ಬೀದಿನಾಯಿ ಕಡಿತದಿಂದ ಮೃತಪಟ್ಟರೆ 5 ಲಕ್ಷ ರೂ. ಪರಿಹಾರ ನೀಡಲು ಸರಕಾರಕ್ಕೆ ಹೈಕೋರ್ಟ್ ಸೂಚನೆ

0

ಬೆಂಗಳೂರು: ಬೀದಿ ನಾಯಿ ಕಡಿದು ವ್ಯಕ್ತಿ ಗಾಯಗೊಂಡಿದ್ದರೆ ಅದಕ್ಕೆ 5 ಸಾವಿರ ರೂ.ಚಿಕಿತ್ಸೆ ವೆಚ್ಚ ನೀಡಬೇಕು ಮತ್ತು ಒಂದು ವೇಳೆ ಮೃತಪಟ್ಟರೆ ಅವರ ಕುಟುಂಬಕ್ಕೆ 5 ಲಕ್ಷ ರೂ.ಪರಿಹಾರ ನೀಡಬೇಕೆಂದು ಕರ್ನಾಟಕ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಆದೇಶ ನೀಡಿದೆ.


ವಕೀಲ ರಮೇಶ್ ಎಲ್.ನಾಯಕ್ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ನೇತೃತ್ವದ ವಿಭಾಗೀಯ ಪೀಠವು, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಭೆ ನಡೆಸಬೇಕು.4 ವಾರದಲ್ಲಿ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಬೇಕು ಎಂದು ಸರಕಾರಕ್ಕೆ ಸೂಚಿಸಿದೆ.
ಬೀದಿ ನಾಯಿಗಳಿಗೆ ಆಹಾರ ನೀಡಲು ಮಾರ್ಗಸೂಚಿ ಪ್ರಕಟಿಸಲಾಗಿದೆ.ಜನಸಾಮಾನ್ಯರಿಗೆ ಇದರ ತಿಳುವಳಿಕೆ ನೀಡಲು ಕ್ರಮ ಕೈಗೊಳ್ಳಬೇಕು.ವಾರ್ತಾ, ಪ್ರಚಾರ ಇಲಾಖೆ ವ್ಯಾಪಕ ಪ್ರಚಾರ ನೀಡಬೇಕು ಎಂದೂ ವಿಭಾಗೀಯ ಪೀಠ ಹೇಳಿದೆ.ಈ ವೇಳೆ ಸರಕಾರದ ಪರ ವಕೀಲರು, 2023ರ ಅ.6ರಂದು ನಡೆದ ಸಭೆಯಲ್ಲಿ ಸಂತ್ರಸ್ತರಿಗೆ ನೀಡುವ ಪರಿಹಾರ ವಿಚಾರವಾಗಿ ಚರ್ಚಿಸಲಾಗಿದೆ ಎಂದು ಮಾಹಿತಿ ನೀಡಿದರು.ಇದಕ್ಕೆ ನ್ಯಾಯ ಪೀಠ ಸಭೆಯ ನಂತರ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿತು.


8 ತಿಂಗಳಲ್ಲಿ 3.5ಲಕ್ಷ ನಾಯಿ ಕಡಿತ:
ಕಳೆದ 8 ತಿಂಗಳಲ್ಲಿ ರಾಜ್ಯದಲ್ಲಿ 3,05,471 ಮಂದಿ ನಾಯಿ ಕಡಿತಕ್ಕೊಳಗಾಗಿದ್ದಾರೆ.ಇದು ಕಳೆದೆರಡು ವರ್ಷಗಳಿಗೆ ಹೋಲಿಸಿದರೆ ಅತೀಹೆಚ್ಚಿನ ಪ್ರಕರಣ.19ಕ್ಕೂ ಅಧಿಕ ಮಂದಿ ರೇಬಿಸ್‌ನಿಂದ ಮೃತಪಟ್ಟಿದ್ದಾರೆ.ಜನವರಿ ತಿಂಗಳಲ್ಲಿ 40,287 ಮಂದಿಗೆ ನಾಯಿ ಕಚ್ಚಿದರೆ, ಮೇ ತಿಂಗಳಲ್ಲಿ 42,023 ಮಂದಿಗೆ ನಾಯಿ ಕಚ್ಚಿದೆ.ಉಳಿದೆಲ್ಲ ತಿಂಗಳಲ್ಲಿ 30 ಸಾವಿರಕ್ಕೆ ಮೇಲ್ಪಟ್ಟು ಕಡಿತವಾಗಿದೆ. ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 13,205 ಹಾಗೂ ಉಡುಪಿಯಲ್ಲಿ 11,407 ಪ್ರಕರಣಗಳು ದಾಖಲಾಗಿವೆ.ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಪ್ರಕರಣಗಳು ಸಮ ಪ್ರಮಾಣದಲ್ಲಿ ಇದ್ದರೂ, ನಗರ ಭಾಗದಲ್ಲಿ ಕೊಂಚ ಜಾಸ್ತಿಯೇ ಇದೆ ಎನ್ನುವುದು ಇಲಾಖೆಗಳ ಮಾಹಿತಿ.

LEAVE A REPLY

Please enter your comment!
Please enter your name here