ಪುತ್ತೂರು: ದೀಪಾವಳಿ ಬಂತೆಂದರೆ ಸಾಕು ಸಂಭ್ರಮದ ವಾತಾವರಣ ಸೃಷ್ಟಿಯಾಗುತ್ತದೆ. ಅದರಲ್ಲೂ ದುಡಿಯುವ ವರ್ಗದ ಜನರ ಸಂಭ್ರಮ ಇಮ್ಮಡಿಯಾಗಿರುತ್ತದೆ. ತಾವು ದುಡಿಯುವ ಸಂಸ್ಥೆಯಿಂದ ಸಿಗುವಂತಹ ಬೋನಸ್, ಉಡುಗೊರೆ, ಸಿಹಿ ತಿನಿಸು, ಬಟ್ಟೆಬರೆ ಇದಕ್ಕೆ ಕಾರಣ. ವರ್ಷಪೂರ್ತಿ ತನಗಾಗಿ, ತನ್ನ ಸಂಸ್ಥೆಗಾಗಿ ದುಡಿಯುವ ಸಿಬ್ಬಂದಿಗಳಿಗೆ ಏನನ್ನಾದರೂ ಕೊಡಬೇಕೆನ್ನುವ ಮಾಲೀಕರ ನಡುವೆ ಕೆಲವರು ಕಾರು, ಮನೆಯನ್ನು ಉಡುಗೊರೆಯಾಗಿ ನೀಡಿದ ಉದಾಹರಣೆಗಳೂ ಇದೆ. ಇವರ ನಡುವೆ ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ತನ್ನ ಕಾರು ಚಾಲಕನಿಗೆ ದೀಪಾವಳಿ ಪ್ರಯುಕ್ತ ಸುಮಾರು 1,30,000 ರೂ ಮೌಲ್ಯದ ಟಿವಿಎಸ್ ರೈಡರ್ ಬೈಕನ್ನು ಉಡುಗೊರೆಯಾಗಿ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ಹೇಮನಾಥ ಶೆಟ್ಟಿಯವರ ಕಾರು ಚಾಲಕರಾಗಿ ದುಡಿಯುತ್ತಿರುವ ಪಾಣಾಜೆ ನಿವಾಸಿ ದಿನೇಶ್ ಉಡುಗೊರೆ ಪಡೆಕೊಂಡು ಸಂಭ್ರಮಿಸಿದ್ದಾರೆ. ದೀಪಾವಳಿ ಸಂದರ್ಭದಲ್ಲಿ ತಮ್ಮ ಸಿಬ್ಬಂದಿಗಳಿಗೆ ಬೋನಸ್, ಸಿಹಿತಿಂಡಿ ಅಥವಾ ಊಟೋಪಚಾರಗಳನ್ನು ನೀಡುವುದು ಸಾಮಾನ್ಯವಾಗಿದೆ. ಆದರೆ ಪ್ರಾಮಾಣಿಕವಾಗಿ ಚಾಲನಾ ಕೆಲಸ ಮಾಡುತ್ತಿರುವ ದಿನೇಶ್ ತನ್ನ ಮಾಲಕರಿಂದ ಭಾರೀ ಮೊತ್ತದ ಬೈಕನ್ನು ಉಡುಗೊರೆಯಾಗಿ ಪಡೆದುಕೊಂಡಿದ್ದಾರೆ. ಈ ಬಗ್ಗೆ ಹೇಮನಾಥ ಶೆಟ್ಟಿಯವರನ್ನು ಕೇಳಿದರೆ ದೀಪಾವಳಿ ಪ್ರಯುಕ್ತ ಸಣ್ಣ ಗಿಫ್ಟ್ ನೀಡಿದ್ದೇನೆ ಎಂದಷ್ಟೇ ಹೇಳಿದರು.
ನಾನು ಕಳೆದ ಹತ್ತು ವರ್ಷಗಳಿಂದ ಹೇಮನಾಥ ಶೆಟ್ಟಿಯವರ ಬಳಿ ಚಾಲಕನಾಗಿ ಕೆಲಸ ಮಾಡುತ್ತಿದ್ದೇನೆ. ಅವರ ಕುಟುಂಬದ ಎಲ್ಲರೂ ನನ್ನನ್ನು ಅವರ ಕುಟುಂಬದ ಸದಸ್ಯನಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಕಷ್ಟದ ಸಮಯದಲ್ಲಿ ನೆರವಾಗುತ್ತಾರೆ. ನನಗೆ ಮನೆ ಕಟ್ಟಲು ನೆರವಾಗಿದ್ದಾರೆ. ಈ ಬಾರಿ ಬೈಕನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದು ನನ್ನ ಜೀವನದಲ್ಲಿ ಮರೆಯಲಾರದ ದಿನವಾಗಿದೆ ಎಂದು ದಿನೇಶ್ ಪಾಣಾಜೆ ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ.