ಪುತ್ತೂರಿನಲ್ಲಿ ರೋಟರಿ ಕ್ಲಬ್ ಕಣ್ಣಿನ ಆಸ್ಪತ್ರೆ ಉದ್ಘಾಟನೆ ಬಳಿಕ ಪ್ರಪ್ರಥಮ ಬೃಹತ್ ಉಚಿತ ನೇತ್ರ ತಪಾಸಣಾ ಶಿಬಿರ

0

267 ಮಂದಿ ಭಾಗಿ – 51 ಮಂದಿಗೆ ಕಣ್ಣಿನ ಪೊರೆ ಚಿಕಿತ್ಸೆ – 82 ಮಂದಿಗೆ ಕನ್ನಡಕ ವಿತರಣೆ

ಪುತ್ತೂರಿನ ಪ್ರಥಮ ಸ್ಪೆಷಾಲಿಟ ಕಣ್ಣಿನ ಆಸ್ಪತ್ರೆ-ರಮೇಶ್ ವಂಗಲ್
ಸೇವೆಯೇ ರೋಟರಿಯ ಗುರಿ-ಜೈರಾಜ್ ಭಂಡಾರಿ
ಪುತ್ತೂರು ರೋಟರಿಯಿಂದ ಅರ್ಥಪೂರ್ಣ ಪ್ರೊಜೆಕ್ಟ್-ಪ್ರಕಾಶ್ ಕಾರಂತ್
ರೋಟರಿ ಕನಸಿನ ಯೋಜನೆ ಎಲ್ಲರಿಗೂ
ಪ್ರಯೋಜನ-ಡಾ.ಸೂರ್ಯನಾರಾಯಣ
ಮುಂದಿನ ವಾರದಿಂದ ಒಟಿ ಸೇವೆ-ಡಾ.ವಿಕ್ರಂ ಜೈನ್
ತಿಂಗಳಲ್ಲಿ ಎರಡು ದಿನ ಶಿಬಿರ-ಡಾ.ಭಾಸ್ಕರ್ ಎಸ್

ಪುತ್ತೂರು: ಸುಳ್ಯ, ಕಡಬ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ತಾಲೂಕುಗಳಲ್ಲಿ ಪ್ರತ್ಯೇಕ ಸುಸಜ್ಜಿತ ಕಣ್ಣಿನ ಆಸ್ಪತ್ರೆಯ ಕೊರತೆಯನ್ನು ನೀಗಿಸಲು ಪುತ್ತೂರು ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್‌ನ ಕೆಳ ಅಂತಸ್ತಿನಲ್ಲಿ ‘ಸೂಪರ್ ಸ್ಪೆಷಾಲಿಟಿ ರೋಟರಿ ಕ್ಲಬ್ ಪುತ್ತೂರು ಕಣ್ಣಿನ ಆಸ್ಪತ್ರೆ’ ಉದ್ಘಾಟನೆಗೊಂಡು 5 ತಿಂಗಳ ಬಳಿಕ ಪ್ರಪ್ರಥಮ ಬೃಹತ್ ಉಚಿತ ನೇತ್ರ ತಪಾಸಣಾ ಶಿಬಿರ ಪುತ್ತೂರು ಜೈನ ಭವನದಲ್ಲಿ ನ.19ರಂದು ನಡೆಯಿತು. ರೋಟರಿ ಕ್ಲಬ್ ಪುತ್ತೂರು ಕಣ್ಣಿನ ಆಸ್ಪತ್ರೆ ಮತ್ತು ಪ್ರಸಾದ್ ನೇತ್ರಾಲಯದಿಂದ ಜಂಟಿಯಾಗಿ ಈ ಶಿಬಿರವನ್ನು ಆಯೋಜಿಸಲಾಗಿತ್ತು.


ಪುತ್ತೂರಿನ ಪ್ರಥಮ ಸ್ಪೆಷಾಲಿಟ ಕಣ್ಣಿನ ಆಸ್ಪತ್ರೆ:
ರೋಟರಿ ಹೈದರಾಬಾದ್ 3181ರ ಪೂರ್ವ ಜಿಲ್ಲಾ ಗವರ್ನರ್ ರಮೇಶ್ ವಂಗಲ್ ಅವರು ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಪುತ್ತೂರು ರೋಟರಿ ಕ್ಲಬ್ ಹಲವು ಉತ್ತಮ ಯೋಜನೆಗಳನ್ನೇ ಅನುಷ್ಠಾನಗೊಳಿಸುತ್ತಿದೆ. ಪುತ್ತೂರಿನ ಪ್ರಥಮ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಜನರ ಸೇವೆ ಮಾಡಲಿದೆ. ದೂರದೃಷ್ಟಿ ಇಟ್ಟುಕೊಂಡು ಮಾಡುವ ರೋಟರಿ ಯೋಜನೆ ಸದಾ ಕಾಲ ಉಳಿಯುತ್ತದೆ. ಈ ಯೋಜನೆಗೆ ಕಾರಣಕರ್ತರಾದ ಟೀಮ್‌ಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಯಾಕೆಂದರೆ ಇದರ ಆರಂಭ ತುಂಬಾ ಚಾಲೆಂಜಿಂಗ್ ಆಗಿತ್ತು. ಎಲ್ಲಾ ಪ್ರೊಜೆಕ್ಟ್‌ಗಳಿಗೆ ಬೆಂಬಲ ಕೊಟ್ಟದ್ದು ರೋಟರಿ ಫೌಂಡೇಶನ್ ಎಂದು ಹೇಳಿದರು.


ಸೇವೆಯೇ ರೋಟರಿಯ ಗುರಿ:
ಶಿಬಿರದ ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಅಧ್ಯಕ್ಷ ಜೈರಾಜ್ ಭಂಡಾರಿ ಅವರು ಸ್ವಾಗತಿಸಿ ಮಾತನಾಡಿ ರೋಟರಿ ಕ್ಲಬ್ ಸಮಾಜ ಸೇವೆಯ ಮೂಲಕ ಜನರಿಗೆ ಪ್ರಯೋಜನವಾಗುವ ಯೋಜನೆ ಹಾಕಿಕೊಳ್ಳುತ್ತದೆ.ಸೇವೆಯೇ ರೋಟರಿಯ ಮುಖ್ಯಗುರಿ.ಈ ನಿಟ್ಟಿನಲ್ಲಿ ಪುತ್ತೂರಿನಲ್ಲಿ ಬ್ಲಡ್ ಬ್ಯಾಂಕ್ ಮೂಲಕ ಆರಂಭಗೊಂಡ ರೋಟರಿ ದೊಡ್ಡ ಸೇವೆ ಡಯಾಲಿಸೀಸ್ ಸೆಂಟರ್, ರಕ್ತಸಂಗ್ರಹಕ್ಕೆ ವಾಹನ ಸಹಿತ ಹಲವು ಯೋಜನೆಯನ್ನು ತಂದಿದೆ. ಕಣ್ಣಿನ ಆಸ್ಪತ್ರೆಯ ಮೂಲಕ ಜನರಿಗೆ ಸೇವೆ ನೀಡುವ ಯೋಜನೆ ಮಹತ್ವದ್ದಾಗಿದೆ. ಶಿಬಿರದ ಮೂಲಕ ಉಚಿತ ಸೇವೆ ನೀಡಲಾಗುತ್ತಿದ್ದು, ಇವತ್ತು ಶಿಬಿರದಲ್ಲಿ ಕಣ್ಣಿನ ಪೊರೆ ಚಿಕಿತ್ಸೆಗೆ ಅಗತ್ಯವುಳ್ಳವರಿಗೆ ನಿಗದಿ ಪಡಿಸಿದ ದಿನದಲ್ಲಿ ನಮ್ಮ ಆಸ್ಪತ್ರೆಯಲ್ಲೇ ಶಸಚಿಕಿತ್ಸೆ ನಡೆಸಲಾಗುತ್ತದೆ ಎಂದರು.

ಪುತ್ತೂರು ರೋಟರಿಯಿಂದ ಅರ್ಥಪೂರ್ಣ ಪ್ರೊಜೆಕ್ಟ್:
ರೋಟರಿ ಕ್ಲಬ್ ಮಾಜಿ ಜಿಲ್ಲಾ ಗರ್ವನರ್ ಪ್ರಕಾಶ್ ಕಾರಂತ್ ಅವರು ಮಾತನಾಡಿ ಪುತ್ತೂರು ರೋಟರಿ ಕ್ಲಬ್ ಈ ಭಾಗದಲ್ಲಿ ಜನಮಾನಸದ ಕಾರ್ಯಕ್ರಮ ಮಾಡಿದೆ. ಇದು ಜಿಲ್ಲೆಯಲ್ಲಿ ಮಾದರಿ ಕ್ಲಬ್ ಆಗಿ ಮೂಡಿ ಬಂದಿದೆ. ಎಲ್ಲಾ ಜಿಲ್ಲಾ ಗವರ್ನರ್‌ಗಳು ಟಿ.ಆರ್.ಪಿ. ಕೇಳುತ್ತಾರೆ. ಆದರೆ ನಾನು ಪ್ರೊಜೆಕ್ಟ್ ಮಾಡಿ ಎಂದು ಹೇಳಿದ್ದೆ. ಯಾಕೆಂದರೆ ಪ್ರೊಜೆಕ್ಟ್ ಮಾಡಿದ ಸಂಸ್ಥೆ ತಾನಾಗಿಯೇ ಟಿಆರ್‌ಪಿ ಕೊಡಲು ಮುಂದೆ ಬರುತ್ತದೆ. 10 ಸಾವಿರ ಡಾಲರ್ ಪುತ್ತೂರು ಕ್ಲಬ್ ಕೊಡುತ್ತದೆ ಎಂದರಲ್ಲದೆ, ಆಂಧ್ರಪ್ರದೇಶದ ರೋಟರಿ ಕ್ಲಬ್ ಮತ್ತು ಅಂತರ್ರಾಷ್ಟ್ರೀಯ ರೋಟರಿಯ ಚೇರ್‌ಮ್ಯಾನ್ ರವಿ ವಡ್ಲಮನಿಯವರ ಸಹಕಾರ ಪುತ್ತೂರು ಕ್ಲಬ್‌ಗೆ ದೊರೆತಿರುವುದರಿಂದ ಯೋಜನೆಗೆ ಪೂರಕ ಸೇವಾ ಕಾರ್ಯ ನಡೆಯತ್ತಿದೆ. ಮುಂದೆ ಇನ್ನಷ್ಟು ಉತ್ತಮ ಕಾರ್ಯಗಳು ಈ ಭಾಗದಲ್ಲಿ ಮೂಡಿ ಬರಲಿ ಎಂದು ಹಾರೈಸಿದರು.

ರೋಟರಿ ಕನಸಿನ ಯೋಜನೆ ಎಲ್ಲರಿಗೂ ಪ್ರಯೋಜನ:
ರೋಟರಿ ಫೌಂಡೇಶನ್ ಅಧ್ಯಕ್ಷ ಡಾ.ಸೂರ್ಯನಾರಾಯಣ ಅವರು ಮಾತನಾಡಿ ರೋಟರಿ ಕುಟುಂಬದ ಹಾಗೆ. ಯಾವುದೇ ಮೂಲೆಯಲ್ಲಿ ನಡೆದ ಒಳ್ಳೆಯ ಕೆಲಸಕ್ಕೆ ರೋಟರಿ ಸಹಕಾರ ಇದೆ. ಅದೇ ರೀತಿ ದೊಡ್ಡ ಯೋಜನೆಗೆ ದೊಡ್ಡ ಮೊತ್ತದ ಅಗತ್ಯತೆ ಇತ್ತು. ಆದರೂ ರೋಟರಿ ಕ್ಲಬ್‌ನ ಸರಿಯಾದ ಸೇವೆಗೆ ಹಣ ಬಂದೇ ಬರುತ್ತದೆ ಎಂಬ ನಂಬಿಕೆ ಇತ್ತು. ಇಂತಹ ಸಂದರ್ಭದಲ್ಲಿ ಹೈದರಾಬಾದ್ ರೋಟರಿಯವರೂ ನಮಗೆ ಹಣ ನೀಡಿದ್ದಾರೆ. ಇವತ್ತು ಪುತ್ತೂರು ಮತ್ತು ಆಸುಪಾಸಿನಲ್ಲಿ ಇಷ್ಟು ದೊಡ್ಡ ಹೈಟೆಕ್ ಆಸ್ಪತ್ರೆ ಇಲ್ಲ. ಕಣ್ಣಿನ ಯಾವುದೇ ಕಾಯಿಲೆ ಇದ್ದರೂ ರೋಟರಿ ಆಸ್ಪತ್ರೆಯನ್ನು ಸಂಪರ್ಕಿಸಬಹುದು. ಶಿಬಿರಕ್ಕೆ ಬಂದರೆ ಉಚಿತ. ಇದಲ್ಲದೆ ಇನ್‌ಶ್ಯೂರೆನ್ಸ್ ಸೌಲಭ್ಯ ಇದ್ದರೆ ಆಸ್ಪತ್ರೆಯಿಂದ ಅದರ ಸೌಲಭ್ಯವನ್ನೂ ಪಡೆಯಬಹುದು. ಒಟ್ಟಿನಲ್ಲಿ ರೋಟರಿ ಕನಸಿನ ಯೋಜನೆ ಊರಿನ ಎಲ್ಲಾ ಜನರಿಗೆ ಪ್ರಯೋಜನ ಆಗಲಿ ಎಂದರು.

ಮುಂದಿನ ವಾರದಿಂದ ಒಟಿ ಸೇವೆ:
ಪ್ರಸಾದ್ ನೇತ್ರಾಲಯದ ನಿರ್ದೇಶಕ ಡಾ.ವಿಕ್ರಂ ಜೈನ್ ಅವರು ಮಾತನಾಡಿ ಶಿಬಿರದಲ್ಲಿ ಭಾಗವಹಿಸಿದ ಫಲಾನುಭವಿಗಳಿಗೆ ಶಿಬಿರದ ಪ್ರಯೋಜನ ಮತ್ತು ಮುಂದಿನ ಚಿಕಿತ್ಸೆಗಳ ಕುರಿತು ಮಾಹಿತಿ ನೀಡಿದರು. ಪುತ್ತೂರಿನ ಅತೀ ದೊಡ್ಡ ಕಣ್ಣಿನ ಆಸ್ಪತ್ರೆ ರೋಟರಿ ಕಣ್ಣಿನ ಆಸ್ಪತ್ರೆ.ಎಲ್ಲವೂ ಜರ್ಮನಿಯಿಂದ ಆಮದಿತ ಯಂತ್ರದ ಮೂಲಕವೇ ಚಿಕಿತ್ಸಾ ವಿಧಾನ ನಡೆಯುತ್ತದೆ. ಬೇರೆ ಕಣ್ಣಿನ ಶಿಬಿರದಲ್ಲಿ ಬರೆ ಪೊರೆ ಚಿಕಿತ್ಸೆ ಮಾತ್ರ ನಡೆಯುತ್ತದೆ. ನಮ್ಮಲ್ಲಿ ಕಣ್ಣಿನ ದುರ್ಮಾಂಸಕ್ಕೂ ಚಿಕಿತ್ಸೆ ನೀಡಲಾಗುತ್ತದೆ. ಶಸ್ತ್ರ ಚಿಕಿತ್ಸೆ ಮುಗಿಸಿ ನಿಂತು ಹೋಗಲು ಅವಕಾಶವಿದೆ ಎಂದು ಹೇಳಿ, ಎಲ್ಲರೂ ಶಿಬಿರದ ಪ್ರಯೋಜನ ಪಡೆಯಲು ವಿನಂತಿಸಿದರಲ್ಲದೆ ಮುಂದಿನ ವಾರದಿಂದ ನಮ್ಮಲ್ಲಿ ಒಟಿ ಸೇವೆಯೂ ಆರಂಭಗೊಳ್ಳಲಿದೆ ಎಂದರು.

ತಿಂಗಳಲ್ಲಿ ಎರಡು ದಿನ ಶಿಬಿರ:
ರೋಟರಿ ಕ್ಲಬ್ ಪುತ್ತೂರು ಕಣ್ಣಿನ ಆಸ್ಪತ್ರೆಯ ಪ್ರಾಜೆಕ್ಟ್ ಚೇರ್‌ಮ್ಯಾನ್ ಡಾ.ಭಾಸ್ಕರ್ ಎಸ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಪುತ್ತೂರಿನಲ್ಲಿ ಸರ್ವಸುಸಜ್ಜಿತವಾದ ಕಣ್ಣಿನ ಆಸ್ಪತ್ರೆ ಆರಂಭಗೊಂಡು ಇದೀಗ ಶಿಬಿರದ ಮೂಲಕ ಮೊದಲ ಹೆಜ್ಜೆ ಇಡುತ್ತಿದ್ದೇವೆ.ಕೊರೋನಾ ಸಂದರ್ಭದಲ್ಲಿ ಎಲ್ಲಾ ಆಸ್ಪತ್ರೆ ಮುಚ್ಚಿತ್ತು. ಕಣ್ಣಿನ ಪೊರೆಗೆ ಸರಿಯಾದ ಸಂದರ್ಭ ಶಸಚಿಕಿತ್ಸೆ ಸಿಗದ ಪರಿಸ್ಥಿತಿ ಉಂಟಾಗಿತ್ತು. ಇದನ್ನು ಅರಿತು ಪುತ್ತೂರಿನಲ್ಲೇ ಕಣ್ಣಿನ ಆಸ್ಪತ್ರೆ ಆಗಬೇಕೆಂದು ಹೊರಟು ರೋಟರಿ ಅಂತರ್ರಾಷ್ಟ್ರೀಯ ದತ್ತಿನಿಧಿ ಸಹಿತ ಹಲವು ಸಂಸ್ಥೆಗಳ ಸಹಕಾರದೊಂದಿಗೆ ರೂ.2 ಕೋಟಿ ವೆಚ್ಚದಲ್ಲಿ ಆಸ್ಪತ್ರೆ ಆರಂಭಗೊಂಡಿತ್ತು. ಆಸ್ಪತ್ರೆ ಮಾಡಿದ ಬಳಿಕ ಎಲ್ಲವನ್ನೂ ಉಚಿತವಾಗಿ ಕೊಡಲು ಕಷ್ಟ. ಹಾಗಾಗಿ ನಮ್ಮ ಯೋಜನೆಯ ಕನಸು ಪುತ್ತೂರಿನಲ್ಲೊಂದು ಸೂಪರ್‌ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಸ್ಥಾಪನೆ ಆಗಬೇಕು. ಪುತ್ತೂರಿನಲ್ಲಿ ಸಿಗದೇ ಇರುವ ಸೇವೆ ಇಲ್ಲಿ ಸಿಗುವಂತೆ ಮಾಡುವುದು. ಅದರ ಜೊತೆಗೆ ಬಡವರಿಗೆ ಕಣ್ಣಿಗೆ ಪೊರೆ ಬಂದು ಕಣ್ಣು ಕುರುಡಾಗುವುದನ್ನು ತಡೆಯುವಂತೆ ಮಾಡುವ ಶಸಚಿಕಿತ್ಸೆಯನ್ನು ಉಚಿತವಾಗಿ ನಮ್ಮ ಆಸ್ಪತ್ರೆಯಲ್ಲಿ ಮಾಡಿಕೊಡಲು ಈ ಯೋಜನೆ ಆರಂಭ ಮಾಡಿದ್ದೇವೆ. ಇವತ್ತು ಶಿಬಿರ ಮಾಡಿ ಬಿಟ್ಟು ಬಿಡದೆ ಮುಂದೆ ಪ್ರತಿ ತಿಂಗಳಲ್ಲಿ ಎರಡು ದಿನ ಕಣ್ಣಿನ ತಪಾಸಣೆ ಶಿಬಿರ ಆಸ್ಪತ್ರೆಯಲ್ಲೇ ನಡೆಯಲಿದೆ. ಆಗ ವೈದ್ಯರ ಸಲಹೆಯಂತೆ ಯಾರಿಗೆ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆ ಅಗತ್ಯವಿದೆಯೋ ಅವರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಸರಕಾರದ ಅನುಮತಿ ಸಿಕ್ಕಿದ ಕೂಡಲೇ ನಡೆಯಲಿದೆ. ಇದು ಪ್ರಾರಂಭ ಅಷ್ಟೆ. ಮುಂದೆ ಇನ್ನೂ ಉತ್ತಮ ಸೇವೆ ನೀಡಲಿದ್ದೇವೆ ಎಂದರು.

ಗೌರವ:
ಕಣ್ಣಿನ ಆಸ್ಪತ್ರೆಯ ಯೋಜನೆಗೆ ಎರಡು ವರ್ಷದ ಹಿಂದೆಯೇ ಚಿಂತನೆ ಮಾಡಿದ್ದ ಡಾ.ಭಾಸ್ಕರ್ ಎಸ್., ಹೈದರಾಬಾದ್ ರೋಟರಿ 3181ರ ಜಿಲ್ಲಾ ಗವರ್ನರ್ ರಮೇಶ್ ವಂಗಲ್, 3180ರ ಪೂರ್ವ ಜಿಲ್ಲಾ ಗರ್ವನರ್ ಪ್ರಕಾಶ್ ಕಾರಂತ್ ಮತ್ತು ರೋಟರಿ -ಂಡೇಶನ್ ಅಧ್ಯಕ್ಷ ಡಾ.ಸೂರ್ಯನಾರಾಯಣ ಅವರನ್ನು ರೋಟರಿ ಕ್ಲಬ್ ಪುತ್ತೂರು ವತಿಯಿಂದ ಅಧ್ಯಕ್ಷ ಜೈರಾಜ್ ಭಂಡಾರಿ ಗೌರವಿಸಿದರು. ರೋಟರಿ ಪೂರ್ವಾಧ್ಯಕ್ಷ ಉಮಾನಾಥ್ ಪಿ.ಬಿ ಗೌರವಾರ್ಪಣೆ ಕಾರ್ಯಕ್ರಮ ನಿರ್ವಹಿಸಿದರು.

ಆರ್ಥಿಕ ಸಮಸ್ಯೆಯವರಿಗೆ ಪ್ರಯೋಜನ:
ಕಾರ್ಯಕ್ರಮ ನಿರೂಪಣೆ ಮಾಡಿದ ರೋಟರಿ ಕ್ಲಬ್ ಪೂರ್ವಾಧ್ಯಕ್ಷ ಝೇವಿಯರ್ ಡಿಸೋಜ ಅವರು ರೋಟರಿ ಕ್ಲಬ್‌ನಿಂದ ಸಮಾಜ ಸೇವೆಯ ದೊಡ್ಡ ಯೋಜನೆಯ ಮಾಹಿತಿ ನೀಡಿದರು. ರೋಟರಿ ಬ್ಲಡ್ ಬ್ಯಾಂಕ್‌ನಿಂದ ಹಲವು ಸೇವೆ ಸಿಗುತ್ತದೆ. ಮಹಾವೀರ ಮೆಡಿಕಲ್ ಸೆಂಟರ್‌ನಲ್ಲಿ ಡಯಾಲಿಸೀಸ್ ಘಟಕವಿದೆ. ಅಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಬಡವರಿಗೆ ರಿಯಾಯಿತಿ ನೀಡಲಾಗುತ್ತದೆ. ಬ್ಲಡ್ ಬ್ಯಾಂಕ್‌ಗೆ ಕಳೆದ ಬಾರಿ ರಕ್ತ ಸಂಗ್ರಹದ ವಾಹನ ಲೋಕಾರ್ಪಣೆಯಾಗಿದೆ. ಇದೀಗ ರೋಟರಿ ಕಣ್ಣಿನ ಆಸ್ಪತ್ರೆಯೂ ಆರಂಭಗೊಂಡಿದ್ದು, ಇಲ್ಲಿ ಶಸ ಚಿಕಿತ್ಸೆ ಮುಗಿಸಿ ಹಗಲು ನಿಂತು ಹೋಗಲು ಅವಕಾಶವಿದೆ ಎಂದರು. ರೋಟರಿ ಕ್ಲಬ್ ಪೂರ್ವಾಧ್ಯಕ್ಷ ಉಮಾನಾಥ್ ಪಿ.ಬಿ., ನಿಯೋಜಿತ ಅಧ್ಯಕ್ಷ ಡಾ.ಶ್ರೀಪತಿ ರಾವ್ ಅತಿಥಿಗಳನ್ನು ಗೌರವಿಸಿದರು. ದಾಮೋದರ್ ಕೆ ಪ್ರಾರ್ಥಿಸಿದರು.ರೋಟರಿ ಕ್ಲಬ್ ಅಧ್ಯಕ್ಷ ಜೈರಾಜ್ ಭಂಡಾರಿ ಸ್ವಾಗತಿಸಿದರು. ರೋಟರಿ ಕ್ಲಬ್ ಕಾರ್ಯದರ್ಶಿ ಸುಜಿತ್ ರೈ ವಂದಿಸಿದರು. ರೋಟರಿ ಜಿಲ್ಲಾ ಕಾರ್ಯದರ್ಶಿ ನಾರಾಯಣ ಹೆಗ್ಡೆ, ಪ್ರಸಾದ್ ನೇತ್ರಾಲಯದ ಡಾ.ಕೃಷ್ಣಪ್ರಸಾದ್, ರೋಟರಿ ಜಿಲ್ಲಾ ಅಸಿಸ್ಟೆಂಟ್ ಗವರ್ನರ್ ಎ.ಜಗಜೀವನ್‌ದಾಸ್ ರೈ, ಚಾರಿಟೇಬಲ್ ಟ್ರಸ್ಟ್‌ನ ಶ್ರೀಕಾಂತ್ ಕೊಳತ್ತಾಯ, ಡಾ.ಶ್ರೀಪ್ರಕಾಶ್, ವಿ.ಜೆ.-ರ್ನಾಂಡೀಸ್, ಡಾ.ಅಶೋಕ್ ಪಡಿವಾಳ್, ಡಾ.ಬಿ.ಶ್ಯಾಮ, ಚಿದಾನಂದ ಬೈಲಾಡಿ, ಎಂ.ಜಿ.ರಫೀಕ್, ಕೃಷ್ಣಕುಮಾರ್ ರೈ, ರಾಮಕೃಷ್ಣ ಕೆ ಸಹಿತ ಹಲವಾರು ಮಂದಿ ಈ ಸಂದರ್ಭ ಉಪಸ್ಥಿತರಿದ್ದರು.

ರೋಟರಿ ಕಣ್ಣಿನ ಆಸ್ಪತ್ರೆ ಪುತ್ತೂರಿನಲ್ಲಿ ಸ್ಥಾಪನೆಯಾದ ಬಳಿಕ ನಡೆದ ಮೊದಲ ಶಿಬಿರದಲ್ಲಿ 267 ಮಂದಿ ಭಾಗವಹಿಸಿದ್ದರು.ಇವರಲ್ಲಿ 51 ಮಂದಿಗೆ ಕಣ್ಣಿನ ಪೊರೆ ಚಿಕಿತ್ಸೆಗೆ ಸೂಚಿಸಲಾಯಿತು. ಉಳಿದಂತೆ 82 ಮಂದಿಗೆ ಉಚಿತ ಕನ್ನಡ ವಿತರಣೆ ಮಾಡಲಾಯಿತು. ಕಣ್ಣಿನ ಪೊರೆ ಚಿಕಿತ್ಸೆಯನ್ನು ಪುತ್ತೂರು ರೋಟರಿ ಕಣ್ಣಿನ ಅಸ್ಪತ್ರೆಯಲ್ಲೇ ಮಾಡಲಾಗುತ್ತಿದ್ದು ದಿನಾಂಕವನ್ನು ಆಯಾ ಫಲಾನುಭವಿಗಳಿಗೆ ತಿಳಿಸಲಾಯಿತು.

LEAVE A REPLY

Please enter your comment!
Please enter your name here