನ ನಕಲಿ ವಿಳಾಸವನ್ನು ನೀಡುತ್ತಿದ್ದನು.ಜೂ.10ರಂದು ದೆಹಲಿ ಹೋಗಿದ್ದ ಅತುಲ್, ಮರುದಿನ ಬೆಂಗಳೂರಿಗೆ ಬಂದು ಲಾಡ್ಜ್ ಮಾಡಿದ್ದನು.ಅಲ್ಲಿಂದ ಜೂ.12ಕ್ಕೆ ಹೊರಟು ಮರುದಿನ ಉಡುಪಿಗೆ ತಲುಪಿ, ರಘುಪತಿ ಭಟ್ ಜೊತೆ ಪದ್ಮಪ್ರಿಯ ಅವರನ್ನು ಹುಡುಕುವ ನಾಟಕ ಮಾಡಿದ್ದನು ಎಂದು ದೂರಿನಲ್ಲಿ ತಿಳಿಸಲಾಗಿದೆ.


ಈ ಬಗ್ಗೆ ರಘುಪತಿ ಭಟ್ 2008ರ ಜೂ.19ರಂದು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಆರಂಭದಲ್ಲಿ ಮಣಿಪಾಲ ಪೊಲೀಸರು ತನಿಖೆ ನಡೆಸಿದ್ದರು.ಬಳಿಕ ಪ್ರಕರಣವನ್ನು ಸಿಓಡಿ ತನಿಖೆಗೆ ಒಪ್ಪಿಸಲಾಗಿತ್ತು.ಆರೋಪಿ ವಿರುದ್ಧ ಸಿಓಡಿ ಪೊಲೀಸರು 2008ರ ಆ.22ರಂದು ಪ್ರಾರಂಭಿಕ ಮತ್ತು 2009ರ ಜು.29ರಂದು ಅಂತಿಮ ಚಾರ್ಜ್ ಶೀಟ್ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.ಇದರಲ್ಲಿ ಮೋಸ, ವಂಚನೆ, ನಕಲಿ ದಾಖಲೆ ಸೃಷ್ಠಿ, ನಕಲಿ ದಾಖಲೆಯನ್ನು ನೈಜ ದಾಖಲೆ ಎಂಬುದಾಗಿ ಬಿಂಬಿಸಿ ಹಾಜರು ಪಡಿಸಿ ದುರುಪಯೋಗ ಪಡಿಸಿರುವ ಬಗ್ಗೆ ಆರೋಪ ಮಾಡಲಾಗಿತ್ತು.ರಘುಪತಿ ಭಟ್ ನೀಡಿದ್ದ ದೂರಿನಲ್ಲಿ ತಿಳಿಸಲಾಗಿದ್ದ, ಪದ್ಮಪ್ರಿಯಾರವರ ಅಪಹರಣ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ಆರೋಪವನ್ನು ಸಾಕ್ಷ್ಯದ ಕೊರತೆ ಹಿನ್ನೆಲೆಯಲ್ಲಿ ಸಿಓಡಿ ಅಽಕಾರಿಗಳು ಕೈಬಿಟ್ಟಿದ್ದರು.ಬಾಕಿ ಆರೋಪಗಳ ವಿಚಾರಣೆ ನಡೆಸಿದ ಉಡುಪಿ ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶ ಯೋಗೇಶ್ ಅವರು, ಆರೋಪಿ ಮೇಲಿನ ಆರೋಪಗಳು ಸಾಬೀತಾಗಿದೆ ಎಂದು ಅಭಿಪ್ರಾಯ ಪಟ್ಟು ಐಪಿಸಿ 468 ಕಾಯಿದೆಯಡಿ ಒಂದು ವರ್ಷ ಜೈಲುಶಿಕ್ಷೆ ಮತ್ತು 5000ರೂ. ದಂಡ, ಐಪಿಸಿ 417, 465, 471 ಕಾಯಿದೆಯಡಿ ತಲಾ ಆರು ತಿಂಗಳು ಸಜೆ ಹಾಗೂ 5000ರೂ. ದಂಡ ವಿಽಸಿ ಆದೇಶ ನೀಡಿದರು.ಸಿಓಡಿ ಪರ ಪ್ರಕರಣದ ವಿಶೇಷ ಪಬ್ಲಿಕ್ ಪ್ರಾಸಿಕ್ಯುಟರ್ ಶಿವಪ್ರಸಾದ್ ಆಳ್ವ ವಾದ ಮಂಡಿಸಿದ್ದರು.

ಶಿವಪ್ರಸಾದ್ ಆಳ್ವರಿಂದ ಸಮರ್ಥ

ಪುತ್ತೂರು ದರ್ಬೆ ಕಾವೇರಿಕಟ್ಟೆ ನಿವಾಸಿಯಾಗಿರುವ ಶಿವಪ್ರಸಾದ್ ಆಳ್ವರವರು ಪುತ್ತೂರು ಸಹಿತ ವಿವಿಧ ನ್ಯಾಯಾಲಯಗಳಲ್ಲಿ ಸಹಾಯಕ ಸರಕಾರಿ ಅಭಿಯೋಜಕರಾಗಿ, ಅಭಿಯೋಜಕರಾಗಿ, ವಿಶೇಷ ಸರಕಾರಿ ಅಭಿಯೋಜಕರಾಗಿ ಕಾರ್ಯ ನಿರ್ವಹಿಸಿದ್ದು ಪ್ರಸ್ತುತ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಕಾರವಾರ ಜಿಲ್ಲೆಗಳನ್ನು ಒಳಗೊಂಡ ಮಂಗಳೂರು ವಲಯದ ಹಿರಿಯ ಕಾನೂನು ಅಧಿಕಾರಿಯಾಗಿದ್ದಾರೆ.ವಿಶೇಷ ಪ್ರಕರಣಗಳಲ್ಲಿ ಪ್ರಾಸಿಕ್ಯೂಶನ್ ಪರ ವಾದ ಮಂಡಿಸಲು ಸರಕಾರ ಶಿವಪ್ರಸಾದ್ ಆಳ್ವರವರನ್ನು ನೇಮಿಸುತ್ತಿದೆ.ಈಗಾಗಲೇ ಹಲವು ಪ್ರಕರಣಗಳಲ್ಲಿ ಇವರು ಸಮರ್ಥ ವಾದ ಮಂಡನೆ ಮಾಡಿ ಆರೋಪಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬೆಳಗಾವಿ ಅಂಕೋಲಾದ ಉದ್ಯಮಿ,ಬಿಜೆಪಿಯ ಪ್ರಭಾವೀ ನಾಯಕರೂ ಆಗಿದ್ದ ಆರ್.ಎನ್.ನಾಯ್ಕ್ ಹತ್ಯೆ ಪ್ರಕರಣಕ್ಕೆ ಸಂಬಂಽಸಿ ಆರೋಪ ಎದುರಿಸುತ್ತಿದ್ದ ಭೂಗತ ಪಾತಕಿ ಬನ್ನಂಜೆ ರಾಜಾ ಸಹಿತ 9 ಮಂದಿ ಅಪರಾಽಗಳಿಗೆ ‘ಕೋಕಾ’ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇಲ್ಲಿಯೂ ಪ್ರಾಸಿಕ್ಯೂಶನ್ ಪರವಾಗಿ ಕೆ.ಶಿವಪ್ರಸಾದ್ ಆಳ್ವ ವಾದಿಸಿದ್ದರು.ಕೋಕಾ ಕಾಯ್ದೆಯಡಿ ದಾಖಲಾದ ಪ್ರಥಮ ಪ್ರಕರಣ ಇದಾಗಿದ್ದು ಪರಿಣಾಮಕಾರಿ ವಾದ ಮಂಡನೆ ಮಾಡಿದ್ದಕ್ಕಾಗಿ ಹಿರಿಯ ಪೊಲೀಸ್ ಅಽಕಾರಿಗಳು ಶಿವಪ್ರಸಾದ್ ಆಳ್ವ ಅವರಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಿ ಅಭಿನಂದಿಸಿದ್ದರು.

LEAVE A REPLY

Please enter your comment!
Please enter your name here