ಪುತ್ತೂರು: ಪುತ್ತೂರು ರೋಟರಿ ಕ್ಲಬ್ ನಿಂದ ದೀಪಾವಳಿ ಸಂಭ್ರಮ, ಕುಟುಂಬ ಸಮ್ಮಿಲನ, ಯಕ್ಷಗಾನ-ಗಾನವೈಭವವು ನ.17ರಂದು ಬೊಳ್ವಾರು ಮಹಾವೀರ ಮಾಲ್ ನ ಎರಡನೇ ಮಹಡಿಯ ಮಹಾವೀರ ವೆಂಚರ್ಸ್ ನಲ್ಲಿ ಸಂಜೆ ಜರಗಿತು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ಅಧ್ಯಕ್ಷ ಪಟ್ಲಗುತ್ತು ಸತೀಶ್ ಶೆಟ್ಟಿ ರವರು ದೀಪ ಪ್ರಜ್ವಲನಗೊಳಿಸಿ ಮಾತನಾಡಿ, ದೇಶ, ಪ್ರಪಂಚ ಕಂಡಂತಹ ಅಚ್ಚುಕಟ್ಟಾದ, ಹೆಮ್ಮೆಯ ಸಂಸ್ಥೆಯಾಗಿ ರೋಟರಿ ಸಂಸ್ಥೆಗಳು ಗುರುತಿಸಿಕೊಂಡಿರುವುದು ಶ್ಲಾಘನೀಯ. ಭಾರತದ ಶ್ರೇಷ್ಟ ಹಬ್ಬ ಎಂದರೆ ಅದು ದೀಪಾವಳಿ ಹಬ್ಬ. ಇದನ್ನು ಬೆಳಕಿನ ಹಬ್ಬ ಎಂದು ಕರೆಯಲಾಗುತ್ತದೆ. ಯಕ್ಷಗಾನವನ್ನು ಬೆಳಕಿನ ಸೇವೆ, ಆರಾಧನಾ ಸೇವೆ ಎಂದು ಕರೆಯಲ್ಪಡುತ್ತದೆ. ರೋಟರಿ ಸಂಸ್ಥೆಯು ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡಲು ಭಗವಂತ ಅನುಗ್ರಹಿಸಲಿ ಎಂದರು.
ಆರಂಭದಲ್ಲಿ ರೋಟರಿ ಅಧ್ಯಕ್ಷ ಜೈರಾಜ್ ಭಂಡಾರಿ, ಕಾರ್ಯದರ್ಶಿ ಸುಜಿತ್ ಡಿ.ರೈ, ಸೇವಾ ನಿರ್ದೇಶಕ ಡಾ.ಶ್ರೀಪ್ರಕಾಶ್ ಬಿ, ಪಿಡಿಜಿ ಡಾ.ಭಾಸ್ಕರ್, ಹಿರಿಯ ಸದಸ್ಯ ರಾಮಕೃಷ್ಣ ಸೇರಿದಂತೆ ರೋಟರಿ ಸದಸ್ಯರಿಂದ ವೇದಿಕೆಯಲ್ಲಿರಿಸಿದ ಹಣತೆಯನ್ನು ಉರಿಸುವ ಮೂಲಕ ದೀಪಾವಳಿ ಹಬ್ಬದ ಸಂಭ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಪ್ರೊ. ದತ್ತಾತ್ರೇಯ ರಾವ್ ರವರ ನೇತೃತ್ವದಲ್ಲಿ ದೀಪಾವಳಿ ಆಶಯ ಗೀತೆಯನ್ನು ಹಾಡಲಾಯಿತು.
ರೋಟರಿ ಕ್ಲಬ್ ಪುತ್ತೂರು ಮಾಜಿ ಅಧ್ಯಕ್ಷ ಡಾ.ಅಶೋಕ್ ಪಡಿವಾಳ್ ರವರು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಘಟಕದ ಅಧ್ಯಕ್ಷ ಪಟ್ಲಗುತ್ತು ಸತೀಶ್ ಶೆಟ್ಟಿ ರವರಿಗೆ ಹೂಗುಚ್ಛ ನೀಡಿ ಗೌರವಿಸಿದರು. ಯಕ್ಷಗಾನ ಗಾನವೈಭವದ ತಂಡವನ್ನು ಪ್ರೊ.ದತ್ತಾತ್ರೇಯ ರಾವ್ ರವರು ಸಭೆಗೆ ಪರಿಚಯಿಸಿದರು. ಸುಬ್ಬಪ್ಪ ಕೈಕಂಬ ಕಾರ್ಯಕ್ರಮ ನಿರೂಪಿಸಿದರು.
ರಂಜಿಸಿದ ಯಕ್ಷಗಾನ ಗಾನವೈಭವ…
ಬಳಿಕ ಯಕ್ಷಗಾನ ಗಾನವೈಭವ ಕಾರ್ಯಕ್ರಮ ಜರಗಿದ್ದು ಭಾಗವತರಾಗಿ ಪಟ್ಲಗುತ್ತು ಸತೀಶ್ ಶೆಟ್ಟಿ, ಸತ್ಯನಾರಾಯಣ ಪುಣ್ಚಿತ್ತಾಯ, ಪ್ರಶಾಂತ್ ರೈ ಮುಂಡಾಲಗುತ್ತು, ಅಮೃತ ಅಡಿಗ ಪಾಣಾಜೆ, ಚೆಂಡೆ-ಮದ್ದಳೆಯಲ್ಲಿ ಪದ್ಮನಾಭ ಉಪಾಧ್ಯಾಯ ಹಾಗೂ ಗುರುಪ್ರಸಾದ್ ಬೊಳಿಂಜಡ್ಕ, ಚಕ್ರತಾಳದಲ್ಲಿ ಪೂರ್ಣೇಶ ಆಚಾರ್ ರವರಿಂದ ನೆರೆದ ಕಲಾಭಿಮಾನಿಗಳನ್ನು ರಂಜಿಸಿದರು.