ಯಕ್ಷಧ್ರುವ ಪಟ್ಲ ಫೌಂಡೇಶನ್ ಪುತ್ತೂರು ಘಟಕದ ಪದಪ್ರದಾನ – ಕಲಾವಿದರಿಗೋಸ್ಕರ ಸೇವೆಗೈದಾಗ ಆತ್ಮತೃಪ್ತಿ ಸಿಗುತ್ತದೆ-ಪಟ್ಲ ಸತೀಶ್ ಶೆಟ್ಟಿ

0

ಪುತ್ತೂರು: ಪಟ್ಲ ಫೌಂಡೇಶನ್‌ನಲ್ಲಿ ಸ್ವಾರ್ಥವಿಲ್ಲ, ವ್ಯಕ್ತಿಗತವಾಗಿ ಕೆಲಸ ಮಾಡುವುದಿಲ್ಲ. ಬದಲಾಗಿ ಯಕ್ಷರಂಗದ ಕಲಾವಿದರ ಬದುಕಿಗೋಸ್ಕರ ಸೇವೆ ನೀಡುವುದಾಗಿದೆ ಮಾತ್ರವಲ್ಲ ಇದರಿಂದ ನಮಗೆ ಆತ್ಮ ತೃಪ್ತಿ ಲಭಿಸುತ್ತದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಮಾತೃ ಘಟಕದ ಅಧ್ಯಕ್ಷ ಪಟ್ಲಗುತ್ತು ಸತೀಶ್ ಶೆಟ್ಟಿರವರು ಹೇಳಿದರು.

ನ.17ರಂದು ದರ್ಬೆ ಬೈಪಾಸ್ ರಸ್ತೆಯ ಹೊಟೇಲ್ ಅಶ್ವಿನಿ ಸಭಾಂಗಣದಲ್ಲಿ ಸಂಜೆ ಜರಗಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ಪುತ್ತೂರು ಘಟಕ ಇದರ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭದಲ್ಲಿ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಯಕ್ಷಗಾನ ರಂಗದಲ್ಲಿನ ಕಲಾವಿದರ ಮಕ್ಕಳ ಶಿಕ್ಷಣ ಹಾಗೂ ಅರೋಗ್ಯಕ್ಕೆ ಈಗಾಗಲೇ ರೂ.11 ಕೋಟಿ ಯಕ್ಷಧ್ರುವ ಪಟ್ಲ ಫೌಂಡೇಶನ್ ವಿನಿಯೋಗಿಸಿದೆ. ಪ್ರಸ್ತುತ ಯಕ್ಷಧ್ರುವ ಪಟ್ಲ ಫೌಂಡೇಶನ್ 39 ಘಟಕ ಹೊಂದಿದ್ದು, ಈ ಘಟಕದ ಮುಖಾಂತರ ಸರಕಾರಿ ಶಾಲೆಯ ಸುಮಾರು 45೦೦ ಮಕ್ಕಳಿಗೆ ‘ಯಕ್ಷ ಶಿಕ್ಷಣ’ದಡಿಯಲ್ಲಿ ಸರಕಾರದ ಅನುಮತಿಯೊಂದಿಗೆ ನೆರವನ್ನು ನೀಡುವ ಮೂಲಕ ಸ್ಪಂದಿಸಿದ್ದೇವೆ. ನಾವು ಸಮಾಜದಲ್ಲಿನ ಅಶಕ್ತರ ಕಣ್ಣೀರೊರೆಸುವ ಕೈಂಕರ್ಯವನ್ನು ಮಾಡಿದಾಗ ಯಾವುದೇ ಘಟಕವು ಯಶಸ್ವಿಯಾಗಬಲ್ಲುದು ಎಂದರು.


ಯಕ್ಷ ಕಲಾವಿದರಿಗೆ ಜೀವನದ ಭದ್ರತೆ ಒದಗಿಸಿದ್ದು ಪಟ್ಲ ಫೌಂಡೇಶನ್-ಸವಣೂರು ಸೀತಾರಾಮ್ ರೈ:
ಅಧ್ಯಕ್ಷತೆ ವಹಿಸಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ಪುತ್ತೂರು ಘಟಕದ ಗೌರವಾಧ್ಯಕ್ಷ ‘ಸಹಕಾರ ರತ್ನ’ ಸವಣೂರು ಸೀತಾರಾಮ ರೈ ಮಾತನಾಡಿ, ಯಕ್ಷಗಾನ ಕಲಾವಿದರಿಗೆ ಗೌರವ ಮತ್ತು ಮರ‍್ಯಾದೆ ಇವೆರಡೂ ಕೊಟ್ಟದ್ದು ಮಾತ್ರ ಪಟ್ಲ ಫೌಂಡೇಶನ್ ಜೊತೆಗೆ ಯಕ್ಷರಂಗದ ಕಲಾವಿದರ ಕಷ್ಟದ ಸಮಯದಲ್ಲಿ ಅವರಿಗೆ ಪಿಎಫ್ ಹಾಗೂ ಇನ್ಸೂರೆನ್ಸ್ ಮಾಡಿ ಜೀವನದ ಭದ್ರತೆ ಒದಗಿಸಿದ್ದು ಕೂಡ ಪಟ್ಲ ಫೌಂಡೇಶನ್ ಆಗಿದೆ. ಅಮೇರಿಕದ ನ್ಯೂಜೆರ್ಸಿಯಲ್ಲೂ ಪಟ್ಲ ಫೌಂಡೇಶನ್‌ರವರ ಘಟಕ ಲೋಕಾರ್ಪಣೆಗೊಳಿಸಿದ ಸಂದರ್ಭದಲ್ಲೂ ಯಕ್ಷ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿರುವುದು ನೋಡಿದಾಗ ಯಕ್ಷಗಾನದ ಪ್ರಸಿದ್ಧತೆ ಎದ್ದು ಕಾಣುತ್ತದೆ ಎಂದರು.

ಸಮಾನ ಮನಸ್ಕರಿಂದ ಯಕ್ಷಧ್ರುವ ಪಟ್ಲ ಫೌಂಡೇಶನ್ ಹುಟ್ಟು ಹಾಕಿಕೊಂಡಿದೆ-ಪುರುಷೋತ್ತಮ್ ಭಂಡಾರಿ:
ಯಕ್ಷಧ್ರುವ ಪಟ್ಲ ಫೌಂಡೇಶನ್ ಮಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್ ಭಂಡಾರಿ ಮಾತನಾಡಿ, ಕರಾವಳಿ ಮೂಲದಲ್ಲಿ ಸಮಾನ ಮನಸ್ಕರು ಒಟ್ಟು ಸೇರಿ ಈ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಅನ್ನು ಹುಟ್ಟು ಹಾಕಿರುವುದಾಗಿದೆ. ಪ್ರಸ್ತುತ ಈ ಪಟ್ಲ ಫೌಂಡೇಶನ್ ಭಾರತದಲ್ಲೂ ಮಾತ್ರವಲ್ಲ ದೇಶ-ವಿದೇಶಗಳಲ್ಲೂ ಜನಪ್ರಿಯತೆ ಗಳಿಸಿದೆ. ಯಕ್ಷ ಕಲೆ ಎನ್ನುವುದು ಪರಿಪೂರ್ಣ ಶ್ರೇಷ್ಟ ಕಲೆ. ಈ ಕಲೆಯು ಭಾರತದ ಆರು ರಾಜ್ಯಗಳಲ್ಲಿ ಮಾತ್ರವಲ್ಲ ದೇಶ-ವಿದೇಶಗಳಲ್ಲೂ ನೆಲೆ ನಿಂತಿದೆ ಎಂದರು.

ನನ್ನನ್ನು ಗುರುತಿಸಿ ಸನ್ಮಾನಿಸಿರುವುದು ಕಲಾ ಮಾತೆಗೆ ಕೊಟ್ಟ ಗೌರವ-ಕೆ.ಎಚ್ ದಾಸಪ್ಪ ರೈ:
ಜನಪ್ರಿಯ ಹಿರಿಯ ಯಕ್ಷಗಾನ ಕಲಾವಿದ ಕೆ.ಎಚ್ ದಾಸಪ್ಪ ರೈ ಮಾತನಾಡಿ, ದಾಸಪ್ಪ ರೈ ಓರ್ವ ಮನುಷ್ಯ. ನಾನೂ ಏನೂ ಮಾಡಲಿಲ್ಲ. ಆದರೆ1965ನೇ ಇಸವಿಯಿಂದ ಇಂದಿನ ತನಕ ಯಕ್ಷಗಾನ ರಂಗದಲ್ಲಿ ಮಾಡಿದ ಸೇವೆಯನ್ನು ಗುರುತಿಸಿ ಸನ್ಮಾನಿಸಿರುವುದು ಆ ಕಲಾ ಮಾತೆಗೆ ಕೊಟ್ಟ ಗೌರವವಾಗಿದೆ. ಯಕ್ಷಗಾನ ಕ್ಷೇತ್ರದಲ್ಲಿ ಎಂದಿಗೂ ಅಪಚಾರ ಮಾಡದೆ ಗೌರವ ಕೊಟ್ಟಿದ್ದೇನೆ ಎನ್ನುವ ಆತ್ಮತೃಪ್ತಿ ನನಗಿದೆ. ಉತ್ಸಾಹಿ ಕಲಾವಿದ ಪಟ್ಲ ಸತೀಶ್ ಶೆಟ್ಟಿರವರು ಯಕ್ಷರಂಗದಲ್ಲಿ ಮಾಡಿದ ಕೆಲಸ ಅನನ್ಯ. ನನ್ನಂತಹ ಅದೆಷ್ಟೋ ಕಲಾವಿದರಿಗೆ ಸಹಾಯಹಸ್ತ ನೀಡಿದ ವ್ಯಕ್ತಿಯಾಗಿದ್ದಾರೆ ಎಂದರು.

ದಾಸಪ್ಪ ರೈಯವರ ಸಾಧನೆ ಯುವಕರಿಗೆ ಅನುಕರಣೀಯ-ದುರ್ಗಾಪ್ರಸಾದ್ ರೈ:
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಕುಂಬ್ರ ದುರ್ಗಾಪ್ರಸಾದ್ ರೈವರು ಸನ್ಮಾನಿತ ಜನಪ್ರಿಯ ಹಿರಿಯ ಯಕ್ಷಗಾನ ಕಲಾವಿದ ಕೆ.ಎಚ್ ದಾಸಪ್ಪ ರೈರವರ ಕುರಿತು ಮಾತನಾಡಿ, ದಾಸಪ್ಪ ರೈಯವರು ಕನ್ನಡ ಹಾಗೂ ತುಳು ಯಕ್ಷಗಾನವನ್ನು ವೃತ್ತಿಯಾಗಿಸಿಕೊಂಡು ಬೆಳೆದ ಪರಿ ಅನುಕರಣೀಯ. ವಿವಿಧ ಮೇಳಗಳಲ್ಲಿ ವೇಷಧಾರಿಯಾಗಿ ನಿರಂತರವಾಗಿ ಯಕ್ಷರಂಗದಲ್ಲಿ ಮಿಂಚಿದ್ದು ಯುವಕರಿಗೆ ಇದು ಅನುಕರಣೀಯ ನಡೆಯಾಗಿದೆ. ಯಕ್ಷರಂಗದಲ್ಲಿ ಅವರ ಸಾಧನೆಗೆ ಅನೇಕ ಗೌರವ ಸಮ್ಮಾನಗಳು ದೊರಕಿದೆ ಎಂದರು.

ವೇದಿಕೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಪುತ್ತೂರು ಘಟಕದ ಗೌರವ ಸಲಹೆಗಾರ ಅರಿಯಡ್ಕ ಚಿಕ್ಕಪ್ಪ ನಾಯ್ಕ್, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ಸಂಘಟನಾ ಕಾರ್ಯದರ್ಶಿ ಪ್ರದೀಪ್ ಆಳ್ವ, ಕೋಶಾಧಿಕಾರಿ ಸುದೇಶ್ ಕುಮಾರ್ ರೈಯವರು ಉಪಸ್ಥಿತರಿದ್ದರು. ಪ್ರೊ|ದತ್ತಾತ್ರೇಯ ರಾವ್ ಪ್ರಾರ್ಥಿಸಿದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಪುತ್ತೂರು ಘಟಕದ ನಿರ್ಗಮನ ಅಧ್ಯಕ್ಷ ನೋಣಾಲು ಜೈರಾಜ್ ಭಂಡಾರಿ ಸ್ವಾಗತಿಸಿ, ನೂತನ ಕಾರ್ಯದರ್ಶಿ ಚಂದ್ರಹಾಸ ರೈ ಬೊಳಿಕ್ಕಳ ವಂದಿಸಿದರು. ಪ್ರಧಾನ ಸಂಚಾಲಕ ಪ್ರಶಾಂತ್ ರೈ ಮುಂಡಾಳಗುತ್ತು ಕಾರ್ಯಕ್ರಮ ನಿರೂಪಿಸಿದರು.

ಪದ ಪ್ರದಾನ..
2023-24ನೇ ಸಾಲಿನ ನೂತನ ಪದಾಧಿಕಾರಿಗಳಾದ ಗೌರವಾಧ್ಯಕ್ಷ ಸವಣೂರು ಸೀತಾರಾಮ ರೈ, ಅಧ್ಯಕ್ಷ ಕರುಣಾಕರ್ ರೈ ದೇರ್ಲ, ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ರೈ ಬೊಳಿಕ್ಕಳ, ಕೋಶಾಧಿಕಾರಿ ಉದಯ ವೆಂಕಟೇಶ, ಪ್ರಧಾನ ಸಂಚಾಲಕ ಪ್ರಶಾಂತ್ ರೈ ಮುಂಡಾಳಗುತ್ತು, ಉಪಾಧ್ಯಕ್ಷರುಗಳಾದ ಡಾ.ಅಶೋಕ್ ಪಡಿವಾಳ್, ಎನ್.ರವೀಂದ್ರ ಶೆಟ್ಟಿ ನುಳಿಯಾಲು, ಶ್ರೀಮತಿ ಹರಿಣಾಕ್ಷಿ ಜೆ.ಶೆಟ್ಟಿ, ಸಮಿತಿ ಸದಸ್ಯರುಗಳಾದ ಎಂ.ಗಂಗಾಧರ ರೈ, ಎಂ.ಆರ್ ಜಯಕುಮಾರ್ ರೈ, ರಾಕೇಶ್ ರೈ ಕೆಡೆಂಜಿ, ದತ್ತಾತ್ರೇಯ ರಾವ್, ಎಂ.ಸಂಕಪ್ಪ ರೈ, ಡಿ.ಗಣೇಶ್ ರೈ, ಸುಬ್ಬಪ್ಪ ಕೈಕಂಬ, ಡಾ|ರಾಜೇಶ್ ಬೆಜ್ಜಂಗಳ, ಶ್ರೀಮತಿ ಅನ್ನಪೂರ್ಣ ರಾವ್, ಗೌರವ ಸಲಹೆಗಾರರಾದ ಅರಿಯಡ್ಕ ಚಿಕ್ಕಪ್ಪ ನಾಯ್ಕ್, ಮಿತ್ರಂಪಾಡಿ ಜಯರಾಮ್ ರೈ ಅಬುದಾಬಿ, ಶಶಿಕುಮಾರ್ ರೈ ಬಾಲ್ಯೊಟ್ಟು, ನೋಣಾಲು ಜೈರಾಜ್ ಭಂಡಾರಿ, ಎ.ಜಗಜ್ಜೀವನ್ ದಾಸ್ ರೈ, ಕೆ.ಎಚ್ ದಾಸಪ್ಪ ರೈ, ಚಂದ್ರಹಾಸ ರೈ ತುಂಬೆಕೋಡಿರವರಿಗೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಮಾತೃ ಘಟಕದ ಅಧ್ಯಕ್ಷ ಪಟ್ಲಗುತ್ತು ಸತೀಶ್ ಶೆಟ್ಟಿರವರು ಹೂಗುಚ್ಛ ನೀಡುವ ಮೂಲಕ ಪದ ಪ್ರದಾನವನ್ನು ನೆರವೇರಿಸಿದರು.

ನೂತನ ಅಧ್ಯಕ್ಷರಿಂದ ಅಭಿನಂದನೆ..
ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ನೂತನ ಅಧ್ಯಕ್ಷರಾದ ಕರುಣಾಕರ್ ರೈ ದೇರ್ಲ ದಂಪತಿರವರಿಂದ ಪಟ್ಲ ಸತೀಶ್ ಶೆಟ್ಟಿರವರಿಗೆ ಹೂಗುಚ್ಛ ನೀಡುವ ಮೂಲಕ ಅಭಿನಂದಿಸಲಾಯಿತು.

ಸನ್ಮಾನ..
ಕಾರ್ಯಕ್ರಮದಲ್ಲಿ ಜನಪ್ರಿಯ ಹಿರಿಯ ಯಕ್ಷಗಾನ ಕಲಾವಿದ ಕೆ.ಎಚ್ ದಾಸಪ್ಪ ರೈಯವರಿಗೆ ಗೌರವ ಸನ್ಮಾನ ಪಟ್ಲ ಸತೀಶ್ ಶೆಟ್ಟಿರವರ ನೇತೃತ್ವದಲ್ಲಿ ಜರಗಿತು.

ಶ್ರದ್ಧಾಂಜಲಿ..
ಈ ಸಂದರ್ಭದಲ್ಲಿ ಇತ್ತೀಚೆಗೆ ಅಗಲಿದ ಹಿರಿಯ ಯಕ್ಷಗಾನ ಹಾಸ್ಯ ಕಲಾವಿದ ದಿ.ಪೆರುವೋಡಿ ನಾರಾಯಣ ಭಟ್‌ರವರಿಗೆ ಶ್ರದ್ಧಾಂಜಲಿ ಅರ್ಪಿಸಲಾಗಿದ್ದು, ಸಮಿತಿ ಸದಸ್ಯ ಎಂ.ಗಂಗಾಧರ್ ರೈಯವರು ನುಡಿನಮನ ಸಲ್ಲಿಸಿದರು.

ಪಟ್ಲ ಫೌಂಡೇಶನ್‌ನ ಉನ್ನತಿಗೋಸ್ಕರ ದುಡಿಯಲಿದ್ದೇನೆ…

ಪಟ್ಲ ಸತೀಶ್ ಶೆಟ್ಟಿಯವರು ಓರ್ವ ಅಸಾಮಾನ್ಯ ವ್ಯಕ್ತಿ. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮೂಲಕ ಯಕ್ಷಗಾನ ಕಲೆಯನ್ನು ಇಂದು ಭಾರತದಲ್ಲಿ ಮಾತ್ರವಲ್ಲ ದೇಶ-ವಿದೇಶಗಳಲ್ಲೂ ಛಾಪು ಮೂಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಹಕಾರ ರತ್ನ ಸೀತಾರಾಮ್ ರೈಯವರ ಗೌರವಾಧ್ಯಕ್ಷತೆಯಲ್ಲಿ, ಎಲ್ಲರ ಸಹಕಾರದೊಂದಿಗೆ ಪಟ್ಲ ಫೌಂಡೇಶನ್‌ನ ಉನ್ನತಿಗೋಸ್ಕರ ದುಡಿಯಲಿದ್ದೇನೆ.
-ಕರುಣಾಕರ್ ರೈ ದೇರ್ಲ,
ಅಧ್ಯಕ್ಷರು, ಯಕ್ಷಧ್ರುವ ಪಟ್ಲ ಫೌಂಡೇಶನ್ ಪುತ್ತೂರು ಘಟಕ

LEAVE A REPLY

Please enter your comment!
Please enter your name here