’ನೆಲ್ಯಾಡಿ ಪೇಟೆಯಲ್ಲಿ ಮೇಲ್ಸೇತುವೆಯೇ ಆಗಬೇಕು’ ಹೋರಾಟಕ್ಕೆ ಸಮಾಲೋಚನಾ ಸಭೆಯಲ್ಲಿ ನಿರ್ಧಾರ – ಸಮಿತಿ ರಚನೆ – ನ.23ರಂದು ನೆಲ್ಯಾಡಿಯಲ್ಲಿ ಪ್ರತಿಭಟನೆಗೆ ನಿರ್ಣಯ

0

ನೆಲ್ಯಾಡಿ: ನೆಲ್ಯಾಡಿ ಪೇಟೆಯ ಎರಡೂ ಬದಿ ತಡೆಗೋಡೆಯೊಂದಿಗೆ ನಿರ್ಮಾಣವಾಗುತ್ತಿರುವ ಅಂಡರ್‌ಪಾಸ್ ರಸ್ತೆ ಕೈಬಿಟ್ಟು ಕಲ್ಲಡ್ಕದಲ್ಲಿ ನಿರ್ಮಾಣವಾಗುತ್ತಿರುವ ಮಾದರಿಯಲ್ಲಿಯೇ ಫ್ಲೈಓವರ್ (ಮೇಲ್ಸೇತುವೆ) ಮಾಡಬೇಕೆಂದು ಒತ್ತಾಯಿಸಿ ಹೋರಾಟ ನಡೆಸಲು ನ.10ರಂದು ನೆಲ್ಯಾಡಿ ಸರಕಾರಿ ಉ.ಹಿ.ಪ್ರಾ.ಶಾಲೆಯ ವಠಾರದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ಸಂಬಂಧ ಹೋರಾಟ ನಡೆಸಲು ಸಮಿತಿಯನ್ನೂ ರಚಿಸಿ ಮುಂದಿನ ಹೋರಾಟದ ರೂಪುರೇಷೆ ಕುರಿತು ಚರ್ಚೆ ನಡೆಸಲಾಯಿತು.
ನೆಲ್ಯಾಡಿ ಭಾರತ್ ಪೆಟ್ರೋಲ್ ಪಂಪ್‌ನ ಬಳಿಯಿಂದ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ತನಕ ಸುಮಾರು 1 ಕಿ.ಮೀ.ದೂರಕ್ಕೆ ಪೇಟೆಯ ಎರಡೂ ಬದಿ ಸರ್ವೀಸ್ ರಸ್ತೆ, ತಡೆಗೋಡೆ ನಿರ್ಮಿಸಿ ಅಂಡರ್‌ಪಾಸ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಪೇಟೆಯ ಒಂದು ಬದಿ ಇನ್ನೊಂದು ಬದಿಗೆ ಕಾಣಿಸುತ್ತಿಲ್ಲ. ಎರಡು ಕಡೆಯಲ್ಲಿ ಅಂಡರ್‌ಪಾಸ್ ಆಗುತ್ತಿದ್ದರೂ ಪೇಟೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಜನರಿಗೆ ಸಂಚಾರಕ್ಕೆ ಕಷ್ಟವಿದೆ. ಸರ್ವೀಸ್ ರಸ್ತೆಯೂ ಇಕ್ಕಟ್ಟಾಗಿರುವುದರಿಂದ ಸಮಸ್ಯೆಯಾಗಿದೆ. ಒಟ್ಟಿನಲ್ಲಿ ನೆಲ್ಯಾಡಿ ಪೇಟೆಯಲ್ಲಿ ಈಗ ನಡೆಯುತ್ತಿರುವ ಕಾಮಗಾರಿಯು ಊರು, ಪೇಟೆಯ ಅಭಿವೃದ್ಧಿಗೆ ಮಾರಕವಾಗಲಿದೆ. ಆದ್ದರಿಂದ ಈಗ ನಡೆಯುತ್ತಿರುವ ಅಂಡರ್‌ಪಾಸ್ ಕಾಮಗಾರಿ ಕೈಬಿಟ್ಟು ಫ್ಲೈಓವರೇ ಮಾಡುವ ನಿಟ್ಟಿನಲ್ಲಿ ತೀವ್ರ ಹೋರಾಟ, ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭೇಟಿ ಕುರಿತಂತೆ ಸಭೆಯಲ್ಲಿ ಚರ್ಚಿಸಲಾಯಿತು.
ಜಿ.ಪಂ.ಮಾಜಿ ಸದಸ್ಯ ಸರ್ವೋತ್ತಮ ಗೌಡರವರು ಮಾತನಾಡಿ, ನೆಲ್ಯಾಡಿ ವೇಗವಾಗಿ ಬೆಳೆಯುತ್ತಿರುವ ಪೇಟೆ, ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಸಂದರ್ಭದಲ್ಲಿ ನೆಲ್ಯಾಡಿ ಪೇಟೆಯಲ್ಲಿ ಹೆದ್ದಾರಿ ಹೇಗೆ ಹಾದುಹೋಗುತ್ತದೆ ಎಂಬ ಬಗ್ಗೆ ಸರಿಯಾದ ಮಾಹಿತಿ ಇರಲಿಲ್ಲ. ಈಗ ಪೇಟೆಯ ಎರಡೂ ಬದಿ ಗೋಡೆ ನಿರ್ಮಾಣ ಕೆಲಸ ಆಗುತ್ತಿದೆ. ಇದರಿಂದ ಪೇಟೆಗೆ ಅಸ್ತಿತ್ವವೇ ಇಲ್ಲದಂತಾಗುತ್ತದೆ. ನೆಲ್ಯಾಡಿ, ಕೌಕ್ರಾಡಿ ಹಾಗೂ ಸುತ್ತಲಿನ ಗ್ರಾಮಸ್ಥರಿಗೆ ಅನಾನುಕೂಲವಾಗಲಿದೆ. ಆದ್ದರಿಂದ ನೆಲ್ಯಾಡಿ ಪೇಟೆಯಲ್ಲಿ ಫ್ಲೈಓವರ್ ಆಗಲೇಬೇಕು. ಇಲ್ಲದೇ ಇದ್ದಲ್ಲಿ ಹಿಂದಿನಂತೆ ನೇರವಾಗಿ ಚತುಷ್ಪಥ ರಸ್ತೆ ನಿರ್ಮಾಣ ಆಗಬೇಕು. ಈ ಸಂಬಂಧ ಸಾರ್ವಜನಿಕರ ಹಿತಕ್ಕಾಗಿ ರಾಜಕೀಯ ರಹಿತವಾಗಿ ಹೋರಾಟ ನಡೆಸುವ ಎಂದರು. ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್, ನೆಲ್ಯಾಡಿಯ ವೈದ್ಯ ಡಾ.ಪ್ರಸಾದ್, ನೆಲ್ಯಾಡಿ ಕಟ್ಟಡ ಮಾಲಕರ ಸಂಘದ ಅಧ್ಯಕ್ಷ ಎ.ಕೆ.ವರ್ಗೀಸ್, ವಿ.ಜೆ.ಜೋಸೆಫ್, ನೆಲ್ಯಾಡಿ ಸಂತ ಅಲ್ಫೋನ್ಸಾ ಚರ್ಚ್‌ನ ಧರ್ಮಗುರು ರೆ.ಫಾ.ಶಾಜಿ ಮ್ಯಾಥ್ಯು, ನೆಲ್ಯಾಡಿ ಗ್ರಾ.ಪಂ.ಸದಸ್ಯ ರವಿಪ್ರಸಾದ್ ಶೆಟ್ಟಿ, ನಿವೃತ್ತ ಶಿಕ್ಷಕ ವೆಂಕಟ್ರಮಣ ಆರ್., ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ರವಿಪ್ರಸಾದ್ ಗುತ್ತಿನಮನೆ, ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ, ಉದ್ಯಮಿ ಕೆ.ಪಿ.ತೋಮಸ್ ಮತ್ತಿತರರು ಅಭಿಪ್ರಾಯ ತಿಳಿಸಿ, ನೆಲ್ಯಾಡಿ ಪೇಟೆಯಲ್ಲಿ ಫ್ಲೈಓವರ್ ಆಗಬೇಕೆಂದು ಹೇಳಿದರು. ಸಭೆಯಲ್ಲಿ ಬಂದ ಅಭಿಪ್ರಾಯದಂತೆ ನೆಲ್ಯಾಡಿಯಲ್ಲಿ ಫ್ಲೈಓವರ್ ನಿರ್ಮಾಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಒತ್ತಡ ತರುವ ನಿಟ್ಟಿನಲ್ಲಿ ಹೋರಾಟ ಸಮಿತಿ ರಚಿಸಲಾಯಿತು.
ಸಭೆಯಲ್ಲಿ ನೆಲ್ಯಾಡಿ ವರ್ತಕ ಸಂಘದ ಅಧ್ಯಕ್ಷ ರಫೀಕ್ ಸೀಗಲ್, ಜಿ.ಪಂ.ಮಾಜಿ ಸದಸ್ಯ ಬಾಲಕೃಷ್ಣ ಬಾಣಜಾಲು, ಸತೀಶ್ ಕೆ.ಎಸ್.ದುರ್ಗಾಶ್ರೀ, ನಾಝೀಂ ಸಾಹೇಬ್, ಕೌಕ್ರಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಇಬ್ರಾಹಿಂ ಎಂ.ಕೆ., ಪೂವಪ್ಪ ಕರ್ಕೇರ, ಗಣೇಶ್ ರಶ್ಮಿ, ಟೆಂಪೋ ಚಾಲಕ-ಮಾಲಕರ ಸಂಘದ ಅಧ್ಯಕ್ಷ ಹನೀಫ್ ಕರಾವಳಿ ಸೇರಿದಂತೆ ನೆಲ್ಯಾಡಿ, ಕೌಕ್ರಾಡಿ ಗ್ರಾ.ಪಂ.ಸದಸ್ಯರು, ವರ್ತಕ ಸಂಘ, ರಿಕ್ಷಾ ಚಾಲಕ-ಮಾಲಕರ ಸಂಘ, ಕಟ್ಟಡ ಮಾಲಕರ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ತಾ.ಪಂ.ಮಾಜಿ ಸದಸ್ಯೆ ಉಷಾ ಅಂಚನ್ ಪ್ರಾಸ್ತಾವಿಕವಾಗಿ ಮಾತನಾಡಿ, ನಿರೂಪಿಸಿದರು. ಪ್ರಶಾಂತ್ ಸಿ.ಹೆಚ್.ಸ್ವಾಗತಿಸಿದರು.

  • ಹೋರಾಟ ಸಮಿತಿ ರಚನೆ:
    ಸಮಾಲೋಚನಾ ಸಭೆಯಲ್ಲಿ ಹೋರಾಟ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಡಿಯೋನ್ ಗ್ರೂಪ್‌ನ ಎ.ಕೆ.ವರ್ಗೀಸ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ನೇಸರ ನ್ಯೂಸ್ ವರ್ಲ್ಡ್‌ನ ನಿರ್ದೇಶಕ ಪ್ರಶಾಂತ್ ಸಿ.ಹೆಚ್.ರನ್ನು ನೇಮಕ ಮಾಡಲಾಯಿತು. ಉಪಾಧ್ಯಕ್ಷರಾಗಿ ಬಾಲಕೃಷ್ಣ ಬಾಣಜಾಲು, ಸರ್ವೋತ್ತಮ ಗೌಡ, ಜೊತೆ ಕಾರ್ಯದರ್ಶಿಯಾಗಿ ಉಷಾ ಅಂಚನ್, ಕೋಶಾಧಿಕಾರಿಯಾಗಿ ಸತೀಶ್ ಭಟ್ ದುರ್ಗಾಶ್ರೀ, ಸದಸ್ಯರಾಗಿ ಎ.ಜೆ.ಜೋಸೆಫ್ ಗೋಳಿತ್ತೊಟ್ಟು, ವಿ.ಜೆ.ಜೋಸೆಫ್ ನೆಲ್ಯಾಡಿ, ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ, ನಾಝೀಂ ಸಾಹೇಬ್, ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್, ಕೌಕ್ರಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಎಂ.ಕೆ.ಇಬ್ರಾಹಿಂ, ನೆಲ್ಯಾಡಿ ವರ್ತಕ ಸಂಘದ ಅಧ್ಯಕ್ಷ ರಫೀಕ್ ಸೀಗಲ್, ನೆಲ್ಯಾಡಿ ಗ್ರಾ.ಪಂ.ಸದಸ್ಯ ರವಿಪ್ರಸಾದ್ ಶೆಟ್ಟಿ, ಉದ್ಯಮಿ ಕೆ.ಪಿ.ತೋಮಸ್, ನೆಲ್ಯಾಡಿ ರಿಕ್ಷಾ ಚಾಲಕ-ಮಾಲಕರ ಸಂಘದ ಅಧ್ಯಕ್ಷ ರವಿಪ್ರಸಾದ್ ಗುತ್ತಿನಮನೆ, ಟೆಂಪೋ ಚಾಲಕ-ಮಾಲಕರ ಸಂಘದ ಅಧ್ಯಕ್ಷ ಹನೀಫ್ ಕರಾವಳಿ, ಅಬ್ದುಲ್ ರವೂಫ್, ರಾಮಣ್ಣ ಗೌಡ, ಬಾಲಪ್ಪ ಗೌಡ, ಕೌಕ್ರಾಡಿ ಗ್ರಾ.ಪಂ.ಅಧ್ಯಕ್ಷ ಲೋಕೇಶ್ ಬಾಣಜಾಲುರವರನ್ನು ಆಯ್ಕೆ ಮಾಡಲಾಯಿತು.
  • ನ.23ರಂದು ಪ್ರತಿಭಟನೆ:
    ಸಮಾಲೋಚನಾ ಸಭೆಯ ಬಳಿಕ ಹೋರಾಟ ಸಮಿತಿ ಸದಸ್ಯರು ಡಿಯೋನ್ ಸ್ಕ್ವೇರ್‌ನಲ್ಲಿ ಸಭೆ ಸೇರಿ ಮುಂದಿನ ಹೋರಾಟದ ರೂಪುರೇಷೆಗಳ ಕುರಿತು ಚರ್ಚೆ ನಡೆಸಿದರು. ನ.23ರಂದು ನೆಲ್ಯಾಡಿ ಪೇಟೆ ಬಂದ್ ಮಾಡಿ ಪ್ರತಿಭಟನೆ ನಡೆಸುವ ನಿರ್ಧಾರ ಮಾಡಲಾಯಿತು. ಕೌಕ್ರಾಡಿ ಗ್ರಾ.ಪಂ. ಬಳಿಯಿಂದ ನೆಲ್ಯಾಡಿ ಸೈಂಟ್‌ಜಾರ್ಜ್ ವಿದ್ಯಾಸಂಸ್ಥೆಯ ತನಕ ಫ್ಲೈಓವರ್ ಮಾಡಬೇಕು. ಈ ಸಂಬಂಧ ನ.15ರಂದು ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಅದೇ ದಿನ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಲು ಸಭೆಯಲ್ಲಿ ನಿರ್ಣಯಿಸಲಾಗಿದೆ.

LEAVE A REPLY

Please enter your comment!
Please enter your name here